Bengaluru Rain: ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆ: ಇಂದು ವೀಕೆಂಡ್ ಮೋಜು-ಮಸ್ತಿಗೆ ಬ್ರೇಕ್
ಬೆಂಗಳೂರು, ಮೇ 18: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದು ಕಡೆ ಐಪಿಎಲ್ ಮತ್ತೊಂದು ಕಡೆ ಮಳೆ ಅಬ್ಬರ ಕಂಡು ಬಂದಿದೆ. ಆದರೆ ಮಳೆಯಿಂದ ಪಂದ್ಯಾವಳಿಗೆ ಯಾವುದೇ ಸಮಸ್ಯೆ ಆಗಿಲ್ಲ. ನಗರದ ಹಲವು ಕಡೆಗಳಲ್ಲಿ ರಾತ್ರಿ ಜೋರು ಮಳೆ ದಾಖಲಾಗಿದೆ. ನಂದಿನಿ ಬಡಾವಣೆ, ವಿದ್ಯಾರಣ್ಯಪುರದಲ್ಲಿ ಭರ್ಜರಿ ಮಳೆ ಆಗಿದೆ. ರಸ್ತೆಗಳು ಜಲಾವೃತಗೊಂಡಿವೆ.
ಬೆಂಗಳೂರಿನಲ್ಲಿ ಶನಿವಾರ ಎಂದಿನಂತಹ ವಾತಾವರಣ ಇರಲಿಲ್ಲ. ಬೆಳಗ್ಗೆಯಿಂದಲೇ ಮೋಡ ಕವಿದ ಮಬ್ಬು ವಾತಾವರಣ ಕಂಡು ಬಂತು. ನಿರೀಕ್ಷೆಯ ಪ್ರಕಾರ ನಗರಾದ್ಯಂತೆ ಮಧ್ಯಾಹ್ನ ಹೊತ್ತಿಗೆ ಜೋರು ಮಳೆ ಆಗಬೇಕಿತ್ತು. ಆದರೆ ಆಗಲಿಲ್ಲ. ಸಂಜೆ ಒಂದರೆ ಕಡೆಗಳಲ್ಲಿ ಸಾಧಾರಣ ಮಳೆ, ಹಲವೆಡೆ ಭಾರೀ ಮಳೆ ಸುರಿದಿದೆ.

ಗುಡುಗು, ಮಿಂಚು ಸಹಿತ ಜೋರು ಮಳೆ ಆಗಿದೆ. ರಾತ್ರಿ 11 ಗಂಟೆ ಹೊತ್ತಿಗೆ ಸರಿಯಾಗಿ ನಂದಿನಿ ಬಡಾವಣೆಯಲ್ಲಿ 49 ಮಿ.ಮೀ ಮಳಾಗಿದೆ. ಉಳಿದಂತೆ ಯಲಹಂಕದಲ್ಲಿ 44 ಮಿ.ಮೀ., ಬಾಗಲಗುಂಟೆ 39 ಮಿ.ಮೀ., ಶೆಟ್ಟಿಹಳ್ಳಿ 39 ಮಿ.ಮೀ, ಮಾರಪ್ಪನಪಾಳ್ಯ 39ಮಿ.ಮೀ, ವಿದ್ಯಾರಣ್ಯಪುರ 38ಮಿ.ಮೀ, ನಾಗಪುರ 32ಮಿ.ಮೀ, ಪೀಣ್ಯ ಕೈಗಾರಿಕಾ ಪ್ರದೇಶ 29 ಮಿ.ಮೀ, ಚೌಡೇಶ್ವರಿ ವಾರ್ಡ್ 23.50 ಮಿ.ಮೀ, ಕೊಟ್ಟಿಗೆಪಾಳ್ಯ 18 ಮಿ.ಮೀ, ರಾಜಾಜಿನಗರ, ಚೊಕ್ಕಸಂದ್ರದಲ್ಲಿ ತಲಾ 16.5 ಮಿಲಿ ಮೀಟರ್ ಮಳೆ ದಾಖಲಾಗಿದೆ.
ವೀಕೆಂಡ್ ಮೋಡ್ ಮೋಜು ಮಸ್ತಿಗೆ ಬ್ರೇಕ್
ಬೆಂಗಳೂರಿನಲ್ಲಿ ಸಂಜೆ ನಂತರ ಬಂದ ಜೋರು ಮಳೆಯಿಂದ ವೀಕೆಂಡ್ ಮೋಡ್ ನಲ್ಲಿದ್ದವರಿಗೆ ಬ್ರೇಕ್ ಬಿತ್ತು. ರಾತ್ರಿ ಪಾರ್ಟಿ ಇನ್ನಿತರ ಮೋಜಿಗೆ ಪ್ಲಾನ್ ಮಾಡಿಕೊಂಡವರಿಗೆ ಮಳೆರಾಯ ಶಾಕ್ ನೀಡಿದ್ದಾರೆ. ಮಳೆಗೆ ರಸ್ತೆಗಳು ಜಲಾವೃತಗೊಂಡವು. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಆವಾಂತರ ಸೃಷ್ಟಿಸಿತು. ಗಾಳಿಯ ರಭಸಕ್ಕೆ ಕೆಲವೆಡೆ ಮರದ ಕೊಂಬೆಗಳು ಧರೆಗುರುಳಿದವು.

ಮಳೆ ನಡುವೆ ಆರ್‌ಸಿಬಿಗೆ ಬೆಂಬಲ
ಇನ್ನೂ ಕೆಲವರು ಶನಿವಾರ ಆರ್‌ಸಿಬಿ-ಸಿಎಸ್‌ಕೆ ಕ್ರಿಕೆಟ್ ಮ್ಯಾಚ್ ನೋಡುವಲ್ಲಿ ನಿರತರಾಗಿದ್ದರು. ಮಳೆ ಬರದಂತೆ ಪ್ರಾರ್ಥಿಸುತ್ತಿದ್ದರು. ಇವರಲ್ಲಿ ಹಲವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಕಣ್ತುಂಬಿಕೊಂಡರೆ, ಉಳಿದವರು ಮನೆಯಲ್ಲಿ ಪಂದ್ಯ ವೀಕ್ಷಿಸಿದರು. ಮಳೆಗೆ ಹಿಡಿಶಾಪ ಹಾಕುತ್ತದೆ, ಆರ್‌ಸಿಬಿ ಬೆಂಬಲಿಸಿದರು.
ಮೇ 21ರವರೆಗೆ ಭರ್ಜರಿ ಮಳೆ ಎಚ್ಚರಿಕೆ
ಹವಾಮಾನ ಇಲಾಖೆ ಪ್ರಕಾರ, ಬೆಂಗಳೂರಿಗೆ ಇಂದು ಶನಿವಾರದಿಂದ ಮೇ 21ರವರೆಗೆ ಭಾರೀ ಮಳೆ ಬರುವ ಮುನ್ಸೂಚನೆ ನೀಡಿದೆ. ನಿತ್ಯ ಮೋಡ ಕವಿದ ಮಳೆಗಾಲದ ವಾತಾವರಣ ನಗರದಲ್ಲಿ ನಿರ್ಮಾಣವಾಗಲಿದೆ. ಭಾನುವಾರದಿಂದ ಮೂರು ದಿನ ಬೆಂಗಳೂರು ಅಕ್ಷರಶಃ ಪೂರ್ವ ಮುಂಗಾರಿನ ರುದ್ರನರ್ತನಕ್ಕೆ ನಲುಗಲಿದೆ. ಈ ವೇಳೆ ಕನಿಷ್ಠ ತಾಪಮಾನ 22-23 ಡಿಗ್ರಿ ಸೆಲ್ಸಿಯಸ್ ಹಾಗೂ 29-31 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬರಲಿದೆ.
ಈ ಮಳೆ ಮುನ್ಸೂಚನೆಯಿಂದಾಗಿ ಭಾನುವಾರ ಹೊರ ಹೋಗಲು ಪ್ಲಾನ್ ಮಾಡಿದವರಿಗೆ ಕಿರಿ ಕಿರಿ ಉಂಟಾಗಿದೆ. ರಜಾದಿನಗಳಲ್ಲಿ ಮೋಜು ಮಸ್ತಿಗೆ ಯೋಜಿಸಿದವರನ್ನು ಮನೆಯಲ್ಲಿ ಕೂರಿಸುವ ಸಾಧ್ಯತೆ ಇದೆ.
ಇಂದು ಭಾನುವಾರ ಬೆಳಗ್ಗೆಯಿಂದಲೇ ಮಬ್ಬು ವಾತಾವರಣ ಕಂಡು ಬಂದಿದೆ. ಮಧ್ಯಾಹ್ನ ಬಳಿಕ ಜೋರು ಮಳೆ ನಿರೀಕ್ಷಿಸಬಹುದಾಗಿದೆ. ಹೀಗಾಗಿ ಇಂದಿನ ವೀಕೆಂಡ್ ಮಸ್ತಿಗೆ ಬ್ರೇಕ್ ಬೀಳಲಿದೆ.












Click it and Unblock the Notifications