ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊವಿಡ್ 19 ರೋಗಿ ಆತ್ಮಹತ್ಯೆ
ಬೆಂಗಳೂರು, ಏಪ್ರಿಲ್ 27: ಬೆಂಗಳೂರಿನಲ್ಲಿ ಕೊವಿಡ್19 ರೋಗಿಗಳ ಚಿಕಿತ್ಸೆಗಾಗಿ ಮೀಸಲಾಗಿರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೋಂಕಿತ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆತಂಕದ ವಾತಾವರಣ ಉಂಟಾಗಿದೆ.
ಕೊರೋನಾ ಸೋಂಕಿತ ರೋಗಿಯಿಂದ ಸೋಮವಾರ ಬೆಳಗ್ಗೆ ಆಸ್ಪತ್ರೆಯ 4ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕೊರೋನಾ ಸೋಂಕು ಕಂಡು ಬಂದ ಹಿನ್ನೆಲೆ ವ್ಯಕ್ತಿಗೆ ಆಸ್ಪತ್ರೆಯ ಟ್ರಾಮಾಕೇರ್ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಬೆಳಗ್ಗೆ ಇಡ್ಲಿ ತಿನ್ನಬೇಕು ಎಂದು ಕೇಳಿದ್ದರು. ಸಿಬ್ಬಂದಿ ಇಡ್ಲಿ ತರಲು ಹೋಗಿದ್ದ ಸಮಯದಲ್ಲಿ ತುರ್ತು ನಿರ್ಗಮನದಿಂದ ಕೇಂದ್ರದಿಂದ ಹೊರಬಂದು ಮಹಡಿಯಿಂದ ಕೆಳಗೆ ಜಿಗಿದು ಮೃತರಾಗಿದ್ದಾರೆ.

465ನೇ ರೋಗಿ ಮಹಿಳೆ ಇತ್ತೀಚೆಗೆ ಮೃತರಾಗಿದ್ದರು. ಅವರ ಪಕ್ಕದ ವಾರ್ಡ್ ನಲ್ಲಿದ್ದ ಈ ವ್ಯಕ್ತಿಗೆ ಈ ಸಾವು ಕಾಡಿರಬಹುದು. ಈತ ಮದ್ಯವ್ಯಸನಿಯಾಗಿದ್ದ, ಕಿಡ್ನಿ ಸಮಸ್ಯೆಯಿತ್ತು. ನಿನ್ನೆ ಡಯಾಲಿಸಿಸ್ ಮಾಡಿಸಿಕೊಂಡಿದ್ದರು. ಆದರೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಬೆಂಗಳೂರಿನಲ್ಲಿ ಅಣ್ಣನ ಮನೆಯಲ್ಲಿ ವಾಸವಾಗಿದ್ದ 50 ವರ್ಷ ವಯಸ್ಸಿನ ವ್ಯಕ್ತಿಯನ್ನು 466ನೇ ಸೋಂಕಿತ ಎಂದು ಗುರುತಿಸಲಾಗುತ್ತದೆ. ಕಳೆದ 4 ವರ್ಷಗಳಿಂದ ಕಿಡ್ನಿ ಸಮಸ್ಯೆ ಎದುರಿಸುತ್ತಿದ್ದರು. ಆಟೋರಿಕ್ಷಾ ಚಾಲಕರಾಗಿದ್ದರು. ಸೋಂಕಿತ ವ್ಯಕ್ತಿಯ ಕುಟುಂಬದವರಿಗೂ ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ಬೆಂಗಳೂರು DHO ಗುಳೂರು ಶ್ರೀನಿವಾಸ್ ಹೇಳಿದ್ದಾರೆ.












Click it and Unblock the Notifications