ತಾರ್ಕಿಕ ಅಂತ್ಯ ಕಾಣಲಿದೆ ಪಾದಾಚಾರಿ ಒತ್ತುವರಿ ತೆರವು: 1 ತಿಂಗಳಲ್ಲಿ ಪಾಲಿಕೆಯಿಂದ 178 ಕಿಮೀ. ಅತಿಕ್ರಮಣ ಮುಕ್ತ
ಬೆಂಗಳೂರು; ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವತಿಯಿಂದ ಹಮ್ಮಿಕೊಂಡು ಪಾದಾಚಾರಿ ಒತ್ತುವರಿ ತೆರವು ಮಾರ್ಗದ ಅಭಿಯಾನವು ಒಂದು ಹಂತಕ್ಕೆ ತಾರ್ಕಿಕ ಅಂತ್ಯದತ್ತ ಸಾಗುತ್ತಿದೆ ಎನ್ನಬಹುದು. ಪರ ವಿರೋಧದ ನಡುವೆ ಈ ಅಭಿಯಾನವು ಯಶಸ್ವಿಯಾಗಿದೆ. ಪಾಲಿಕೆಗಳ ಅಧಿಕಾರಿಗಳ ಮೇಲಿನ ದಾಳಿ ಹೊರತಾಗಿಯೂ ಒಂದು ತಿಂಗಳಲ್ಲಿ ಬರೋಬ್ಬರಿ 178 ಕಿ.ಮೀ. ಪಾದಚಾರಿ ಮಾರ್ಗ ಅತಿಕ್ರಮಣ ಮುಕ್ತ ಮಾಡಿದೆ. ಈ ಅಭಿಯಾನ ಶುರುವಾದಾಗ ಕೆಲವು ದಿನ ತೆರವು ಮಾಡುತ್ತಾರೆ ಬಳಿಕ ಪಾಲಿಕ ಅಧಿಕಾರಿಗಳು ಸುಮ್ಮನಾಗುತ್ತಾರೆ ಎಂಬ ಮಾತು ಕೇಳಿ ಬಂದಿದ್ದವು. ಇದೀಗ ಫುಟ್‌ಪಾತ್ ಒತ್ತುವರಿ ಸಂಪೂರ್ಣ ತೆರವಿಗೆ ಮುಂದಾಗಿದ್ದು, ಶೀಘ್ರವೇ ಒತ್ತುವರಿ ಅಭಿಯಾನ ತಾರ್ಕಿಕ ಅಂತ್ಯ ಕಾಣಲಿದೆ.
ನಗರ ಸಂಚಾರ ಸುಗಮಗೊಳಿಸಲು, ಅಲಲ್ಲಿ ಉಂಟಾಗುವ ದಟ್ಟಣೆ, ಪಾದಾಚಾರಿಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡರ ನಿರ್ದೇಶನ್ವಯ ಫುಟ್‌ಪಾತ್ ಒತ್ತುವರಿ ತೆರವು ಜುಲೈ 1ರಿಂದ ಆರಂಭವಾಗಿ ಇಂದಿಗೂ ಮುಂದುವರಿದಿದೆ. ಅಲ್ಲಿಂದ ಇಲ್ಲಿಯವರೆಗೆ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 178.55 ಕಿ.ಮೀ ಒತ್ತುವರಿ ತೆರವುಗೊಳಿಸಲಾಗಿದೆ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಪಾಲಿಕೆಯ ಈ ಅಭಿಯಾನದಿಂದ ಪಾದಚಾರಿಗಳಿಗೆ ಸುರಕ್ಷಿತ, ಸುಗಮ ಹಾಗೂ ಅಡೆತಡೆಯಿಲ್ಲದ ಸಂಚಾರ ವ್ಯವಸ್ಥೆ ಲಭ್ಯವಾಗಿದೆ. ಸೋಮವಾರ (ಆಗಸ್ಟ್ 3) ರಂದು ಯಲಹಂಕ ವಿಭಾಗ ಮಾತೃ ಲೇಔಟ್ ಮುಖ್ಯರಸ್ತೆ (0.50 ಕಿ.ಮೀ), ದಾಸರಹಳ್ಳಿ ವಿಭಾಗದ ಸಿಡೇದಹಳ್ಳಿ ಮುಖ್ಯ ರಸ್ತೆಯಲ್ಲಿ (1.50 ಕಿ.ಮೀ೦) ಒತ್ತುವರಿ ತೆರವು ಮಾಡಲಾಗಿದೆ.
ಒಂದೇ ದಿನ ಏನೆಲ್ಲ ತೆರವು
ನೆನ್ನೆ ಸೋಮವಾರ ಒಂದೇ ದಿನ 2.00 ಕಿ.ಮೀ. ಪಾದಚಾರಿ ಮಾರ್ಗ ಅತಿಕ್ರಮಣ ಮುಕ್ತಗೊಳಿಸಲಾಗಿದೆ. 1 ತಳ್ಳುವ ಗಾಡಿ, 12 ಶೀಟ್‌ಗಳು/ಕ್ಯಾನೋಪಿಗಳು, 24 ಮೆಟ್ಟಿಲುಗಳು/ರ್ಯಾಂಪ್‌ಗಳು ಹಾಗೂ 9 ಜಾಹೀರಾತು ಕಂಬಗಳು/ನಾಮಫಲಕಗಳು ತೆರವು ಜೊತೆಗೆ 44 ಟನ್ ನಿರ್ಮಾಣ ತ್ಯಾಜ್ಯ/ಮಣ್ಣು ತೆರವು ಮಾಡಲಾಗಿದೆ ಎಂದರು.
ಇದಕ್ಕಾಗಿ ತಲಾ 2 ಜೆಸಿಬಿಗಳು, 2 ಟ್ರ್ಯಾಕ್ಟರ್‌ಗಳು, 2 ಟಿಪ್ಪರ್‌ಗಳು, 2 ಇತರೆ ಯಂತ್ರಗಳು, 22 ಸಿಬ್ಬಂದಿ ಸಹಕಾರದಲ್ಲಿ ತೆರವು ಮಾಡಲಾಗಿದೆ. ಜುಲೈ 1ರಿಂದ ಆಗಸ್ಟ್ 3ರವರೆಗೆ ಕೈಗೊಂಡ ಕಾರ್ಯಾಚರಣೆಯಲ್ಲಿ ಒಟ್ಟು 178ಕ್ಕೂ ಅಧಿಕ ಕಿಲೋಮೀಟರ್ ಉದ್ದದ ಪಾದಚಾರಿ ಮಾರ್ಗಗಳನ್ನು ಅತಿಕ್ರಮಣ ಮುಕ್ತಗೊಳಿಸಲಾಗಿದೆ ಎಂದು ಪುನರುಚ್ಚರಿಸಿದರು.
ತಿಂಗಳ ಕಾರ್ಯಾಚರಣೆಯ ಪ್ರಮುಖಾಂಶಗಳು
* 178.55 ಕಿ.ಮೀ. ಪಾದಚಾರಿ ಮಾರ್ಗ ಅತಿಕ್ರಮಣ ಮುಕ್ತ
* 415 ಅಂಗಡಿಗಳು/ಪೆಟ್ಟಿ ಅಂಗಡಿಗಳು ತೆರವು
* 609 ತಳ್ಳುವ ಗಾಡಿಗಳು ತೆರವು
* 1,401 ಎಸಿ ಶೀಟ್‌ಗಳು/ಕ್ಯಾನೋಪಿಗಳು ತೆರವು
* 1,294 ಮೆಟ್ಟಿಲುಗಳು ಹಾಗೂ ರ್ಯಾಂಪ್‌ಗಳು ತೆರವು
* 1,378 ಜಾಹೀರಾತು ಕಂಬಗಳು ಹಾಗೂ ನಾಮಫಲಕಗಳು ತೆರವು
* 45 ತಾತ್ಕಾಲಿಕ/ಶಾಶ್ವತ ಶೆಡ್‌ಗಳು ತೆರವು
* 1,552.20 ಟನ್ ನಿರ್ಮಾಣ ತ್ಯಾಜ್ಯ ಹಾಗೂ ಮಣ್ಣು ತೆರವು
* 8 ಕಿ.ಮೀ. ಪಾದಚಾರಿ ಮಾರ್ಗ ದುರಸ್ತಿ
ಪಾದಚಾರಿ ಮಾರ್ಗಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವುದು, ಅತಿಕ್ರಮಣಗಳನ್ನು ಪರಿಣಾಮಕಾರಿಯಾಗಿ ತೆರವುಗೊಳಿಸುವುದು ಹಾಗೂ ನಗರದಲ್ಲಿ ಸುರಕ್ಷಿತ ಮತ್ತು ಸುಗಮ ಪಾದಚಾರಿ ಸಂಚಾರಕ್ಕೆ ಅಗತ್ಯ ಮೂಲಸೌಕರ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ಉತ್ತರ ನಗರ ಪಾಲಿಕೆಯು ಇಂತಹ ವಿಶೇಷ ಕಾರ್ಯಾಚರಣೆಗಳನ್ನು ಮುಂದುವರಿಸಲಾಗುವುದು ಎಂದು ಪಾಲಿಕೆ ಮಾಹಿತಿ ನೀಡಿದೆ.
ದಕ್ಷಿಣ ನಗರ ಪಾಲಿಕೆ
ಇನ್ನೂ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಮುಖ್ಯ ಆಯುಕ್ತರ ಸೂಚನೆ ಮೇರೆಗೆ ಕಳೆದ ಒಂದು ತಿಂಗಳಲ್ಲಿ 116.76 ಕಿ.ಮೀ. ಪಾದಚಾರಿ ಮಾರ್ಗ ಒತ್ತುವರಿ ತೆರವು ಮಾಡಲಾಗಿದೆ ಎಂದು ಪಾಲಿಕೆ ತಿಳಿಸಿದೆ.


Click it and Unblock the Notifications
