Bengaluru Viral Video: ಬೆಂಗಳೂರಿನಲ್ಲಿ ವಿದ್ಯಾರ್ಥಿಗಳಿಗೆ ಮುಕ್ತ ಸಿಗರೇಟ್ ಮಾರಾಟ, ಡ್ರಗ್ಸ್ ವ್ಯಸನದ ಭೀತಿ: ವೈರಲ್ ವಿಡಿಯೊ
Bengaluru Viral Video: ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ಮುಕ್ತವಾಗಿ ಸಿಗರೇಟ್ ಸೇದುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. "Deccan Report" ಕನ್ನಡ ಎನ್ನುವ ಚಾನೆಲ್‌ನಿಂದ ಮಾಡಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಹಲವು ಕೋನಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಶಾಲಾ - ಕಾಲೇಜು ವಿದ್ಯಾರ್ಥಿಗಳು ಸಿಗರೇಟ್ ಸೇದುವುದು, ಬೆಂಗಳೂರು - ಕರ್ನಾಟಕದಲ್ಲಿ ಡ್ರಗ್ಸ್ ಜಾಲದ ಚರ್ಚೆಗೆ ಈ ವಿಡಿಯೋ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಬೆಂಗಳೂರಿನ ಯುವತಿಯರ ಚಾರಿತ್ರ್ಯ ವಧೆಗೆ ಮುಂದಾಗಿರುವುದು ತೀವ್ರ ಆಕ್ಷೇಪಕ್ಕೂ ಕಾರಣವಾಗಿದೆ. ಏನಿದು ವೈರಲ್ ವಿಡಿಯೋ, ಯಾಕೆ ಇಷ್ಟೊಂದು ಗಂಭೀರ ಚರ್ಚೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ಇದೆ.
ಕರ್ನಾಟಕದಲ್ಲಿ ಕಳೆದ ಒಂದು ವರ್ಷದಿಂದಲೂ ಡ್ರಗ್ಸ್ ಜಾಲದ ವಿಚಾರವು ದೇಶದಾದ್ಯಂತ ಗಂಭೀರ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಯುವಕ / ಯುವತಿಯರೇ ಹೆಚ್ಚಾಗಿ ಈ ಜಾಲಕ್ಕೆ ಸಿಲುಕುತ್ತಿದ್ದಾರೆ ಎನ್ನುವ ವಿಚಾರವು ಆತಂಕಕ್ಕೆ ಕಾರಣವಾಗಿದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ ಯುವಕ ಮತ್ತು ಯುವತಿಯು ರಸ್ತೆಗಳಲ್ಲಿ ಗುಂಪು ಗುಂಪಾಗಿ ಸಿಗರೇಟ್ ಸೇದುತ್ತಿರುವುದು ಸೆರೆಯಾಗಿದೆ. ಕೆಲವು ಜಿನ್ ಜಿ ಯುವಕರು ಹಾದಿ ತಪ್ಪುತ್ತಿದ್ದಾರೆ ಎನ್ನುವ ಚರ್ಚೆಯೊಂದಿಗೆ ಈ ರೀತಿ ಶಾಲಾ - ಕಾಲೇಜು ಆವರಣದಲ್ಲಿ ತಂಬಾಕು ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿರುವುದಕ್ಕೆ ಪೊಲೀಸರು ಹಾಗೂ ಸರ್ಕಾರದ ವಿರುದ್ಧವೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಶಾಲಾ - ಕಾಲೇಜು ಆವರಣದ 100 ಮೀಟರ್ ಅಂತರದಲ್ಲಿರುವ ಅಂಗಡಿ ಹಾಗೂ ವಾಣಿಜ್ಯ ಸಂಸ್ಥೆಗಳಲ್ಲಿ ತಂಬಾಕು ಹಾಗೂ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಅಲ್ಲದೇ ಬಿಡಿಯಾಗಿ ಸಿಗರೇಟ್ ಮಾರಾಟ ಮಾಡುವುದಕ್ಕೂ ನಿರ್ಬಂಧವಿದೆ. ಆದರೆ ಬೆಂಗಳೂರಿನ ಶೇ 99% ಪ್ರದೇಶಗಳಲ್ಲಿ ಈ ನಿಯಮ ಉಲ್ಲಂಘನೆಯಾಗುತ್ತಿದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲೂ ಇದೇ ವಿಷಯವನ್ನು ಪ್ರಸ್ತಾಪಿಸಲಾಗಿದೆ.
ವೈರಲ್ ವಿಡಿಯೋದಲ್ಲಿ ಏನಿದೆ ?
ಬೆಂಗಳೂರಿನ ಈ ಭಾಗದಲ್ಲಿ ವಿದ್ಯಾರ್ಥಿಗಳು ಹೇಗೆ ಹಾಳಾಗುತ್ತಿದ್ದಾರೆ ಎನ್ನುವ ಉದ್ದೇಶದಿಂದ ಈ ಲೈವ್ ವಿಡಿಯೋ ಮಾಡಿರುವುದಾಗಿ ವಿಡಿಯೋದಲ್ಲಿ ಹೇಳಲಾಗಿದೆ.
ಡ್ರಗ್ಸ್, ಗಾಂಜಾ ಹಾಗೂ ಕುಡಿತ ಯಾವುದೇ ಚಟವಾದರೂ ಸರಿ ಮಕ್ಕಳು ಮೊದಲು ಕಲಿಯುವುದೇ ಸಿಗರೇಟ್ ಸೇದುವುದನ್ನು. ಸಿಗರೇಟ್ ಮಕ್ಕಳಿಗೆ ತುಂಬಾ ಸುಲಭವಾಗಿ ಸಿಗುತ್ತದೆ. ಯೂನಿಫಾರ್ಮ್ ಹಾಕಿಕೊಂಡಿರುವ ಮಕ್ಕಳಿಗೂ ಲೂಸ್ ಸಿಗರೇಟ್ ಹೇಗೆ ಸಿಗುತ್ತಿದೆ ಎನ್ನುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಇದು ಫೂಡ್ ಸ್ಟ್ರೀಟ್ ಆಗಿದೆ. ಆದರೆ ಇಲ್ಲಿ ಪೂರ್ಣವಾಗಿ ಸಿಗರೇಟ್ ಮಾರಾಟವಾಗುತ್ತಿದೆ ಎಂದು ಹೇಳಲಾಗಿದೆ.
ಅಲ್ಲದೇ ವೈರಲ್ ಆಗಿರುವ ವಿಡಿಯೋದಲ್ಲಿ ಯುವಕರು ಹಾಗೂ ಯುವತಿಯರು ಸಹ ಮುಕ್ತವಾಗಿ ರಸ್ತೆಗಳಲ್ಲೇ ಸಿಗರೇಟ್ ಸೇದುತ್ತಿರುವುದು ಕಾಣಿಸುತ್ತದೆ. ಗುಂಪು ಗುಂಪಾಗಿ ಶಾಲಾ - ಕಾಲೇಜಿನ ಮಕ್ಕಳು ಈ ರೀತಿ ಸಿಗರೇಟ್ ಸೇದುತ್ತಿರುವ ದೃಶ್ಯಗಳು ಇದೀಗ ಸಾರ್ವಜನಿಕರ ಆತಂಕ ಹಾಗೂ ಕಳವಳಕ್ಕೆ ಕಾರಣವಾಗಿದೆ.
ಬೆಂಗಳೂರಿನ ಯುವತಿಯರ ಬಗ್ಗೆ ಚರ್ಚೆ: ವಿರೋಧ
ಇನ್ನು ವೈರಲ್ ಆಗಿರುವ ವಿಡಿಯೋದ ಬಗ್ಗೆ ಕೆಲವರು ಕಾಮೆಂಟ್ ಮಾಡಿರುವ ಬಗ್ಗೆಯೂ ಭಾರೀ ಚರ್ಚೆ ನಡೆದಿದೆ. ಯುವತಿಯರು ಸಹ ಸಿಗರೇಟ್ ಸೇದುತ್ತಿರುವ ದೃಶ್ಯಗಳಿಗೆ ಕೆಲವರು ಮಾಡಿರುವ ಕಾಮೆಂಟ್‌ಗೆ ವಿರೋಧವೂ ವ್ಯಕ್ತವಾಗುತ್ತಿದೆ. ನೆಟ್ಟಿಗನೊಬ್ಬ ಈ ವಿಡಿಯೋಗೆ "ಬೆಂಗಳೂರಿನ ಹುಡುಗಿಯರನ್ನು ಮದುವೆ ಆಗುವ ಮೊದಲು ಸಾವಿರ ಸಾರಿ ಯೋಚಿಸಿ. ಮದುವೆ ಆಗದೆ ಬದುಕಿದರೂ ಸುಖವಾಗಿ ಇರಬಹುದು. ಬದುಕನ್ನು ನರಕ ಮಾಡಿಕೊಳ್ಳಬೇಡಿ" ಎಂದು ಕಾಮೆಂಟ್ ಮಾಡಿದ್ದಾನೆ.
ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ಷೇಪ ವ್ಯಕ್ತವಾಗಿದೆ. ಊರಿನ ಎಲ್ಲ ಹುಡುಗಿಯರನ್ನು ಒಂದೇ ಥರ ಬ್ರಾಂಡ್ ಮಾಡುವುದು ಸರಿಯೇ?, ಒಂದಿಬ್ಬರು ಮಾಡಿರುವ ತಪ್ಪಿಗೆ ಬೆಂಗಳೂರು ಯುವತಿಯರೇ ಸರಿ ಇಲ್ಲ ಎನ್ನುವುದು ಎಷ್ಟು ಸರಿ, ಇದೆಂಥಹ ಕೆಟ್ಟ ಮನಸ್ಥಿತಿ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ವೈರಲ್ ವಿಡಿಯೋಗೆ ಜನ ಹೇಳಿದ್ದೇನು ?
ರೂಪಾ ರಾವ್ ಎನ್ನುವವರು, ಅಷ್ಟೇಅಲ್ಲ ಸಿಗರೇಟಿನ ವೇಷದಲ್ಲಿ ಬೇರೆ ಬೇರೆ ಮಾದಕ ವಸ್ತುಗಳೂ ಸಿಗುತ್ತವೆ ಎಂಬ ಪಿಸುಮಾತೂ ಇದೆ. ಡ್ರಗ್ಸ್ ಕಾಲೇಜ್ ಕ್ಯಾಂಪಸ್ ಒಳಗೇ ಮಾರುತ್ತಿದ್ದಾರೆ. ದೊಡ್ಡ ದೊಡ್ಡ ಕಾಲೇಜುಗಳು ಮಕ್ಕಳು ಚಿಕ್ಕವಯಸ್ಸಿನಲ್ಲಿಯೇ ಈ ಚಟಕ್ಕೆ ಬಿದ್ದು ನರಳುತ್ತಿದ್ದಾರೆ. ಇದೊಂದು ಅಡಿಕ್ಷನ್ ಆಗಿ ಅದರಿಂದ ಹೊರಬರಲಾಗದೆ ಬಾಳನ್ನೇ ಹಾಳು ಮಾಡಿಕೊಂಡು ಖಿನ್ನತೆ ಆತಂಕ ಮತ್ತಿತರ ಮಾನಸಿಕ ಅಸ್ವಸ್ಥತೆಗೆ ಗುರಿಯಾದ ಅದೆಷ್ಟೊ ಮಕ್ಕಳು ಹಾಗು ಅವರನ್ನು ಸರಿ ಮಾಡಿ ಎಂದು ಕರೆದುಕೊಂಡು ಬರುವ ಪೋಷಕರನ್ನು ನೋಡಿದಾಗೆಲ್ಲಾ ವ್ಯವಸ್ಥೆಯ ಮೇಲೆ ಆಕ್ರೋಶ ಉಕ್ಕಿ ಬರುತ್ತೆ ಎಂದು ಹೇಳಿದ್ದಾರೆ.
ಋತ್ವಿಕ್ ಮಹೇಶ್ ಎನ್ನುವವರು ಹೋಗೋದು ಕಾಲೇಜಿಗೆ. ಆದರೆ, ಇಲ್ಲಿ ಬಂದು ಇದನ್ನು ಮಾಡುತ್ತಿದ್ದರೆ, ಅಪ್ಪ ಅಮ್ಮ ಏನು ಮಾಡಬೇಕು. ಗಂಡು ಮಕ್ಕಳ ಬಳಿ ಕೇಳಿ. ಇದನ್ನು ಕಾಲೇಜ್ ಪ್ರಾಂಶುಪಾಲರ ಹತ್ತಿರ ಮಾತಾಡಿ, ಇನ್ನೂ ಯಾವ ಸರ್ಕಾರವಿದ್ದರೂ ಕಂಪನಿ ಮುಚ್ಚಬೇಕು. ಇದು ಸ್ವಯಂ ಪ್ರೇರಣೆಯಿಂದ ನಾವೇ ನಿಲ್ಲಿಸಬೇಕು ಎಂದಿದ್ದಾರೆ.
ವೈರಲ್ ಆಗಿರುವ ವಿಡಿಯೊ ಇಲ್ಲಿದೆ.












Click it and Unblock the Notifications