Bengaluru Hotels: ಬೆಂಗಳೂರಿನ 5 ಸ್ಟಾರ್ - 3 ಸ್ಟಾರ್ ಬಣ್ಣ ಕಳಚಿದ ಆರೋಗ್ಯ ಇಲಾಖೆ: ಹೊಸ ಮಾರ್ಗಸೂಚಿ ಪ್ರಕಟ
Bengaluru Hotels: ಬೆಂಗಳೂರಿನ 5 ಸ್ಟಾರ್ ಹಾಗೂ 3 ಸ್ಟಾರ್ ಹೋಟೆಲ್‌ಗಳ ಆಹಾರ ಗುಣಮಟ್ಟವನ್ನು ಪರಿಶೀಲನೆ ಮಾಡುವುದನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಮುಂದುವರಿಸಿದ್ದಾರೆ. ಅಲ್ಲದೆ ಆಹಾರ ಪದಾರ್ಥಗಳ ಸಂಗ್ರಹಣೆ ಪರಿಶೀಲನೆಯು ಸಹ ಮುಂದುವರಿದೆ. ಈ ಪರಿಶೀಲನೆಯಲ್ಲಿ ಹಲವು ಪ್ರತಿಷ್ಠಿತ ಹೋಟೆಲ್‌ಗಳ ಬಣ್ಣ ಬಯಲಾಗಿದೆ. ಇದರೊಂದಿಗೆ ಇಂದಿರಾ ಕ್ಯಾಂಟೀನ್‌ನಲ್ಲೂ ಪರಿಶೀಲನೆ ನಡೆದಿದೆ. ನೀವು ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಊಟ ಮಾಡುತ್ತೀರಾ ಹಾಗಾದರೆ ತಪ್ಪದೆ ಈ ಸ್ಟೋರಿ ಓದಿ.
ಬೆಂಗಳೂರು ನಗರದಾದ್ಯಂತ ಆಹಾರ ತಯಾರಿಕೆ ಮತ್ತು ಶೇಖರಣಾ ಸೌಲಭ್ಯಗಳನ್ನು ಪರಿಶೀಲನೆ ಮಾಡುವುದನ್ನು ಅಧಿಕಾರಿಗಳು ಮುಂದುವರಿಸಿದ್ದಾರೆ. ಆಹಾರ ಸುರಕ್ಷತೆಯ ಅವಶ್ಯಕತೆಗಳನ್ನು ಉಲ್ಲಂಘಿಸುವ ಸಂಸ್ಥೆಗಳಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆಯ ಆಹಾರ ಸುರಕ್ಷತಾ ಅಧಿಕಾರಿಗಳು ಹೋಟೆಲ್‌ಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದ ಅಡುಗೆಮನೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಕಳೆದ ಒಂದು ವಾರದಿಂದಲೂ ಈ ಕಾರ್ಯಾಚರಣೆ ನಡೆಯುತ್ತಿದ್ದು, ಬೆಂಗಳೂರಿನ ಹಲವು ಪ್ರತಿಷ್ಠಿತ ಹೋಟೆಲ್‌ಗಳ ಮುಖವಾಡ ಕಳಚಿ ಬಿದ್ದಿದೆ. ಇದರೊಂದಿಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಇಂದಿರಾ ಕ್ಯಾಂಟೀನ್‌ಗಳನ್ನು ಪರಿಶೀಲನೆ ಮಾಡುವುದನ್ನು ಸಹ ಮುಂದುವರಿಸಿದ್ದಾರೆ. ಆಗಸ್ಟ್ 11ರ ಮಂಗಳವಾರ ಬೊಮ್ಮನಹಳ್ಳಿ ಮತ್ತು ಲಿಂಗರಾಜಪುರಂನಲ್ಲಿರುವ ಇಂದಿರಾ ಕ್ಯಾಂಟೀನ್‌ಗಳನ್ನು ಪರಿಶೀಲಿಸಿದ್ದಾರೆ. ಇಂದಿರಾ ಕ್ಯಾಂಟೀನ್‌ನಲ್ಲಿ ನಿಯಮ ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಾದ್ಯಂತ ಆಹಾರ ಸುರಕ್ಷತೆ ನಿಯಮಗಳನ್ನು ಪ್ರತಿಷ್ಠಿತ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳು ಪಾಲಿಸುತ್ತಿವೆಯೇ ಎನ್ನುವುದನ್ನು ಪರಿಶೀಲನೆ ಮಾಡಲಾಗುತ್ತಿದೆ. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ನಡೆಸುತ್ತಿರುವ ನಿರಂತರ ಕಾರ್ಯಾಚರಣೆಯ ಭಾಗವಾಗಿ ತಪಾಸಣೆ ಮುಂದುವರಿದಿದೆ.
ಆಹಾರ ಸುರಕ್ಷತಾ ಅಧಿಕಾರಿಗಳು ನಗರದಾದ್ಯಂತ 5 ಸ್ಟಾರ್ ಹೋಟೆಲ್‌ಗಳ ಮೇಲೆಯೂ ದಾಳಿ ಮಾಡಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳನ್ನು ಪರಿಶೀಲನೆ ಮಾಡಿದ ಕೆಲವೇ ದಿನಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳಲ್ಲಿಯೂ ತಪಾಸಣಾ ಕಾರ್ಯಾಚರಣೆ ನಡೆದಿದೆ. ಇತ್ತೀಚಿನ ತಪಾಸಣೆಯಲ್ಲಿ ಅಲ್ಲಿ ಅವಧಿ ಮೀರಿದ ಆಹಾರ, ಕಳಪೆ ಆಹಾರ ಪದಾರ್ಥಗಳ ಸಂಗ್ರಹಣೆ ಮತ್ತು ಅಡುಗೆ ಮನೆಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದೆ ಇರುವುದು ಸೇರಿದಂತೆ ಹಲವು ಆಹಾರ ನಿರ್ವಹಣೆ ಪದ್ಧತಿಗಳ ಉಲ್ಲಂಘನೆ ಆಗಿರುವುದು ಸ್ಪಷ್ಟವಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
3ಸ್ಟಾರ್, 5 ಸ್ಟಾರ್ ಹೋಟೆಲ್‌ಗಳು ಸೇರಿ 60 ಪ್ರತಿಷ್ಠಿತ ಹೋಟೆಲ್‌ಗಳ ಪರಿಶೀಲನೆ
ಇನ್ನು ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳ ಅವಧಿಯಲ್ಲಿ 60 ಪ್ರತಿಷ್ಠಿತ ಹೋಟೆಲ್‌ಗಳನ್ನು ಪರಿಶೀಲನೆ ಮಾಡಲಾಗಿದೆ. ಮೂರು ದಿನಗಳ ವಿಶೇಷ ಆಹಾರ ಸುರಕ್ಷತಾ ಅಭಿಯಾನದಲ್ಲಿ ಬೆಂಗಳೂರು ನಗರದಾದ್ಯಂತ 60 3 ಸ್ಟಾರ್ ಮತ್ತು 5 ಸ್ಟಾರ್ ಹೋಟೆಲ್‌ಗಳನ್ನು ಪರಿಶೀಲಿಸಲಾಗಿದೆ. ತಪಾಸಣೆಯ ಭಾಗವಾಗಿ 77 ಅಧಿಕಾರಿಗಳು ಆಹಾರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಿದ್ದಾರೆ.
ಹೋಟೆಲ್ - ಡಾಬಾಗಳಿಗೆ ಹೊಸ ಮಾರ್ಗಸೂಚಿ ಪ್ರಕಟ
ಇನ್ನು ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಈಚೆಗೆ ನಡೆಸಿದ ಕಾರ್ಯಾಚರಣೆಗಳ ನಂತರ ಅವಧಿ ಮೀರಿದ ಆಹಾರ ಪದಾರ್ಥಗಳ ಸಂಗ್ರಹಣೆ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳದೆ ಇರುವುದು ಕಂಡುಬಂದಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಹಾಗೂ 2011ರ ನಿಯಾಮಗಳನ್ವಯ ಈ ಕೆಳಕಂಡ ಮಾರ್ಗ ಸೂಚಿಗಳನ್ನು ಸಣ್ಣ ಹೋಟೆಲ್‌ಗಳು, ಡಾಬಾಗಳು, ರೆಸ್ಟೋರೆಂಟ್‌ಗಳು ಹಾಗೂ ಇತರೆ ಆಹಾರ ಸೇವಾ ಕೇಂದ್ರಗಳಿಗೆ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
ಆಹಾರ ವ್ಯವಹಾರದ ಪರವಾನಗಿಯನ್ನು ಸಂಸ್ಥೆಯ ಆವರಣದಲ್ಲಿ ಎಲ್ಲರಿಗೂ ಕಾಣಿಸುವಂತೆ ಪ್ರಮುಖ ಸ್ಥಳದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು.
ಆಹಾರ ವ್ಯವಹಾರದ ಪ್ರಕ್ರಿಯೆಗಳು, ಚಟುವಟಿಕೆಗಳು ಅಥವಾ ಇತರೆ ವಿವರಗಳಲ್ಲಿ ಯಾವುದೇ ಬದಲಾವಣೆ/ಮಾರ್ಪಾಡು ಮಾಡಿದಲ್ಲಿ ಸಂಬಂಧಿತ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು.
1. ಆಹಾರ ತಯಾರಿಕಾ ಪ್ರದೇಶ
• ಅಡುಗೆ ಪ್ರದೇಶವನ್ನು ಸದಾ ಸ್ವಚ್ಛವಾಗಿ, ವ್ಯವಸ್ಥಿತವಾಗಿ ಹಾಗೂ ಸಮರ್ಪಕ ಗಾಳಿಯಾಡುವಂತೆ ನಿರ್ವಹಿಸಬೇಕು.
• ಪಾತ್ರೆ ತೊಳೆಯುವುದು, ಉಪಕರಣಗಳನ್ನು ಸ್ವಚ್ಛಗೊಳಿಸುವುದು ಹಾಗೂ ಕಚ್ಚಾ ಆಹಾರ ಪದಾರ್ಥಗಳನ್ನು ತೊಳೆಯುವುದಕ್ಕಾಗಿ ಪ್ರತ್ಯೇಕ ಸಿಂಕ್‌ಗಳನ್ನು ವ್ಯವಸ್ಥೆ ಮಾಡಬೇಕು.
• ಅಡುಗೆ ಮತ್ತು ಆಹಾರ ವಿತರಣೆಗೆ ಬಳಸುವ ಉಪಕರಣಗಳು, ಪಾತ್ರೆಗಳು, ಕ್ರಾಕರಿ ಹಾಗೂ ಕಟ್ಲರಿಗಳನ್ನು ಡಿಟರ್ಜೆಂಟ್ ಮತ್ತು ಬಿಸಿ ನೀರನ್ನು ಬಳಸಿ ಸಮರ್ಪಕವಾಗಿ ತೊಳೆಯಬೇಕು ಹಾಗೂ ಸ್ವಚ್ಛಗೊಳಿಸಬೇಕು.
2. ಕಚ್ಚಾ ಆಹಾರ ಪದಾರ್ಥಗಳು
• ಬಳಸುವ ಕಚ್ಚಾ ಆಹಾರ ಪದಾರ್ಥಗಳು ಉತ್ತಮ ಗುಣಮಟ್ಟದ್ದಾಗಿದ್ದು, ವಿಶ್ವಾಸಾರ್ಹ ಮೂಲದಿಂದ ಖರೀದಿಸಬೇಕು.
• ಕಚ್ಚಾ ಪದಾರ್ಥಗಳನ್ನು ಸ್ವಚ್ಛ ಮತ್ತು ನೈರ್ಮಲ್ಯಯುತ ಪರಿಸ್ಥಿತಿಯಲ್ಲಿ, ಸೂಕ್ತ ತಾಪಮಾನದಲ್ಲಿ ಸಂಗ್ರಹಿಸಬೇಕು.
• ಹಣ್ಣು ಮತ್ತು ತರಕಾರಿಗಳನ್ನು ಬಳಸುವ ಮೊದಲು ಚೆನ್ನಾಗಿ ತೊಳೆಯಬೇಕು.
• ಆಹಾರ ಪದಾರ್ಥಗಳ ಗುಣಮಟ್ಟವನ್ನು ನಿಯಮಿತವಾಗಿ ಪರಿಶೀಲಿಸಿ ಅವು ಹಾಳಾಗದಂತೆ ಕ್ರಮ ಕೈಗೊಳ್ಳಬೇಕು.
• ಆಹಾರ ಪದಾರ್ಥಗಳನ್ನು ಸೂಕ್ತವಾಗಿ ಮುಚ್ಚಿ ಸಂಗ್ರಹಿಸಬೇಕು.
• ಅಗತ್ಯವಿರುವಲ್ಲಿ ಆಹಾರ ಉತ್ಪನ್ನಗಳಲ್ಲಿ ರಾಸಾಯನಿಕ ಹಾಗೂ ಸೂಕ್ಷ್ಮಜೀವಿ ಮಾಲಿನ್ಯಗಳ ಪರೀಕ್ಷೆಯನ್ನು ಖಚಿತಪಡಿಸಬೇಕು.
3. ಅಡುಗೆ ಮತ್ತು ಆಹಾರ ಸಂಗ್ರಹಣೆ
• ಆಹಾರವನ್ನು ಸಮರ್ಪಕವಾಗಿ ತಯಾರಿಸಿ, ಸಂಸ್ಕರಿಸಿ ಮತ್ತು ಸಂಪೂರ್ಣವಾಗಿ ಬೇಯಿಸಬೇಕು.
• ಆಹಾರ ತಯಾರಿಕೆಗೆ ಬಳಸುವ ಎಲ್ಲಾ ಪದಾರ್ಥಗಳು ತಾಜಾವಾಗಿದ್ದು, ಸಂಪೂರ್ಣವಾಗಿ ಬೇಯಿಸಿರುವುದನ್ನು ಖಚಿತಪಡಿಸಬೇಕು.
• ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರ ತಯಾರಿಕೆಯನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕು.
• ಬಳಸಿದ ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡುವುದನ್ನು ತಪ್ಪಿಸಬೇಕು.
• ಆಹಾರವನ್ನು ಸಂಪೂರ್ಣವಾಗಿ ಬೇಯಿಸಬೇಕು.
• ತಣ್ಣನೆಯ ಆಹಾರವನ್ನು 5°Cಕ್ಕಿಂತ ಕಡಿಮೆ ತಾಪಮಾನದಲ್ಲಿ ಹಾಗೂ ಬಿಸಿ ಆಹಾರವನ್ನು 60°Cಕ್ಕಿಂತ ಹೆಚ್ಚಿನ ತಾಪಮಾನದಲ್ಲಿ ಇಡಬೇಕು.
• ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರಕ್ಕಾಗಿ ಪ್ರತ್ಯೇಕ ಕತ್ತರಿಸುವ ಫಲಕಗಳು, ಚಾಕುಗಳು ಹಾಗೂ ಪಾತ್ರೆಗಳನ್ನು ಬಳಸಬೇಕು.
• ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರವನ್ನು ಪ್ರತ್ಯೇಕ ಪಾತ್ರೆಗಳಲ್ಲಿ ಸಂಗ್ರಹಿಸಬೇಕು.
• ತಣ್ಣನೆಯ ಆಹಾರವನ್ನು 5°Cಕ್ಕಿಂತ ಕಡಿಮೆ ತಾಪಮಾನದಲ್ಲಿ ಮತ್ತು ಫ್ರೋಜನ್ ಆಹಾರ ಪದಾರ್ಥಗಳನ್ನು -18°C ಅಥವಾ ಅದಕ್ಕಿಂತ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಬೇಕು.
4. ಸಿಬ್ಬಂದಿಯ ವೈಯಕ್ತಿಕ ನೈರ್ಮಲ್ಯ
• FSSAI ನಿಯಮಗಳನ್ವಯ ಆಹಾರ ನಿರ್ವಹಿಸುವ ಸಿಬ್ಬಂದಿಯ ಉನ್ನತ ಮಟ್ಟದ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಬೇಕು.
• ಸಿಬ್ಬಂದಿಯು ಸ್ವಚ್ಛ ಸಮವಸ್ತ್ರ, ಹೇರ್‌ನೆಟ್/ತಲೆಕವಚ ಹಾಗೂ ಅಗತ್ಯವಿರುವಲ್ಲಿ ಮಾಸ್ಕ್ ಮತ್ತು ಏಪ್ರನ್ ಧರಿಸಬೇಕು.
• ಸಿಬ್ಬಂದಿಯ ಉಗುರುಗಳನ್ನು ಚಿಕ್ಕದಾಗಿ ಹಾಗೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.
• ಅಡುಗೆಮನೆ ಮತ್ತು ಆಹಾರ ಸೇವಾ ಸಿಬ್ಬಂದಿಯ ವಾರ್ಷಿಕ ವೈದ್ಯಕೀಯ ಆರೋಗ್ಯ/ಫಿಟ್ನೆಸ್ ದಾಖಲೆಗಳನ್ನು ನವೀಕರಿಸಿ ನಿರ್ವಹಿಸಬೇಕು.
• ದಿನನಿತ್ಯದ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ಕ್ರಮಗಳನ್ನು ಮೇಲ್ವಿಚಾರಣೆ ಮಾಡಲು ತರಬೇತಿ ಪಡೆದ FoSTaC Food Safety Supervisor ಅನ್ನು ನಿಯೋಜಿಸಬೇಕು ಎನ್ನುವುದು ಸೇರಿದಂತೆ ಹಲವು ನಿಯಮಗಳನ್ನು ಅನುಸರಿಸುವಂತೆ ನಿರ್ದೇಶನ ನೀಡಲಾಗಿದೆ.


Click it and Unblock the Notifications
