Namma Metro: ಬೆಂಗಳೂರಿಗೆ ಮರಳದ ಕಾರ್ಮಿಕರು: ಮೆಟ್ರೋ ಕಾಮಗಾರಿಗಳಲ್ಲಿ ವಿಳಂಬ- ಕಾರಣವೇನು? ಎಲ್ಲಿ ಅನಾನುಕೂಲ ತಿಳಿಯಿರಿ
ಬೆಂಗಳೂರು, ಜುಲೈ 05: ಕಾರ್ಮಿಕರ ಕೊರತೆಯಿಂದಾಗಿ ಬೆಂಗಳೂರಿನ ನಮ್ಮ ಮೆಟ್ರೋ ಕಾಮಗಾರಿಗಳಲ್ಲಿ ನಿಧಾನಗತಿಯ ಪ್ರಗತಿಯಾಗಿದೆ. ಆದಷ್ಟು ಬೇಗ ಮೆಟ್ರೊ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಸಾರ್ವಜನಿಕರಿಂದ ಸರ್ಕಾರದ ಮೇಲೆ ಒತ್ತಡವಿದ್ದರೂ ಸಹ ವಿಚಿತ್ರ ಸಮಸ್ಯೆಯನ್ನು ಬೆಂಗಳೂರಿನ ಮೆಟ್ರೋ ನಿಗಮ ಎದುರಿಸುತ್ತಿದೆ.
ದೇಶದ 15 ನಗರಗಳಲ್ಲಿ ಮೆಟ್ರೋ ಕಾಮಗಾರಿಗಳು ನಡೆಯುತ್ತಿರುವುದರಿಂದ ನುರಿತ ಕಾರ್ಮಿಕರ ಕೊರತೆ ಇದೆ ಎಂದು ಮೂಲಗಳು ತಿಳಿಸಿವೆ.

ಹೆಚ್ಚಿನ ಕಾರ್ಮಿಕರು ಉತ್ತರ ಭಾರತದಿಂದ ಬರುತ್ತಾರೆ. ಪ್ರಸ್ತುತ, ಮೆಟ್ರೋ ಕಾಮಗಾರಿಗಳು ನವದೆಹಲಿ, ಅಹಮದಾಬಾದ್, ನೊಯ್ಡಾ, ಭೋಪಾಲ್, ಜೈಪುರ, ಅಮೃತಸರ ಮತ್ತು ಇತರ ನಗರಗಳಲ್ಲಿ ನಡೆಯುತ್ತಿವೆ. ಉತ್ತರ ಭಾರತದ ಅನೇಕ ಕಾರ್ಮಿಕರು ಅಲ್ಲಿನ ನಗರಗಳ ಮೆಟ್ರೋ ಯೋಜನೆಗಳಲ್ಲಿ ಕೆಲಸ ಹುಡುಕಲು ಬಯಸುತ್ತಾರೆ. ಅವರು ಬೆಂಗಳೂರಿಗೆ ಮರಳಲು ಹಿಂಜರಿಯುತ್ತಿದ್ದಾರೆ ಎಂದು ವರಿದಿಯಾಗಿದೆ.
'ನಾವು ಮೇಸ್ತ್ರಿಗಳು, ಬಡಗಿಗಳು ಮತ್ತು ಬಾರ್ ಬೆಂಡಿಂಗ್ ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿದ್ದೇವೆ. ಇದರಿಂದ ಸಿವಿಲ್ ಇಂಜಿನಿಯರಿಂಗ್ ಕಾಮಗಾರಿಗೆ ತೊಂದರೆಯಾಗುತ್ತಿದೆ. ಸಿಲ್ಕ್ ಬೋರ್ಡ್- ಕೆಆರ್ ಪುರಂ ಯೋಜನೆಗೆ ನಮಗೆ 250 ಕ್ಕೂ ಹೆಚ್ಚು ಕಾರ್ಮಿಕರ ಅಗತ್ಯವಿದೆ. ಆದರೆ, ಕಾರ್ಮಿಕರನ್ನು ಹುಡುಕುವುದು ಅತ್ಯಂತ ಸವಾಲಿನ ಕೆಲಸವಾಗಿದೆ' ಎಂದು ಅಧಿಕಾರಿಯೊಬ್ಬರು 'ಬೆಂಗಳೂರು ಮಿರರ್'ಗೆ ತಿಳಿಸಿದ್ದಾರೆ.
ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಬಿಹಾರದಿಂದ ನುರಿತ ಕಾರ್ಮಿಕರು ಬರುತ್ತಾರೆ ಎಂದು ಇನ್ನೊಬ್ಬ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಅನೇಕ ಕಾರ್ಮಿಕರು ತಮ್ಮ ಹಳ್ಳಿಗಳಿಗೆ ಹಿಂದಿರುಗಿದರು. ಕೆಲವರು ವಾಪಾಸ್ಸಾರು. ಇನ್ನು ಕೆಲವರು ತಮ್ಮ ಹಳ್ಳಿಗಳಲ್ಲಿ ಉಳಿದುಕೊಳ್ಳಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ.
ವಿಮಾನ ಅಥವಾ ಎಸಿ ರೈಲು ಟಿಕೆಟ್‌ಗಳನ್ನು ನೀಡಿದ್ದರೂ, ಅನೇಕ ಕಾರ್ಮಿಕರು ಬರಲು ಸಿದ್ಧರಿಲ್ಲ. ಯು-ಗಿರ್ಡರ್‌ಗಳು, ಪಿಯರ್ ಕ್ಯಾಪ್‌ಗಳು ಮತ್ತು ಸ್ಟೀಲ್ ಕೆಲಸಗಳಿಗೆ ನುರಿತ ಕೆಲಸಗಾರರ ಅಗತ್ಯವಿದೆ. ಉತ್ತರ ಪ್ರದೇಶಗಳಲ್ಲಿ ಅನೇಕ ನುರಿತ ಕೆಲಸಗಾರರಿದ್ದಾರೆ, ಆದರೆ ಅವರು ಬೆಂಗಳೂರಿಗೆ ಮರಳಲು ಸಿದ್ಧರಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
ಒಟ್ಟಾರೆಯಾಗಿ, 300 ಬಡಗಿಗಳು, 400 ಬಾರ್ ಬೆಂಡರ್‌ಗಳು ಮತ್ತು 200 ಮೇಸನ್‌ಗಳ ಅವಶ್ಯಕತೆಯಿದೆ.

'ಕಾರ್ಮಿಕರ ಕೊರತೆಯಿಂದಾಗಿ, ಕೆಆರ್ ಪುರಂನಿಂದ ವಿಮಾನ ನಿಲ್ದಾಣ ಮತ್ತು ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರ ಮಾರ್ಗಗಳಲ್ಲಿ ಪ್ರಗತಿಯು ಸ್ವಲ್ಪಮಟ್ಟಿಗೆ ಕುಂಠಿತವಾಗಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂಲಸೌಕರ್ಯ ಯೋಜನೆಗಳನ್ನು ರಾಷ್ಟ್ರವ್ಯಾಪಿ ಕೈಗೆತ್ತಿಕೊಳ್ಳುತ್ತಿರುವುದರಿಂದ ನುರಿತ ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆಯಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.
ಈ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಕಾರ್ಮಿಕರು ಈಗ ಭೋಪಾಲ್, ಚೆನ್ನೈ, ಮುಂಬೈ, ದೆಹಲಿ ಮತ್ತು ಅಹಮದಾಬಾದ್‌ನಲ್ಲಿ ಮೆಟ್ರೋ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಮೆಟ್ರೋ ಅಧಿಕಾರಿಗಳು ಜೂನ್ 2025 ರ ವೇಳೆಗೆ 175 ಕಿಮೀ ಮೆಟ್ರೋ ಜಾಲವನ್ನು ಪೂರ್ಣಗೊಳಿಸುವ ವಿಶ್ವಾಸವನ್ನು ಹೊಂದಿದ್ದಾರೆ. 2041 ರ ವೇಳೆಗೆ ಬೆಂಗಳೂರು 314 ಕಿಮೀ ವ್ಯಾಪಿಸಿರುವ ಮೆಟ್ರೋ ಜಾಲವನ್ನು ಹೊಂದುವ ನಿರೀಕ್ಷೆಯಿದೆ.












Click it and Unblock the Notifications