Bengaluru Rent: ₹30,000 ಕ್ಕಿಂತ ಕಡಿಮೆ ಬಾಡಿಗೆ ಅಪಾರ್ಟ್‌ಮೆಂಟ್ ಸಿಗುವ ಬೆಂಗಳೂರಿನ ಏರಿಯಾಗಳು
ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವುದು ದುಸ್ಸಾಹಸವೇ ಸರಿ. ಅದರಲ್ಲೂ ಪ್ರಮುಖ ಏರಿಯಾಗಳಲ್ಲಿ, ಎಲ್ಲಾ ಅನುಕೂಲವಿರುವ ಬಾಡಿಗೆ ಮನೆಗಳು ಸಿಗುವುದು ಕಷ್ಟ, ಸಿಕ್ಕರೂ ಬಾಡಿಗೆ ಕೇಳಿದರೆ ತಲೆ ತಿರುಗುತ್ತದೆ. ಇನ್ನು ಅಪಾರ್ಟ್‌ಮೆಂಟ್‌ಗಳು ಕೂಡ ಇದೇ ಕತೆ, ಆದರೂ ಕೆಲವು ಏರಿಯಾಗಳಲ್ಲಿ ಪ್ರಮುಖ ಏರಿಯಾಗಳಿಗೆ ಹೋಲಿಕೆ ಮಾಡಿದರೆ ಬಾಡಿಗೆ ಸ್ವಲ್ಪ ಮಟ್ಟಿಗೆ ಕಡಿಮೆ ಇರುತ್ತದೆ. ಅಂತಹ ಕೆಲವು ಏರಿಯಾಗಳ ಮಾಹಿತಿ ಇಲ್ಲಿದೆ.
ಬಿಟಿಎಂ ಲೇಔಟ್, ಜೆಪಿ ನಗರ ಮತ್ತು ಉತ್ತರ ಬೆಂಗಳೂರಿನ ಹೊರವಲದ ಕೆಲವು ಪ್ರದೇಶಗಳನ್ನು ಸೇರಿಸಿ ಕೆಲವು ಪ್ರಮುಖ ಏರಿಯಾಗಳಲ್ಲಿ 30,000 ರೂಪಾಯಿಗಿಂತ ಕಡಿಮೆ ಬಾಡಿಗೆ ಇರುವ ಅಪಾರ್ಟ್‌ಮೆಂಟ್‌ಗಳು ಸಿಗುತ್ತವೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಕಾಡುಗೋಡಿ, ಹೂಡಿ, ಚನ್ನಸಂದ್ರದಂತಹ ಪ್ರದೇಶಗಳಲ್ಲಿ 2 ಬಿಎಚ್‌ಕೆ ಅಪಾರ್ಟ್‌ಮೆಂಟ್ ಬಾಡಿಗೆ 35,000-40,000 ದಿಂದ 30,000 ರೂಪಾಯಿಗೆ ಕಡಿಮೆಯಾಗಿದೆ ಎಂದು ಹಲವು ಮಧ್ಯವರ್ತಿಗಳು ತಿಳಿಸಿರುವುದಾಗಿ ಎಚ್‌ಟಿ ವರದಿ ಮಾಡಿದೆ.

ನಮ್ಮ ಮೆಟ್ರೋ ಜಾಲ ವಿಸ್ತಾರವಾದಂತೆ ಉದ್ಯೋಗಿಗಳು ತಮ್ಮ ಸ್ಥಳದಿಂದ ಕಡಿಮೆ ಬಾಡಿಗೆ ಇರುವ ಮನೆ, ಅಪಾರ್ಟ್‌ಮೆಂಟ್‌ಗಳನ್ನು ನೋಡುತ್ತಿದ್ದಾರೆ. ಕೆಆರ್ ಪುರ, ಹಳೆ ಮದ್ರಾಸ್ ರಸ್ತೆ ಇದರಲ್ಲಿ ಪ್ರಮುಖವಾಗಿವೆ. ಬೆಂಗಳೂರಿನಲ್ಲಿ ಮನೆ ಬಾಡಿಗೆ ಒಂದು ಕಡೆಯಾದರೆ ಬಾಡಿಗೆಯ 10 ತಿಂಗಳ ಮೊತ್ತವನ್ನು ಅಡ್ವಾನ್ಸ್ ಕೊಡಬೇಕು ಎನ್ನುವುದು ಬಾಡಿಗೆದಾರರಿಗೆ ಹೊರೆಯಾಗಿದೆ. 30,000 ರೂಪಾಯಿಗಿಂತ ಕಡಿಮೆ ಬಾಡಿಗೆಗೆ ಅಪಾರ್ಟ್‌ಮೆಂಟ್ ಸಿಗುವ ಪ್ರದೇಶಗಳು.
ಕೆ.ಆರ್ ಪುರ
ಕೃಷ್ಣರಾಜಪುರ (ಕೆಆರ್ ಪುರ) - ವೈಟ್ ಫೀಲ್ಡ್ ಮೆಟ್ರೋ ಆರಂಭವಾದ ಬಳಿಕ ಬೆಂಗಳೂರು ನಗರ ಪೂರ್ವ ಭಾಗದಲ್ಲಿ ಐಟಿ ಉದ್ಯೋಗಿಗಳಿಗೆ ವರದಾನವಾಗಿದೆ. ವೈಟ್‌ಫೀಲ್ಡ್‌ನಲ್ಲಿ ಕೆಲಸ ಮಾಡುವ ಟೆಕ್ಕಿಗಳು ಕೆಆರ್ ಪುರದಲ್ಲಿ ಅಪಾರ್ಟ್‌ಮೆಂಟ್, ಬಾಡಿಗೆ ಮನೆಗಳನ್ನು ಹುಡುಕಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಇಲ್ಲಿ ಕೆಲವು ಅಪಾರ್ಟ್‌ಮೆಂಟ್‌ಗಳು 30,000 ರೂಪಾಯಿಗಿಂತ ಕಡಿಮೆ ಬಾಡಿಗೆ ಹೊಂದಿದ್ದು, ಐಟಿ ಉದ್ಯೋಗಿಗಳನ್ನು ಆಕರ್ಷಿಸುತ್ತಿದೆ.
ಜೆಪಿ ನಗರ ಹೊರವಲಯ
ಜಯಪ್ರಕಾಶ ನಗರ ಅಥವಾ ಜೆಪಿ ನಗರ 6ನೇ ಹಂತ ಅಥವಾ ಪುಟ್ಟೇನಹಳ್ಳಿಯಲ್ಲಿ ಹಲವು ಅಪಾರ್ಟ್‌ಮೆಂಟ್‌ಗಳು 30,000 ರೂಪಾಯಿಗಿಂತ ಕಡಿಮೆ ಬಾಡಿಗೆ ಹೊಂದಿದ್ದು ಬಾಡಿಗೆದಾರರನ್ನು ಆಕರ್ಷಿಸುತ್ತಿವೆ. ಜೆಪಿ ನಗರದಿಂದ ಕೆಂಪಾಪುರದವರೆಗೆ ಮೆಟ್ರೋ ಕಾರಿಡಾರ್ ಬರಲಿದ್ದು, ಬಳಿಕ ಈ ಪ್ರದೇಶದಲ್ಲಿ ಬಾಡಿಗೆ ಹೆಚ್ಚಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
ಉತ್ತರ ಬೆಂಗಳೂರು
ಉತ್ತರ ಬೆಂಗಳೂರಿನ ಪ್ರಮುಖ ಪ್ರದೇಶಗಳಾದ ಹೆಣ್ಣೂರು, ಯಶವಂತಪುರ ಪ್ರದೇಶಗಳಲ್ಲೂ ಕೆಲವು ಅಪಾರ್ಟ್‌ಮೆಂಟ್‌ಗಳು 25,000 - 30,000 ರೂಪಾಯಿ ಬಾಡಿಗೆ ಹೊಂದಿವೆ. ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಹತ್ತಿರದಲ್ಲಿದ್ದು, ಬಾಡಿಗೆದಾರರನ್ನು ಆಕರ್ಷಿಸುತ್ತಿದೆ.
ಕನಕಪುರ ರಸ್ತೆ
ಉತ್ತರ ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಹೆಚ್ಚಿನ ಅಪಾರ್ಟ್‌ಮೆಂಟ್‌ಗಳು ತಲೆ ಎತ್ತಿತ್ತಿದ್ದು ಪ್ರಮುಖ ರಿಯಲ್ ಎಸ್ಟೇಟ್ ಮಾರುಕಟ್ಟೆಯಾಗಿ ಅಭಿವೃದ್ದಿಯಾಗುತ್ತಿದೆ. ಬೆಂಗಳೂರಿನ ಪ್ರಮುಖ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ ಬಾಡಿಗೆ ಕಡಿಮೆ ಇರುವ ಕಾರಣ ಬಾಡಿಗೆದಾರರು ಈ ಪ್ರದೇಶಗಳತ್ತ ಆಕರ್ಷಿತರಾಗಿದ್ದಾರೆ.












Click it and Unblock the Notifications