Bengaluru Property: ಮನೆ ಖಾಲಿ ಮಾಡಿದ ಮೇಲೆ ಬಾಡಿಗೆದಾರರಿಗೆ ಬಿಗ್ ಶಾಕ್: ಡೆಪಾಸಿಟ್ ಹಣದಿಂದ 48 ಸಾವಿರ ರೂ. ಕಡಿತ
Bengaluru Property: ಬೆಂಗಳೂರಿನಲ್ಲಿ ಬೇಕಾಬಿಟ್ಟಿ ಬಾಡಿಗೆ ನಿಗದಿ ಮಾಡುವುದು ಹಾಗೂ ಬಾಡಿಗೆದಾರರು ಮನೆ ಖಾಲಿ ಮಾಡುವ ಸಂದರ್ಭದಲ್ಲಿ ವಿಪರೀತವಾಗಿ ಹಣ ಕಡಿತ ಮಾಡುವುದು ಮುಂದುವರಿದಿದೆ. ಇದೀಗ ಬಾಡಿಗೆ ಮನೆಯವರಿಂದ ಮನೆಯ ಮಾಲೀಕರೊಬ್ಬರು ವಿಪರೀತವಾಗಿ ಹಣ ಹಿಡಿದುಕೊಂಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವು ಪರ - ವಿರೋಧ ಚರ್ಚೆಗೆ ವೇದಿಕೆಯಾಗಿದೆ.
ಬೆಂಗಳೂರಿನ ಬಾಡಿಗೆದಾರರು ಸಂಕಷ್ಟಕ್ಕೆ ಸಿಲುಕಿರುವ ವಿಚಾರವು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ದುಬಾರಿ ಬಾಡಿಗೆ ಮತ್ತು ಹೆಚ್ಚು ಡೆಪಾಸಿಟ್ ತೆಗೆದುಕೊಳ್ಳುವುದು ಹಾಗೂ ವಾಪಸ್ ಹಣ ಕೊಡುವಾಗ ಕಡಿಮೆ ಹಣ ಕೊಡುವುದು ಬೆಂಗಳೂರಲ್ಲಿ ಮುಂದುವರಿದಿದೆ. ಬೆಂಗಳೂರಿನ ಅಪಾರ್ಟ್ಮೆಂಟ್ವೊಂದರಲ್ಲಿ ಪೈಂಟ್ ಮಾಡುವುದಕ್ಕಾಗಿ ಮನೆ ಮಾಲೀಕರು 1 ಲಕ್ಷ ರೂ. ಭದ್ರತಾ ಠೇವಣಿಯಿಂದ 40,000 ಕಡಿತಗೊಳಿಸಲು ಮುಂದಾಗಿದ್ದಾರೆ ಎಂದು ಬಾಡಿಗೆದಾರರೊಬ್ಬರು ದೂರಿದ್ದಾರೆ. ಅಲ್ಲದೆ ಮನೆ ಸ್ವಚ್ಛಗೊಳಿಸುವುದಕ್ಕೆ ಬರೋಬ್ಬರಿ 7,000ರಿಂದ 8,000 ರೂಪಾಯಿ ಕೇಳಿದ್ದಾರೆ ಎನ್ನುವ ಪೋಸ್ಟ್ ಇದೀಗ ಚರ್ಚೆಗೆ ಕಾರಣವಾಗಿದೆ.

ನಾವು ಈ ಶನಿವಾರ ಬೆಂಗಳೂರಿನಲ್ಲಿ ಬೇರೆ ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತಿದ್ದೇವೆ ಮತ್ತು ನಮ್ಮ ಪ್ರಸ್ತುತ ಬಾಡಿಗೆ ಮನೆಯ ಮಾಲೀಕರು ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಕೇಳುತ್ತಿದ್ದಾರೆ. ಇದಕ್ಕೆ ಅವರು 7 ಸಾವಿರದಿಂದ 8 ಸಾವಿರದವರೆಗೆ ಶುಲ್ಕ ವಿಧಿಸುವ ಕ್ಲೀನರ್ನ ಸಂಪರ್ಕ ಸಂಖ್ಯೆಯನ್ನು ಸಹ ನೀಡುತ್ತಿದ್ದರು. ಅವರು 1 ಲಕ್ಷ ಠೇವಣಿಯಿಂದ ಮನೆಗೆ ಬಣ್ಣ ಬಳಿಯುವುದಕ್ಕೆ 40 ಸಾವಿರ ರೂ. ಮೊತ್ತವನ್ನು ಕಡಿತಗೊಳಿಸುವುದಾಗಿ ಹೇಳಿದ್ದಾರೆ.
ಈಗ ಇನ್ನೂ ಮನೆ ಖಾಲಿ ಮಾಡಿಲ್ಲ ಎಲ್ಲ ವಸ್ತುಗಳು ಇರುವಾಗ ಮನೆ ಶುಚಿಗೊಳಿಸುವಿಕೆಯನ್ನು ಹೇಗೆ ಮಾಡಲಾಗುತ್ತದೆ ಎಂಬುದರ ಕುರಿತು ನನಗೆ ಸ್ವಲ್ಪ ಗೊಂದಲವಿದೆ. ಸಂಪೂರ್ಣವಾಗಿ ಮನೆ ಸ್ವಚ್ಛ ಮಾಡಬೇಕಾದರೆ, ಮನೆ ಖಾಲಿ ಮಾಡುವುದು ಅತ್ಯಗತ್ಯವಾಗಿದೆಯಲ್ಲವೇ ಎಂದು ಮನೆಯ ಬಾಡಿಗೆದಾರರು ಪ್ರಶ್ನೆ ಮಾಡಿದ್ದಾರೆ.
ಬಾಡಿಗೆದಾರರ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡ ಮೇಲೆ ಈ ಪೋಸ್ಟ್ ವೈರಲ್ ಆಗಿದೆ. ಅನೇಕ ಬಳಕೆದಾರರು ಈಗಾಗಲೇ ಪೈಂಟಿಂಗ್ ಮಾಡುವುದಕ್ಕೆ ಭಾರೀ ಕಡಿತ ಮಾಡಿದ ನಂತರ ಸಂಪೂರ್ಣ ಮನೆ ಖಾಲಿ ಮಾಡುವುದಕ್ಕೆ ಪ್ರತ್ಯೇಕವಾಗಿ ಶುಲ್ಕ ವಿಧಿಸುವುದರ ಹಿಂದಿನ ತಾರ್ಕಿಕತೆಯನ್ನು ಪ್ರಶ್ನಿಸಿದ್ದಾರೆ. ಹಲವರು ಬೆಂಗಳೂರಿನ ಬಾಡಿಗೆ ಮನೆಗಳ ವಿಚಾರದಲ್ಲಿ ಇಂತಹ ಅಭ್ಯಾಸಗಳು ಹೆಚ್ಚು ಸಾಮಾನ್ಯವಾಗಿದೆ ಎಂದು ವಿವರಿಸಿದ್ದಾರೆ, ಅಲ್ಲಿ ಭದ್ರತಾ ಠೇವಣಿಗಳಿಂದ ಕಡಿತಗಳ ಮೇಲಿನ ವಿವಾದಗಳು ಭೂಮಾಲೀಕರು ಮತ್ತು ಬಾಡಿಗೆದಾರರ ನಡುವಿನ ಘರ್ಷಣೆಗೆ ಕಾರಣವಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಮನೆಗೆ ಬಣ್ಣ ಬಳಿಯುವುದಕ್ಕೆ, ಶುಚಿಗೊಳಿಸುವಿಕೆ ಅಥವಾ ಇದೇ ಮಾದರಿಯ ಖರ್ಚುಗಳಿಗೆ ಒಂದು ತಿಂಗಳ ಬಾಡಿಗೆಗೆ ಸಮಾನವಾದ ಮೊತ್ತವನ್ನು ಕಡಿತಗೊಳಿಸುವುದು ಅತಿಯಾಗಿದೆ ಎಂದು ಹಲವು ನೆಟ್ಟಿಗರು ವಾದಿಸಿದ್ದಾರೆ. ಸರ್ಕಾರವು ಬಾಡಿಗೆ ಮನೆದಾರರ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಬೇಕು ಎಂದು ಹಲವರು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಬಾಡಿಗೆ ಮನೆದಾರರಿಗೆ ಸಂಕಷ್ಟ ಮುಂದುವರಿದಿರುವುದು ಈ ಸಂಬಂಧ ಕಠಿಣ ಕಾನೂನು ರೂಪಿಸಬೇಕು ಎಂದು ಬೆಂಗಳೂರಿನ ಬಾಡಿಗೆದಾರರು ಆಗ್ರಹಿಸಿದ್ದಾರೆ.












Click it and Unblock the Notifications