Bengaluru Rain: ನೆನ್ನೆ ಈ ವರ್ಷದಲ್ಲೇ ಗರಿಷ್ಠ 111 ಮಿಮೀ ಮಳೆ ದಾಖಲು, ಸೋಮವಾರ ಸಂಜೆ ಬಿದ್ದ ಮಳೆ ಮಾಹಿತಿ
ಬೆಂಗಳೂರು, ಮೇ 01: ಬೆಂಗಳೂರಿನಲ್ಲಿ ಒಂದು ವಾರದಿಂದ ಮಳೆ ಆರ್ಭಟ ಹೆಚ್ಚಾಗಿದೆ. ಈ ವರ್ಷದಲ್ಲೇ ಇದುವರೆಗೆ ಅತ್ಯಧಿಕ ಗರಿಷ್ಠ ಮಳೆ 111.5ಮಿ.ಮೀ. ಭಾನುವಾರ ತಡರಾತ್ರಿ ದಾಖಲಾಗಿದೆ. ಇನ್ನೂ ಸೋಮವಾರ ಮಧ್ಯಾಹ್ನದಿಂದ ಸಂಜೆವರೆಗೆ 31.5ಮಿ.ಮಿ. ಮಳೆ ದಾಖಲಾಗಿದ್ದು, ಜಿಟಿ ಜಿಟಿ ಮಳೆ ಮುಂದುವರಿದಿದೆ.
ಸೋಮವಾರ ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಒಂದೇ ಸಮನೇ ಮಳೆ ಆರಂಭವಾಯಿತು. ನಗರದ ಅನೇಕ ಬಡಾವಣೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಆಯಿತು. ಇದರಿಂದ ನಗರದ ಕೆ.ಆರ್.ಪುರಂ, ಕೆ.ಆರ್. ಮಾರುಕಟ್ಟೆ ರಸ್ತೆ, ಟೌನ್ ಹಾಲ್ ಮುಂಭಾಗ್, ಕೆ.ಆರ್ ವೃತ್ತ, ಮಲ್ಲೇಶ್ವರಂ, ಮೇಜೆಸ್ಟಿಕ್ ಅಂಡರ್ ಬ್ರಿಡ್ಜ್, ಶಿವಾನಂದ ವೃತ್ತ, ಹೆಬ್ಬಾಳ, ಜಯನಗರ, ಕೋರಮಂಗಲ, ಯಲಹಂಕ ಮತ್ತು ಮಡಿವಾಳದಲ್ಲಿ ಮಳೆ ಶುರುವಾಗಿದೆ. ಇದು ತಡರಾತ್ರಿವರೆಗೂ ಮುಂದುವರಿಯಲಿದೆ.

ಇಂದು ರಾಜರಾಜೇಶ್ವರಿ ನಗರದಲ್ಲಿ ಅಧಿಕ 35 ಮಿ.ಮೀ., ಅರಕೇರಿ 32 ಮಿ.ಮೀ., ಕೆಂಗೇರಿ 22 ಮಿ.ಮೀ, ಬೊಮ್ಮನಹಳ್ಳಿ 19 ಮಿ.ಮೀ, ಹಂಪಿನಗರ 18.5 ಮಿ.ಮೀ, ಬಿಳೆಕಳಿ 17 ಮಿ.ಮೀ, ಸಿಂಗಸಂದ್ರ 15.50 ಮಿ.ಮೀ, ಎಚ್.ಗೊಲ್ಲಹಳ್ಳಿ 11.5 ಮಿ.ಮೀ ಮಳೆ ಸುರಿದಿದೆ. ಉಳಿದೆಡೆ ತುಂತುರು ಮಳೆ ಆಗಿದೆ. ಸೋಮವಾರ ಬೆಂಗಳೂರಿನಾದ್ಯಂತ ಜೋರು ಮಳೆ ಬಂದಿದೆ.
ಬೆಂಗಳೂರಿಗೆ ನಾಳೆ 'ಯೆಲ್ಲೋ ಅಲರ್ಟ್'
ಮಳೆಯಿಂದಾಗಿ ವಾಹನ ಸವಾರರು, ರಸ್ತೆ ಬದಿ ವ್ಯಾಪಾರಿಗಳಿಗೆ ತೊಂದರೆ ಉಂಟಾಗಿದೆ. ರಸ್ತೆ ಮೇಲೆ ಎಲ್ಲೆಂದರಲ್ಲಿ ನೀರು ನಿಂತದ್ದು ಸಾಮಾನ್ಯವಾಗಿತ್ತು. ಮುಂದಿನ ನಾಲ್ಕದಿಂದ ಐದು ದಿನಗಳ ಕಾಲ ಬೆಂಗಳೂರಿನಲ್ಲಿ ಮಳೆ ಹೀಗೆ ಮುಂದುವರಿಯಲಿದೆ. ಮೇ 2ರಂದು ಬೆಂಗಳೂರಿನಲ್ಲಿ ಇನ್ನೂ ವ್ಯಾಪಕ ಮಳೆ ಬರುವ ನಿರೀಕ್ಷೆ ಇದೆ. ಹೀಗಾಗಿ ಭಾರತೀಯ ಹವಾಮಾನ ಇಲಾಖೆ ಬೆಂಗಳೂರಿಗೆ ಅಂದು 'ಯೆಲ್ಲೋ ಅಲರ್ಟ್' ಘೋಷಣೆ ಮಾಡಿದೆ.

ಈ ವರ್ಷದಲ್ಲೇ ಗರಿಷ್ಠ ಮಳೆ ಭಾನುವಾರ ದಾಖಲು
ಹೌದು, ಬೇಸಿಗೆ ಅಂತ್ಯವಾಗುವ ಮೊದಲೇ ಪೂರ್ವ ಮುಂಗಾರು ಮಳೆ ಬೆಂಗಳೂರಿನಲ್ಲಿ ಧಾರಾಕಾರವಾಗಿ ಸುರಿದಿದೆ. ಭಾನುವಾರ ಸಂಜೆ ನಂತರ ಸುರಿದ ಮಳೆ 2023ನೇ ವರ್ಷದಲ್ಲಿ ಪೂರ್ವ ಮುಂಗಾರಿನಲ್ಲಿ ಬಂದ ಅತ್ಯಧಿಕ ಮಳೆ ಎಂದು ಹವಾಮಾನ ಇಲಾಖೆ ವರದಿಗಳು ಹೇಳುತ್ತಿವೆ.
ಈ ಹಿಂದಿನ 24ಗಂಟೆಯಲ್ಲಿ ಹೊರಮಾವಿನಲ್ಲಿ ವರ್ಷದ ಗರಿಷ್ಠ ಮಳೆ 111.5ಮಿ.ಮಿ (10ಸೆಂ.ಮಿಗೂ ಅಧಿಕ) ಮಳೆ ದಾಖಲಾಗಿದೆ. ಈ ಮೂಲಕ ಬಿಸಿಲ ಧಗೆಗೆ ಕಾದಿದ್ದ ಧರೆಗೆ ಮಳೆಯ ಸಿಂಚನ ತಂಪು ತಂದಿದೆ. ಇದರ ಹೊರತಾಗಿ ಜಕ್ಕೂರು ಮತ್ತು ಯಲಹಂಕದಲ್ಲಿ ತಲಾ 64.5 ಮಿ.ಮೀ., ವಿಶ್ವನಾಥ್ ನಾಗೇನಹಳ್ಳಿ 57ಮಿ.ಮೀ., ಕೊಡುಗೇಹಳ್ಳಿ 43ಮಿ.ಮೀ., ಹಮ್ಮಿಗೆಪುರ 23ಮಿ.ಮೀಟರ್ ಮಳೆ ಬಿದ್ದಿದೆ.












Click it and Unblock the Notifications