ಬೆಂಗಳೂರು-ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು ಸೇವೆ: ದಿನಾಂಕ, ಸಮಯಗಳ ವಿವರ
Bengaluru-Mumbai Vande Bharat: ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಸಿಹಿ ಸುದ್ದಿಯನ್ನು ನೀಡುತ್ತಲಿರುತ್ತದೆ. ಹಾಗೆಯೇ ಇದೀಗ ಬಹುನಿರೀಕ್ಷಿತ ಬೆಂಗಳೂರು-ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಯಾವಾಗಿನಿಂದ ಆರಂಭವಾಗಲಿದೆ ಎನ್ನುವ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಇಲ್ಲಿದೆ ನೋಡಿ ಈ ಕುರಿತ ಸಂಪೂರ್ಣ ಮಾಹಿತಿ.
ಬೆಂಗಳೂರು ಮತ್ತು ಮುಂಬೈ ನಡುವೆ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲಿಗೆ ನವೆಂಬರ್ 1ರಂದು ಅಂದರೆ ಕನ್ನಡ ರಾಜ್ಯೋತ್ಸವ ದಿನದಂದು ಅಧಿಕೃತವಾಗಿ ಚಾಲನೆ ಸಿಗಲಿದೆ ಎಂದು ರೈಲ್ವೆ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ. ಇದು ದಕ್ಷಿಣ ಭಾರತದ ಮೊದಲ ರಾತ್ರಿ ವೇಳೆಯ ಪ್ರೀಮಿಯಂ ವಂದೇ ಭಾರತ್ ಸ್ಲೀಪರ್ ರೈಲು ಸೇವೆಯಾಗಿದ್ದು, ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಬೆಂಗಳೂರು ಹಾಗೂ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ (CSMT) ಮುಂಬೈ ನಡುವೆ ಸಂಚಾರ ನಡೆಸಲಿದೆ.

ಈ ರೈಲಿನ ಖಾಯಂ ಸಂಚಾರವು ನವೆಂಬರ್ 2ರಿಂದ ಆರಂಭವಾಗುವ ನಿರೀಕ್ಷೆಯಿದ್ದು, ವಾರದಲ್ಲಿ 6 ದಿನ ಕಾರ್ಯಾಚರಣೆ ನಡೆಸಲಿದೆ. ಈ ಕುರಿತು ರೈಲ್ವೇ ಇಲಾಖೆಯಿಂದ ಅಧಿಕೃತ ಅಧಿಸೂಚನೆ ಹೊರಬೀಳಬೇಕಿದೆ. ಹಾಗಾದ್ರೆ ತಾತ್ಕಾಲಿಕಾ ವೇಳಾಪಟ್ಟಿ ಹಾಗೂ ಸಮಯದ ವಿವರ ಇಲ್ಲಿದೆ.
ತಾತ್ಕಾಲಿಕ ವೇಳಾಪಟ್ಟಿ ಮತ್ತು ಪ್ರಯಾಣದ ಸಮಯ
* ಬೆಂಗಳೂರು - ಮುಂಬೈ: ಬೆಂಗಳೂರಿನ SMVTಯಿಂದ ರಾತ್ರಿ 7:50ಕ್ಕೆ ಹೊರಟು, ಮರುದಿನ ಬೆಳಿಗ್ಗೆ 11:55ಕ್ಕೆ ಮುಂಬೈನ CSMT ತಲುಪಲಿದೆ. (ಪ್ರಯಾಣದ ಸಮಯ: 16 ಗಂಟೆ 05 ನಿಮಿಷ).
* ಮುಂಬೈ - ಬೆಂಗಳೂರು: ಮುಂಬೈನ CSMTಯಿಂದ ರಾತ್ರಿ 8:10ಕ್ಕೆ ಹೊರಟು, ಮರುದಿನ ಬೆಳಿಗ್ಗೆ 11:55ಕ್ಕೆ SMVT ಬೆಂಗಳೂರು ತಲುಪಲಿದೆ. (ಪ್ರಯಾಣದ ಸಮಯ: 15 ಗಂಟೆ 45 ನಿಮಿಷ).
ಸಂಚಾರ ಮಾರ್ಗ ಮತ್ತು ನಿಲುಗಡೆಗಳು
ಈ ವಂದೇ ಭಾರತ್ ರೈಲು ಗುಂತಕಲ್ ಮಾರ್ಗವಾಗಿ ಸಂಚರಿಸಲಿದ್ದು, ಪ್ರಮುಖವಾಗಿ ಅನಂತಪುರ, ಗುಂತಕಲ್, ರಾಯಚೂರು, ಕಲಬುರಗಿ, ಸೊಲ್ಲಾಪುರ, ಪುಣೆ ಮತ್ತು ಕಲ್ಯಾಣ್ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಹೊಂದುವ ನಿರೀಕ್ಷೆಯಿದೆ.
ಪ್ರಯಾಣಿಕರ ನಿರೀಕ್ಷೆ ಏನು?
ಇಂಡಿಯಾದ ಎರಡು ಪ್ರಮುಖ ಐಟಿ ಹಾಗೂ ಆರ್ಥಿಕ ನಗರಗಳ ನಡುವೆ ಪ್ರಸ್ತುತ ಇರುವ ರೈಲುಗಳು ಪ್ರಯಾಣಿಸಲು 22ರಿಂದ 24 ಗಂಟೆಗಳನ್ನು ತೆಗೆದುಕೊಳ್ಳುತ್ತಿವೆ. ಆದರೆ ಈ ಹೊಸ ಸೂಪರ್‌ಫಾಸ್ಟ್ ವಂದೇ ಭಾರತ್ ಸ್ಲೀಪರ್ ಸೇವೆಯಿಂದ ಪ್ರಯಾಣದ ಸಮಯ ಗಣನೀಯವಾಗಿ ಕಡಿಮೆ ಆಗಲಿದೆ.
ಈ ಮಾರ್ಗದಲ್ಲಿ BEML ತಯಾರಿಸಿದ ಎರಡು 16-ಬೋಗಿಗಳ ಕೋಚ್ ಸೆಟ್‌ಗಳನ್ನು ಬಳಸಲಾಗುತ್ತಿದ್ದು, ಇತ್ತೀಚೆಗಷ್ಟೇ ಮುಂಬೈ-ಪುಣೆ ಘಾಟ್ ವಿಭಾಗದಲ್ಲಿ ಇದರ ಯಶಸ್ವಿ ಟ್ರಯಲ್ ರನ್ (ಪ್ರಾಯೋಗಿಕ ಸಂಚಾರ) ನಡೆಸಲಾಗಿತ್ತು. ಇನ್ನು ಈ ರೈಲನ್ನು ನಗರದ ಮುಖ್ಯ ನಿಲ್ದಾಣವಾದ ಕೆಎಸ್‌ಆರ್ (KSR) ಬೆಂಗಳೂರು (ಮೆಜೆಸ್ಟಿಕ್) ನಿಲ್ದಾಣದಿಂದಲೇ ಆರಂಭಿಸಬೇಕು ಎಂಬುದು ಪ್ರಯಾಣಿಕರ ಒತ್ತಾಯವಾಗಿದೆ.
ವಂದೇ ಭಾರತ್ ಸ್ಲೀಪರ್ ರೈಲಿನ ಪ್ರಮುಖ ವಿಶೇಷತೆಗಳು
* ಭಾರತೀಯ ರೈಲ್ವೆಯ ಅತ್ಯಾಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ವಂದೇ ಭಾರತ್ ಸ್ಲೀಪರ್ ರೈಲನ್ನು ತಯಾರಿಸಲಾಗಿದ್ದು, ಇದು ದೂರದೂರಿನ ಪ್ರಯಾಣಿಕರಿಗೆ ವಿಶ್ವದರ್ಜೆಯ ಮತ್ತು ಅತ್ಯಂತ ಆರಾಮದಾಯಕ ಅನುಭವ ನೀಡಲಿದೆ.
* ಈ ರೈಲಿನಲ್ಲಿ ಪ್ರಯಾಣಿಕರ ಭದ್ರತೆಗಾಗಿ ಸ್ವದೇಶಿ ನಿರ್ಮಿತ 'ಕವಚ್' ಅಪಘಾತ ತಡೆ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಜೊತೆಗೆ ಆಟೋಮ್ಯಾಟಿಕ್ ಬಾಗಿಲುಗಳು, ತುರ್ತು ಸಂವಹನ ವ್ಯವಸ್ಥೆ ಹಾಗೂ ಸಿಸಿಟಿವಿ ಕ್ಯಾಮೆರಾಗಳಿವೆ.
* ಪ್ರಯಾಣಿಕರ ಆರಾಮದಾಯಕ ನಿದ್ರೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಐಷಾರಾಮಿ ಬೆಡ್‌ಗಳು, ಆಘಾತ ರಹಿತ ಕುಶನ್ ತಂತ್ರಜ್ಞಾನ ಹಾಗೂ ಪ್ರತಿಯೊಬ್ಬ ಪ್ರಯಾಣಿಕರಿಗೆ ಪ್ರತ್ಯೇಕ ಚಾರ್ಜಿಂಗ್ ಪಾಯಿಂಟ್ ಮತ್ತು ರೀಡಿಂಗ್ ಲೈಟ್‌ಗಳನ್ನು ನೀಡಲಾಗಿದೆ.
* ದುರ್ವಾಸನೆ ರಹಿತ ಬಯೋ-ವ್ಯಾಕ್ಯೂಮ್ ಶೌಚಾಲಯಗಳು ಹಾಗೂ ಪ್ರಥಮ ದರ್ಜೆ ಕೋಚ್‌ಗಳಲ್ಲಿ ಬಿಸಿ ನೀರಿನ ಶವರ್ ಸೌಲಭ್ಯವೂ ಇದೆ.
* ಗಂಟೆಗೆ 160 ಕಿಲೋ ಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುವ ಈ ರೈಲಿನಲ್ಲಿ ಅತ್ಯಾಧುನಿಕ 'ಸೌಂಡ್ ಪ್ರೂಫಿಂಗ್' ತಂತ್ರಜ್ಞಾನ ಬಳಸಿರುವುದರಿಂದ, ಒಳಗಡೆ ಇಂಜಿನ್ ಅಥವಾ ಹಳಿಗಳ ಶಬ್ದ ತೀರಾ ಕಡಿಮೆಯಿರುತ್ತದೆ. ಒಟ್ಟಿನಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ವಿಮಾನದ ಮಾದರಿಯ ಸೌಕರ್ಯಗಳನ್ನು ನೀಡುವ ಮೂಲಕ ಭಾರತೀಯ ರೈಲ್ವೆ ಪ್ರಯಾಣದ ಸ್ವರೂಪವನ್ನೇ ಬದಲಾಯಿಸಲಿದೆ ಎನ್ನಬಹುದು.


Click it and Unblock the Notifications
