ಬೆಂಗಳೂರು: ಸಾಲ ತೀರಿಸಲು ರ್‍ಯಾಪಿಡೋ ಓಡಿಸುತ್ತಿದ್ದ ಟೆಕ್ಕಿ: ಕುಡಿದ ಮತ್ತಿನಲ್ಲಿ ಗ್ರಾಹಕನಿಂದ ಹಲ್ಲೆ, ಪೋಸ್ಟ್‌ ವೈರಲ್‌

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು, ತಮ್ಮ ಬಿಡುವಿನ ಸಮಯದಲ್ಲಿ ರ್‍ಯಾಪಿಡೋ ಓಡಿಸುತ್ತಿದ್ದರು. ಒಂದು ದಿನ ಗಾಡಿ ಓಡಿಸುತ್ತಿದ್ದಾಗ ಕುಡಿದ ಮತ್ತಿನಲ್ಲಿದ್ದ ಗ್ರಾಹಕ ಈ ಟೆಕ್ಕಿಯ ಮೇಲೆ ಹಲ್ಲೆ ಮಾಡಿರುವ ಆಘಾತಕಾರಿ ಘಟನೆ ಇದೀಗ ಬೆಳಕಿಗೆ ಬಂದಿದೆ.

ರೆಡ್ಡಿಟ್‌ನಲ್ಲಿ ತಮ್ಮ ಈ ಕಹಿ ಅನುಭವವನ್ನ ಹಂಚಿಕೊಂಡಿರುವ ಟೆಕ್ಕಿ, ದಿನನಿತ್ಯ ಆನ್‌ಲೈನ್ ಆ್ಯಪ್‌ಗಳ ಮೂಲಕ ಸೇವೆ ಒದಗಿಸುವ 'ಗಿಗ್ ಕಾರ್ಮಿಕರು' ಅನುಭವಿಸುವ ಕಷ್ಟಗಳ ಬಗ್ಗೆ ತೆರೆದಿಟ್ಟಿದ್ದಾರೆ. ರ್‍ಯಾಪಿಡೋ, ಉಬರ್ ಮತ್ತು ಸ್ವಿಗ್ಗಿ-ಝೊಮ್ಯಾಟೋದಂತಹ ಪ್ಲ್ಯಾಟ್‌ ಫಾರ್ಮ್‌ ನಂಬಿ ಬದುಕುತ್ತಿರುವ ಶ್ರಮಿಕರ ಬಗ್ಗೆ ಸಾರ್ವಜನಿಕರು ನಿಜಕ್ಕೂ ಚಿಂತಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Bengaluru Techie

ಕ್ರೆಡಿಟ್ ಕಾರ್ಡ್ ಸಾಲ ತೀರಿಸಲು ರ್‍ಯಾಪಿಡೋ ಚಾಲಕನಾದ ಟೆಕ್ಕಿ

ಬೆಂಗಳೂರಿನಲ್ಲಿ ಉತ್ತಮ ಸಂಬಳ ಪಡೆಯುತ್ತಿರುವ ಈ ಸಾಫ್ಟ್‌ವೇರ್ ಉದ್ಯೋಗಿ, ಇತ್ತೀಚೆಗಷ್ಟೇ ಪಿಜಿ ಬಿಟ್ಟು ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದಾರೆ. ಮನೆಗೆ ಅಗತ್ಯವಿದ್ದ ಸಾಕಷ್ಟು ವಸ್ತುಗಳನ್ನ ಖರೀದಿ ಮಾಡಿದ್ದಕ್ಕೆ, ಅವರ ಕ್ರೆಡಿಟ್ ಕಾರ್ಡ್ ಬಿಲ್ ಗಣನೀಯವಾಗಿ ಏರಿಕೆಯಾಗಿದೆ. ಈ ಸಾಲವನ್ನ ತೀರಿಸುವ ಉದ್ದೇಶದಿಂದ ತಮಗಿರುವ ಬೈಕ್ ರೈಡಿಂಗ್ ಹವ್ಯಾಸವನ್ನ ಬಳಸಿಕೊಂಡು ಒಂದಷ್ಟು ಹೆಚ್ಚುವರಿ ಹಣ ಸಂಪಾದಿಸುವ ನಿಟ್ಟಿನಲ್ಲಿ ವೀಕೆಂಡ್‌ನಲ್ಲಿ ರ್‍ಯಾಪಿಡೋ ಮತ್ತು ಉಬರ್ ಬೈಕ್ ಟ್ಯಾಕ್ಸಿ ಓಡಿಸಲು ಅವರು ನಿರ್ಧರಿಸಿದ್ದರು.

"ನನಗೆ ಬೈಕ್ ಓಡಿಸುವುದೆಂದರೆ ಮೊದಲಿನಿಂದಲೂ ಇಷ್ಟ. ಜೊತೆಗೆ ವೀಕೆಂಡ್‌ನಲ್ಲಿ ನನಗೆ ಸಾಕಷ್ಟು ಸಮಯ ಇರುತ್ತದೆ. ಹೀಗಾಗಿ ಈ ಬಿಡುವಿನ ವೇಳೆಯಲ್ಲಿ ರ್‍ಯಾಪಿಡೋ ಕ್ಯಾಪ್ಟನ್ ಆಗಿ ಕೆಲಸ ಮಾಡಿದರೆ ಬೈಕ್ ಓಡಿಸಿದಂತೆಯೂ ಆಗುತ್ತದೆ ಹಾಗೂ ಸ್ವಲ್ಪ ಹೆಚ್ಚುವರಿ ಆದಾಯವೂ ಬರುತ್ತದೆ ಎಂದು ಈ ಕೆಲಸ ಶುರು ಮಾಡಿದ್ದೆ," ಎಂದು ಯುವಕ ಹೇಳಿಕೊಂಡಿದ್ದಾರೆ.

ಕುಡುಕ ಗ್ರಾಹಕನಿಂದ ರ್‍ಯಾಪಿಡೋ ಚಾಲಕನ ಮೇಲೆ ಹಲ್ಲೆ

ಮೊದಲ ಕೆಲವು ದಿನಗಳ ಕಾಲ ಎಲ್ಲವೂ ಸರಿಯಾಗಿತ್ತು. ಯಾವುದೇ ಸಮಸ್ಯೆಯಿಲ್ಲದೆ ದಿನಕ್ಕೆ ಸುಮಾರು 20 ರೈಡ್‌ಗಳನ್ನ ಅವರು ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು. ಆದರೆ, ಇತ್ತೀಚೆಗೆ ನಡೆದ ಒಂದು ಘಟನೆ ಅವರ ದೃಷ್ಟಿಕೋನವನ್ನೇ ಬದಲಾಯಿಸಿದೆ.

ಒಮ್ಮೆ ಆ್ಯಪ್‌ನಲ್ಲಿ ರೈಡ್ ಬುಕ್ ಆಗಿದ್ದ ಸ್ಥಳಕ್ಕೆ ಅವರು ತೆರಳಿದಾಗ, ರೈಡ್ ಬುಕ್ ಮಾಡಿದ್ದ ವ್ಯಕ್ತಿಯೊಂದಿಗೆ ಆತನ ಸ್ನೇಹಿತನೊಬ್ಬ ಕುಡಿದು ಸಂಪೂರ್ಣವಾಗಿ ಅಮಲಿನಲ್ಲಿದ್ದ. ಆತ ಬೈಕ್ ಬಳಿ ಬರುತ್ತಿದ್ದಂತೆಯೇ, "ರೈಡ್ ಕ್ಯಾನ್ಸಲ್ ಮಾಡು! ರೈಡ್ ಕ್ಯಾನ್ಸಲ್ ಮಾಡು!" ಎಂದು ಏರುಧ್ವನಿಯಲ್ಲಿ ಟೆಕ್ಕಿಗೆ ಕೂಗಾಡಲು ಶುರುಮಾಡಿದ. "ನಾನು ಕ್ಯಾನ್ಸಲ್ ಮಾಡಿದರೆ ಚಾಲಕರಿಗೆ ದಂಡ ಬೀಳುತ್ತದೆ. ದಯವಿಟ್ಟು ನೀವೇ ನಿಮ್ಮ ಕಡೆಯಿಂದ ಕ್ಯಾನ್ಸಲ್ ಮಾಡಿ," ಎಂದು ಟೆಕ್ಕಿ ನಿಧಾನಕ್ಕೆ ಕೇಳಿಕೊಂಡಿದ್ದಾರೆ. ರೈಡ್ ಬುಕ್ ಮಾಡಿದ್ದ ವ್ಯಕ್ತಿ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ತನ್ನ ಸ್ನೇಹಿತನನ್ನ ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದ.

ಆದರೆ, ಅದೇ ಸಮಯಕ್ಕೆ ಕೋಪಗೊಂಡ ಕುಡುಕ ಸ್ನೇಹಿತ ನೇರವಾಗಿ ಬಂದು ರ್‍ಯಾಪಿಡೋ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ. ಆತ ಜೋರಾಗಿ ಹೆಲ್ಮೆಟ್‌ಗೆ ಹೊಡೆದ ರಭಸಕ್ಕೆ ಹೆಲ್ಮೆಟ್‌ನ ವೈಸರ್ ಒಡೆದುಹೋಗಿದೆ. ಆದರೆ "ನಾನು ಅವರೊಂದಿಗೆ ವಾದ ಮಾಡಲು ಹೋಗಲಿಲ್ಲ, ಕನಿಷ್ಠ ಕ್ಯಾನ್ಸಲ್ ಆಗುವವರೆಗೂ ಕಾಯದೆ ಅಲ್ಲಿಂದ ತಕ್ಷಣವೇ ಹೊರಟೆ," ಎಂದು ಟೆಕ್ಕಿ ವಿವರಿಸಿದ್ದಾರೆ.

Bengaluru Techie

ಗಿಗ್ ಕಾರ್ಮಿಕರ ವಾಸ್ತವ ಬಿಚ್ಚಿಟ್ಟ ಟೆಕ್ಕಿ

ಈ ಘಟನೆಯ ನಂತರ ತಮಗಾದ ಅನುಭವದ ಬಗ್ಗೆ ಬರೆದುಕೊಂಡಿರುವ ಟೆಕ್ಕಿ, ಗಿಗ್ ಕಾರ್ಮಿಕರ ದಿನನಿತ್ಯ ಎದುರಿಸುವ ಕಷ್ಟಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. " ಈ ಕೆಲಸವನ್ನ ನಾನು ನನ್ನ ಸ್ವಇಚ್ಛೆಯಿಂದ ಆರಿಸಿಕೊಂಡಿದ್ದು. ನನಗೆ ಇಷ್ಟವಿಲ್ಲದಿದ್ದರೆ ನೆಕ್ಸ್ಟ್‌ ವೀಕೆಂಡ್‌ನಲ್ಲಿ ರೈಡ್ ತೆಗೆದುಕೊಳ್ಳುವುದನ್ನ ನಿಲ್ಲಿಸಬಹುದು. ಏಕೆಂದರೆ ಇದು ನನಗೆ ಕೇವಲ ಹೆಚ್ಚುವರಿ ಆದಾಯದ ಮೂಲವಷ್ಟೇ. ಆದರೆ, ಇದೇ ಆ್ಯಪ್‌ಗಳನ್ನ ನಂಬಿ ಜನರು ತಮ್ಮ ಇಡೀ ಜೀವನ ಮತ್ತು ಸಂಸಾರ ಸಾಗಿಸುತ್ತಿರುವ ಪರಿಸ್ಥಿತಿ ಏನು?" ಎಂದು ಅವರು ಪ್ರಶ್ನಿಸಿದ್ದಾರೆ.

ದಿನನಿತ್ಯ ಕುಡುಕ ಪ್ರಯಾಣಿಕರು, ಬೈಯುವ ಗ್ರಾಹಕರು, ಅನಗತ್ಯ ಕ್ಯಾನ್ಸಲೇಷನ್, ಗಾಡಿಗಳಿಗೆ ಆಗುವ ಡ್ಯಾಮೇಜ್‌ ಹಾಗೂ ಅಭದ್ರತೆಯ ಪರಿಸ್ಥಿತಿಗಳನ್ನ ಎದುರಿಸಿಕೊಂಡು, ತಮ್ಮ ದಿನದ ಆದಾಯಕ್ಕಾಗಿ ಹೋರಾಡುವ ರ್‍ಯಾಪಿಡೋ, ಉಬರ್, ಬ್ಲಿಂಕಿಟ್ ಮುಂತಾದ ಪ್ಲ್ಯಾಟ್‌ ಫಾರ್ಮ್‌ ಕಾರ್ಮಿಕರ ಬಗ್ಗೆ ಎಲ್ಲರೂ ಒಮ್ಮೆ ಯೋಚಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಈ ಪೋಸ್ಟ್ ಇದೀಗ ವೈರಲ್ ಆಗಿದ್ದು, ಆನ್‌ಲೈನ್ ಸೇವಾ ವಲಯದಲ್ಲಿ ಶ್ರಮಿಸುವವರ ರಕ್ಷಣೆಯ ಕುರಿತು ಗಂಭೀರ ಚರ್ಚೆಯನ್ನ ಹುಟ್ಟುಹಾಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+