ಫ್ರೀಡಂ ಪಾರ್ಕ್‌ಗೆ ಪ್ರತಿಭಟನೆ ಸೀಮಿತಗೊಳಿಸಬೇಡಿ; ನ.28ರಂದು ಬೆಂಗಳೂರಿನಾದ್ಯಂತ ಬೃಹತ್ ಹೋರಾಟದ ಎಚ್ಚರಿಕೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪ್ರತಿಭಟನೆಗಳನ್ನು ಫ್ರೀಡಂ ಪಾರ್ಕ್‌ಗೆ ಮಾತ್ರ ಸೀಮಿತಗೊಳಿಸಬಾರದು ಎಂದು ವಿವಿಧ ನಾಗರಿಕ ಸಂಘಟನೆಗಳು ಆಗ್ರಹಿಸಿವೆ. ಸ್ವಾತಂತ್ರ್ಯ ಉದ್ಯಾನದ ಹೊರತಾಗಿ ಬೇರೆಡೆಗೆ ಪ್ರತಿಭಟನೆಗೆ ಅವಕಾಶವನ್ನು ನವೆಂಬರ್ 26ರೊಳಗೆ ನೀಡಿಬೇಕು. ಇಲ್ಲವಾದರೆ ನವೆಂಬರ್ 28ರಂದು ನಗರದಾದ್ಯಂತ ಸಾಮೂಹಿಕ ಬೃಹತ್ ಹೋರಾಟ ನಡೆಸುವುದಾಗಿ ಸಂಘಟನೆಗಳ ಮುಖ್ಯಸ್ಥರು ಎಚ್ಚರಿಸಿದ್ದಾರೆ.

ನೆನ್ನೆ ನಡೆದ ದುಂಡುಮೇಜಿನ ಸಭೆಯಲ್ಲಿ ವಿವಿಧ ಸಂಘಟನೆಗಳ ಸುಮಾರು 100 ಮಂದಿ ಭಾಗವಹಿಸಿ, ಬೆಂಗಳೂರಿನಲ್ಲಿ ಸಾರ್ವಜನಿಕ ಪ್ರತಿಭಟನೆಗಳನ್ನು ಫ್ರೀಡಂ ಪಾರ್ಕ್‌ಗೆ ಮಾತ್ರವೇ ಸೀಮಿತಗೊಳಿಸಬಾರದು. ಮೌರ್ಯ ವೃತ್ತ, ಮೈಸೂರು ವೃತ್ತ, ಟೌನ್ ಹಾಲ್ ಮುಂದೆಯು ಪ್ರತಿಭಟನೆಗೆ ಅವಕಾಶ ನೀಡಬೇಕು. ಈ ಹಿಂದೆ (2021) ಈ ಸ್ಥಳದಲ್ಲಿ ಪ್ರತಿಭಟನೆ ಮಾಡದಂತೆ ಹೊರಡಿಸಿದ್ದ ಪೊಲೀಸ್ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

Bengaluru Protest Restrictions

ಈ ಸಂಬಂಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಗೆ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಫ್ರೀಡಂ ಪಾರ್ಕ್ ಹೊರಗಡೆ ಪ್ರತಿಭಟನೆಗಳಿಗೆ ಅವಕಾಶ ನೀಡಬೇಕು. ಬೇರೆ ಸ್ಥಳಗಳಲ್ಲಿ ಈವರೆಗೆ ಪ್ರತಿಭಟಿಸಿದ್ದ ಪ್ರತಿಭಟನಾಕಾರರ ಮೇಲೆ ದಾಖಲಾದ ಎಲ್ಲಾ ಎಫ್‌ಐಆರ್‌ಗಳನ್ನು ರದ್ದುಗೊಳಿಸಬೇಕು ಎಂಬ ಬೇಡಿಕೆಯನ್ನೂ ಸಂಘಟನೆಗಳು ಸರ್ಕಾರದ ಮುಂದಿಟ್ಟಿವೆ.

ಪೊಲೀಸ್ ಆದೇಶದ ಬಗ್ಗೆ ಪ್ರಶ್ನೆ

ಪ್ರತಿಭಟನೆಗಳ ಮೇಲಿನ ನಿರ್ಬಂಧಗಳನ್ನು ಜಾರಿಗೊಳಿಸಲು ಕರ್ನಾಟಕ ಹೈಕೋರ್ಟ್ ಆದೇಶವನ್ನು ಪೊಲೀಸರು ಉಲ್ಲೇಖಿಸುತ್ತಿರುವುದನ್ನು ಅಭಿಯಾನ ಪ್ರಶ್ನಿಸಿದೆ. ನ್ಯಾಯಾಲಯವು ಅಸ್ತಿತ್ವದಲ್ಲಿದ್ದ ಪೊಲೀಸ್ ಆದೇಶವನ್ನು ಜಾರಿಗೊಳಿಸುವಂತೆ ಸೂಚಿಸಿತ್ತೇ ಹೊರತು, ಎಲ್ಲಾ ಪ್ರತಿಭಟನೆಗಳನ್ನು ಫ್ರೀಡಂ ಪಾರ್ಕ್‌ಗೆ ಮಾತ್ರ ಸೀಮಿತಗೊಳಿಸುವಂತೆ ನಿರ್ದೇಶಿಸಿರಲಿಲ್ಲ ಎಂದು ಸಂಘಟನೆ ವಾದಿಸಿದೆ.

ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟಿಸ್‌ನ ಅಧ್ಯಕ್ಷೆ, ವಕೀಲೆ ಮೈತ್ರೇಯಿ ಕೃಷ್ಣನ್ ಮಾತನಾಡಿ, ಪ್ರತಿಭಟನೆಗಳ ಮೇಲಿನ ನಿರ್ಬಂಧಗಳು 2021ರಲ್ಲಿ ಜಾರಿಗೊಳಿಸಲಾದ ಲೈಸೆನ್ಸಿಂಗ್ ಆ್ಯಂಡ್ ರೆಗ್ಯುಲೇಷನ್ ಆಫ್ ಪ್ರೊಟೆಸ್ಟ್ಸ್, ಡೆಮಾನ್‌ಸ್ಟ್ರೇಷನ್ಸ್ ಆ್ಯಂಡ್ ಪ್ರೊಟೆಸ್ಟ್ ಮಾರ್ಚಸ್ (ಬೆಂಗಳೂರು ನಗರ) ಆದೇಶದ ಅಡಿಯಲ್ಲಿ ಬಂದಿವೆ ಎಂದು ಹೇಳಿದರು.

ಪೊಲೀಸ್ ಆಯುಕ್ತರಿಗೆ ಈ ಆದೇಶವನ್ನು ತಿದ್ದುಪಡಿ ಮಾಡುವ ಅಥವಾ ಹಿಂಪಡೆಯುವ ಅಧಿಕಾರವಿದೆ ಎಂದು ಅವರು ತಿಳಿಸಿದರು. ನಿರ್ಬಂಧಗಳನ್ನು ತೆರವುಗೊಳಿಸುವುದು ರಾಜ್ಯ ಸರ್ಕಾರದ ಸಾಂವಿಧಾನಿಕ ಹೊಣೆಗಾರಿಕೆಯೂ ಆಗಿದೆ ಎಂದು ವಾದಿಸಿದರು.

ಮೌರ್ಯ ಸರ್ಕಲ್, ಟೌನ್ ಹಾಲ್‌ನಲ್ಲೂ ಪ್ರತಿಭಟನೆಗೆ ಅವಕಾಶಕ್ಕೆ ಆಗ್ರಹ

ಇತಿಹಾಸಕಾರ ಹಾಗೂ ಲೇಖಕ ರಾಮಚಂದ್ರ ಗುಹಾ ಅವರು ಪ್ರತಿಭಟನೆಗಳನ್ನು ಒಂದೇ ಸ್ಥಳಕ್ಕೆ ಸೀಮಿತಗೊಳಿಸುವ ನಿರ್ಧಾರವನ್ನು ಟೀಕಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ತಮ್ಮ ಸಮಸ್ಯೆಗಳನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಲು ಮತ್ತು ತಮ್ಮ ಬೇಡಿಕೆಗಳನ್ನು ಅಧಿಕಾರಿಗಳ ಗಮನಕ್ಕೆ ತರಲು ಅವಕಾಶವಿರಬೇಕು ಎಂದು ಹೇಳಿದರು.

ಮೌರ್ಯ ಸರ್ಕಲ್, ಟೌನ್ ಹಾಲ್ ಮತ್ತು ಮೈಸೂರು ಬ್ಯಾಂಕ್ ಸರ್ಕಲ್‌ನಂತಹ ಪ್ರಮುಖ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡಬೇಕು ಎಂದು ಅವರು ಒತ್ತಾಯಿಸಿದರು. ಜನರು ತಮ್ಮ ಅಹವಾಲುಗಳನ್ನು ಸಲ್ಲಿಸಲು ಬಯಸುವ ಸಂಬಂಧಪಟ್ಟ ಅಧಿಕಾರಿಗಳ ಕಚೇರಿಗಳ ಹೊರಗಡೆಯೂ ಪ್ರತಿಭಟನೆ ನಡೆಸಲು ಅನುಮತಿ ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಮಿಕರು, ಬೀದಿ ವ್ಯಾಪಾರಿಗಳಿಗೆ ಸಮಸ್ಯೆ

ಪ್ರತಿಭಟನೆಗಳನ್ನು ಫ್ರೀಡಂ ಪಾರ್ಕ್‌ಗೆ ಸೀಮಿತಗೊಳಿಸುವುದರಿಂದ ಕಾರ್ಮಿಕರು ಮತ್ತು ಅಂಚಿನಲ್ಲಿರುವ ಸಮುದಾಯಗಳಿಗೆ ತೊಂದರೆಯಾಗುತ್ತಿದೆ. ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಲು ಮತ್ತು ಸಮಸ್ಯೆಗಳನ್ನು ಸಾರ್ವಜನಿಕರ ಗಮನಕ್ಕೆ ತರಲು ಈ ಸಮುದಾಯಗಳಿಗೆ ಪ್ರತಿಭಟನೆಗಳು ಪ್ರಮುಖ ಮಾರ್ಗವಾಗಿವೆ, ಅದನ್ನು ಒಂದು ಸ್ಥಳಕ್ಕೆ ಸಿಮೀತಗೊಳಿಸುವ ಮೂಲಕ ಪ್ರತಿಭಟನೆ ಹಕ್ಕನ್ನು ಹತ್ತಿಕ್ಕಬಾರದು ಎಂದು ಅಭಿಯಾನದಲ್ಲಿ ತಿಳಿಸಿದರು.

ಕಾರ್ಮಿಕ ಸಂಘಟನೆಗಳ ಸಂಚಾಲಕ ಕೆ.ವಿ. ಭಟ್ ಅವರು ಮೇ ದಿನದ ರ‍್ಯಾಲಿಗಳಿಗೆ ಅನುಮತಿ ಪಡೆಯುವ ಸಂದರ್ಭದಲ್ಲಿ ಸಂಘಟಕರು ಎದುರಿಸುವ ಸಮಸ್ಯೆಗಳನ್ನು ಪ್ರಸ್ತಾಪಿಸಿದರು.

ಲೈಂಗಿಕ ಕಾರ್ಯಕರ್ತೆಯರು ಮತ್ತು ಬೀದಿ ವ್ಯಾಪಾರಿಗಳ ಪ್ರತಿನಿಧಿಗಳು ಕೂಡ ತಮ್ಮ ಸಮಸ್ಯೆಗಳನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಲು ಮುಕ್ತ ಸ್ಥಳಗಳ ಅಗತ್ಯವನ್ನು ಒತ್ತಿಹೇಳಿದರು. ಪೊಲೀಸ್ ಕಿರುಕುಳದ ಆರೋಪಗಳು ಮತ್ತು ಮೂಲಭೂತ ಹಕ್ಕುಗಳ ನಿರಾಕರಣೆಯಂತಹ ವಿಚಾರಗಳಲ್ಲಿ ಸಾರ್ವಜನಿಕ ಪ್ರತಿಭಟನೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.

ಪ್ರತಿಭಟನೆ ಎಂಬುದು ಕೇವಲ ಜನರು ಒಂದೆಡೆ ಸೇರುವ ಕಾರ್ಯಕ್ರಮವಲ್ಲ. ತಮ್ಮ ಸಮಸ್ಯೆಗಳನ್ನು ಜನರ ಗಮನಕ್ಕೆ ತಂದು, ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವ ಮಾರ್ಗವೂ ಆಗಿದೆ ಎಂದು ಅಭಿಯಾನ ಅಭಿಪ್ರಾಯಪಟ್ಟಿದೆ.

ನ.28ರಂದು ಸಾಮೂಹಿಕ ಹೋರಾಟದ ಎಚ್ಚರಿಕೆ

ಪ್ರತಿಭಟನೆಗಳ ಮೇಲಿನ ನಿರ್ಬಂಧಗಳನ್ನು ಹಿಂಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹೇರುವುದನ್ನು ಮುಂದುವರಿಸುವುದಾಗಿ ಅಭಿಯಾನ ತಿಳಿಸಿದೆ. ಚಳವಳಿಯನ್ನು ಸಂಘಟಿಸಲು ಕೇಂದ್ರ ಸಮಿತಿಯನ್ನು ರಚಿಸುವ ಉದ್ದೇಶದಿಂದ ಮತ್ತೊಂದು ಸಭೆಯನ್ನೂ ನಡೆಸಲು ಸಂಘಟನೆಗಳು ನಿರ್ಧರಿಸಿವೆ.

ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಸ್ವಾತಂತ್ರ್ಯ ಉದ್ಯಾನ ಹೊರತಾಗಿ ಬೇರೆ ಕಡೆಗಳಲ್ಲಿ ಪ್ರತಿಭಟನೆ ಮಾಡುವುದರಿಂದ ಆಯಾ ಭಾಗದ ಪ್ರಮುಖ ರಸ್ತೆಗಳಲ್ಲಿ, ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಗಲಿದೆ. ಆದ್ದರಿಂದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಸಿಮೀತಗೊಳಿಸಿದ್ದ ಈ ಹಿಂದಿನ ಆದೇಶವನ್ನು ಜಾರಿಗೆ ತರಲು ನಿರ್ಧರಿಸಿರುವುದನ್ನು ತಿಳಿಸಿದ್ದಾರೆ. ಆ ಬಳಿಕವೇ ಸಂಘಟನೆಗಳು ಪ್ರತಿಭಟನೆ ಹಕ್ಕನ್ನು ಕಿತ್ತುಕೊಳ್ಳುತ್ತಿವೆ ಎಂದು ಆರೋಪಿಸಿ ಸರ್ಕಾರ ವಿರುದ್ಧ ದೂರಿವೆ.

ನವೆಂಬರ್ 26ರ ಗಡುವು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿ ಸಾರ್ವಜನಿಕ ಪ್ರತಿಭಟನೆ ನಡೆಸುವ ಹಕ್ಕಿನ ಕುರಿತು ಚರ್ಚೆ ತೀವ್ರಗೊಂಡಿದೆ. ಪ್ರತಿಭಟನೆಗಳನ್ನು ಒಂದೇ ಸ್ಥಳಕ್ಕೆ ಸೀಮಿತಗೊಳಿಸದೆ, ನಗರದ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಜನರು ತಮ್ಮ ಬೇಡಿಕೆಗಳನ್ನು ಮಂಡಿಸಲು ಅವಕಾಶ ನೀಡಬೇಕು ಎಂಬುದು ಸಂಘಟನೆಯ ಪ್ರಮುಖ ಆಗ್ರಹವಾಗಿದೆ.

ಸಂವಿಧಾನ ದಿನದೊಳಗೆ ಸರ್ಕಾರ ನಿರ್ಬಂಧಗಳನ್ನು ಹಿಂಪಡೆಯದಿದ್ದರೆ, ನವೆಂಬರ್ 28ರಂದು ನಗರದಾದ್ಯಂತ ಸಾಮೂಹಿಕ ನಾಗರಿಕ ಅಸಹಕಾರ ಚಳವಳಿ ಆರಂಭಿಸಲಾಗುವುದು ಎಂದು ಅಭಿಯಾನ ಎಚ್ಚರಿಕೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+