Bengaluru Rain: ಮಳೆ.. ಮಳೆ.. ನಾಳೆ ಕೂಡ ಬೆಂಗಳೂರಿನಲ್ಲಿ ಮಳೆ, ಶಾಲೆಗಳಿಗೆ ರಜೆ ಘೋಷಣೆ!
ಬೆಂಗಳೂರಲ್ಲಿ ಮಳೆ ಸುರಿದ ನಂತರ, ಹೊಳೆ ಯಾವುದು & ರಸ್ತೆ ಯಾವುದು? ಅಂತಾ ವಾಹನ ಸವಾರರಿಗೆ ಗೊತ್ತೇ ಆಗ್ತಿಲ್ಲ. ಯಾಕಂದ್ರೆ ಕಳೆದ 15 ದಿನಗಳಿಂದ ಇದೇ ರೀತಿ ಟಾರ್ಚರ್ ಕೊಡುತ್ತಿರುವ ಮಳೆರಾಯ ಮತ್ತಷ್ಟು ರೊಚ್ಚಿಗೆದ್ದಿದ್ದಾನೆ. ಹೀಗೆ ಮಳೆ ಅಬ್ಬರದ ಕಾರಣಕ್ಕೆ ಜನರು ಕೂಡ ತತ್ತರಿಸಿ ಹೋಗಿದ್ದಾರೆ. ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳಿಸುವುದು ಹೇಗೆ? ಎಂಬ ಚಿಂತೆ ಇದೀಗ ಬೆಂಗಳೂರು ನಗರದ ಪೋಷಕರಲ್ಲಿ ಮನೆಮಾಡಿದೆ. ಇದೇ ಸಮಯದಲ್ಲಿ ಭರ್ಜರಿ ಗುಡ್ ನ್ಯೂಸ್ ಒಂದು ಸಿಕ್ಕೇಬಿಟ್ಟಿದೆ!
ಬೆಂಗಳೂರಿನಲ್ಲಿ ಈಗ ಅಕ್ಷರಶಃ ಮೋಡ ತೂತು ಬಿದ್ದಂತೆ ಮಳೆ ಸುರಿಯುತ್ತಿದೆ. ಪರಿಣಾಮ ಜನರು ಕೂಡ ಬೆಚ್ಚಿ ಬಿದ್ದಿದ್ದು, ಮುಂದಿನ ಪರಿಸ್ಥಿತಿ ನೆನಪು ಮಾಡಿಕೊಂಡರೆ ಭಯ ಆಗುತ್ತಿದೆ. ಯಾಕಂದ್ರೆ ಮಳೆ ಇವತ್ತಿಗೆ ಮುಕ್ತಾಯ ಆಗುವುದಿಲ್ಲ. ಈಗಿನ ಮಾಹಿತಿಗಳ ಪ್ರಕಾರ ಕನ್ನಡಿಗರ ರಾಜಧಾನಿ ಬೆಂಗಳೂರಿನಲ್ಲಿ ಮಳೆರಾಯ ಇನ್ನೂ 2 ದಿನಗಳ ಕಾಲ ಅಬ್ಬರಿಸುವ ಮುನ್ಸೂಚನೆ ಇದೆ. ಹೀಗಾಗಿಯೇ ಭಯ ಕೂಡ ಕಾಡುತ್ತಿದ್ದು, ಮಳೆ ಆರ್ಭಟಕ್ಕೆ ನಾಳೆ ಕೂಡ ಹಲವು ಸಮಸ್ಯೆ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿಯೇ ಬೆಂಗಳೂರಿನ ಶಾಲೆಗಳ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ.

ಬೆಂಗಳೂರು ನಗರದ ಶಾಲೆಗಳಿಗೆ ನಾಳೆ...
ಅಂದಹಾಗೆ, ಬೆಂಗಳೂರು ನಗರ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದು, ನಾಳೆ ಅಂದ್ರೆ 23.10.2024 ರಂದು ಮುಂಜಾಗೃತ ಕ್ರಮವಾಗಿ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೆಂಗಳೂರು ನಗರ ಜಿಲ್ಲೆ ಭಾಗದ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಹಾಗೂ ಖಾಸಗಿ ಮತ್ತು ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಬೆಂಗಳೂರು ನಗರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಅವರು ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ.
ಕಾಲೇಜುಗಳ ಕಥೆ ಏನು?
ಬೆಂಗಳೂರಿನಲ್ಲಿ ಶಾಲೆಗಳಿಗೆ ಇದೀಗ ರಜೆ ಘೋಷಣೆ ಮಾಡಿದ್ದರೂ, ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮ, ಇಂಜಿನಿಯರಿಂಗ್ , ಐಟಿಐ ಕಾಲೇಜುಗಳಿಗೆ ಮಾತ್ರ ರಜೆ ಘೋಷಣೆ ಮಾಡಿಲ್ಲ. ಹೀಗಾಗಿ ನಾಳೆ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮ, ಇಂಜಿನಿಯರಿಂಗ್ , ಐಟಿಐ ಕಾಲೇಜುಗಳು ಎಂದಿನಂತೆ ನಡೆಯಲಿವೆ. ಆದರೆ ಕಾಲೇಜು ಮುಖ್ಯಸ್ಥರು ವಿದ್ಯಾರ್ಥಿಗಳು ಕಾಲೇಜಿಗೆ ಬರುವಾಗ & ಮನೆಗೆ ತೆರಳುವ ಸಂದರ್ಭದಲ್ಲಿ ಯಾವುದೇ ಅಪಾಯವಿಲ್ಲದೇ ಸುರಕ್ಷಿತವಾಗಿ ತಲುಪುವಂತೆ ಗಮನ ವಹಿಸಲು ಇದೀಗ ಸೂಚನೆ ನೀಡಲಾಗಿದೆ.
ಹಾಗೇ ಇನ್ನೊಂದು ಕಡೆ ದುರ್ಬಲ & ಶಿಥಿಲ ಕಟ್ಟಡಗಳು ಇದ್ದಲ್ಲಿ ಅಂತಹ ಕಟ್ಟಡಗಳನ್ನು ಪಾಠ ಪ್ರವಚನಗಳಿಗೆ ಬಳಸುವಂತಿಲ್ಲ ಎಂದು ಕೂಡ ಸೂಚನೆ ನೀಡಲಾಗಿದೆ. ಈ ಬಗ್ಗೆ ಕಾಲೇಜುಗಳ ಮುಖ್ಯಸ್ಥರು ಕಾಲೇಜು ಕಟ್ಟಡಗಳ ಸುಸ್ಥಿತಿಯ ಬಗ್ಗೆ ಗಮನಹರಿಸುವುದು ಹಾಗೂ ಯಾವುದೇ ಅವಘಡಗಳು ನಡೆಯದಂತೆ ಸೂಕ್ತ ಕ್ರಮ ವಹಿಸಬೇಕು ಎಂದು ಸೂಚನೆ ನೀಡಲಾಗಿದೆ.












Click it and Unblock the Notifications