ಮೆಟ್ರೋ ಯೋಜನೆಗೆ ಶೇ.84 ವೆಚ್ಚ ಕರ್ನಾಟಕದ್ದೇ, ಕೇಂದ್ರದ ಪಾಲು ಶೇ.16 ಮಾತ್ರ; ಸಚಿವ ಕೃಷ್ಣಬೈರೇಗೌಡ: ತೇಜಸ್ವಿ ಸೂರ್ಯಗೆ ಮುಖಭಂಗ!
ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಯಾರು ಎಷ್ಟು ಅನುದಾನ ಕೊಡುತ್ತಿದ್ದಾರೆ ಎನ್ನುವ ವಿಚಾರವು ಮತ್ತೊಮ್ಮೆ ಗಂಭೀರ ಸ್ವರೂಪದ ಚರ್ಚೆಗೆ ಕಾರಣವಾಗಿದೆ. ಈ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಮೆಟ್ರೋ ಯೋಜನೆಗೆ ಶೇ.84 ವೆಚ್ಚ ಕರ್ನಾಟಕದ್ದೇ, ಕೇಂದ್ರದ ಪಾಲು ಶೇ.16 ಮಾತ್ರ ಎಂದು ಸಚಿವ ಕೃಷ್ಣಬೈರೇಗೌಡ ಅವರು ಹೇಳಿದ್ದು, ಸಂಸದ ತೇಜಸ್ವಿ ಸೂರ್ಯಗೆ ಮುಖಭಂಗ ಮಾಡಿದ್ದಾರೆ.
ಬೆಂಗಳೂರು ನಗರದ ಮೆಟ್ರೋ ಯೋಜನೆ ಹಾಗೂ ಅನುದಾನದ ವಿಚಾರವಾಗಿ ಮಾತನಾಡಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕೆಂಡಕಾರಿದ್ದಾರೆ.

ರಾಜಧಾನಿ ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ಮತ್ತೊಂದು ಮೈಲುಗಲ್ಲಾಗಲಿರುವ 'ನಮ್ಮ ಮೆಟ್ರೋ' ಪಿಂಕ್ ಲೈನ್ನ 7.5 ಕಿಲೋಮೀಟರ್ಗಳ ಎತ್ತರಿಸಿದ ಮಾರ್ಗವು ಇದೇ ನವೆಂಬರ್ 13 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ವಿದ್ಯುಕ್ತವಾಗಿ ಲೋಕಾರ್ಪಣೆಗೊಳ್ಳಲಿದೆ. ಕಾಳೇನ ಅಗ್ರಹಾರದಿಂದ - ತಾವರೆಕೆರೆ (ಸುದ್ದುಗುಂಟೆಪಾಳ್ಯ) ನಿಲ್ದಾಣದವರೆಗಿನ ಈ ಹೊಸ ಮಾರ್ಗ ಸಂಪೂರ್ಣವಾಗಿ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಅನುದಾನದ ವಿಚಾರವಾಗಿ ಮಾತನಾಡಿದ್ದಾರೆ.
ಕೇಂದ್ರದ ಪಾಲು ಹೆಚ್ಚಳಕ್ಕೆ ಪ್ರಧಾನಿಗೆ ಮನವಿ
ಬೆಂಗಳೂರು ಮೆಟ್ರೋ ಯೋಜನೆಯ ಒಟ್ಟು ವೆಚ್ಚ ಹಂಚಿಕೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಇರುವ ಭಾರಿ ವ್ಯತ್ಯಾಸವನ್ನು ಸಚಿವ ಕೃಷ್ಣ ಬೈರೇಗೌಡ ಅವರು ಅಂಕಿ-ಅಂಶಗಳ ಸಮೇತ ವಿವರಿಸಿದ್ದಾರೆ.
ಮೆಟ್ರೋ-1 ನೇ ಹಂತದಿಂದ 3ನೇ ಹಂತದವರೆಗಿನ ಒಟ್ಟು 77,891 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ಸರ್ಕಾರವೇ 65,291=ಕೋಟಿ ರೂ. (ಶೇ. 84) ಭರಿಸುತ್ತಿದ್ದು, ಕೇಂದ್ರ ಸರ್ಕಾರದ ಪಾಲು ಕೇವಲ 12,600 ಕೋಟಿ ರೂ. (ಶೇ. 16) ಆಗಿದೆ. ಮೆಟ್ರೋ ಮೊದಲ ಹಂತದಲ್ಲಿ ಶೇ. 80 ರಷ್ಟಿದ್ದ ಕೇಂದ್ರದ ಬಂಡವಾಳ ಹೂಡಿಕೆ, ಎರಡನೇ ಹಂತದಲ್ಲಿ ಕ್ರಮೇಣ ಶೇ. 16 ಕ್ಕೆ ಮತ್ತು ಪ್ರಸ್ತುತ ಶೇ. 14 ಕ್ಕೆ ಕುಸಿದಿದೆ ಎಂದು ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಪಡೆಯುವ ಸಾಲವನ್ನು ಕೇಂದ್ರದ ಮೂಲಕ ಪಡೆಯಲಾಗುತ್ತಿದ್ದರೂ, ರೂಪಾಯಿ ಮೌಲ್ಯ ಕುಸಿತದ ಹೆಚ್ಚುವರಿ ಹೊರೆ ಹಾಗೂ ಸಾಲದ ಪ್ರತಿಯೊಂದು ಪೈಸೆಯನ್ನು ರಾಜ್ಯ ಸರ್ಕಾರವೇ ಮರುಪಾವತಿಸುತ್ತಿದೆ. ಜೊತೆಗೆ ಭೂಸ್ವಾಧೀನದ ಶೇಕಡಾ 100 ರಷ್ಟು ವೆಚ್ಚ ಹಾಗೂ ಯೋಜನೆಯ ಅನುಮೋದನೆ ವಿಳಂಬದಿಂದ ಹೆಚ್ಚಾಗುವ ನಿರ್ಮಾಣ ವೆಚ್ಚವನ್ನು ರಾಜ್ಯವೇ ಭರಿಸಬೇಕಾಗಿದೆ. ಮೆಟ್ರೋದ 1046 ಕೋಟಿ ರೂ. ನಷ್ಟವನ್ನು ಈಗಾಗಲೇ ಕರ್ನಾಟಕವೇ ಸರಿದೂಗಿಸಿದೆ.
ಇನ್ನೂ 52 ಕೋಟಿ ರೂ ನಷ್ಟ ಸಾಲ ಭರಿಸಿಕೊಡುವುದು ಬಾಕಿ ಇದ್ದು, ಮೆಟ್ರೋ ಆಡಳಿತ ಕೇಳಿದ ಕೂಡಲೇ ರಾಜ್ಯ ಸರ್ಕಾರ ಅದನ್ನೂ ಭರಿಸಲಿದೆ. ಈ ಎಲ್ಲಾ ಕಾರಣದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮೆಟ್ರೋ ಹೂಡಿಕೆಯಲ್ಲಿ ಸಮಪಾಲು (50 - 50) ಎಂದರೂ ಸಹ ವಾಸ್ತವವಾಗಿ ಶೇ.84 ರಷ್ಟು ರಾಜ್ಯ ಸರ್ಕಾರ ಭರಿಸುತ್ತಿದೆ, ಶೇ.16ರಷ್ಟು ಮಾತ್ರ ಕೇಂದ್ರ ಸರ್ಕಾರ ಭರಿಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರು ನಗರವು ದೇಶದಲ್ಲೇ 2ನೇ ಅತಿ ಹೆಚ್ಚು ಜಿಎಸ್ಟಿ ತಂದುಕೊಡುವ ಮತ್ತು ಭಾರಿ ಪ್ರಮಾಣದ ವಿದೇಶಿ ವಿನಿಮಯ ಈಡೇರಿಸುವ ಕೇಂದ್ರವಾಗಿದೆ. ಹೀಗಾಗಿ ದೇಶದ ಆರ್ಥಿಕತೆಗೆ ಪ್ರಮುಖ ಕೊಡುಗೆ ನೀಡುತ್ತಿರುವ ಬೆಂಗಳೂರಿನ ಮೂಲಸೌಕರ್ಯಕ್ಕೆ ಕೇಂದ್ರ ಸರ್ಕಾರ ತನ್ನ ಹೂಡಿಕೆಯ ಪಾಲನ್ನು ಹೆಚ್ಚಿಸಬೇಕು ಎಂದು ಕಾರ್ಯಕ್ರಮದ ವೇಳೆ ಪ್ರಧಾನಿ ಮೋದಿಯವರಿಗೆ ಖುದ್ದಾಗಿ ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದೂ ಇದೇ ಸಂದರ್ಭದಲ್ಲಿ ಸಚಿವ ಕೃಷ್ಣಬೈರೇಗೌಡ ಅವರು ಹೇಳಿದ್ದಾರೆ.
ಅವಮಾನ ಮಾಡಿದ್ದು ಸಾಕು ಕರ್ನಾಟಕದ ಪಾಲು ನೀಡಿ!
ಕರ್ನಾಟಕ ದಿವಾಳಿಯಾಗಿದೆ ಎಂಬ ವಿಪಕ್ಷ ನಾಯಕರ ಲೇವಡಿ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು, "ಕರ್ನಾಟಕ ತಲಾ ಆದಾಯದಲ್ಲಿ ಇಡೀ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಕೇಂದ್ರಕ್ಕೆ ತೆರಿಗೆ ಸಂದಾಯದಲ್ಲೂ ಎರಡನೇ ಸ್ಥಾನದಲ್ಲಿರುವ, ಇಡೀ ದೇಶದ ಎಲ್ಲಾ ರಾಜ್ಯದ ಜನತೆಗೂ ಉದ್ಯೋಗಾವಕಾಶ ನೀಡುತ್ತಿರುವ ರಾಜ್ಯ ದಿವಾಳಿಯಾಗುವುದು ಹೇಗೆ? ವಿಪಕ್ಷ ನಾಯಕರು ರಾಜಕೀಯಕ್ಕಾಗಿ ಕರ್ನಾಟಕವನ್ನು ಅಪಮಾನ ಮಾಡುವುದು ಬಿಟ್ಟು ಕೇಂದ್ರ ಸರ್ಕಾರದಿಂದ ನಮಗೆ ಬರಬೇಕಾದ ನ್ಯಾಯಯುತ ತೆರಿಗೆ ಪಾಲನ್ನು ಕೊಡಿಸಲಿ, ಆ ನಂತರ ಮಾತನಾಡಲಿ" ಎಂದು ಸವಾಲು ಹಾಕಿದ್ದಾರೆ.


Click it and Unblock the Notifications
