Schools: ಅರ್ಧ ಶೈಕ್ಷಣಿಕ ಮುಗಿದ್ರು ಬೆಂಗಳೂರಿನ 22,210 ಶಾಲಾ ಮಕ್ಕಳಿಗೆ ಇನ್ನೂ ಶೂ, ಸಾಕ್ಸ್ ಸಿಕ್ಕಿಲ್ಲ!
ಬೆಂಗಳೂರು: ಶೈಕ್ಷಣಿಕ ವರ್ಷದಲ್ಲಿ ಅರ್ಧ ವರ್ಷ ಕಳೆದರೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಶಾಲೆಗಳ ಮಕ್ಕಳಿಗೆ ಇನ್ನೂ ಶೂ, ಸಾಕ್ಸ್ ವಿತರಿಸಲಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್ ಅವರು, 'ಬಡ ಮಕ್ಕಳ ಕಾಲಿಗೆ ಶೂ ಕೊಡಲೂ ಯೋಗ್ಯತೆ ಇಲ್ಲದ ಕಾಂಗ್ರೆಸ್ ಸರ್ಕಾರಕ್ಕೆ ನೂರಾರು ಕೋಟಿ ರೂಪಾಯಿ ಬಜೆಟ್ ಏಕೆ? ' ಎಂದು ಟೀಕಿಸಿದ್ದಾರೆ.
ಬೆಂಗಳೂರಿನ ಜಿಬಿಎ ಶಾಲೆಗಳ 22,210 ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷದ ಅರ್ಧ ವಾರ್ಷಿಕ ಪರೀಕ್ಷೆ ಮುಗಿದರೂ ಶೂ, ಸಾಕ್ಸ್ ಇಲ್ಲ!. ಎರಡು ವರ್ಷಗಳಿಂದ ಸ್ವೆಟರ್‌ಗಳೂ ಇಲ್ಲ! ಹರಿದ ಶೂಗಳನ್ನೇ ಹಾಕಿಕೊಂಡು ಶಾಲೆಗೆ ಬರುವ ಬಡ ಮಕ್ಕಳ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇಲ್ಲದ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು!

ಬಡವರ ಹೆಸರಿನಲ್ಲಿ ಅಧಿಕಾರ, ಮಕ್ಕಳ ಪಾಲಿಗೆ ಮಾತ್ರ ನಿರ್ಲಕ್ಷ್ಯ!
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರೇ, ಶಾಲಾ ಮಕ್ಕಳ ಮೂಲಭೂತ ಸೌಲಭ್ಯಗಳನ್ನೂ ಸಕಾಲಕ್ಕೆ ಒದಗಿಸಲಾಗದಷ್ಟು ದಿವಾಳಿಯಾಗಿದೆಯೇ ಈ ಕಾಂಗ್ರೆಸ್ ಸರ್ಕಾರ? ಸ್ವೆಟರ್‌ಗಾಗಿ ಪೋಷಕರ ಖಾತೆಗೆ ಹಣ ಹಾಕುವ ಭರವಸೆಯೂ ಈಡೇರಿಲ್ಲ. ಘೋಷಣೆಗಳು ಮಾತ್ರ ಭರ್ಜರಿ; ಅನುಷ್ಠಾನ ಮಾತ್ರ ಶೂನ್ಯ! ಎಂದು ಅವರು ಸರ್ಕಾರದ ಆಡಳಿತದ ವಿರುದ್ಧ ಕಿಡಿ ಕಾರಿದ್ದಾರೆ.
ಎರಡು ವರ್ಷಗಳಿಂದ ಸ್ವೆಟರ್‌ಗಳಿಲ್ಲ; ಇದೇನಾ ಮಕ್ಕಳ ಕಾಳಜಿ?
ಬಡ ಮಕ್ಕಳ ಶಿಕ್ಷಣ ಮತ್ತು ಘನತೆಯನ್ನು ಕಾಪಾಡಬೇಕಾದ ಸರ್ಕಾರ, ಅವರ ಕನಿಷ್ಠ ಅಗತ್ಯಗಳನ್ನೂ ನಿರ್ಲಕ್ಷಿಸಿದೆ. ಮಕ್ಕಳಿಗೆ ಶೂ, ಸಾಕ್ಸ್, ಸ್ವೆಟರ್ ಒದಗಿಸಲೂ ಆಗದವರು ರಾಜ್ಯದ ಆಡಳಿತವನ್ನು ಹೇಗೆ ನಿಭಾಯಿಸುತ್ತೀರಿ?
ರಾಜ್ಯ ಸರ್ಕಾರ ತನ್ನ ಕಾರ್ಯಕ್ರಮಗಳಿಗೆ, ಗ್ಯಾರಂಟಿ ಸಮೀತಿಯಂಥ ಆಡಂಬರಗಳಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತದೆ. ಆದರೆ ಮಕ್ಕಳ ಮೂಲಸೌಕರ್ಯಕ್ಕೆ ಹಣ ನೀಡಲು ಮೀನಮೇಷ ಎಣಿಸುತ್ತಿದೆ ಎಂದು ಅವರು ದೂರಿದರು.
ತಮ್ಮ ರಾಜಕೀಯ ಪ್ರಚಾರಕ್ಕೆ ತೋರುವ ಉತ್ಸಾಹದ ಒಂದು ಪಾಲನ್ನಾದರೂ ಬಡ ಮಕ್ಕಳ ಭವಿಷ್ಯಕ್ಕೆ ತೋರಿಸಿದ್ದರೆ ಈ ದಯನೀಯ ಸ್ಥಿತಿ ಬರುತ್ತಿರಲಿಲ್ಲ. ಬಡವರ ಹೆಸರಿನಲ್ಲಿ ರಾಜಕೀಯ ಮಾಡುವ ಕಾಂಗ್ರೆಸ್‌ಗೆ ಬಡ ಮಕ್ಕಳ ಸಂಕಷ್ಟ ಮಾತ್ರ ಕಾಣುತ್ತಿಲ್ಲ!
ಕೂಡಲೇ ಎಲ್ಲಾ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ಮತ್ತು ಸ್ವೆಟರ್‌ಗಳನ್ನು ವಿತರಿಸಿ. ವಿಳಂಬಕ್ಕೆ ಕಾರಣರಾದವರ ಹೊಣೆಗಾರಿಕೆ ನಿಗದಿಪಡಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಡವರ ಮಕ್ಕಳಿಗೆ ಒಂದು ಜೊತೆ ಶೂ ಕೊಡಲಾಗದ ನಿಮ್ಮ ಆಡಳಿತಕ್ಕೆ ಯಾವ ಸಾಧನೆಯ ಹೆಮ್ಮೆ? ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುವುದನ್ನು ಇನ್ನಾದರೂ ನಿಲ್ಲಿಸಿ ಎಂದು ಆಗ್ರಹಿಸಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ #CongressFailsKarnataka ಹ್ಯಾಷ್ ಟ್ಯಾಗ್ ಹಾಕಿ, ಸಿಎಂ ಡಿಕೆ ಶಿವಕುಮಾರ್ ಮತ್ತು ಕೃಷ್ಣ ಬೈರೇಗೌಡ ಅವರಿಗೆ ಟ್ಯಾಗ್ ಮಾಡಿ ಅಸಮಾಧಾನ ಹೊರ ಹಾಕಿದ್ದಾರೆ.


Click it and Unblock the Notifications
