Namma Metro Yellow Line: ಆಗಸ್ಟ್‌ನಲ್ಲಿ 7 ನಿಲ್ದಾಣಗಳ ಮಧ್ಯೆ ರೈಲು ಓಡಾಟ, 25,000 ಪ್ರಯಾಣಿಕರಿಗೆ ಅನುಕೂಲ
ಬೆಂಗಳೂರು, ಜುಲೈ 23: ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗದ ತಪಾಸಣೆ ಆರಂಭವಾಗಿದೆ. ಇದರ ಬೆನ್ನಲ್ಲೆ ಲಕ್ಷಾಂತರ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಹ ಸಿಕ್ಕಿದೆ. ಆರ್‌ವಿ.ರಸ್ತೆ-ಬೊಮ್ಮಸಂದ್ರ 19 ಕಿಲೋ ಮೀಟ್ ಮೆಟ್ರೋ ಮಾರ್ಗದಲ್ಲಿ ಇರುವ 03 ರೈಲುಗಳನ್ನೇ ಓಡಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಪ್ಲಾನ್ ಮಾಡಿಕೊಂಡಿದೆ. ಇದರಿಂದ ನಿತ್ಯ 25,000 ಸಾವಿರ ಪ್ರಯಾಣಿಕರ ಸಂಚಾರಕ್ಕೆ ಸಾರಿಗೆ ಒದಗಿಸಿದಂತಾಗುತ್ತದೆ. ಮುಂದೆ ಆ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಹಾಗಾದರೆ ರೈಲು ಸೇವೆ ಆರಂಭ ಯಾವಾಗ?, ಎಷ್ಟು ನಿಲ್ದಾಣಗಳ ಮಧ್ಯ ರೈಲು ಸಂಚಾರ ಎಂಬ ಎಲ್ಲ ಅಪ್ಡೇಟ್ಸ್ ಇಲ್ಲಿದೆ.
ಮುಂದಿನ ತಿಂಗಳು ಆಗಸ್ಟ್ ಅಂತ್ಯದಲ್ಲಿ ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ತೆರೆಯುವ ಸಾಧ್ಯತೆ ಇದೆ. ಇರುವ ಮೂರು ರೈಲುಗಳನ್ನು ಪ್ರತಿ 20 ನಿಮಿಷಕ್ಕೆ ಒಂದರಂತೆ ಕಾರ್ಯಾಚರಣೆ ಮಾಡಲಿವೆ. ಆದರೆ ಸದ್ಯಕ್ಕೆ 16 ನಿಲ್ದಾಣಗಳ ಪೂರ್ಣ ಲೈನ್ ತೆರೆಯುವ ಬದಲಾಗಿ 07 ರೈಲು ನಿಲ್ದಾಣಗಳ ವ್ಯಾಪ್ತಿಯಲ್ಲಿ ಮಾತ್ರ ಡ್ರೈವರ್ ಲೆಸ್ ರೈಲು ಸಾವಿರಾರು ಪ್ರಯಾಣಿಕರಿಗೆ ಆರಂಭಿಕ ಹಂತದಲ್ಲಿ ಸೇವೆ ನೀಡಲಿದೆ ಎಂದು 'ಡಿಎಚ್' ವರದಿ ಮಾಡಿದೆ.

ಈ ಏಳು ನಿಲ್ದಾಣಗಳ ವ್ಯಾಪ್ತಿಯಲ್ಲಿ ಪ್ರತಿ 20 ನಿಮಿಷಕ್ಕೆ ಒಂದರಂತೆ ರೈಲು ಆವರ್ತಗೊಳ್ಳುತ್ತವೆ. ಸಂಚಾರಕ್ಕೂ ಸಮಸ್ಯೆ ಆಗಲ್ಲ. ಕಡಿಮೆ ರೈಲುಗಳಿಂದ ಪೂರ್ಣ ಮಾರ್ಗದಲ್ಲಿ ಕಾರ್ಯಾಚರಣೆ ಆರಂಭಿಸಿದರೆ ಪ್ರಯಾಣಿಕರಿಗೆ ಸಾರಿಗೆ ವಿಳಂಬವಾಗುತ್ತದೆ. ತ್ರಾಸದಾಯಕ ಎನ್ನಬಹುದು. ರೈಲುಗಳು ಪೂರೈಕೆ ಆಗುತ್ತಿದ್ದಂತೆ ಮುಂದಿನ ವರ್ಷಕ್ಕೆ ಆರ್‌ವಿ.ರಸ್ತೆಯಿಂದ-ಬೊಮ್ಮಸಂದ್ರವರೆಗೆ ಪೂರ್ತಿ ರೈಲುಗಳು ಸೇವೆ ಶುರು ಮಾಡಲಿದ್ದೇವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ವಿವರಿಸಿದ್ದಾರೆ.
ನಿತ್ಯ 30-40 ಟ್ರಿಪ್ ಮೆಟ್ರೋ ಸೇವೆ
ಒಂದು ವೇಳೆ ಹಳದಿ ಮಾರ್ಗ ಎಲ್ಲ 16 ನಿಲ್ದಾಣಗಳಲ್ಲೂ ಈ ಮೂರು ರೈಲು ಓಡಾಟ ಶುರು ಮಾಡಿದರೆ ಬೆಳಗ್ಗೆ 5 ರಿಂದ ರಾತ್ರಿ 11 ರವರೆಗೆ ನಿತ್ಯ 30 ರಿಂದ 40 ಸುತ್ತು ಟ್ರಿಪ್ ಹೊಡೆಯುತ್ತವೆ. ಆಗ ಒಂದು ರೈಲು ಮರಳಿ ಓಡಾಡುವ ಮಧ್ಯದ ಸಮಯ (ಆವರ್ತನ ಸಮಯ) ಸುಮಾರು 80 ನಿಮಿಷ ಆಗುತ್ತದೆ. ಅದೇ ಏಳು ನಿಲ್ದಾಣಗಳಲ್ಲಿ ಮಾತ್ರ ಸಂಚರಿಸಿದರೆ ಪ್ರತಿ 20 ನಿಮಿಷಗಳಿಗೊಮ್ಮೆ ಸಂಚರಿಸಬಹುದು. ಆದಷ್ಟು ಶೀಘ್ರವೇ ಪೂರ್ಣ ಮಾರ್ಗದಲ್ಲಿ ರೈಲ್ವೆ ಓಡಾಟಕ್ಕೆ ನಾವು ಸಿದ್ಧತೆ ನಡೆಸಿದ್ದೇವೆ ಎಂದರು.

ಏಳು ನಿಲ್ದಾಣಗಳಲ್ಲಿ ಈ ಮೂರು ರೈಲುಗಳು ಓಡಿದರೆ ಸಹಿತ BMRCLಗೆ ಪ್ರತಿ ದಿನ 10-15 ಲಕ್ಷ ರೂಪಾಯಿ ಆದಾಯ ಬರುವ ನಿರೀಕ್ಷೆ ಇದೆ. ಸಂಪೂರ್ಣ ಹಳದಿ ಮಾರ್ಗದಲ್ಲಿ 15 ರೈಲುಗಳು ಸೇವೆ ಆರಂಭಿಸಿದಲ್ಲಿ ಪ್ರಯಾಣಿಕರ ಸಂಖ್ಯೆ ಕನಿಷ್ಠ 1.5 ಲಕ್ಷ ತಲುಪುತ್ತದೆ. ಆಗ ಆದಾಯ 60 ಲಕ್ಷವರೆಗೆ ಸಂಗ್ರಹವಾಗಬಹುದೆಂದು ನಿರೀಕ್ಷಿಸಲಾಗಿದೆ.
ನಾಲ್ಕನೇ ರೈಲು ಬರುವುದು ಯಾವಾಗ?
ಮುಂದಿನ ತಿಂಗಳು ಆಗಸ್ಟ್ 10ರ ಒಳಗಾಗಿ ಬೆಂಗಳೂರಿಗೆ ನಾಲ್ಕನೇ ಡ್ರೈವರ್‌ಲೆಸ್ ರೈಲು ಆಗಮಿಸುವ ನಿರೀಕ್ಷೆ ಇದೆ. ಪಶ್ಚಿಮ ಬಂಗಾಳದ ಟಿಟಿಗಾರ್‌ನಿಂದ ರೈಲು ಪೂರೈಕೆ ಆಗಬೇಕಿದೆ. ಆ ರೈಲು ಬರುತ್ತಿದ್ದಂತೆ ವಿವಿಧ ಪರೀಕ್ಷೆಗಳು ಜರುಗಬೇಕು. ಕನಿಷ್ಠ ಎರಡು ವಾರಗಳಲ್ಲಿ ಹಿಡಿಯುತ್ತದೆ. ನಂತರ ಸಾರ್ವಜನಿಕ ಸೇವೆ ಅದನ್ನು ಸೇರ್ಪಡೆ ಮಾಡುವ ನಿರೀಕ್ಷೆ ಇದೆ.
CMRS ತಪಾಸಣೆ ಆರಂಭ, ಶೀಘ್ರ ವರದಿ
ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು ಮಂಗಳವಾರ ಹಳದಿ ಮಾರ್ಗದ ಎಲ್ಲ ನಿಲ್ದಾಣಗಳು, ಹಳಿಯನ್ನು ತಪಾಸಣೆ ಮಾಡುತ್ತಿದ್ದಾರೆ. ಮೂರು ದಿನಗಳ ಶಾಸನಬದ್ಧ ಸುರಕ್ಷತಾ ತಪಾಸಣೆ ಮುಗಿದ ಬಳಿಕ ಅವರು ಕಾರ್ಯಾಚರಣೆಗೆ ಹಸಿರು ನಿಶಾನೆ ತೋರಿಸಲಿದ್ದು, ವರದಿ ಸಲ್ಲಿಸಲಿದ್ದಾರೆ. ಆಗಸ್ಟ್ ಮಧ್ಯಭಾಗದಲ್ಲಿ ವರದಿ ಸಲ್ಲಿಕೆ ಆಗುತ್ತಿದ್ದಂತೆ ಮೊದಲೇ ನಿರ್ಧರಿಸಿದಂತೆ ಏಳು ನಿಲ್ದಾಣಗಳ ಮಧ್ಯದಲ್ಲಿ ವಾಣಿಜ್ಯ ಕಾರ್ಯಾಚರಣೆ ಆರಂಭವಾಗಲಿದೆ.












Click it and Unblock the Notifications