Bengaluru rain: ನಗರದ ಇಂದಿನ ಹವಾಮಾನ ವರದಿ
ಬೆಂಗಳೂರು, ಮೇ 11: ರಾಜ್ಯ ರಾಜಧಾನಿಯಲ್ಲಿ ಕೆಲವು ದಿನಗಳಿಂದ ಇಳಿಕೆ ಕಂಡಿರುವ ಮಳೆ ಇಂದು ಸಂಜೆ ಇಲ್ಲವೇ ರಾತ್ರಿ ಜೋರಾಗಿ ಸುರಿಯುವ ನಿರೀಕ್ಷೆ ಇದೆ. ಹವಾಮಾನ ಇಲಖೆ ಮುನ್ಸೂಚನೆ ಪ್ರಕಾರ ಇವತ್ತು ಒಂದು ದಿನ ಅಧಿಕ ಮಳೆ ನಿರೀಕ್ಷೆ ಇದ್ದು, ನಂತರ ಮೇ 15ರವರೆಗೆ ಸಾಮಾನ್ಯ ಮಳೆಯ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.
ನಗರದಲ್ಲಿ ಇಂದು ಗುರುವಾರ ಬೆಳಗ್ಗೆಯಿಂದಲೇ ಸೆಕೆಯ ವಾತಾವರಣ ಕಂಡು ಬಂದಿದೆ. ಆಗಾಗ ಮಬ್ಬು ವಾತಾವರಣ ನಿರ್ಮಾಣವಾಗಿದೆ. ಸಂಜೆ ಇಲ್ಲವೇ ರಾತ್ರಿ ಗುಡುಗು ಸಹಿತ ಸಾಧಾರಣದಿಂದ ಉತ್ತಮ ಮಳೆ ಆರಂಭವಾಗಲಿದೆ. ಬುಧವಾರದ ಚುನಾವಣಾ ಮತದಾನಕ್ಕೆ ತೊಂದರೆ ನೀಡಬಹುದೆಂದು ಅಂದಾಜಿಸಲಾಗಿತ್ತು. ಆದರೆ ನೆನ್ನೆ ತುಸು ಬಿಡುವು ನೀಡಿರುವ ವರುಣ ಇಂದು ಪ್ರತ್ಯಕ್ಷವಾಗುವ ಎಲ್ಲ ಸಾಧ್ಯತೆಗಳು ಇವೆ.

ನಾಳೆ ಶುಕ್ರವಾರದಿಂದ ಮೇ 15ರವರೆಗೆ ಮಳೆ ಕ್ರಮೇಣ ಕಡಿಮೆಯಾಗಲಿದೆ. ಕೇವಲ ಕೆಲವು ಪ್ರದೇಶಗಳಲ್ಲಿ ತುಂತುರು ರೂಪದಲ್ಲಿ ಬರಬಹುದು. ಮೇ 16ರಿಂದ ಮತ್ತೆ ನಗರದಲ್ಲಿ ಹೆಚ್ಚು ಬಿಸಿಲಿನ ವಾತಾವರಣ ಕಂಡು ಬರುವ ನಿರೀಕ್ಷೆ ಇದೆ. ಆಗ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಇಲಾಖೆ ತಿಳಿಸಿದೆ.
ಬಂಗಾಳಕೊಲ್ಲಿ ಸಮುದ್ರ ಭಾಗದಲ್ಲಿ ಒಂದು ವಾರದ ಹಿಂದೆ ನಿರ್ಮಾಣವಾಗಿರುವ ಚಂಡಮಾರುತ (Cyclone mocha) ಮೋಚಾ ಇಂದು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಅದರ ಪರಿಣಾಮವಾಗೇ ಇಂದು ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಬರುವ ಮುನ್ಸೂಚನೆ ಇದೆ.
ರಾಜ್ಯಕ್ಕೆ ಏನು ಮುನ್ಸೂಚನೆ ಇದೆ
ಕರ್ನಾಟಕದ ದಕ್ಷಿಣ ಒಳನಾಡು ಜಿಲ್ಲಾಗಳಾದ ಚಾಮರಾಜನಗರ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಅದರ ಹೊರತಾಗಿ ಮೈಸೂರು, ರಾಮನಗರ, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಚದುರಿದಂತೆ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ.

ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಚದುರಿದ ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಪ್ರದೇಶಗಳಲ್ಲಿ ಒಣ ಹವೆ ಮುಂದುವರಿಯಲಿದೆ. ಮೆಲನಾಡಿನ ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆ ನಿರೀಕ್ಷಿಸಲಾಗಿದೆ. ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಸಾಧಾರಣದಿಂದ ಉತ್ತಮ ಮಳೆ ಹಾಗೂ ಕರಾವಳಿ ಭಾಗದ ಮೂರು ಜಿಲ್ಲೆಗಳಲ್ಲಿ ಹಗುರ ಮಳೆಯಾಗಬಹುದೆಂಬ ಮುನ್ಸೂಚನೆ ಇದೆ.












Click it and Unblock the Notifications