Bengaluru PG: ಬೆಂಗಳೂರಿನ ಅಕ್ರಮ 3,597 ಪಿಜಿಗಳಿಗೆ ಬೀಗ ಹಾಕಲು ಜಿಬಿಎಗೆ ಹೈಕೋರ್ಟ್ ಅನುಮತಿ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪರವಾನಗಿ ಇಲ್ಲದೆ ಅನಧಿಕೃತವಾಗಿ ತಲೆ ಎತ್ತಿರುವ ಪೇಯಿಂಗ್ ಗೆಸ್ಟ್ (ಪಿಜಿ) ವಸತಿ ಘಟಕಗಳ ವಿರುದ್ಧ ಕ್ರಮ ಕೈಗೊಳ್ಳಲು ಕರ್ನಾಟಕ ಹೈಕೋರ್ಟ್ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ಅನುಮತಿ ನೀಡಿದೆ. ನಿಯಮಗಳನ್ನು ಪಾಲಿಸದ ಅಕ್ರಮ ಪಿಜಿಗಳನ್ನು ಇತ್ತೀಚೆಗೆ ಜಿಬಿಎ ಗುರುತಿಸಿತ್ತು. ಇದೀಗ ಜಿಬಿಎಗೆ ನ್ಯಾಯಾಲಯ ಮಂಗಳವಾರ ಅನುಮತಿ ನೀಡಿದೆ.
ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠವು ಜಿಬಿಎಗೆ ನಿರ್ದೇಶನ ಕೊಟ್ಟಿದೆ. ಕೋರ್ಟ್ ಮತ್ತು ಜಿಬಿಎ ಕಟ್ಟೆಚ್ಚರ ಹೊರತಾಗಿಯು ನಗರದಲ್ಲಿ ಪಿಜಿ ಮಾಲೀಕರು ನಿಯಮ ಪಾಲಿಸದೇ ಉಲ್ಲಂಘಿಸಿದ್ದಾರೆ. ಇದು ವಿಚಾರಣೆ ವೇಳೆ ಬೆಳಕಿಗೆ ಬಂದ ಬೆನ್ನಲ್ಲೇ ಹೈಕೋರ್ಟ್ ಬೀಗ ಹಾಕುವಂತೆ ಸೂಚಿಸಿತು.

ಪ್ರಿನ್ಸೆಸ್ ಲೇಡೀಸ್ ಪಿಜಿ ಸೇರಿದಂತೆ ನಾಲ್ಕು ಪಿಜಿ ಘಟಕಗಳು ಜಿಬಿಎ ನೀಡಿದ್ದ ನೋಟಿಸ್‌ಗಳನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದವು. ಈ ಅರ್ಜಿಗಳ ವಿಚಾರಣೆ ವೇಳೆ ಜಿಬಿಎ ಪರ ವಕೀಲ ಬಿ.ಎಸ್. ಕಾರ್ತಿಕೇಯನ್ ಅವರು, ಹಲವು ಪಿಜಿ ಮಾಲೀಕರು ಉಲ್ಲಂಘನೆಗಳನ್ನು ಸರಿಪಡಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಪ್ರಾಧಿಕಾರದ ಸೂಚನೆ ಹೊರತಾಗಿಯು ಪಿಜಿಗಳು ನಿಯಮ ಪಾಲಿಸಿಲ್ಲ. ನ್ಯಾಯಾಲಯದ ಆದೇಶಗಳು ಮತ್ತು ಜಿಬಿಎ ಲಾಕ್ ಸೂಚನೆಯನ್ನು ಸಹ ಪಿಜಿಗಳು ಗಂಭೀರವಾಗಿ ಪರಿಗಣಿಸಿಲ್ಲ ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಉದ್ಯೋಗಕ್ಕಾಗಿ, ಇತರ ಕಾರಣಗಳಿಗೆ ಬರುವವರಿಗೆ ಪಿಜಿಗಳ ಅಗತ್ಯವಿರುತ್ತದೆ. ಆದರೆ ನಿಯಮ ಪಾಲಿಸಬೇಕಿರುತ್ತದೆ. ಸಾರ್ವಜನಿಕರಿಗೆ ವಸತಿ ಒದಗಿಸುವ ನೆಪದಲ್ಲಿ ನಿಯಮಗಳನ್ನು ಉಲ್ಲಂಘಿಸಲು ಸಾಧ್ಯವಿಲ್ಲ. ಬೆಂಗಳೂರಿಗೆ ಪಿಜಿ ಬೇಕು, ಆದರೆ ನಿಯಮ ಉಲ್ಲಂಘಿಸುವ ಪಿಜಿಗಳಲ್ಲಿ ಎಂದು ಪಿಜಿ ಮಾಲೀಕರಿಗೆ ನ್ಯಾಯಪೀಠ ಎಚ್ಚರಿಕೆ ಕೊಟ್ಟಿದೆ.
ಪಿಜಿಗಳಲ್ಲಿ ಸುರಕ್ಷತಾ ಲೋಪ ಸರಿಪಡಿಸಲು ಸೂಚನೆ
ಪಿಜಿಗಳಲ್ಲಿ ಸುರಕ್ಷತೆಗೆ ಸಂಬಂಧಿಸಿದ ಲೋಪಗಳನ್ನು ತಕ್ಷಣ ಸರಿಪಡಿಸುವಂತೆ ಹೈಕೋರ್ಟ್ ಸೂಚಿಸಿದೆ. ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ, ಅಗ್ನಿ ಸುರಕ್ಷತಾ ಉಪಕರಣಗಳು, ಸೂಕ್ತ ಭದ್ರತಾ ವ್ಯವಸ್ಥೆ ಹಾಗೂ ಗುಣಮಟ್ಟದ ಆಹಾರ ಮತ್ತು ಸುರಕ್ಷಿತ ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ ನೀಡುವಂತೆ ಪಿಜಿ ಮಾಲೀಕರಿಗೆ ತಿಳಿಸಿದೆ.
ಸೆಪ್ಟೆಂಬರ್ 10ರಂದು ನೀಡಿದ್ದ ಆದೇಶದಲ್ಲಿ ಪಿಜಿ ಘಟಕಗಳ ನಿರ್ವಹಣೆಗೆ ಸಂಬಂಧಿಸಿದಂತೆ ನ್ಯಾಯಾಲಯ ಸಮಗ್ರ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. ಪಿಜಿಗಳನ್ನು ಕಾನೂನುಬದ್ಧವಾಗಿ ಅನುಮತಿ ಪಡೆದ ಕಟ್ಟಡಗಳಲ್ಲೇ ನಡೆಸಬೇಕು. ಅಲ್ಲಿ ವಾಸಿಸುವವರ ಜೀವ, ಆರೋಗ್ಯ, ಸುರಕ್ಷತೆ ಮತ್ತು ಘನತೆಯನ್ನು ಕಾಪಾಡಬೇಕು ಎಂದು ಸೂಚಿಸಿತು.
ಜೊತೆಗೆ, ಪಿಜಿಗಳ ಕಾರ್ಯನಿರ್ವಹಣೆಯಿಂದ ಅಕ್ಕಪಕ್ಕದ ನಿವಾಸಿಗಳಿಗೆ ಅಥವಾ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿತ್ತು.
ಪರವಾನಗಿ ನೀಡಿದ ಬಳಿಕ ಅಧಿಕಾರಿಗಳ ಜವಾಬ್ದಾರಿ ಮುಗಿಯುವುದಿಲ್ಲ ಎಂದಿರುವ ನ್ಯಾಯಾಲಯ, ಪಿಜಿಗಳಲ್ಲಿ ನಿಯಮ ಪಾಲನೆಯಾಗುತ್ತಿದೆಯೇ ಎಂಬುದನ್ನು ನಿರಂತರವಾಗಿ ಪರಿಶೀಲಿಸಬೇಕು ಎಂದು ತಿಳಿಸಿದೆ. ಉಲ್ಲಂಘನೆಗಳನ್ನು ಗುರುತಿಸಿ, ಅಗತ್ಯ ಕ್ರಮ ಕೈಗೊಳ್ಳುವ ವ್ಯವಸ್ಥೆ ಇರಬೇಕು ಎಂದು ಸೂಚಿಸಿದೆ.
ಒಟ್ಟು 5,480 ಪಿಜಿ, 3,597 ಪಿಜಿಗಳಿಗೆ ಪರವಾನಗಿ ಇಲ್ಲ
ಜಿಬಿಎ ನಡೆಸಿದ ಇತ್ತೀಚಿನ ಪರಿಶೀಲನೆಯಲ್ಲಿ ಬೆಂಗಳೂರಿನ ಪಿಜಿ ವಸತಿ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳು ಬೆಳಕಿಗೆ ಬಂದಿವೆ. ನಗರದ 5,480 ಪಿಜಿಗಳ ಪೈಕಿ 3,597 ಪಿಜಿಗಳು ಅಗತ್ಯ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿವೆ. ಅಂದರೆ, ಪರಿಶೀಲನೆಗೆ ಒಳಪಟ್ಟ ಪಿಜಿಗಳಲ್ಲಿ ಶೇ 65ಕ್ಕೂ ಹೆಚ್ಚು ಘಟಕಗಳಿಗೆ ಪರವಾನಗಿ ಇಲ್ಲ.
ಪರವಾನಗಿ ಇಲ್ಲದ ಪಿಜಿಗಳ ಸಂಖ್ಯೆ ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅತಿ ಹೆಚ್ಚಾಗಿದೆ. ಇಲ್ಲಿ 2,103 ಪಿಜಿಗಳು ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿವೆ. ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ 621 ಇಂತಹ ಪಿಜಿಗಳನ್ನು ಗುರುತಿಸಲಾಗಿದೆ. ಸದ್ಯ ಬೆಂಗಳೂರಿನಲ್ಲಿ ಅನಧಿಕೃತ ಪಿಜಿಗಳ ತಪಾಸಣೆ ಮುಂದುವರಿದಿದೆ.


Click it and Unblock the Notifications
