Bengaluru Rain: ಭಾನುವಾರ ಬೆಂಗಳೂರಿನ ಹಲವೆಡೆ ಭಾರಿ ಮಳೆ: ಇಂದು ಕೂಡ ಗುಡುಗು- ಮಿಂಚು ಸಹಿತ ಮಳೆ ಸಾಧ್ಯತೆ
ಭಾನುವಾರ ರಾತ್ರಿ ಬೆಂಗಳೂರಿನ ಹಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಹಲವು ಕಡೆಗಳಲ್ಲಿ ರಸ್ತೆಗಳು ಜಲಾವೃತವಾಗಿದ್ದು ವಾಹನ ಸವಾರರು ಪರದಾಡುವಂತಾಗಿತ್ತು. ಹಲವು ತಿಂಗಳ ಬಳಿಕ ಬೆಂಗಳೂರಿನಲ್ಲಿ ಇಷ್ಟು ಪ್ರಮಾಣದಲ್ಲಿ ಮಳೆಯಾಗಿದ್ದು ನಗರವನ್ನು ತಂಪಾಗಿಸಿದೆ.
ನಗರದ ಮಾನ್ಯತಾ ಟೆಕ್ ಪಾರ್ಕ್ ಬಳಿ ರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತ ಪರಿಣಮಾ ವಾಹನ ಸವಾರರು ಪರದಾಡುವಂತಾಯಿತು. ವಾರಾಂತ್ಯದ ಮೂಡ್‌ನಲ್ಲಿದ್ದ ಬೆಂಗಳೂರು ಜನತೆಗೆ ಮಳೆ ಅಡ್ಡಿಪಡಿಸಿತು. ಹೆಬ್ಬಾಳ, ಕೆಆರ್ ಪುರ ಭಾಗದಲ್ಲಿ ಹಲವು ರಸ್ತೆಗಳಲ್ಲಿ ನೀರು ನಿಂತ ಬಗ್ಗೆ ಸಾರ್ವಜನಿಕರು ದೂರಿದ್ದಾರೆ.

ನಗರದ ಪದ್ಮನಾಭನಗರ, ಅಂಜನಾಪುರ, ಕೆಆರ್ ಪುರ, ಬೊಮ್ಮನಹಳ್ಳಿ, ಜೆಪಿ ನಗರ, ಅರೆಕೆರೆ, ಬೇಗೂರು, ಗೊಟ್ಟಿಗೆರೆ, ಹುಳಿಮಾವು, ಕೊತ್ತನೂರು, ಬಸವೇಶ್ವರ ನಗರ, ಕಾಮಾಕ್ಷಿ ಪಾಳ್ಯ, ಜಾಲಹಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗಿದೆ.
ರಸ್ತೆಗಳು ಜಲಾವೃತ, ಟ್ರಾಫಿಕ್ ಸಮಸ್ಯೆ
ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸೂರು ಮುಖ್ಯರಸ್ತೆ ರೂಪೇನ ಅಗ್ರಹಾರದ ಬಳಿ ರಸ್ತೆಯ ಮೇಲೆ ನೀರು ನಿಂತು ತೊಂದರೆಯಾಗಿತ್ತು, ಬೆಂಗಳೂರು ಸಂಚಾರ ಪೊಲೀಸರು, AFCONS ರವರ ಸಹಾಯದಿಂದ ಪಂಪ್ ಗಳನ್ನು ಅಳವಡಿಸಿ ನೀರನ್ನು ಹೊರಹಾಕಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಭಾರಿ ಮಳೆಯಿಂದ ಕೆಇಬಿ ಜಂಕ್ಷನ್ ಟೆಲಿಕಾಂ ಲೇಔಟ್ ಕಡೆ ಹೋಗುವ ರಸ್ತೆಯಲ್ಲಿ ಮರ ಬಿದ್ದ ಕಾರಣ ಸಂಚಾರಕ್ಕೆ ತೊಂದರೆಯಾಗಿತ್ತು, ನಂತರ ಮರವನ್ನು ತೆರವು ಮಾಡಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.
ಬಾಣಸವಾಡಿ ರಸ್ತೆ, ವೀರಣ್ಣನ ಪಾಳ್ಯ, ಧಣಿಸಂದ್ರ ಮುಖ್ತ ರಸ್ತೆಯ ಪೂರ್ವಾಂಕರ ಅಪಾರ್ಟಮೆಂಟ್ ಬಳಿ ಮತ್ತು ಬನ್ನೇರುಘಟ್ಟ ರಸ್ತೆಯ ನಾಗಾರ್ಜುನ ಬಳಿ ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ತೊಂದರೆ ಅನುಭವಿಸಿದರು.
ಪೂರ್ವ ವಲಯದಲ್ಲಿ ವ್ಯಾಪಕ ಮಳೆ
ಬೆಂಗಳೂರು ಪೂರ್ವ ವಲಯದ ಹೊರಮಾವು ಪ್ರದೇಶದಲ್ಲಿ 95 ಮಿಮೀ ಮಳೆಯಾಗಿದೆ. ಮಂಡೂರು 75 ಮಿಮೀ, ಬಸವನಗುಡಿ 65.5 ಮಿಮೀ, ಕಣ್ಣೂರು 57.5 ಮಿಮೀ, ದೊಡ್ಡಗುಬ್ಬಿ 44.5 ಮಿಮೀ ಮಳೆಯಾಗಿದೆ.
ಬೆಂಗಳೂರು ಉತ್ತರ ಭಾಗದ ಯಲಹಂಕ 55 ಮಿಮೀ, ಅತ್ತೂರು 48.5 ಮಿಮೀ, ಸಂಪಂಗಿರಾಮನಗರ 31.5 ಮಿಮೀ ಮಳೆಯಾಗಿದೆ. ಆನೇಕಲ್ ತಾಲೂಕಿನ ಕಳ್ಳುಬಾಳು 92 ಮಿಮೀ, ಮಂಟಪ 91 ಮಿಮೀ, ಬನ್ನೇರುಘಟ್ಟದಲ್ಲಿ 43 ಮಿಮೀ ಮಳೆಯಾಗಿದೆ. ಬೆಂಗಳೂರು ದಕ್ಷಿಣ ಭಾಗದಲ್ಲಿ ಬಿಟಿಎಂ ಲೇಔಟ್ 32.5 ಮಿಮೀ, ಗೊಟ್ಟಿಗೆರೆ 30 ಮಿಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ.
ಸೋಮವಾರ ಕೂಡ ವ್ಯಾಪಕ ಮಳೆ
ಬೆಂಗಳೂರು ನಗರದ ಹಲವು ಭಾಗಗಳಲ್ಲಿ ಸೋಮವಾರ ಕೂಡ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.












Click it and Unblock the Notifications