Bengaluru Property: ಆಸ್ತಿ ಹರಾಜು ಭೀತಿಗೆ ಬೆಚ್ಚಿದ ಬೆಂಗಳೂರು ಆಸ್ತಿದಾರರು: 27.6 ಲಕ್ಷ ರೂ. ಆಸ್ತಿ ತೆರಿಗೆ ಪಾವತಿ
Bengaluru Property: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಆಸ್ತಿ ಹರಾಜು ಪ್ರಕ್ರಿಯೆಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಚುರುಕುಗೊಳಿಸಿದೆ. ಬೆಂಗಳೂರಿನಲ್ಲಿ ಸುದೀರ್ಘ ಅವಧಿಗೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರ ಆಸ್ತಿ ಹರಾಜು ಹಾಕುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ನಿರ್ಧರಿಸಿತ್ತು. ಅದರ ಅನ್ವಯ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಆಸ್ತಿ ಹರಾಜು ಹಾಕಲು ಮುಂದಾಗಿದೆ. ಆದರೆ, ಇದಕ್ಕೂ ಮುನ್ನವೇ ಹಲವರು ಆಸ್ತಿಗಳ ಆಸ್ತಿ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಬೆಂಗಳೂರಿನ ಬೊಮ್ಮನಹಳ್ಳಿ ವಲಯದಲ್ಲಿ ಹರಾಜು ಪ್ರಕ್ರಿಯೆಗೂ ಮುನ್ನವೇ 14 ಸುಸ್ತಿದಾರರಿಂದ ಒಟ್ಟು 27,62,525 ರೂಪಾಯಿ ಆಸ್ತಿ ತೆರಿಗೆ ಪಾವತಿ ಆಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಒಳಪಡುವ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ವಲಯ-2, ಬೊಮ್ಮನಹಳ್ಳಿ ವಲಯದಲ್ಲಿ ದಿನಾಂಕ: 27/02/2026 ರಂದು ಶುಕ್ರವಾರ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಈ ವಲಯ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ವಸತಿ/ವಸತಿಯೇತರ ವರ್ಗದ ಒಟ್ಟು 50 ಆಸ್ತಿಗಳನ್ನು ಪಟ್ಟಿ ಮಾಡಿ, ನಿಯಮಾನುಸಾರ ಹರಾಜು ಪ್ರಕ್ರಿಯೆ ನಡೆಸಲಾಗುವುದೆಂದು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿತ್ತು.

ಬೊಮ್ಮನಹಳ್ಳಿ ವ್ಯಾಪ್ತಿಯ ಒಟ್ಟು 50 ಆಸ್ತಿಗಳ ಬೇಬಾಕಿ (ದೀರ್ಘ ಅವಧಿಯ ಆಸ್ತಿ ತೆರಿಗೆ ಬಾಕಿ) ಮೊತ್ತ 1,08,43,444 ರೂಪಾಯಿ ಆಗಿದ್ದು, ಈ ಎಲ್ಲಾ 50 ಆಸ್ತಿಗಳಿಗೆ ಈಗಾಗಲೇ Proclamation order ಗಳನ್ನು ಜಾರಿ ಮಾಡಿದ್ದು, ದಿನಾಂಕ:27/02/2026 ರಂದು ಹರಾಜು ಪ್ರಕ್ರಿಯೆಗೆ ಒಳಪಡಿಸಲು ವ್ಯಾಪಕ ಪ್ರಚಾರ ನೀಡಿ ಹರಾಜು ಪ್ರಕ್ರಿಯೆಯನ್ನು ಕೈಗೊಳ್ಳಲಾಗಿದೆ. ಈ ಪೈಕಿ 14 ಬೇ-ಬಾಕಿ ಆಸ್ತಿದಾರರು ಹರಾಜು ಪ್ರಕ್ರಿಯೆಗೂ ಮುನ್ನವೇ ಚಲನ್ ಅಥವಾ ಆನೈನ್ ಮೂಲಕ ಪಾವತಿ ಮಾಡಿರುವುದಾಗಿ ಸಹಾಯಕ ಕಂದಾಯ ಅಧಿಕಾರಿಗಳು ವಿವರ ನೀಡಿದ್ದಾರೆ.
ಅದರಂತೆ 14 ಬೇ-ಬಾಕಿದಾರರಿಂದ ಒಟ್ಟಾರೆ 27,62,525 ರೂಪಾಯಿ ಮೊತ್ತದ ಕಂದಾಯವನ್ನು ಹರಾಜು ಪ್ರಕ್ರಿಯೆಗೂ ಮುನ್ನ ಪಾವತಿ ಮಾಡಿದ್ದು, ಅಂತಹ ಬೇಬಾಕಿದಾರರಿಗೆ ಹರಾಜು ಪ್ರಕ್ರಿಯೆಯಿಂದ ಅವರ 'ಆಸ್ತಿಗಳನ್ನು ಕೈಬಿಟ್ಟಿರುವ ಬಗ್ಗೆ ನಿಯಮಾನುಸಾರ ಹಿಂಬರಹ ಜಾರಿ ಮಾಡಲು ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತ ಕೆ.ಎನ್ ರಮೇಶ್ ಅವರು ಹೇಳಿದ್ದಾರೆ.
ಶುಕ್ರವಾರ ಮಧ್ಯಾಹ್ನ 1. 30 ಗಂಟೆಯವರೆಗೆ ಇನ್ನುಳಿದ 36 ಬೇ-ಬಾಕಿದಾರರು ಇಲ್ಲಿಯವರೆಗೂ ಪಾವತಿಸಿರುವುದಿಲ್ಲ ಮತ್ತು ಈ ಆಸ್ತಿಗಳ ಹರಾಜು ಕರೆಯಲಾಗಿದ್ದು, ಸ್ಥಳದಲ್ಲಿ ಹಾಜರಿದ್ದ ಕೆಲವು ಸಾರ್ವಜನಿಕರು ಠೇವಣಿ ಮೊತ್ತ ಪಾವತಿಸಿ ಬಿಡ್ ಮಾಡಲು ಸಿದ್ಧರಾಗಿರಲಿಲ್ಲ.
ಈ ಹರಾಜು ಪ್ರಕ್ರಿಯೆಯನ್ನು ಮುಂದುವರಿಸಲಾಗಿ ಬೇರೇ ಯಾವುದೇ ಸಾರ್ವಜನಿಕರು ಹರಾಜು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿ ಬಿಡ್ ಮಾಡಲು ಮುಂದೆ ಬಾರದುದರಿಂದ ಉಳಿದ 36 ಬೇ-ಬಾಕಿದಾರರ ಆಸ್ತಿಗಳನ್ನು ಮುಂದಿನ ದಿನಗಳಲ್ಲಿ ಮರು ಹರಾಜು ಪ್ರಕ್ರಿಯೆಗೆ ಒಳಪಡಿಸಲು ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ಆಯುಕ್ತರಾದ ಕೆ.ಎನ್ ರಮೇಶ್ ಅವರು ತಿಳಿಸಿದ್ದಾರೆ.












Click it and Unblock the Notifications