ಬೆಂಗಳೂರಿ 5 ಪಾಲಿಕೆಗಳ ವ್ಯಾಪ್ತಿಯಲ್ಲಿ ಬಯಸಿದಂತೆ ಬಯಲು ಯೋಜನೆ, ಏನಿದು ಹೊಸ ಯೋಜನೆ
ಬೆಂಗಳೂರು: ಬೆಂಗಳೂರಿನ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ಬಯಸಿದಂತೆ ಬಯಲು ಯೋಜನೆ ಜಾರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮುಂದಾಗಿದೆ. ಏನಿದು ಹೊಸ ಯೋಜನೆ ಹಾಗೂ ಈ ಯೋಜನೆಯಿಂದ ಸಾರ್ವಜನಿಕರಿಗೆ ಹೇಗೆ ಅನುಕೂಲವಾಗಲಿದೆ ಎನ್ನುವ ವಿವರ ಇಲ್ಲಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಹಿಂದಿನ ಬಿಬಿಎಂಪಿ)ವು ಸೆನ್ಸಿಂಗ್ ಲೋಕಲ್ ಹಾಗೂ ಇನ್‌ಸ್ಟಿಟ್ಯೂಟ್ ಆಫ್ ಅರ್ಬನ್ ಡಿಸೈನರ್ಸ್ ಇಂಡಿಯಾ - ಕರ್ನಾಟಕ ಅಧ್ಯಾಯ ಅವರ ಸಹಯೋಗದಲ್ಲಿ 2025ರ ಮೇ ತಿಂಗಳಲ್ಲಿ "ಬಯಸಿದಂತೆ ಬಯಲು" ಎಂಬ ಯೋಜನೆಯಡಿ "ಬೆಂಗಳೂರು ನಗರದ ಸಾರ್ವಜನಿಕ ಸ್ಥಳಗಳ ಪುನರುಜ್ಜೀವನ" ಎಂಬ ವಿಶಿಷ್ಟ ನಗರಮಟ್ಟದ ಉಪಕ್ರಮವನ್ನು ಆರಂಭಿಸಿತ್ತು.

ಬಯಸಿದಂತೆ ಬಯಲು ಯೋಜನೆಯ ಉದ್ದೇಶವು, ಬೆಂಗಳೂರಿನ ರಸ್ತೆ ಹಾಗೂ ಬೀದಿಗಳ ಮೂಲಸೌಕರ್ಯವನ್ನು ಕೇವಲ ವಾಹನ ಸಂಚಾರದ ಮಾರ್ಗಗಳಾಗಿ ಮಾತ್ರವಲ್ಲದೆ, ವಿವಿಧ ಸಮುದಾಯಗಳ ಅಗತ್ಯಗಳನ್ನು ಪೂರೈಸುವಂತೆ ಎಲ್ಲರನ್ನೂ ಒಳಗೊಂಡ, ಜನಕೇಂದ್ರಿತ ಸಾರ್ವಜನಿಕ ಸ್ಥಳಗಳಾಗಿ ಮರುಕಲ್ಪನೆ ಮಾಡುವುದಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಯೋಜನೆಯಿಂದಾಗಿ ತಮ್ಮ ನೆರೆಹೊರೆಯಲ್ಲಿರುವ ಕಡಿಮೆ ಬಳಕೆಯಾಗುತ್ತಿರುವ ಅಥವಾ ಬಳಕೆಯಲ್ಲಿಲ್ಲದ ಸಾರ್ವಜನಿಕ ಸ್ಥಳಗಳನ್ನು ಗುರುತಿಸಲು ನಾಗರಿಕರಿಗೆ ಸಾರ್ವಜನಿಕ ಆಹ್ವಾನ ನೀಡಲಾಗಿತ್ತು. ಇದಕ್ಕೆ ನಗರದೆಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ನಗರ ವಿನ್ಯಾಸಕಾರರು, ವಾಸ್ತುಶಿಲ್ಪಿಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳು 250ಕ್ಕೂ ಅಧಿಕ ಸ್ಥಳಗಳನ್ನು ಗುರುತಿಸಿದ್ದಾರೆ. ಪ್ರಾಥಮಿಕ ಪರಿಶೀಲನೆಯ ನಂತರ, 194 ಸ್ಥಳಗಳನ್ನು ಕಾರ್ಯಗತಗೊಳಿ
ಸಬಹುದಾದ ಸ್ಥಳಗಳೆಂದು ಗುರುತಿಸಿ, ನಗರಮಟ್ಟದ ಸಾರ್ವಜನಿಕ ಸಂಗ್ರಹದಲ್ಲಿ ಸೇರಿಸಲಾಗಿದೆ. 5 ನಗರ ಪಾಲಿಕೆಗಳ ಮೂಲಕ ಹಂತ ಹಂತವಾಗಿ ಜಾರಿಗೊಳಿಸುವ ಯೋಜನೆಗಳ ಸರಣಿಯನ್ನು ರೂಪಿಸಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ತಿಳಿಸಿದೆ.
ಗುರುತಿಸಲಾದ ಸ್ಥಳಗಳ ವಿತರಣೆಯ ವಿವರ ಹೀಗಿದೆ
1. ಬೆಂಗಳೂರು ಕೇಂದ್ರ - 43 ಸ್ಥಳಗಳು
2. ಬೆಂಗಳೂರು ಉತ್ತರ - 49 ಸ್ಥಳಗಳು
3. ಬೆಂಗಳೂರು ಪೂರ್ವ - 21 ಸ್ಥಳಗಳು
4. ಬೆಂಗಳೂರು ಪಶ್ಚಿಮ - 31 ಸ್ಥಳಗಳು
5. ಬೆಂಗಳೂರು ದಕ್ಷಿಣ - 50 ಸ್ಥಳಗಳು
ಈವರೆಗೆ ರಾಷ್ಟ್ರೀಯ ಸ್ವಚ್ಛ ವಾಯು ಕಾರ್ಯಕ್ರಮ (NCAP) ಅಡಿಯಲ್ಲಿ 25 ಸ್ಥಳಗಳಿಗೆ ಹಣಕಾಸು ಅನುಮೋದನೆ ನೀಡಲಾಗಿದೆ. ನೆರೆಹೊರೆಯ ಸಾರ್ವಜನಿಕ ಸ್ಥಳಗಳ ಸುಧಾರಣೆಗೆ ನಾಗರಿಕರ ಹೆಚ್ಚಿನ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಜೊತೆಗೆ, ಈ ಉಪಕ್ರಮವನ್ನು ಮತ್ತಷ್ಟು ವಿಸ್ತರಿಸುವ ಬದ್ಧತೆಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹೊಂದಿದೆ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ನಗರ ಪಾಲಿಕೆಗಳು, ಹಣಕಾಸು ಒದಗಿಸುವ ಸಂಸ್ಥೆಗಳು, ಸಿ.ಎಸ್.ಆರ್ ಪಾಲುದಾರರು, ಸಂಸ್ಥೆಗಳು ಹಾಗೂ ಸಾರ್ವಜನಿಕರನ್ನು ಒಂದೇ ಸಹಕಾರ ವೇದಿಕೆಗೆ ಒಗ್ಗೂಡಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ನಾಗರಿಕರಿಗೆ ಮುಕ್ತ ಅವಕಾಶ (ಓಪನ್ ಹೌಸ್) ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಓಪನ್ ಹೌಸ್‌ನಲ್ಲಿ ಹೂಡಿಕೆಗೆ ಸಿದ್ಧವಾಗಿರುವ ಸಾರ್ವಜನಿಕ ಸ್ಥಳಗಳ ಯೋಜನೆಗಳನ್ನು ಪ್ರದರ್ಶಿಸಲಾಗುತ್ತಿದೆ. 2026ರ ಅನುದಾನದಲ್ಲಿ 5 ನಗರ ಪಾಲಿಕೆಗಳು ಹೆಚ್ಚಿನ ಪರಿಣಾಮ ಬೀರುವ ಆಯ್ದ ಯೋಜನೆಗಳನ್ನು ಅಳವಡಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದರ ಜೊತೆಗೆ, ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಹೊರಗಿನ ಸಹಭಾಗಿತ್ವಗಳನ್ನು ಆಹ್ವಾನಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಕ್ರಮದ ವಿವರ
ದಿನಾಂಕ: 6 ಮತ್ತು 7 ಫೆಬ್ರವರಿ 2026
ಸಮಯ: ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 2.00ರವರೆಗೆ
ಸ್ಥಳ: ಸರ್. ಪುಟ್ಟಣ್ಣ ಚೆಟ್ಟಿ ಪುರಭವನ (ಟೌನ್ ಹಾಲ್), ಬೆಂಗಳೂರು












Click it and Unblock the Notifications