AC double decker bus: ಬೆಂಗಳೂರಿನಲ್ಲಿ ಮುಂದಿನ ತಿಂಗಳು ರಸ್ತೆಗಿಳಿಯಲಿವೆ ಎಸಿ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್
ಅಶೋಕ್ ಲೇಲ್ಯಾಂಡ್‌ನ ಅಂಗಸಂಸ್ಥೆಯಾದ ಸ್ವಿಚ್ ಮೊಬಿಲಿಟಿ 10 ಕೋಟಿ ರೂಪಾಯಿ ವೆಚ್ಚದಲ್ಲಿ ಐದು ಡಬಲ್ ಡೆಕ್ಕರ್ ಎಸಿ ಇ-ಬಸ್‌ಗಳನ್ನು ಒದಗಿಸಲಿದೆ.
ಬೆಂಗಳೂರು, ಫೆಬ್ರವರಿ. 19: ಸಿಲಿಕಾನ್ ಸಿಟಿಯಲ್ಲಿ ಡಬಲ್ ಡೆಕ್ಕರ್ ಬಸ್‌ನಲ್ಲಿ ಪ್ರಯಾಣಿಸದ ಯುವ ಜನತೆಗೆ ಇಲ್ಲಿದೆ ಸಿಹಿ ಸುದ್ದಿ. ಬೆಂಗಳೂರಿನ ಮೊದಲ ಎಸಿ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್ ಮುಂದಿನ ತಿಂಗಳಿನಿಂದ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮೂಲಗಳ ಪ್ರಕಾರ, ಅಶೋಕ್ ಲೇಲ್ಯಾಂಡ್‌ನ ಅಂಗಸಂಸ್ಥೆಯಾದ ಸ್ವಿಚ್ ಮೊಬಿಲಿಟಿ, 10 ಕೋಟಿ ರೂಪಾಯಿ ವೆಚ್ಚದಲ್ಲಿ ಐದು ಡಬಲ್ ಡೆಕ್ಕರ್ ಎಸಿ ಇ-ಬಸ್‌ಗಳನ್ನು ಒದಗಿಸಲಿದೆ.
'ನಗರ ಭೂ ಸಾರಿಗೆ ಇಲಾಖೆ (DULT) ನಿಧಿಯ ಅಡಿಯಲ್ಲಿ ಐದು ಡಬಲ್ ಡೆಕ್ಕರ್ ಎಸಿ ಎಲೆಕ್ಟ್ರಿಕ್ ಬಸ್‌ಗಳಿಗೆ ಟೆಂಡರ್ ಅನ್ನು ಆಹ್ವಾನಿಸಿದ್ದೇವೆ. ನಾವು ರಾಷ್ಟ್ರೀಯ ಕ್ಲೀನ್ ಏರ್ ಪ್ರೋಗ್ರಾಂ (NCAP) ಅಡಿಯಲ್ಲಿ ಅಂತಹ ಇನ್ನೊಂದು ಐದು ಬಸ್‌ಗಳನ್ನು ಖರೀದಿಸುತ್ತಿದ್ದೇವೆ' ಎಂದು ಬಿಎಂಟಿಸಿ ನಿರ್ದೇಶಕ (ಮಾಹಿತಿ ತಂತ್ರಜ್ಞಾನ) ಎ.ಸೂರ್ಯಸೇನ್ ಈ ಹಿಂದೆ ತಿಳಿಸಿದ್ದರು. ಅದರಂತೆ ಟೆಂಡರ್ ಕರೆದಿದ್ದು, ಅಶೋಕ್ ಲೇಲ್ಯಾಂಡ್‌ನ ಅಂಗಸಂಸ್ಥೆಯಾದ ಸ್ವಿಚ್ ಮೊಬಿಲಿಟಿ ಬಿಡ್ ಮಾಡಿದೆ.

ಸ್ವಿಚ್ EiV 22, ಭಾರತದ ಮೊದಲ ಎಲೆಕ್ಟ್ರಿಕ್ ಎಸಿ ಡಬಲ್ ಡೆಕ್ಕರ್ ಬಸ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಮುಂಬೈ ಈಗಾಗಲೇ 200 ಎಲೆಕ್ಟ್ರಿಕ್ ಡಬಲ್ ಡೆಕ್ಕರ್‌ಗಳಿಗೆ ಆರ್ಡರ್ ಮಾಡಿದೆ. ಮುಂಬೈನಲ್ಲಿ ಅಂತಹ 22 ಬಸ್‌ಗಳ ಮೊದಲ ಸೆಟ್ ಈಗ ಅಲ್ಲಿ ಕಾರ್ಯನಿರ್ವಹಿಸುತ್ತಿದೆ.
ಎಸಿ ಡಬಲ್ ಡೆಕ್ಕರ್ ಇ-ಬಸ್ ವಿಭಾಗದಲ್ಲಿ ಇದುವರೆಗೆ ಯಾವುದೇ ಅರ್ಹ ತಯಾರಕರು ಇಲ್ಲ. ಚುನಾವಣಾ ಮಾದರಿ ನೀತಿ ಸಂಹಿತೆ ಪ್ರಾರಂಭವಾಗುವ ಮೊದಲು ಎಸಿ ಡಬಲ್ ಡೆಕ್ಕರ್ ಇ-ಬಸ್ ಅನ್ನು ಹೊರತರುವುದು ನಮ್ಮ ಯೋಜನೆಯಾಗಿದೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.
"ನಾವು ಮಾರ್ಚ್‌ನೊಳಗೆ ಮೊದಲ ಎಸಿ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್ ಮತ್ತು ಏಪ್ರಿಲ್ - ಮೇ ವೇಳೆಗೆ ಇನ್ನೊಂದು ನಾಲ್ಕು ಬಸ್‌ಗಳು ಬರಬಹುದು. ನಾವು ಹೆಬ್ಬಾಳ - ಸಿಲ್ಕ್ ಬೋರ್ಡ್‌ನಲ್ಲಿ ಮೊದಲು ಕಾರ್ಯನಿರ್ವಹಿಸಲು ಯೋಚಿಸುತ್ತಿದ್ದೇವೆ. ನಿಯಮಿತ ಪ್ರಯಾಣಿಕರ ಸೇವೆ ಮತ್ತು ದರವು ವಜ್ರ (ವೋಲ್ವೋ ಎಸಿ) ದರದಂತೆಯೇ ಇರುತ್ತದೆ" ಎಂದು ಬಿಎಂಟಿಸಿ ನಿರ್ದೇಶಕ (ಮಾಹಿತಿ ತಂತ್ರಜ್ಞಾನ) ಎ.ಸೂರ್ಯಸೇನ್ ಮಾಹಿತಿ ನೀಡಿದ್ದಾರೆ.

ನಗರ ಭೂ ಸಾರಿಗೆ ನಿರ್ದೇಶನಾಲಯ (DULT) ನಿಧಿಯ ಅಡಿಯಲ್ಲಿ ಐದು ಡಬಲ್ ಡೆಕ್ಕರ್ ಎಸಿ ಇ-ಬಸ್‌ಗಳನ್ನು ಖರೀದಿಸಲು ಬಿಎಂಟಿಸಿ ಇತ್ತೀಚೆಗೆ ಈ ಟೆಂಡರ್ ಅನ್ನು ಆಹ್ವಾನಿಸಿತ್ತು.
ಭಾರತದಲ್ಲಿ ತಯಾರಾದ ಸ್ವಿಚ್‌ನ ಎಲೆಕ್ಟ್ರಿಕ್ ಎಸಿ ಡಬಲ್ ಡೆಕ್ಕರ್ ಬಸ್‌ಗಳು 250 ಕಿಮೀ ವರೆಗಿನ ಬ್ಯಾಟರಿ ವ್ಯಾಪ್ತಿಯನ್ನು ಹೊಂದಿವೆ ಎಂದು ಹೇಳಿಕೊಂಡಿವೆ. EiV 22 ಇ-ಬಸ್‌ಗಳು ವಿಶಾಲವಾದ ಮುಂಭಾಗ ಮತ್ತು ಹಿಂಭಾಗದ ಬಾಗಿಲುಗಳು, ಎರಡು ಮೆಟ್ಟಿಲುಗಳು ಮತ್ತು ತುರ್ತು ಬಾಗಿಲುಗಳನ್ನು ಒಳಗೊಂಡಿದೆ. ಇದು 65 ಪ್ರಯಾಣಿಕರಿಗೆ ಅವಕಾಶ ಕಲ್ಪಿಸುತ್ತದೆ.
ಡಬ್ಬಲ್ ಡೆಕ್ಕರ್ ಡೀಸೆಲ್ ಬಸ್‌ಗಳು 1970 - 80ರ ದಶಕದಲ್ಲಿ ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದವು. 1997ರ ವೇಳೆಗೆ ಅವುಗಳನ್ನು ಹಂತಹಂತವಾಗಿ ಸ್ಥಗಿತಗೊಳಿಸಲಾಯಿತು.












Click it and Unblock the Notifications