Bengaluru Suburban Rail: ನಮ್ಮ ಮೆಟ್ರೋಗಿಂತ ಉದ್ದದ 31ಮೀ. ಯು-ಗರ್ಡರ್ ಪೂರ್ಣ
ಬೆಂಗಳೂರು, ಜನವರಿ 08: ರಾಜಧಾನಿಯ ಮಹತ್ವಾಕಾಂಕ್ಷಿ 'ಬೆಂಗಳೂರು ಸಬರ್ಬನ್ ರೈಲು ಯೋಜನೆ'ಯು ಮಲ್ಲಿಗೆ, ಸಂಪಿಗೆ, ಪಾರಿಜಾತ ಮತ್ತು ಕನಕ ಹೆಸರಿನ ನಾಲ್ಕು ಕಾರಿಡಾರ್‌ಗಳಲ್ಲಿ ನಿರ್ಮಾಣವಾಗುತ್ತಿದೆ. ಈ ಪೈಕಿ ಎರಡನೇ ಕಾರಿಡಾರ್ ಕಾಮಗಾರಿಯಲ್ಲಿ ಪ್ರಗತಿಯೊಂದನ್ನು ಸಾಧಿಸಿದೆ. ದೇಶದಲ್ಲೇ ಅತೀ ಉದ್ದದ ಯು- ಗರ್ಡರ್ ಇಲ್ಲಿ ನಿರ್ಮಾಣಗೊಂಡಿದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ಬೆಂಗಳೂರು ಸಬರ್ಬನ್ ರೈಲು ಯೋಜನೆ (BARP) ಎರಡನೇ ಹಂತದಲ್ಲಿ ಅಳವಡಿಸಿರುವ ದಾಖಲೆಯ 31 ಮೀಟರ್ ಉದ್ದದ ಯು-ಗರ್ಡರ್ ಅನ್ನು ದೇವನಹಳ್ಳಿಯಲ್ಲಿರುವ ಕಾಮಗಾರಿ ಸ್ಥಾವರದಲ್ಲಿ (ಕಾಸ್ಟಿಂಗ್ ಯಾರ್ಡ್) ಶನಿವಾರ ರಾತ್ರಿ ಪೂರ್ಣಗೊಂಡಿದೆ ಎಂದು ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ಮತ್ತು ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಮಾಹಿತಿ ನೀಡಿದ್ದಾರೆ.

ಸಚಿವರು ಈ ಕುರಿತು ಭಾನುವಾರ ಮಾಹಿತಿ ನೀಡಿದ್ದು, ದೇಶದ ಉಳಿದ ಮೆಟ್ರೋಗಳಲ್ಲಿ 28 ಮೀಟರ್ ಉದ್ದದ ಗರ್ಡರ್ (ಸಿಮೆಂಟ್ ಮತ್ತು ಕಬ್ಬಿಣದ ತೊಲೆ) ತಯಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಬೆಂಗಳೂರು ಸಬರ್ಬನ್ ರೈಲು ಯೋಜನೆಯಲ್ಲಿ ಈ ದಾಖಲೆಯನ್ನು ಮುರಿಯಲಾಗಿದೆ.
ಯೋಜನೆಯಲ್ಲಿ 450 'ಯು-ಗರ್ಡರ್' ಅಳವಡಿಕೆ
ಶನಿವಾರ ಪೂರ್ಣಗೊಂಡ ದೇಶದ ಅತೀ ಉದ್ದದ 31 ಮೀಟರ್ 'ಯು' ಆಕಾರದಲ್ಲಿರುವ ಗರ್ಡರ್ ಇದಾಗಿದೆ. ಇಂತಹ 450 'ಯು-ಗರ್ಡರ್'ಗಳು ಕಾರಿಡಾರ್-2ರಲ್ಲಿ (ಮಲ್ಲಿಗೆ ಲೈನ್) ಅಗತ್ಯವಾಗಿವೆ. ಇದನ್ನು ಯಶವಂತಪುರ-ಹೆಬ್ಬಾಳ ನಡುವಿನ 8 ಕಿಲೋ ಮೀಟರ್ ಮಾರ್ಗದಲ್ಲಿ ಸದ್ಯದಲ್ಲೇ ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ.

ಇಂತಹ ಪ್ರತೀ ಒಂದು ಗರ್ಡರ್ ತಯಾರಿಕೆಗೂ M60 ಗುಣಮಟ್ಟದ 69.5 ಕ್ಯೂಬಿಕ್ ಮೀಟರ್ ಕಾಂಕ್ರೀಟ್ ಬೇಕಾಗುತ್ತದೆ. ಇಂತಹ ತೊಲೆಗಳು ತಲಾ 178 ಟನ್ ಭಾರವಿರುತ್ತವೆ. ಇವುಗಳಿಂದ ಕಾಮಗಾರಿಗೆ ತಗುಲುವ ಸಮಯ ಸಾಕಷ್ಟು ಉಳಿಯಲಿದೆ. ಇದನ್ನು ಆಸ್ ಸಿಸ್ಟಮ್ ಕಂಪನಿಯು ಬೆಂಗಳೂರು ಸಬರ್ಬನ್ ರೈಲು ಯೋಜನೆಗಾಗಿ ವಿನ್ಯಾಸಗೊಳಿಸಲಾಗಿದೆ.
ಚೆನ್ನೈ ಕಂಪನಿಯಿಂದ ಗುಣಮಟ್ಟ ಖಾತ್ರಿ
ಚೆನ್ನೈನ ಐಐಟಿ ಮತ್ತು ಜನರಲ್ ಕನ್ಸಲ್ಟೆಂಟ್ ಕಂಪನಿಗಳು ಕೂಡ ಇದರಲ್ಲಿ ಸಕ್ರಿಯ ಪಾತ್ರ ವಹಿಸಿ, ಗುಣಮಟ್ಟವನ್ನು ಖಾತ್ರಿಪಡಿಸಿವೆ ಎಂದು ಅವರು ವಿವರಿಸಿದರು.
ಇಂತಹ ಯು-ಗರ್ಡರ್ ಸಿದ್ಧಪಡಿಸಿರುವುದು ಒಂದು ತಾಂತ್ರಿಕ ಅದ್ಭುತವೇ ಆಗಿದೆ. ಸರ್ಕಾರಿ ಸ್ವಾಮ್ಯದ ಕೆ-ರೈಡ್ ಇದರ ಉಸ್ತುವಾರಿ ಮತ್ತು ಗುಣಮಟ್ಟ ನಿಯಂತ್ರಣಗಳನ್ನು ನೋಡಿಕೊಂಡಿದೆ. ಇಂತಹ ಗರ್ಡರ್ ಅಳವಡಿಸುವುದರಿಂದ ನೇರವಾಗಿ ಹಳಿಗಳನ್ನು ಅಳವಡಿಸಲು ಸಾಧ್ಯವಾಗಲಿದೆ.
ಇದು ಈವರೆಗೆ ನಿರ್ಮಿಸಿದ್ದ ನಮ್ಮ ಮೆಟ್ರೋ ಗಿಂತಲೂ ದೊಡ್ಡ ಯು ಗರ್ಡರ್ ಆಗಿದೆ ಎಂದು ಕೈಗಾರಿ ಸಚಿವ ಎಂ.ಬಿ ಪಾಟೀಲ್ ಪುನರುಚ್ಚರಿಸಿದರು.












Click it and Unblock the Notifications