Bengaluru: ಫ್ರೀಡಂ ಹಬ್ಬಕ್ಕೆ ಭರ್ಜರಿ ಸಿದ್ಧತೆ, ಭಾಗವಹಿಸಲು ಏನು ಮಾಡಬೇಕು ಮಹೇಶ್ವರ್ ರಾವ್ ಹೇಳಿದ್ದೇನು

ಬೆಂಗಳೂರು: ಬೆಂಗಳೂರಿನಲ್ಲಿ ಆಗಸ್ಟ್ 15ರಂದು ನಡೆಯಲಿರುವ ಫ್ರೀಡಂ ಹಬ್ಬಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ತಿಳಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದು "ಫ್ರೀಡಂ ಹಬ್ಬ" ಆಚರಿಸುವ ಸಂಬಂಧ ಮಾತನಾಡಿದ ಅವರು, ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮುಂಭಾಗದಲ್ಲಿ ಸಾರ್ವಜನಿಕರಿಗಾಗಿ ಫ್ರೀಡಂ ಹಬ್ಬವನ್ನು ಆಯೋಜಿಸಲಾಗುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯನ್ನು ನಾಗರಿಕರು ಹಬ್ಬದ ರೀತಿಯಲ್ಲಿ ಆಚರಿಸಬೇಕು ಎಂಬ ಉದ್ದೇಶದಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದಿದ್ದಾರೆ.

ಭಾರತದ ವೈವಿಧ್ಯಮಯ ಸಂಸ್ಕೃತಿಗಳು, ಕರ್ನಾಟಕದ ವಿವಿಧ ಪ್ರದೇಶಗಳು ಹಾಗೂ ವೃತ್ತಿಪರರನ್ನು ಪ್ರತಿನಿಧಿಸುವ, ಸುಮಾರು 25 ಕಲಾತಂಡಗಳು ಭಾಗವಹಿಸಲಿರುವ ವರ್ಣರಂಜಿತ ಸ್ವಾತಂತ್ರ್ಯ ದಿನದ ಪೆರೇಡ್ ಆಯೋಜಿಸಲಾಗಿದೆ. ಇದರಲ್ಲಿ ಜಾನಪದ ಪ್ರದರ್ಶನಗಳು, ಸಂಗೀತ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ.

Bengaluru

ಮಕ್ಕಳ ಮೇಳ

ಸ್ವಾತಂತ್ರ್ಯದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವುದರ ಜೊತೆಗೆ ಕಲಿಕೆಯನ್ನು ಆನಂದದಾಯಕವಾಗಿಸುವ ಉದ್ದೇಶದಿಂದ ಸಂವಾದಾತ್ಮಕ ಆಟಗಳು, ಕಥೆ ಹೇಳುವಿಕೆ, ಕಲೆ ಮತ್ತು ಕರಕುಶಲ ಚಟುವಟಿಕೆಗಳು, ಸೃಜನಶೀಲ ಕಾರ್ಯಾಗಾರಗಳು ಹಾಗೂ ಕುಟುಂಬ ಚಟುವಟಿಕೆಗಳನ್ನು ಒಳಗೊಂಡ ಮಕ್ಕಳ ಮೇಳವನ್ನು ಆಯೋಜಿಸಲಾಗಿದೆ. ಅಂಬೇಡ್ಕರ್ ವೀದಿಯಲ್ಲಿ ಜೀವನಶೈಲಿ ಉತ್ಪನ್ನಗಳು, ಕರಕುಶಲ ವಸ್ತುಗಳು, ಜೈವಿಕ ಉಡುಪುಗಳು, ಆಟಿಕೆಗಳು, ಜವಳಿ ಹಾಗೂ ಆಹಾರ ಸೇರಿದಂತೆ 120ಕ್ಕೂ ಹೆಚ್ಚು ಮಳಿಗೆಗಳು ದಿನವಿಡೀ ಇರಲಿವೆ.

ಸ್ವಾತಂತ್ರ್ಯ ಪಯಣ

ಸ್ವಾತಂತ್ರ್ಯ ಹೋರಾಟದ ವಿವಿಧ ಹಂತಗಳನ್ನು ಪರಿಚಯಿಸುವ ಒಂಬತ್ತು ವಿಭಾಗಗಳ ಪಯಣವನ್ನು ಆಯೋಜಿಸಲಾಗಿದೆ. ಇಲ್ಲಿ ಸಂದರ್ಶಕರು ಸ್ವಾತಂತ್ರ್ಯ ಹೋರಾಟದ ವಿವಿಧ ಹಂತಗಳು ಹಾಗೂ ಕಲಾವಿದರ ಪ್ರದರ್ಶನಗಳನ್ನು ವೀಕ್ಷಿಸಬಹುದಾಗಿದೆ. ಮಹಾತ್ಮ ಗಾಂಧೀಜಿ ಪ್ರತಿಮೆಯ ಬಳಿ "ವಾಕಿಂಗ್ ಮ್ಯೂಸಿಯಂ" (ಭಾರತದ ಸ್ವಾತಂತ್ರ್ಯ ಪಯಣ)ವನ್ನು ಅನುಭವಿಸುವ ಅವಕಾಶವೂ ಇರಲಿದೆ.

ವಿಧಾನಸೌಧದ ವಿಧಾನಸಭಾ ಪ್ರವಾಸ

ನಿಗದಿತ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳ ಮೂಲಕ ಮಕ್ಕಳಿಗಾಗಿ ವಿಧಾನಸೌಧದ ಪ್ರವಾಸವನ್ನು ಆಯೋಜಿಸಲಾಗುವುದು. 20-25 ಜನರ ಗುಂಪುಗಳಿಗೆ ಮಾರ್ಗದರ್ಶಕರೊಂದಿಗೆ 15 ನಿಮಿಷಗಳ ಅವಧಿಯ ಪ್ರವಾಸವನ್ನು ನಡೆಸಲಾಗುವುದು. ಇದರೊಂದಿಗೆ ಸಂಗೀತ ರಸಸಂಜೆ ಸಹ ಇರಲಿದೆ.

ಬೆಂಗಳೂರಿನ ಫ್ರೀಡಂ ಹಬ್ಬ - ಲೈವ್ ವ್ಯವಸ್ಥೆ

ಫ್ರೀಡಂ ಹಬ್ಬದ ಸಂಪೂರ್ಣ ಕಾರ್ಯಕ್ರಮವನ್ನು ಯೂಟ್ಯೂಬ್ ಲೈವ್ ಲಿಂಕ್ ಮೂಲಕ ವೀಕ್ಷಿಸುವ ಅವಕಾಶ ಕಲ್ಪಿಸಲಾಗುವುದು. ಜೊತೆಗೆ ವಿಧಾನಸೌಧದ ಆವರಣದಲ್ಲಿ ಎಲ್‌ಇಡಿ ಸ್ಕ್ರೀನ್‌ಗಳ ವ್ಯವಸ್ಥೆಯನ್ನೂ ಮಾಡಲಾಗುವುದು. ಇದರಿಂದ ಕಾರ್ಯಕ್ರಮವನ್ನು ವಿವಿಧ ಸ್ಥಳಗಳಿಂದ ವೀಕ್ಷಿಸಲು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.

ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಮಾತನಾಡಿ, ನಗರದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಮಧ್ಯಾಹ್ನ 12ರಿಂದ ರಾತ್ರಿ 10ರವರೆಗೆ ಕಾರ್ಯಕ್ರಮ ನಡೆಯಲಿದೆ. ನಾಗರಿಕರಿಗೆ ಅನುಕೂಲವಾಗುವಂತೆ ಸುರಕ್ಷತೆಯನ್ನು ಕಾಪಾಡಿಕೊಂಡು ಅಗತ್ಯ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಹೇಳಿದರು.

ಫ್ರೀಡಂ ಹಬ್ಬಕ್ಕೆ ಈಗಾಗಲೇ 18 ಸಾವಿರ ನಾಗರಿಕರು ನೋಂದಣಿ ಮಾಡಿಕೊಂಡಿದ್ದು, ನೋಂದಣಿ ಮಾಡಿಕೊಂಡವರಿಗೆ ಮಾತ್ರ ಕಾರ್ಯಕ್ರಮಕ್ಕೆ ಪ್ರವೇಶ ನೀಡಲಾಗುವುದು. ಪ್ರವೇಶಕ್ಕಾಗಿ ಕ್ಯೂಆರ್ ಕೋಡ್ ವ್ಯವಸ್ಥೆ ಮಾಡಲಾಗಿದ್ದು, ಒಂದು ಕ್ಯೂಆರ್ ಕೋಡ್‌ಗೆ ಒಬ್ಬರಿಗೆ ಮಾತ್ರ ಅವಕಾಶವಿರಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ದಿನ ಅಂಬೇಡ್ಕರ್ ಬೀದಿ ರಸ್ತೆಯನ್ನು ಬೆಳಗ್ಗೆ 11 ಗಂಟೆಯಿಂದ ಸಂಪೂರ್ಣವಾಗಿ ಮುಚ್ಚಲಾಗುವುದು. ಸಂಚಾರ ಮಾರ್ಗಸೂಚಿಯನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗುವುದು. ವಿಧಾನಸೌಧ ಮೆಟ್ರೋ ನಿಲ್ದಾಣವು ಅಂದು ಮುಚ್ಚಲ್ಪಟ್ಟಿರುತ್ತದೆ. ವಿಶ್ವೇಶ್ವರಯ್ಯ ಹಾಗೂ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ಇಳಿದು ಕಾರ್ಯಕ್ರಮಕ್ಕೆ ಬರಬಹುದಾಗಿದೆ.

ಬಸ್ ಹಾಗೂ ಕ್ಯಾಬ್‌ಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಮನವಿ ಮಾಡಿದರು. ಕಾರ್ಯಕ್ರಮಕ್ಕೆ ಜಿಓಪಿ ವೃತ್ತ, ಕೆ.ಆರ್. ಸರ್ಕಲ್ ಹಾಗೂ ಕಬ್ಬನ್ ಪಾರ್ಕ್ (ಹೈಕೋರ್ಟ್ ಗೇಟ್) ಮಾರ್ಗಗಳಲ್ಲಿ ಮಾತ್ರ ಪ್ರವೇಶ ಮತ್ತು ನಿರ್ಗಮನಕ್ಕೆ ಅವಕಾಶ ನೀಡಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ 18 ಪ್ರವೇಶ ಪಾಯಿಂಟ್ ಗಳನ್ನು ಸ್ಥಾಪಿಸಲಾಗಿದ್ದು, ನಾಗರಿಕರು ಪೊಲೀಸ್ ಸಿಬ್ಬಂದಿಯೊಂದಿಗೆ ಸಹಕರಿಸಬೇಕು.

12 ವರ್ಷದೊಳಗಿನ ಮಕ್ಕಳಿಗೆ ನೋಂದಣಿಯ ಅವಶ್ಯಕತೆಯಿಲ್ಲ. ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ವಿಶೇಷ ಕಾಳಜಿ ವಹಿಸಲಾಗುವುದು. ವಿಧಾನಸೌಧದ ಪ್ರವೇಶಕ್ಕೆ ಕಡ್ಡಾಯವಾಗಿ ಗುರುತಿನ ಚೀಟಿಯನ್ನು ತರಬೇಕು. ಗುರುತಿನ ಚೀಟಿ ಇಲ್ಲದಿದ್ದಲ್ಲಿ ಪ್ರವೇಶ ನೀಡಲಾಗುವುದಿಲ್ಲ ಎಂದರು.

3,000ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ

ಫ್ರೀಡಂ ಹಬ್ಬದ ಕಾರ್ಯಕ್ರಮದಲ್ಲಿ ಯಾವುದೇ ದುರ್ಘಟನೆಗಳು ನಡೆಯದಂತೆ ಸಿವಿಲ್ ಪೊಲೀಸ್, ಕೆಎಸ್‌ಆರ್‌ಪಿ ಸೇರಿದಂತೆ 3,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ವಿಧಾನಸೌಧದೊಳಗೆ ಪ್ರವೇಶಿಸುವವರಿಗೆ ಬಣ್ಣದ ಸಂಕೇತ ಹೊಂದಿರುವ ಟ್ಯಾಗ್‌ಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಸಂದರ್ಶಕರ ಸೌಲಭ್ಯಗಳು ಮತ್ತು ಸಂಚಾರ ವ್ಯವಸ್ಥೆ

* ಕಾರ್ಯಕ್ರಮದ ಸ್ಥಳದಾದ್ಯಂತ ಒಟ್ಟು 80 ಜೈವಿಕ ಶೌಚಾಲಯಗಳು (Bio-Toilets) ಲಭ್ಯವಿರಲಿವೆ. ಈ ಪೈಕಿ 30 ಶೌಚಾಲಯಗಳು ವಿಧಾನಸೌಧದ ಒಳಭಾಗದಲ್ಲಿ ಹಾಗೂ 50 ಶೌಚಾಲಯಗಳು ಹೊರಭಾಗದಲ್ಲಿ ಇರಲಿವೆ.

* ಪ್ರಮುಖ ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇರಲಿದೆ.

* ಕಾರ್ಯಕ್ರಮದ ನಂತರದ ನಿರ್ಗಮನದ ವೇಳೆ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಮೆಟ್ರೋ ಸೇವೆಗಳನ್ನು ಒದಗಿಸಲಾಗುವುದು.

* ನಗರದ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸಲು ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗುವುದು.

* ನಿಗದಿತ ಪಾರ್ಕಿಂಗ್ ವ್ಯವಸ್ಥೆ ಲಭ್ಯವಿರಲಿದೆ.

* ಎರಡು ಅಗ್ನಿಶಾಮಕ ವಾಹನಗಳ ವ್ಯವಸ್ಥೆ ಮಾಡಲಾಗಿದೆ.

* ರಾಣಿ ಚೆನ್ನಮ್ಮ ದಳದ ಸಹಯೋಗದೊಂದಿಗೆ ಮಹಿಳಾ ಸಹಾಯ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಇಲ್ಲಿ ಶಿಶುಗಳಿಗೆ ಹಾಲುಣಿಸುವ ಕೊಠಡಿ, ವಿಶ್ರಾಂತಿ ವ್ಯವಸ್ಥೆ ಹಾಗೂ ಸ್ಯಾನಿಟರಿ ಸೌಲಭ್ಯಗಳು ಲಭ್ಯವಿರಲಿವೆ.

* ಪ್ರತಿಯೊಂದು ಚಟುವಟಿಕೆಗೆ ಪೊಲೀಸ್, ಜಿಬಿಎ, ಆಯೋಜಕರು ಹಾಗೂ ಈವೆಂಟ್ ಪ್ರತಿನಿಧಿಗಳು ಸೇರಿದಂತೆ ತಲಾ ನಾಲ್ಕು ಪ್ರತಿನಿಧಿಗಳನ್ನು ನಿಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+