Namma Metro: ಬೆಂಗಳೂರಿನ ಅತಿದೊಡ್ಡ ಮೆಟ್ರೊ ನಿಲ್ದಾಣ ಕಾರ್ಯಾರಂಭ ಯಾವಾಗ, ಎಲ್ಲಿ? ಅಂಕಿಅಂಶ, ಮಾಹಿತಿ, ವಿವರ ತಿಳಿಯಿರಿ
ಬೆಂಗಳೂರು, ಜುಲೈ 24: ನಗರದ ಅತಿದೊಡ್ಡ ಮೆಟ್ರೊ (Bengaluru Metro) ನಿಲ್ದಾಣ ಕಾರ್ಯರಂಭವಾಗಲಿದೆ. ಮಲ್ಟಿ-ಲೆವೆಲ್ ಇಂಟರ್‌ಚೇಂಜ್ ಹೊಂದಿರುವ ಈ ಮೆಟ್ರೊ ನಿಲ್ದಾಣವು, ನಮ್ಮ ಮೆಟ್ರೊದ ( Namma Metro) ಅತಿದೊಡ್ಡ ನಿಲ್ದಾಣವೆಂದು ಬಿಎಂಆರ್‌ಸಿಎಲ್ ಹೇಳಿದೆ. ಈ ನಿಲ್ದಾಣದಲ್ಲಿ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಹಳದಿ ಮಾರ್ಗ (Yellow Line) ಮತ್ತು ಕಾಳೇನ ಅಗ್ರಹಾರದಿಂದ ನಾಗವಾರವರೆಗಿನ ಗುಲಾಬಿ ಮಾರ್ಗಗಳು (Pink Line) ಇಂಟರ್‌ಚೇಂಜ್ ಆಗಲಿವೆ.
ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಹಳದಿ ಮಾರ್ಗ ಮತ್ತು ಕಾಳೇನ ಅಗ್ರಹಾರದಿಂದ ನಾಗವಾರವರೆಗಿನ ಗುಲಾಬಿ ಮಾರ್ಗಗಳು ಈ ನಿಲ್ದಾಣದ ಮೂಲಕ ಹಾದು ಹೋಗಲಿವೆ. ಈ ನಿಲ್ದಾಣವು ಪೀಕ್ ಅವರ್‌ನಲ್ಲಿ 25,000 ಪ್ರಯಾಣಿಕರನ್ನು ನಿಭಾಯಿಸುತ್ತದೆ ಎಂದು ಮೆಟ್ರೊ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬನ್ನೇರುಘಟ್ಟ ರಸ್ತೆಯಲ್ಲಿರುವ ಜಯದೇವ ಜಂಕ್ಷನ್‌ನಲ್ಲಿ ಮಲ್ಟಿ-ಲೆವೆಲ್ ಇಂಟರ್‌ಚೇಂಜ್ ಮೆಟ್ರೊ ನಿಲ್ದಾಣವನ್ನು ನಿರ್ಮಾಣ ಮಾಡಲಾಗುತ್ತಿದೆ. 2023 ರ ಅಂತ್ಯದ ವೇಳೆಗೆ ಈ ನಿಲ್ದಾಣವು ಕಾರ್ಯಾರಂಭ ಮಾಡಲಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.
ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳುವ ಪ್ರಕಾರ, ನಿಲ್ದಾಣದ ಶೇ.90ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ನಿಲ್ದಾಣದ ಒಟ್ಟು ನಿರ್ಮಿತ ಪ್ರದೇಶ 19,826 ಚದರ ಮೀಟರ್ ಆಗಿದೆ.
ಈ ನಿಲ್ದಾಣದ ಕಾಮಗಾರಿಯನ್ನು ಪೂರ್ಣಗೊಳಿಸಲು ಹಲವು ಗಡುವುಗಳನ್ನು ತೆಗೆದುಕೊಳ್ಳಲಾಗಿತ್ತು. ಆದರೆ, ಕೋವಿಡ್‌ನಿಂದ ಕಾಮಗಾರಿಗಳು ಸ್ಥಗಿತಗೊಂಡವು. ಈ ಹಿನ್ನೆಲೆಯಲ್ಲಿ ನಿಲ್ದಾಣ ನಿರ್ಮಾಣ ಕಾರ್ಯ ವಿಳಂಬವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಹಳದಿ ಮಾರ್ಗವನ್ನು 2023ರ ಕೊನೆಯಲ್ಲಿ ತೆರೆಯಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಮಾರ್ಚ್ 2025 ರ ವೇಳೆಗೆ ಪಿಂಕ್ ಲೈನ್ ತೆರೆಯುವ ನಿರೀಕ್ಷೆಯಿದೆ ಎಂದು ಮೆಟ್ರೊ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ವಿಚಾರವಾಗಿ ಮಾಹಿತಿ ಹಂಚಿಕೊಂಡಿರುವ ಬಿಎಂಆರ್‌ಸಿಎಲ್ ಎಂಡಿ ಅಂಜುಮ್ ಪರ್ವೇಜ್, 'ಜಯದೇವ ಮೆಟ್ರೋ ನಿಲ್ದಾಣವನ್ನು ನಮ್ಮ ಮೆಟ್ರೋದ ಎರಡನೇ ಹಂತದ ಯೋಜನೆ ಅಡಿಯಲ್ಲಿ ಪ್ರಸ್ತಾಪಿಸಲಾಗಿದೆ. ಇದು ಎರಡು ಹೊಸ ಮಾರ್ಗಗಳ ಭಾಗವಾಗಿದೆ. ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಒಂದು ಮಾರ್ಗವನ್ನು ವರ್ಷಾಂತ್ಯದೊಳಗೆ ತೆರೆಯಲಾಗುವುದು. ಇದು 19 ಕಿಮೀ ಮಾರ್ಗವಾಗಿದೆ. ಜಯದೇವ ನಿಲ್ದಾಣ ಸೇರಿದಂತೆ 16 ನಿಲ್ದಾಣಗಳನ್ನು ಈ ಮಾರ್ಗ ಹೊಂದಿದೆ' ಎಂದು ತಿಳಿಸಿದ್ದಾರೆ.
ಹಳದಿ ಮಾರ್ಗವು ಡಬಲ್ ಡೆಕ್ಕರ್ ಫ್ಲೈಓವರ್ ಅನ್ನು ಸಹ ಒಳಗೊಂಡಿದೆ. ರಸ್ತೆ ಸಂಚಾರಕ್ಕೆ ಒಂದು ಹಂತ ಮತ್ತು ಮೆಟ್ರೋ ರೈಲುಗಳಿಗೆ ಇನ್ನೊಂದು ಹಂತಗಳು ಈ ಮಾರ್ಗದಲ್ಲಿ ಬರುತ್ತವೆ. ಇದರಿಂದ ರಾಗಿಗುಡ್ಡ ಕಡೆಯಿಂದ ಬರುವ ಜನರು ಯಾವುದೇ ಸಿಗ್ನಲ್‌ನಲ್ಲಿ ನಿಲ್ಲದೆ ನೇರವಾಗಿ ಸಿಲ್ಕ್ ಬೋರ್ಡ್ ಅನ್ನು ಪ್ರವೇಶಿಸಲು ಸಹಾಯ ಮಾಡುತ್ತದೆ. ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಪಿಂಕ್ ಲೈನ್ ತೆರೆದಾಗ ಜಯದೇವ ಇಂಟರ್‌ಚೇಂಜ್ ನಿಲ್ದಾಣವು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಪರ್ವೇಜ್ ಹೇಳಿದ್ದಾರೆ.

ಮೆಜೆಸ್ಟಿಕ್ ಇಂಟರ್‌ಚೇಂಜ್ ನಿಲ್ದಾಣದ ನಂತರ, ಜಯದೇವ ಮೆಟ್ರೊ ನಿಲ್ದಾಣದಲ್ಲಿ ಹೆಚ್ಚಿನ ಜನಸಾಂದ್ರತೆ ಇರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
'ಮೆಜೆಸ್ಟಿಕ್ ನಿಲ್ದಾಣವನ್ನು ದಿನಕ್ಕೆ 1 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಬಳಸುತ್ತಾರೆ. ಕೆಲವು ದಿನಗಳಲ್ಲಿ ಸಂಖ್ಯೆ 1.2 ಲಕ್ಷವನ್ನು ದಾಟುತ್ತದೆ. ಮೆಜೆಸ್ಟಿಕ್ ನಂತರ ಜಯದೇವ ನಿಲ್ದಾಣವು ಎರಡು ಪ್ರಮುಖ ಮೆಟ್ರೋ ಮಾರ್ಗಗಳನ್ನು ಸಂಪರ್ಕಿಸುವ ಮೂಲಕ ಹೆಚ್ಚಿನ ಜನಸಾಂದ್ರತೆಯನ್ನು ಪಡೆಯಲಿದೆ ಎಂದು ನಾವು ಭಾವಿಸುತ್ತೇವೆ. 80,000 ರಿಂದ 90,000 ಪ್ರಯಾಣಿಕರು ಈ ನಿಲ್ದಾಣವನ್ನು ಬಳಸಬಹುದು ಎಂಬುದಾಗಿ ನಾವು ಅಂದಾಜಿಸಿದ್ದೇವೆ' ಎಂದು ಅಧಿಕಾರಿಗಳು ಹೇಳಿದ್ದಾರೆ.
3 ಇಂಟರ್‌ಚೇಂಜ್ ನಿಲ್ದಾಣಗಳು
ನಗರದ ಪ್ರಮುಖ ಐಟಿ ಕಾರಿಡಾರ್‌ಗಳಲ್ಲಿ ಒಂದಾದ ಎಲೆಕ್ಟ್ರಾನಿಕ್ಸ್ ಸಿಟಿಗೆ ಹಳದಿ ಮಾರ್ಗವು ಲಿಂಕ್ ಮಾಡುತ್ತದೆ. ಇದು ತೆರೆದ ನಂತರ ಬೆಂಗಳೂರನಲ್ಲಿ ಮೂರು ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣಗಳು ಇರಲಿವೆ. ಆರ್‌ವಿ ರಸ್ತೆ ನಿಲ್ದಾಣವು ಮೂರನೇ ಇಂಟರ್‌ಚೇಂಜ್ ನಿಲ್ದಾಣವಾಗಿದ್ದು, ಹಳದಿ ಮಾರ್ಗವು ಹಸಿರು ಮಾರ್ಗವನ್ನು ( ಸಿಲ್ಕ್ ಇನ್‌ಸ್ಟಿಟ್ಯೂಟ್‌ನಿಂದ ನಾಗಸಂದ್ರಕ್ಕೆ ) ಸಂಧಿಸುತ್ತದೆ. ಹಳದಿ ಮಾರ್ಗವನ್ನು ತೆರೆಯುವುದರಿಂದ ಮೆಟ್ರೊ ಪ್ರಯಾಣಿಕರ ಸಂಖ್ಯೆ 2 ಲಕ್ಷದಷ್ಟು ಹೆಚ್ಚಲಿದೆ ಎಂದು ಬಿಎಂಆರ್‌ಸಿಎಲ್ ಅಂದಾಜಿಸಿದೆ.

ಜಯದೇವ ಇಂಟರ್‌ಚೇಂಜ್ ನಿಲ್ದಾಣದ ನಿರ್ಮಾಣವು ಬಿಎಂಆರ್‌ಸಿಎಲ್ ಅನೇಕ ಸವಾಲುಗಳನ್ನು ಎದುರಿಸಿದೆ. ಈ ಪ್ರದೇಶದಲ್ಲಿ ಭೂಸ್ವಾಧೀನವನ್ನು ಕಡಿಮೆ ಮಾಡಲು, ಬಿಎಂಆರ್‌ಸಿಎಲ್ 10 ವರ್ಷಗಳ ಹಳೆಯ ಮೇಲ್ಸೇತುವೆಯನ್ನು ಕೆಡವಿತು. 2015-16 ರಲ್ಲಿ ಬಹು-ಹಂತದ ನಿಲ್ದಾಣವನ್ನು ನಿರ್ಮಿಸಲು ನಿರ್ಧರಿಸಿತು. ಇಂಟರ್‌ಚೇಂಜ್ ನಿಲ್ದಾಣದ ವಿನ್ಯಾಸವನ್ನು ಅಂತಿಮಗೊಳಿಸಲು ಸಂಸ್ಥೆಯು ಹಲವು ವರ್ಷಗಳನ್ನು ತೆಗೆದುಕೊಂಡಿತು. ಎಲಿವೇಟೆಡ್ ಮಾರ್ಗವು ಸಿಲ್ಕ್ ಬೋರ್ಡ್ ಕಡೆಗೆ ಹೋಗುತ್ತದೆ.
2020 ರಲ್ಲಿ ಮೇಲ್ಸೇತುವೆಯನ್ನು ಕೆಡವಲಾಯಿತು. ಈ ಪ್ರದೇಶದಲ್ಲಿನ ನಿರ್ಮಾಣ ಕಾರ್ಯ ಮತ್ತು ದಟ್ಟಣೆಯ ಪರಿಮಾಣವನ್ನು ಪರಿಗಣಿಸಿ, ಅಂತಹ ರಚನೆಯನ್ನು ನಿರ್ಮಿಸುವ ಸವಾಲು ದೊಡ್ಡದಾಗಿತ್ತು. ನಿರ್ಮಾಣ ಕಾರ್ಯವನ್ನು ಸುಲಭಗೊಳಿಸಲು ನಮ್ಮ ಮೆಟ್ರೋದಲ್ಲಿ ಪ್ರೀಕಾಸ್ಟ್ ಡಬಲ್ ಟಿ-ಗರ್ಡರ್‌ಗಳನ್ನು ಮೊದಲ ಬಾರಿಗೆ ಬಳಸಲಾಯಿತು. ಅಂಡರ್‌ಪಾಸ್ ದಾಟಲು ಸ್ಟೀಲ್ ಕಾಂಪೋಸಿಟ್ ಗರ್ಡರ್‌ಗಳನ್ನು ಬಳಸಲಾಗಿದೆ. ಡಬಲ್ ಡೆಕ್ಕರ್ ಮೇಲ್ಸೇತುವೆಯ ಮೇಲಿನ ಕಾರಿಡಾರ್ ಅಂಡರ್‌ಪಾಸ್‌ನಿಂದ 34ಮೀ ಎತ್ತರದಲ್ಲಿರುತ್ತದೆ.












Click it and Unblock the Notifications