Bengaluru Metro Pink Line: 7 ಕಿ.ಮೀ ದೂರದ ಮೆಟ್ರೋ ಉದ್ಘಾಟನೆಗೆ ಮೋದಿ ಬರ್ಬೇಕಾ ಎಂದ ನೆಟ್ಟಿಗರು, ತೇಜಸ್ವಿ ಸೂರ್ಯ ಟ್ವೀಟ್
ಬೆಂಗಳೂರು: ಬೆಂಗಳೂರು ನಗರದ ಪ್ರಮುಖ ಯೋಜನೆಯ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದು, ಇದಕ್ಕೆ ಕನ್ನಡಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ಅಧಿಕೃತ! ಬೆಂಗಳೂರಿಗೆ ಒಂದು ಐತಿಹಾಸಿಕ ಮೈಲಿಗಲ್ಲು! ನವೆಂಬರ್ 13 ರಂದು ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಮೆಟ್ರೋದ ಪಿಂಕ್ ಲೈನ್ ಅನ್ನು ಉದ್ಘಾಟಿಸಲಿದ್ದಾರೆ. ಅವರು ತಾವರೆಕೆರೆಯಿಂದ ಐಐಎಂಬಿ-ಬಿಳೇಕಹಳ್ಳಿ ನಿಲ್ದಾಣಕ್ಕೆ ಪ್ರಯಾಣಿಸಿ ಸೇವೆಗಳನ್ನು ಪ್ರಾರಂಭಿಸಲಿದ್ದಾರೆ ಎನ್ನುವ ವಿಷಯದೊಂದಿಗೆ ಹಂಚಿಕೊಂಡಿರುವ ಟ್ವೀಟ್‌ಗೆ ಕನ್ನಡಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
7 ಕಿ.ಮೀ ಉದ್ದಕ್ಕೆ ಮೆಟ್ರೋ ಲೈಲ್ ಉದ್ಘಾಟನೆಗೂ ಪ್ರಧಾನಿ ನರೇಂದ್ರ ಮೋದಿ ಅವರು ಯಾಕೆ ಬರಬೇಕು. ತೆರಿಗೆದಾರರ ಹಣವನ್ನು ಏಕೆ ಬಳಸಬೇಕು. ತುರ್ತು ಸಹಾಯದ ಅಗತ್ಯವಿರುವ ಅರುಣಾಚಲ ಪ್ರದೇಶ/ಮೇಘಾಲಯಕ್ಕೆ ಅವರು ಹೋಗಬಹುದೇ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

Bengaluru Metro Pink Line: ಮೋದಿಗೆ ಕ್ರೆಡಿಟ್ ಕೊಡುವ ವಿಚಾರ ಚರ್ಚೆ
ರಾಜಕೀಯ ಮನ್ನಣೆ ಪಡೆಯುವುದಕ್ಕಿಂತ ಬೆಂಗಳೂರು ಉತ್ತಮವಾದದ್ದನ್ನು ಪಡೆಯಲು ಅರ್ಹವಾಗಿದೆ! ನಮ್ಮ ಮೆಟ್ರೋ ಕೇಂದ್ರ ಮತ್ತು ಕರ್ನಾಟಕ ಸರ್ಕಾರಗಳ ಜಂಟಿ ಯೋಜನೆಯಾಗಿದ್ದು, ಇದನ್ನು ಬಿಎಂಆರ್‌ಸಿಎಲ್ ಜಾರಿಗೊಳಿಸಿದೆ. ಒಪ್ಪಿದ ಮಾದರಿಯಡಿಯಲ್ಲಿ, ಎರಡೂ ಸರ್ಕಾರಗಳು ಸಮಾನ ಪ್ರಾತಿನಿಧ್ಯ ಮತ್ತು 50:50 ಬಂಡವಾಳ ಹೂಡಿಕೆ ಮಾಡಿವೆ.
2025 ರ ಆಗಸ್ಟ್‌ನಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರು ಮೆಟ್ರೋ ಯೋಜನೆಗಳಾದ್ಯಂತ ಹಣಕಾಸಿನ ಹೊರೆಯ 87.37% ಅನ್ನು ಕರ್ನಾಟಕ ಭರಿಸಿದೆ ಮತ್ತು ಕೇಂದ್ರವು ಸಾಲಗಳು ಮತ್ತು ಮರುಪಾವತಿಗಳ ಪರಿಣಾಮ ಸೇರಿದಂತೆ 12.63% ಕೊಡುಗೆ ನೀಡಿದೆ ಎಂದು ಹೇಳಿದರು.
ಹಾಗಾದರೆ, ಎಲ್ಲಾ ಮನ್ನಣೆಯನ್ನು ಮೋದಿ ಜಿ ಅವರಿಗೆ ಏಕೆ ನೀಡಬೇಕು. ಮೆಟ್ರೋ ಮಾರ್ಗವನ್ನು ಉದ್ಘಾಟಿಸುವುದು ಒಂದು ವಿಷಯ. ಹಣಕಾಸು, ಭೂಸ್ವಾಧೀನ, ನಿರ್ಮಾಣ ಮತ್ತು ಯೋಜನೆಯನ್ನು ತಲುಪಿಸಲು ವರ್ಷಗಳ ಕೆಲಸದ ಅಗತ್ಯವಿದೆ. ಕರ್ನಾಟಕದ ಜನರಿಗೆ, ರಾಜ್ಯ ಸರ್ಕಾರಕ್ಕೆ ಮತ್ತು ನಮ್ಮ ಮೆಟ್ರೋವನ್ನು ಸಾಧ್ಯವಾಗಿಸಿದ ಎಲ್ಲರಿಗೂ ಮನ್ನಣೆ ನೀಡಬೇಕಾದಲ್ಲಿ ಮನ್ನಣೆ ನೀಡಿ ಎಂದೂ ನೆಟ್ಟಿಗರು ಆಗ್ರಹಿಸಿದ್ದಾರೆ.
Bengaluru Metro Pink Line: ಸಂಸದ ತೇಜಸ್ವಿ ಸೂರ್ಯ ಹೇಳಿದ್ದೇನು
ಬೆಂಗಳೂರಿಗೆ ಗುಡ್‌ನ್ಯೂಸ್ ಸಿಕ್ಕಿದೆ ಎನ್ನುವ ಸಾಲುಗಳೊಂದಿಗೆ ಸಂಸದ ತೇಜಸ್ವಿ ಸೂರ್ಯ ಅವರು ಟ್ವೀಟ್ ಮಾಡಿದ್ದರು. ಈ ಟ್ವೀಟ್‌ನಲ್ಲಿ ಬೆಂಗಳೂರು ಮೆಟ್ರೋ 100 ಕಿಮೀ ಮೈಲಿಗಲ್ಲನ್ನು ದಾಟಿ, 103.6 ಕಿ.ಮೀ ತಲುಪಿ ದೆಹಲಿಯ ನಂತರ ಭಾರತದ ಎರಡನೇ ಅತಿದೊಡ್ಡ ಮೆಟ್ರೋ ಜಾಲವಾಗಲಿದೆ. 2014ರಲ್ಲಿ ಬೆಂಗಳೂರಿನಲ್ಲಿ ಕೇವಲ 7 ಕಿಮೀ ಕಾರ್ಯಾಚರಣಾ ಮೆಟ್ರೋ ಇತ್ತು. ಇಂದು, ಆ ಜಾಲವು ಸುಮಾರು 15 ಪಟ್ಟು ಬೆಳೆದಿದೆ, 2014 ರಿಂದ 96 ಕಿಮೀ ಗಿಂತ ಹೆಚ್ಚು ಸೇರಿಸಲಾಗಿದೆ.
ಪ್ರಧಾನಿ ಮೋದಿ ಬೆಂಗಳೂರಿನ ಮೂಲಸೌಕರ್ಯ ಮತ್ತು ಸಂಪರ್ಕಕ್ಕೆ ನಿರಂತರವಾಗಿ ಆದ್ಯತೆ ನೀಡಿದ್ದಾರೆ, ಈ ಗಮನಾರ್ಹ ರೂಪಾಂತರವನ್ನು ಸಾಧ್ಯವಾಗಿಸಿದ್ದಾರೆ. ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದು, ಜೀವನದ ಗುಣಮಟ್ಟವನ್ನು ಸುಧಾರಿಸುವುದು ಮತ್ತು ಸಾರ್ವಜನಿಕ ಸಾರಿಗೆಗೆ ಮೊದಲ ಸ್ಥಾನ ನೀಡುವ ಬೆಂಗಳೂರನ್ನು ನಿರ್ಮಿಸುವತ್ತ ಇದು ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ. ಬೆಂಗಳೂರಿಗೆ ಒಂದು ದೊಡ್ಡ ದಿನ. ಮುಂದೆ ಇನ್ನೂ ಹಲವು ಮೈಲಿಗಲ್ಲುಗಳು ಎಂದು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.


Click it and Unblock the Notifications
