ಬೆಂಗಳೂರು ದಕ್ಷಿಣ ನಗರ ಪಾಲಿಕೆ: ವಾಣಿಜ್ಯ ಸಂಕೀರ್ಣದ ಮಳಿಗೆದಾರರಿಗೆ ಮಹತ್ವದ ಸೂಚನೆ
ಬೆಂಗಳೂರು: ಬೆಂಗಳೂರಿನಲ್ಲಿ ಪಾಲಿಕೆಯ ವಾಣಿಜ್ಯ ಸಂಕೀರ್ಣದ ಮಳಿಗೆದಾರರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಾಲಿಕೆಯಿಂದ ಮಹತ್ವದ ಸೂಚನೆಯೊಂದನ್ನು ಕೊಡಲಾಗಿದೆ. ಕರ್ನಾಟಕದಾದ್ಯಂತ ಸ್ಥಳೀಯ ಆಡಳಿತ ಮಟ್ಟದಲ್ಲಿ ಆಯಾ ವ್ಯಾಪ್ತಿಯ ವಾಣಿಜ್ಯ ಸಂಕೀರ್ಣದ ಮಳಿಗೆದಾರರ ದಾಖಲೆ ಪರಿಶೀಲನೆ ಪ್ರಕ್ರಿಯೆ ನಡೆದಿದ್ದು, ಇದೀಗ ಬೆಂಗಳೂರಿನಲ್ಲೂ ವಾಣಿಜ್ಯ ಸಂಕೀರ್ಣದ ಮಳಿಗೆದಾರರಿಗೆ ಮಹತ್ವದ ಸೂಚನೆ ನೀಡಲಾಗಿದೆ.
ಬೆಂಗಳೂರಿನ ಪಾಲಿಕೆಯ ವಾಣಿಜ್ಯ ಸಂಕೀರ್ಣದ ಮಳಿಗೆದಾರರು ನವೀಕರಣಕ್ಕಾಗಿ ಮಳಿಗೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕು ಎಂದು ದಕ್ಷಿಣ ನಗರ ಪಾಲಿಕೆಯ ಆಯುಕ್ತರಾದ ಕೆ.ಎನ್ ರಮೇಶ್ ಅವರು ಸೂಚನೆ ನೀಡಿದ್ದಾರೆ.

ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 280 ಬಿಬಿಎಸ್ 2023 (ಇ) 6 ಆಸ್ತಿ ನಿರ್ವಹಣೆ ನಿಯಮಗಳು-2024 ಕರ್ನಾಟಕ ರಾಜ್ಯ ಪತ್ರದಲ್ಲಿ ಅಧಿಕೃತವಾಗಿ ದಿ: 01-01-2025 ರಂತೆ ಹೊಸ ನಿಯಮ ಜಾರಿಗೆ ಬಂದಿರುತ್ತದೆ.
ಪಾಲಿಕೆಯ ಮಾಲೀಕತ್ವಕ್ಕೆ ಒಳಪಟ್ಟಿರುವ ಜಯನಗರ ನಾಲ್ಕನೇ ಬಡಾವಣೆಯಲ್ಲಿರುವ ಜಯನಗರ ವಾಣಿಜ್ಯ ಸಂಕೀರ್ಣ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ವಾಣಿಜ್ಯ ಸಂಕೀರ್ಣದಲ್ಲಿನ 251 ಮಳಿಗೆಗಳು ಮತ್ತು ಜಯನಗರ 4ನೇ ಟಿ ' ಬ್ಲಾಕ್‌ನ ಮಾರುಕಟ್ಟೆ ಕಟ್ಟಡದಲ್ಲಿನ 39 ಮಳಿಗೆಗಳ ನವೀಕರಣದ ಅವಧಿಯು ಮುಕ್ತಾಯಗೊಂಡಿದೆ. ಹೀಗಾಗಿ, ಕರ್ನಾಟಕ ಸರ್ಕಾರ ಅಧಿಸೂಚನೆ ಸಂಖ್ಯೆ:ನಅಇ 280 ಬಿಬಿಎಸ್ 2023 (ಇ) ದಿನಾಂಕ:01-01-2025ರ ನಿಯಮಾವಳಿಯಂತೆ ಈ ಮಳಿಗೆಗಳ ಗುತ್ತಿಗೆಯನ್ನು ನಿಯಮ 8 ರಂತೆ ಇನ್ನೊಂದು ಅವಧಿಗೆ ನವೀಕರಿಸಲು ಅವಕಾಶ ಕಲ್ಪಿಸಿ ಅರ್ಜಿಗಳನ್ನು ಸಲ್ಲಿಸಲು ಸೂಚಿಸಲಾಗಿತ್ತು. ಈ ಸಂಬಂಧ ಪ್ರತಿಯೊಂದು ಮಳಿಗೆಯ ಮಳಿಗೆದಾರರಿಗೆ ಪ್ರತ್ಯೇಕ ಸೂಚನಾ ಪತ್ರವನ್ನು ನೀಡಲಾಗಿರುವಂತೆ, ಈಗಾಗಲೇ ಹಲವಾರು ಮಳಿಗೆದಾರರು ಅರ್ಜಿಯೊಂದಿಗೆ ದಾಖಲೆಗಳನ್ನು ಸಹ ಕಚೇರಿಗೆ ಸಲ್ಲಿಸಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಮುಂದುವರಿದು ಆದಾಗ್ಯೂ ಸಹ ಆಸ್ತಿ ನಿರ್ವಹಣೆ ನಿಯಮಗಳು-2024 ರಲ್ಲಿ ಗುತ್ತಿಗೆ ಅವಧಿ ಮುಕ್ತಾಯಗೊಂಡಿರುವ ಮಳಿಗೆಗಳ ಬಾಡಿಗೆ / ಗುತ್ತಿಗೆ ನವೀಕರಣಕ್ಕೆ ಅವಕಾಶ ಕಲ್ಪಿಸಿರುವುದನ್ನು ಸದುಪಯೋಗಪಡಿಸಿಕೊಂಡು ತಮ್ಮ ಮಳಿಗೆಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಈಗಾಗಲೇ ಸೂಚನಾ ಪತ್ರದಲ್ಲಿ ಸೂಚಿಸಿರುವಂತೆ ಅರ್ಜಿಯೊಂದಿಗೆ ಸಹಾಯಕ ಕಂದಾಯ ಅಧಿಕಾರಿ (ದಕ್ಷಿಣ-ಮಾರುಕಟ್ಟೆ) ಜಯನಗರ ವಾಣಿಜ್ಯ ಸಂಕೀರ್ಣ ರವರ ಕಚೇರಿಗೆ ಸಲ್ಲಿಸಲು ಸೂಚಿಸಲಾಗಿದೆ ಎಂದು ದಕ್ಷಿಣ ನಗರ ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಸಹಾಯಕ ಕಂದಾಯ ಅಧಿಕಾರಿ (ಮಾರುಕಟ್ಟೆ) ರಾಧಾ ಬಡಿಗೇರ್ ಅವರನ್ನು ಸಂಪರ್ಕಿಸಬಹುದಾಗಿದ್ದು, ಮೊಬೈಲ್ ಸಂಖ್ಯೆ 080-26531116 ಎಂದು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
ಉಳಿದ ಪಾಲಿಕೆಗಳಲ್ಲೂ ಇದೇ ಮಾದರಿ ?
ಇನ್ನು ಬೆಂಗಳೂರಿನ ಉಳಿದ ಪಾಲಿಕೆಗಳಲ್ಲೂ ಇದೇ ಮಾದರಿಯನ್ನು ಅನುಸರಿಸುವ ಸಾಧ್ಯತೆ ಇದೆ. ಬೆಂಗಳೂರಿನ ಐದು ಪಾಲಿಕೆಗಳಲ್ಲೂ ಆಸ್ತಿ ತೆರಿಗೆ ಸೇರಿದಂತೆ ವಿವಿಧ ಆದಾಯ ಮೂಲಗಳ ಸಂಗ್ರಹಕ್ಕೆ ಆದ್ಯತೆ ನೀಡಲಾಗುತ್ತಿದೆ.












Click it and Unblock the Notifications