26ನೇ ವಯಸ್ಸಿಗೆ ಐಷಾರಾಮಿ ಬಿಎಂಡಬ್ಲ್ಯು ಕಾರು ಖರೀದಿಸಿದ ಬೆಂಗಳೂರು ಟೆಕ್ಕಿ: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು
ಬೆಂಗಳೂರು: ಜೀವನದಲ್ಲಿ ನಾವು ಸಾಧಿಸುವ ಯಶಸ್ಸು ನಮಗಿಂತ ಹೆಚ್ಚಾಗಿ ನಮ್ಮ ಪೋಷಕರಿಗೆ ಅಪಾರ ಖುಷಿ ನೀಡುತ್ತದೆ. ಇದೀಗ ಬೆಂಗಳೂರಿನ ಟೆಕ್ಕಿಯೊಬ್ಬರು ಕೇವಲ 26ನೇ ವಯಸ್ಸಿಗೆ ಐಷಾರಾಮಿ ಬಿಎಂಡಬ್ಲ್ಯು ಕಾರನ್ನು ಖರೀದಿಸಿ, ತಮ್ಮ ಪೋಷಕರಿಗೆ ಅಚ್ಚರಿ ಮೂಡಿಸಿರುವ ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಮಗನ ಸಾಧನೆ ಕಂಡು ಪೋಷಕರ ಮುಖದಲ್ಲಿ ಮೂಡಿದ ಹೆಮ್ಮೆ ಹಾಗೂ ಅತೀ ಆನಂದದ ಕ್ಷಣಗಳು ನೆಟ್ಟಿಗರ ಮನಗೆದ್ದಿದ್ದು, ಈ ಯುವಕನಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ತಮ್ಮ ನೆಚ್ಚಿನ ಕಾರು ಖರೀದಿಸುವ ಕನಸನ್ನು ನನಸು ಮಾಡಿಕೊಂಡಿರುವ ಈ ಯುವಕನ ಹೆಸರು ಇಶಾನ್ ದತ್ತಾ. ಪ್ರಸ್ತುತ ಇವರು ಖ್ಯಾತ ಟೆಕ್ ಕಂಪನಿ ಅಡೋಬ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾವು ಹೊಸ ಬಿಎಂಡಬ್ಲ್ಯು ಕಾರು ಖರೀದಿಸಿದ ಮತ್ತು ಅದನ್ನು ಕಂಡು ಪೋಷಕರು ಪಟ್ಟ ಖುಷಿಯ ವಿಡಿಯೋವನ್ನು ಇಶಾನ್ ತಮ್ಮ ಎಕ್ಸ್ ಹಾಗೂ ಲಿಂಕ್ಡ್ಇನ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. "26ನೇ ವಯಸ್ಸಿನಲ್ಲಿ ಬಿಎಂಡಬ್ಲ್ಯು ಕಾರು ಖರೀದಿಸುವ ಕನಸು ಕಂಡಿದ್ದೆ. ಆ ಕನಸು ಇಂದು ನನಸಾಗಿರುವುದು ನನಗೇ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ," ಎಂದು ಇಶಾನ್ ಸಂತಸ ವ್ಯಕ್ತಪಡಿಸಿದ್ದಾರೆ.

"ಜೀವನದಲ್ಲಿ ನೀವು ಉತ್ತಮ ಸಾಧನೆ ಮಾಡಿದಾಗ ನಿಮ್ಮ ಪೋಷಕರು ಎಷ್ಟು ಸಂತೋಷಪಡಬಹುದು ಎಂಬುದಕ್ಕೆ ಈ ವಿಡಿಯೋ ಒಂದು ಉತ್ತಮ ಉದಾಹರಣೆ. ನನ್ನ ಪೋಷಕರಿಗೆ ಈ ಅದ್ಭುತ ಕ್ಷಣವನ್ನು ಅನುಭವಿಸಲು ಸಾಧ್ಯವಾಗುವಂತೆ ಮಾಡಿದ್ದು ನಿಜಕ್ಕೂ ನನಗೆ ಸಂತಸವಿಸೆ," ಎಂದು ಅವರು ತಮ್ಮ ಪೋಸ್ಟ್ನಲ್ಲಿ ವಿವರಿಸಿದ್ದಾರೆ. ಜೊತೆಗೆ, ತಮ್ಮ ಈ ಸಾಧನೆಗೆ ಬೆನ್ನೆಲುಬಾಗಿ ನಿಂತು ಬೆಂಬಲಿಸಿದ ಎಲ್ಲರಿಗೂ ಅವರು ಧನ್ಯವಾದ ತಿಳಿಸಿದ್ದಾರೆ.
ಕನಸು ನನಸಾದ ರೋಚಕ ಕಥೆ
ಈ ವಿಡಿಯೋದ ಆರಂಭದಲ್ಲಿ ನೀಲಿ ಬಣ್ಣದ ಸುಂದರವಾದ ಬಿಎಂಡಬ್ಲ್ಯು ಕಾರಿನ ದೃಶ್ಯಗಳನ್ನು ನೋಡಬಹುದು. 2022ರಲ್ಲಿ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಇದೇ ಮಾದರಿಯ ಕಾರನ್ನು ಇಶಾನ್ ಮೊದಲ ಬಾರಿಗೆ ನೋಡಿದ್ದರಂತೆ. ಅದರ ಸೌಂದರ್ಯಕ್ಕೆ ಮಾರುಹೋಗಿ, ಉತ್ಸಾಹದಿಂದ ಆ ಕಾರಿನ ಫೋಟೋವನ್ನು ಕ್ಲಿಕ್ ಮಾಡಿಕೊಂಡಿದ್ದರು. ಕಳೆದ ವರ್ಷ ಅದೇ ಕಾರಿನ ಫೋಟೋವನ್ನು ತಮ್ಮ ಸಹೋದರಿಗೆ ಕಳುಹಿಸಿದ್ದ ಇಶಾನ್, "ನಾನು ಭವಿಷ್ಯದಲ್ಲಿ ಇದೇ ಕಾರನ್ನು ಖರೀದಿಸುತ್ತೇನೆ," ಎಂದು ಹೇಳಿಕೊಂಡಿದ್ದರು. ಅಚ್ಚರಿ ಎಂದರೆ, ಕೇವಲ ಒಂದು ವರ್ಷದ ಅಂತರದಲ್ಲಿ ಅವರು ತಮ್ಮ ಮಾತಿನಂತೆ ಕಾರನ್ನು ಖರೀದಿಸಿ ತೋರಿಸಿದ್ದಾರೆ.
ಭಾವುಕರಾದ ಪೋಷಕರು
ವಿಡಿಯೋದಲ್ಲಿ ಇಶಾನ್ ಅವರ ತಂದೆ ಅತ್ಯಂತ ಖುಷಿಯಿಂದ, "ಈ ಕಾರನ್ನು ನನ್ನ ಮಗ ಖರೀದಿಸಿದ್ದಾನೆ. ನನಗೆ ಬಹಳ ಸಂತೋಷವಾಗುತ್ತಿದೆ. ಈಗ ನಾವೆಲ್ಲರೂ ಇದರಲ್ಲಿ ಡ್ರೈವ್ಗೆ ಹೋಗುತ್ತೇವೆ," ಎಂದು ಹೇಳುವ ದೃಶ್ಯವಿದೆ. ಪಕ್ಕದಲ್ಲೇ ಮುಗುಳ್ನಗುತ್ತಿದ್ದ ಇಶಾನ್ ಅವರ ತಾಯಿ, "ನನ್ನ ಮಗ ಇಷ್ಟೊಂದು ಐಷಾರಾಮಿ ಕಾರನ್ನು ಖರೀದಿಸುತ್ತಾನೆ ಎಂದು ನಾನು ಕನಸಿನಲ್ಲೂ ಊಹಿಸಿರಲಿಲ್ಲ," ಎಂದು ಭಾವುಕರಾಗಿ ಹೇಳಿದ್ದಾರೆ. ತಮ್ಮ ಮಗನ ಸಾಧನೆಯ ಬಗ್ಗೆ ಇಬ್ಬರೂ ಅಪಾರ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
From manifesting a BMW at 26 to making it a reality this is still unbelievable for me.
— Ishan Dutta (@ishandutta0098) May 20, 2026
This video is a log of how happy your parents can be when you do well in life.
Special thanks to my friends from X @animeshsingh38 @wavedant_ @adityaoberai @reddy2go @apoorva_ag_ @viveknigam_… pic.twitter.com/5hhW47sZvu
ಈ ಸಂಭ್ರಮಾಚರಣೆಯಲ್ಲಿ ಇಶಾನ್ ಅವರ ಇತರ ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಕೂಡ ಪಾಲ್ಗೊಂಡು ಖುಷಿಪಟ್ಟಿದ್ದಾರೆ. ಮಗನ ಯಶಸ್ಸನ್ನು ಪೋಷಕರೊಂದಿಗೆ ಆಚರಿಸಿದ ಇಶಾನ್ ಅವರ ನಡೆಯನ್ನು ಸಾಮಾಜಿಕ ಜಾಲತಾಣಗಳ ಬಳಕೆದಾರರು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.












Click it and Unblock the Notifications