Bengaluru Property Tax: ನಗರದಲ್ಲಿ ಪಕ್ಕದ ಮನೆ ಆಸ್ತಿ ತೆರಿಗೆ ಕಟ್ಟಲು ನೋಟಿಸ್! ಜಿಬಿಎ ನೋಟಿಸ್ ಫಜೀತಿ
Bengaluru Property Tax: ಬೆಂಗಳೂರಿನಲ್ಲಿ ಆಸ್ತಿದಾರರಿಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನೀಡಿರುವ ನೋಟಿಸ್ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಪಕ್ಕದ ಮನೆಯ ಆಸ್ತಿಯ ತೆರಿಗೆ ಕಟ್ಟುವುದಕ್ಕೆ ಡ್ರೋನ್ ಸರ್ವೇ ಬಳಿಕೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನೋಟಿಸ್ ಜಾರಿ ಮಾಡಲಾಗಿದೆ ಎನ್ನುವ ವಿಷಯ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಡ್ರೋನ್ ಸರ್ವೇಯ ನಂತರ ಆಸ್ತಿದಾರರಿಗೆ ಆಸ್ತಿ ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ನೋಟಿಸ್ ಕೊಡುವಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಹಲವು ಎಡವಟ್ಟುಗಳನ್ನು ಮಾಡಿಕೊಂಡಿದೆ.
ಈ ಸಂಬಂಧ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಪಕ್ಕದ ಮನೆ ಆಸ್ತಿ ತೆರಿಗೆ ಕಟ್ಟಲು ನೋಟಿಸ್! ರಿಯಲ್ ಎಸ್ಟೇಟ್ ಸಿಎಂ ಸರ್ಕಾರದ ಹೊಸ ವಸೂಲಿ ಬಿಸಿನೆಸ್! ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (GBA) ಮತ್ತು ಕಾಂಗ್ರೆಸ್ ಸರ್ಕಾರದ ಲೂಟಿ ಮತ್ತು ಎಡವಟ್ಟುಗಳಿಗೆ ಕೊನೆಯಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ತಂತ್ರಜ್ಞಾನದ ಹೆಸರಿನಲ್ಲಿ ಬೆಂಗಳೂರಿನ ನಾಗರಿಕರನ್ನು ಸುಲಿಗೆ ಮಾಡಲು ಹೊರಟಿರುವ ಈ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ನಿಜಕ್ಕೂ ನಾಚಿಕೆಯಾಗಬೇಕು. ಜಿಪಿಎಸ್ ಹಾಗೂ ಡ್ರೋನ್ ಸರ್ವೇ ಹೆಸರಿನಲ್ಲಿ ಜಿಬಿಎ (ಗ್ರೇಟರ್ ಬೆಂಗಳೂರು ಪ್ರಾಧಿಕಾರ) ಅಧಿಕಾರಿಗಳು ಮಾಡಿರುವ ಎಡವಟ್ಟುಗಳು ಒಂದೆರಡಲ್ಲ. ಜನರ ಆಸ್ತಿಯ ಅಳತೆಯನ್ನೇ ಬೇಕಾಬಿಟ್ಟಿ ಹೆಚ್ಚಿಸಿ, ದುಪ್ಪಟ್ಟು ತೆರಿಗೆ ಕಟ್ಟುವಂತೆ ಡಿಮ್ಯಾಂಡ್ ನೋಟಿಸ್ ನೀಡಿ ನಾಗರಿಕರಿಗೆ ನಿತ್ಯ ಕಿರುಕುಳ ನೀಡುತ್ತಿದ್ದಾರೆ!
ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ, ನಿಮ್ಮ 'ಬ್ರಾಂಡ್ ಬೆಂಗಳೂರು' ಎಂದರೆ ತೆರಿಗೆ ಹೆಸರಿನಲ್ಲಿ ಜನಸಾಮಾನ್ಯರ ಜೇಬಿಗೆ ಕನ್ನ ಹಾಕುವುದು ಮತ್ತು ನಿತ್ಯ ಕಿರುಕುಳ ನೀಡುವುದೇ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರೇ, 2,500 ಚದರ ಅಡಿ ಮನೆಗೆ 4,436 ಚದರ ಅಡಿ ಎಂದು ನಮೂದಿಸಿ, ಪಕ್ಕದ ಮನೆಯ ಫೋಟೋ ಲಗತ್ತಿಸಿ 92,000 ರೂ.ಗಳಿಗಿಂತ ಹೆಚ್ಚು ತೆರಿಗೆ ನೋಟಿಸ್ ಕಳುಹಿಸುವುದು ಯಾವ ಸೀಮೆ ಆಡಳಿತ ಸ್ವಾಮಿ?
ನ್ಯಾಯ ಕೇಳಲು ಹೋದರೆ ದಬ್ಬಾಳಿಕೆ: ತಪ್ಪು ನಿಮ್ಮ ಅಧಿಕಾರಿಗಳದ್ದು, ಆದರೆ ಮೇಲ್ಮನವಿ ಸಲ್ಲಿಸಲು 'ಮೊದಲು ಅರ್ಧದಷ್ಟು ತಪ್ಪಾದ ತೆರಿಗೆಯನ್ನು ಪಾವತಿಸಿ' ಎಂದು ಬಡ ಹಾಗೂ ಮಧ್ಯಮ ವರ್ಗದ ಜನರನ್ನು ಪೀಡಿಸುತ್ತಿರುವುದು ಅನ್ಯಾಯದ ಪರಮಾವಧಿ. ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳುವ ಸೌಜನ್ಯವೂ ಇಲ್ಲದೆ, ಜನರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಿರುವ ಈ ತುಘಲಕ್ ಆಡಳಿತಕ್ಕೆ ಬೆಂಗಳೂರಿನ ಜನ ಶೀಘ್ರದಲ್ಲೇ ತಕ್ಕ ಪಾಠ ಕಲಿಸಲಿದ್ದಾರೆ. ಡ್ರೋನ್ ಸರ್ವೇ ಹೆಸರಿನಲ್ಲಿ ಜಿಬಿಎ ನೀಡುತ್ತಿರುವ ಈ ನಿರರ್ಥಕ, ಸುಲಿಗೆ ನೋಟಿಸ್ ಸ್ಥಗಿತಗೊಳಿಸಿ, ಸಾರ್ವಜನಿಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಗ್ರಹಿಸಿದ್ದಾರೆ.
ನಿವೃತ್ತಿಯ ನಂತರವೂ ನಿಂತಿಲ್ಲ ಡ್ಯೂಟಿ ಎಂದ ಆರ್. ಅಶೋಕ್
ನಿವೃತ್ತಿಯ ನಂತರವೂ ನಿಂತಿಲ್ಲ ಡ್ಯೂಟಿ ಆರ್‌ಟಿಓ (RTO) ಕಚೇರಿಗಳಲ್ಲಿ ಸಾಲು ಸಾಲು ಅಕ್ರಮ - ಸಾರಿಗೆ ಇಲಾಖೆಯನ್ನ ದಲ್ಲಾಳಿಗಳ ಅಡ್ಡಾ ಮಾಡಿದೆ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ. ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ ಯಾವ ಹಂತಕ್ಕೆ ತಲುಪಿದೆ ಎಂದರೆ, ಸರ್ಕಾರಿ ಕಚೇರಿಗಳಲ್ಲಿ ನಿವೃತ್ತರಾದ ನೌಕರರು ಹಾಗೂ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಕುಳಿತು ಅಧಿಕಾರ ಚಲಾಯಿಸುತ್ತಿದ್ದಾರೆ.
ಸಾರಿಗೆ ಇಲಾಖೆಯ ಆರ್‌ಟಿಓ ಕಚೇರಿಗಳಲ್ಲಿ ನಿವೃತ್ತಿ ಹೊಂದಿದ 'ಡಿ' ದರ್ಜೆ ಸಿಬ್ಬಂದಿ ಹಾಗೂ ಖಾಸಗಿ ಏಜೆಂಟರುಗಳು ಕುರ್ಚಿ, ಕ್ಯಾಬಿನ್ ಹಾಕಿ ಸರ್ಕಾರಿ ಕಡತಗಳನ್ನು ವಿಲೇವಾರಿ ಮಾಡುತ್ತಿದ್ದರೆ, ಸಾರಿಗೆ ಸಚಿವ ಬೈರತಿ ಸುರೇಶ್ ಅವರೇ ನಿಮ್ಮ ಇಲಾಖೆ ಏನು ನಿದ್ದೆ ಮಾಡುತ್ತಿದೆಯಾ ಅಥವಾ ಈ ದಂಧೆಯಲ್ಲಿ ನಿಮಗೂ ಪಾಲಿದೆಯಾ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಪ್ರಶ್ನೆ ಮಾಡಿದ್ದಾರೆ.
ನಮ್ಮಸರ್ಕಾರದಲ್ಲಿ "ಮಧ್ಯವರ್ತಿಗಳಿಗೆ ಜಾಗವಿಲ್ಲ, ಅಕ್ರಮ ಎಸಗಿದರೆ ಅಮಾನತು', "ಹತ್ತು ರೂಪಾಯಿ ಲಂಚ ಕೇಳಿದರೆ ನನಗೆ ತಿಳಿಸಿ", ಎಂಬ ಪೊಳ್ಳು ಹೇಳಿಕೆಗಳು, ಆದೇಶಗಳು ಬರಿ ಬೊಗಳೆ ಮಾತಿಗೆ, ಕಾಗದಕ್ಕಷ್ಟೇ ಸೀಮಿತವೇ? ನಿಮ್ಮ ಮೂಗಿನ ತುದಿಯಲ್ಲೇ ನಿವೃತ್ತ ಸಿಬ್ಬಂದಿ ಹಾಗೂ ಖಾಸಗಿ ವ್ಯಕ್ತಿಗಳು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದರೂ ನೀವು ಕಣ್ಣು ಮುಚ್ಚಿ ಕುಳಿತಿರುವುದು ಯಾರ ಮುಲಾಜಿಗೆ? ಸರ್ಕಾರಿ ವ್ಯವಸ್ಥೆಗೆ ಕಳಂಕ: ಅಧಿಕೃತ ಸಿಬ್ಬಂದಿ ಅಭಾವ ನೆಪ ಹೇಳಿ, ನಿವೃತ್ತರನ್ನು ಹಾಗೂ ಖಾಸಗಿ ಮಧ್ಯವರ್ತಿಗಳನ್ನು ಕಚೇರಿಯಲ್ಲಿ ಕೂರಿಸಿ ಸಾರ್ವಜನಿಕರ ಫೈಲ್, ಶುಲ್ಕ ಹಾಗೂ ದಾಖಲೆಗಳನ್ನು ನಿರ್ವಹಿಸಲು ಅವಕಾಶ ನೀಡಿರುವುದು ಕಾನೂನುಬಾಹಿರ ನಡೆ ಎಂದಿದ್ದಾರೆ.
ಆನ್‌ಲೈನ್ ಸೇವೆಗೂ ಗ್ರಹಣ: ಲೋಕಾಯುಕ್ತ ದಾಳಿ ವೇಳೆ ಸಿಕ್ಕಿಬಿದ್ದರೂ, ಎಫ್‌ಐಆರ್ ಆದರೂ ಬುದ್ಧಿ ಕಲಿಯದ ಈ ಸರ್ಕಾರ, ಸಾರ್ವಜನಿಕರ ಆನ್‌ಲೈನ್ ಅರ್ಜಿಗಳನ್ನೂ ಪರಿಶೀಲಿಸದೆ ಜನರನ್ನು ಮತ್ತೆ ದಲ್ಲಾಳಿಗಳ ಬಳಿಗೇ ತಳ್ಳುತ್ತಿದೆ. ಸರ್ಕಾರಿ ಕಚೇರಿಗಳನ್ನು ಖಾಸಗಿ ಕಮಿಷನ್ ಏಜೆನ್ಸಿಗಳನ್ನಾಗಿ ಪರಿವರ್ತಿಸಿರುವ ಈ ಭ್ರಷ್ಟ ವ್ಯವಸ್ಥೆಗೆ ತಕ್ಷಣವೇ ಬ್ರೇಕ್ ಹಾಕಬೇಕು.
ಆರ್‌ಟಿಓ ಕಚೇರಿಗಳಲ್ಲಿ ನಡೆಯುತ್ತಿರುವ ಈ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಿ, ಶಾಮೀಲಾಗಿರುವ ಹಿರಿಯ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳದಿದ್ದರೆ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದ್ದಾರೆ.


Click it and Unblock the Notifications
