Rent: ಈ ನಿಯಮ ಪಾಲಿಸದಿದ್ರೆ ಬಾಡಿಗೆ ಮನೆ ಮಾಲೀಕರ ಮೇಲೆ ಕೇಸ್‌: ಬೆಂಗಳೂರು ಪೊಲೀಸರಿಂದ ಎಚ್ಚರಿಕೆ

ಬೆಂಗಳೂರು: ನಗರದ ಬಾಡಿಗೆ ಮನೆ ಮಾಲೀಕರಿಗೆ ಪೊಲೀಸರು ಮಹತ್ವದ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಪೂರ್ವಾಪರ ವಿಚಾರಿಸದೆ ಮನೆ ಬಾಡಿಗೆಗೆ ನೀಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಖಡಕ್‌ ಆಗಿ ತಿಳಿಸಿದ್ದಾರೆ. ಈಶಾನ್ಯ ವಿಭಾಗದ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿದೇಶಿ ಪ್ರಜೆಗಳು ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದರೂ, ಸಂಬಂಧಿತ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡದೆ ಕಾನೂನು ಉಲ್ಲಂಘಿಸಿರುವ ಹಲವು ಪ್ರಕರಣಗಳು ಪತ್ತೆಯಾಗಿವೆ.

ಈ ಹಿನ್ನೆಲೆ ನಗರದಲ್ಲಿ ವಿದೇಶಿ ಪ್ರಜೆಗಳಿಗೆ ಮನೆ ಬಾಡಿಗೆ ನೀಡುವ ಮನೆ ಮಾಲೀಕರಿಗೆ ಬೆಂಗಳೂರು ನಗರ ಪೊಲೀಸರು ಮಹತ್ವದ ಹಾಗೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ವಿದೇಶಿಗರ ಕಾಯ್ದೆ, 1946ರ ಸೆಕ್ಷನ್ 7, ವಿದೇಶಿಯರ ನೋಂದಣಿ ನಿಯಮಗಳು-1992ರ ನಿಯಮ 14(6) ಹಾಗೂ ವಿದೇಶಿಯರ ಆದೇಶ, 1948ರ ಫಾರಂ 16 (ಪೊಲೀಸ್ ವರದಿ) ನಿಯಮಗಳನ್ನು ಉಲ್ಲಂಘಿಸಿರುವ ಮನೆ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.

Rent House

ನಿಯಮ ಏನು ಹೇಳುತ್ತೆ?

ಈ ಕಾಯ್ದೆಗಳ ಪ್ರಕಾರ, ಯಾವುದೇ ವಿದೇಶಿ ಪ್ರಜೆ ವಾಸಕ್ಕೆ ಬರುವ ಸಂದರ್ಭದಲ್ಲೇ ಅವರ ವಿವರಗಳನ್ನು ಕಡ್ಡಾಯವಾಗಿ ಪೊಲೀಸ್ ಠಾಣೆಗೆ ತಿಳಿಸುವುದು ಕಾನೂನುಬದ್ಧ ಕರ್ತವ್ಯವಾಗಿದೆ. ಈ ಕುರಿತು ಕೊತ್ತನೂರು ಪೊಲೀಸ್ ಠಾಣೆ ಹಾಗೂ ಈಶಾನ್ಯ ವಿಭಾಗದ ಅಧಿಕಾರಿಗಳು ನಾಗರಿಕರಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. "ವಿದೇಶಿ ಪ್ರಜೆಗಳಿಗೆ ಮನೆಗಳನ್ನು ಬಾಡಿಗೆಗೆ ನೀಡುವ ಸಂದರ್ಭದಲ್ಲೇ ಅವರ ಪಾಸ್‌ಪೋರ್ಟ್ ವಿವರ, ವೀಸಾ ಮಾಹಿತಿ, ವಿಳಾಸ ಹಾಗೂ ವಾಸದ ವಿವರಗಳನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕಡ್ಡಾಯವಾಗಿ ಸಲ್ಲಿಸಬೇಕು. ಮಾಹಿತಿ ನೀಡದೇ ಇದ್ದಲ್ಲಿ, ಮನೆ ಮಾಲೀಕರೇ ಕಾನೂನು ಕ್ರಮಕ್ಕೆ ಒಳಗಾಗಬೇಕಾಗುತ್ತದೆ" ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ನಗರದ ಭದ್ರತೆ, ಕಾನೂನು ಸುವ್ಯವಸ್ಥೆ ಹಾಗೂ ವಿದೇಶಿಗರ ದಾಖಲೆ ನಿರ್ವಹಣೆಯ ದೃಷ್ಟಿಯಿಂದ ಈ ಕ್ರಮ ಅತ್ಯಂತ ಮಹತ್ವದ್ದಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಮುಂದಿನ ದಿನಗಳಲ್ಲಿ ಈ ನಿಯಮಗಳ ಪಾಲನೆ ಬಗ್ಗೆ ತೀವ್ರ ನಿಗಾ ವಹಿಸಲಾಗುವುದಲ್ಲದೆ, ಉಲ್ಲಂಘನೆ ಕಂಡುಬಂದಲ್ಲಿ ಯಾವುದೇ ರೀತಿಯ ಸಡಿಲಿಕೆ ಇಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಕೊತ್ತನೂರು ಠಾಣೆ ವ್ಯಾಪ್ತಿಯಲ್ಲಿ ನಡೆದ ಪರಿಶೀಲನೆಯ ವೇಳೆ, ವಿದೇಶಿ ಪ್ರಜೆಗಳು ವಾಸವಾಗಿರುವ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ನೀಡದೇ ಮನೆಗಳನ್ನು ಬಾಡಿಗೆಗೆ ನೀಡಿದ್ದ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸಂಬಂಧಿಸಿದ ಮನೆ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗಿದೆ. ಈ ಬೆಳವಣಿಗೆಯ ನಂತರ, ಇತರ ಮನೆ ಮಾಲೀಕರಿಗೂ ಮುನ್ನೆಚ್ಚರಿಕೆ ವಹಿಸಲು ಪೊಲೀಸ್ ಇಲಾಖೆ ಸೂಚನೆ ನೀಡಿದೆ.

ವಿದೇಶಿ ಪ್ರಜೆಗಳ ಮೇಲೆ ನಿಗಾ

ಪೊಲೀಸ್ ಅಧಿಕಾರಿಗಳ ಪ್ರಕಾರ, ನಗರದಲ್ಲಿ ಭದ್ರತೆ ಕಾಪಾಡುವ ದೃಷ್ಟಿಯಿಂದ ವಿದೇಶಿ ಪ್ರಜೆಗಳ ವಾಸದ ಬಗ್ಗೆ ಸ್ಪಷ್ಟ ದಾಖಲೆ ಇರಬೇಕು. ಪಾಸ್‌ಪೋರ್ಟ್ ವಿವರ, ವೀಸಾ ಸ್ಥಿತಿ, ವಾಸದ ಅವಧಿ, ಉದ್ಯೋಗ ಅಥವಾ ಅಧ್ಯಯನ ಸಂಬಂಧಿತ ವಿವರಗಳನ್ನು ಮನೆ ಮಾಲೀಕರು ಪೊಲೀಸ್ ಠಾಣೆಗೆ ನೀಡುವುದು ಕಾನೂನುಬದ್ಧ ಜವಾಬ್ದಾರಿ. ಇದು ಕೇವಲ ಕಾನೂನು ಪಾಲನೆಗಾಗಿ ಮಾತ್ರವಲ್ಲದೆ, ನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಭದ್ರತೆ ಕಾಯ್ದುಕೊಳ್ಳಲು ಸಹ ಅಗತ್ಯ ಎಂದು ಪೊಲೀಸರು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ವಿದೇಶಿ ಪ್ರಜೆಗಳ ವಾಸದ ಬಗ್ಗೆ ಪೊಲೀಸರು ತೀವ್ರ ನಿಗಾವಹಿಸಲಿದ್ದು, ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಈಶಾನ್ಯ ವಿಭಾಗದ ಡಿಸಿಪಿ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ, ವಿದೇಶಿ ಪ್ರಜೆಗಳಿಗೆ ಮನೆ ಬಾಡಿಗೆ ನೀಡುವ ಎಲ್ಲ ಮನೆ ಮಾಲೀಕರು ಕಾನೂನು ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸಿ, ಸಮಯಕ್ಕೆ ಸರಿಯಾಗಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಬೆಂಗಳೂರು ನಗರ ಪೊಲೀಸರು ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+