ಪೊಲೀಸ್ ಭದ್ರತೆಯಲ್ಲಿ ನಾಳೆಯಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್ ಸಂಗ್ರಹ; ಮಾಹಿತಿ ಇಲ್ಲಿದೆ
ಈ ಹಿಂದೆ ಟೋಲ್ ಸಂಗ್ರಹಕ್ಕೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಬಾರಿ ಮುನ್ನೆಚ್ಚರಿಕೆ ತೆಗೆದುಕೊಂಡಿದೆ.
ಬೆಂಗಳೂರು, ಮಾರ್ಚ್ 13: ಭಾನುವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿರುವ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರಯಾಣಿಸುವ ವಾಹನಗಳಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮಾರ್ಚ್ 14 ರಿಂದ ಟೋಲ್ ಶುಲ್ಕವನ್ನು ಸಂಗ್ರಹಿಸಲು ಪ್ರಾರಂಭಿಸುವ ಸಾಧ್ಯತೆಯಿದೆ.
ಈ ಹಿಂದೆ ಟೋಲ್ ಸಂಗ್ರಹಕ್ಕೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಬಾರಿ ಮುನ್ನೆಚ್ಚರಿಕೆ ತೆಗೆದುಕೊಂಡಿದೆ. ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ಹೆದ್ದಾರಿ ಟೋಲ್ ಸಂಗ್ರಹಕ್ಕೆ ಅಗತ್ಯವಾದ ಸಿಬ್ಬಂದಿಯನ್ನು ಈಗಾಗಲೇ ಟೋಲ್ ಪ್ಲಾಜಾ ಬಳಿ ನಿಯೋಜಿಸಿದೆ. ಆದರೆ, ಹಲವು ಸಂಘಟನೆಗಳು ಪ್ರತಿಭಟನೆ ನಡೆಸಲು ಸಿದ್ಧತೆ ಮಾಡಿಕೊಂಡಿರುವ ಕಾರಣ ಪೊಲೀಸ್ ಭದ್ರತೆ ಕೋರಿ ಜಿಲ್ಲಾಡಳಿತಕ್ಕೆ ಮನವಿಯನ್ನೂ ಸಲ್ಲಿಸಿದೆ.

ಎಕ್ಸ್‌ಪ್ರೆಸ್‌ವೇಯಲ್ಲಿ ಟೋಲ್ ಸಂಗ್ರಹ ವಿಚಾರದಲ್ಲಿ ಹಲವು ಗೊಂದಲವಿದ್ದು, ಕಾಂಗ್ರೆಸ್, ಸಮಾನ ಮನಸ್ಕ ವಕೀಲರು, ರೈತ ಸಂಘ, ಆಮ್ ಆದ್ಮಿ ಪಾರ್ಟಿ ಸೇರಿದಂತೆ ವಿವಿಧ ಸಂಘಟನೆಗಳಿಂದ ಮಂಗಳವಾರ (ಮಾರ್ಚ್ 14) ಪ್ರತಿಭಟನೆ ಮತ್ತು ಮುತ್ತಿಗೆ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. ಹಾಗಾಗಿ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಭಾರೀ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದೆ. ಈ ಟೋಲ್ ಸಂಗ್ರಹ ಆರಂಭವು ಮತ್ತೊಂದು ಸುತ್ತಿನ ಪ್ರತಿಭಟನೆಗೆ ಸಾಕ್ಷಿಯಾಗಲಿದೆ.
ಎನ್‌ಎಚ್‌ಎಐ ಈ ಹಿಂದೆ ಘೋಷಿಸಿದ್ದ ಹಾಗೆಯೇ ನಾಳೆಯಿಂದ ಎಕ್ಸ್‌ಪ್ರೆಸ್‌ವೇಯಲ್ಲಿ ಟೋಲ್ ತೆರಿಗೆ ಸಂಗ್ರಹಿಸಲು ಪ್ರಾರಂಭಿಸಲಿದೆ. ಆದರೆ, ಟೋಲ್ ಸಂಗ್ರಹಿಸಲು ಕೇಂದ್ರದಿಂದ ಇನ್ನು, ಯಾವುದೇ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ನಾಳೆಯಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಟೋಲ್ ಸಂಗ್ರಹಿಸಲಾಗುವುದು ಎಂದು ನಾವು ಈ ಮೊದಲೇ ಘೋಷಿಸಿದ್ದೆವು. ಆದರೆ ಕೇಂದ್ರದಿಂದ ಯಾವುದೇ ಸ್ಪಷ್ಟೀಕರಣ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟೋಲ್ ಸಂಗ್ರಹಕ್ಕೆ ಆಮ್ ಆದ್ಮಿ ಪಾರ್ಟಿ ಆಕ್ಷೇಪ ವ್ಯಕ್ತಪಡಿಸಿದೆ. ಡಬಲ್ ಇಂಜಿನ್ ಬಿಜೆಪಿ ಸರ್ಕಾರ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯನ್ನು ತನ್ನ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿವೆ. ಹಾಗಾದರೆ ಶುಲ್ಕ ಸಂಗ್ರಹಿಸುತ್ತಿರುವ ಟೋಲ್ ರದ್ದಿಪಡಿಸಿ ಪೂರ್ತಿ ಹಣ ತಾನೇ ಭರಿಸಲಿ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಗೆ ದುಬಾರಿ ಟೋಲ್ ನಿಗದಿಪಡಿಸುವುದಾದರೆ, ಹೆದ್ದಾರಿ ನಿರ್ಮಾಣಕ್ಕೆ ಸರ್ಕಾರ ಹೊಗಳಿಕೊಳ್ಳುವುದು ಎಷ್ಟು ಸರಿ..? ಎಂದು ಕಿಡಿಕಾರಿದೆ.

*ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಶುಲ್ಕ ಎಷ್ಟು..?*
* ಎನ್‌ಎಚ್‌ಎಐ ಲಘು ಮೋಟಾರು ವಾಹನಗಳಿಗೆ 55 ಕಿಲೋಮೀಟರ್ ವ್ಯಾಪ್ತಿಯ ಟೋಲ್ ಶುಲ್ಕವಾಗಿ 155 ರೂಗಳನ್ನು ನಿಗದಿಪಡಿಸಿದೆ.
*ಕಾರುಗಳಲ್ಲಿ ಪ್ರಯಾಣಿಸುವವರು ಎಕ್ಸ್‌ಪ್ರೆಸ್‌ವೇಯಲ್ಲಿ 300 ಕಿಲೋಮೀಟರ್‌ಗಳ ರೌಂಡ್ ಟ್ರಿಪ್‌ಗೆ ಒಟ್ಟು 300 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
*ಎನ್‌ಎಚ್‌ಎಐ ಬೆಂಗಳೂರು-ನಿಡಘಟ್ಟ ಮಾರ್ಗಕ್ಕೆ ಟೋಲ್ ಶುಲ್ಕವನ್ನು ಅಂತಿಮಗೊಳಿಸಿದೆ
* ಕಾರುಗಳು ಮತ್ತು ಲಘು ವಾಹನಗಳಿಗೆ ಏಕಮುಖವಾಗಿ ಪ್ರಯಾಣಿಸಲು ಶುಲ್ಕ 135 ರೂಪಾಯಿ
* ಬಸ್‌ಗಳಿಗೆ 460 ರೂಪಾಯಿ ಮತ್ತು ಭಾರೀ ವಾಹನಗಳು 750 ರಿಂದ 900 ರೂಪಾಯಿ ಪಾವತಿಸಬೇಕಾಗುತ್ತದೆ.
ಎನ್‌ಎಚ್‌ಎಐ ಟೋಲ್‌ನಿಂದ ದಿನಕ್ಕೆ 5 ಕೋಟಿ ಗಳಿಸುವ ನಿರೀಕ್ಷೆಯಿದೆ. ಅಂದರೆ ಅದು ವರ್ಷಕ್ಕೆ 2,444 ಕೋಟಿ ಗಳಿಸುತ್ತದೆ. 10 ವರ್ಷಗಳ ಕಾಲ ಟೋಲ್ ಸಂಗ್ರಹಿಸಲು ಗುತ್ತಿಗೆ ನೀಡಲಾಗಿದೆ.. 10 ವರ್ಷದಲ್ಲಿ 20,444 ಕೋಟಿ ಟೋಲ್ ಸಂಗ್ರಹವಾಗಲಿದೆ. ಈ ಹೆದ್ದಾರಿ ನಿರ್ಮಾಣಕ್ಕೆ 8,408 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಹಿಂದೆ ಹೇಳಿದ್ದರು.
119 ಕಿಮೀ ಉದ್ದದ ಹೆದ್ದಾರಿಯು ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣವನ್ನು 75 ನಿಮಿಷಗಳವರೆಗೆ ಕಡಿಮೆ ಮಾಡುತ್ತದೆ. ಇದು ಎರಡು ಹಂತಗಳನ್ನು ಹೊಂದಿದೆ. ಮೊದಲ ಹಂತವು ಬೆಂಗಳೂರು ಮತ್ತು ನಿಡಗಟ್ಟ ನಡುವಿನ 58 ಕಿ.ಮೀ. ಎರಡನೇ ಮಾರ್ಗವು ನಿಡಗಟ್ಟಾ ಮತ್ತು ಮೈಸೂರು ನಡುವಿನ 61 ಕಿಮೀ ಉದ್ದದ ಹೆದ್ದಾರಿಯಾಗಿದೆ.
ಸಂಪೂರ್ಣ ವಿಸ್ತರಣೆಯು 19 ದೊಡ್ಡ ಸೇತುವೆಗಳು, 44 ಸಣ್ಣ ಸೇತುವೆಗಳು, 50 ಅಂಡರ್‌ಪಾಸ್‌ಗಳು ಮತ್ತು ನಾಲ್ಕು ರೈಲ್ವೆ ಮೇಲ್ಸೇತುವೆಗಳನ್ನು ಹೊಂದಿದೆ. ಮೇ 2019 ರಲ್ಲಿ ಪ್ರಾರಂಭವಾದ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 12 ರಂದು ಉದ್ಘಾಟಿಸಿದರು.












Click it and Unblock the Notifications