Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವುದು ಎಂದರೆ ಅದೊಂದು ಸಾಹಸವೇ ಸರಿ. ಸಾವಿರಾರು ರೂಪಾಯಿ ಅಡ್ವಾನ್ಸ್ ಕೊಟ್ಟು, ತಿಂಗಳಿಗೆ ದೊಡ್ಡ ಮೊತ್ತದ ಬಾಡಿಗೆ ಕಟ್ಟಿದರೂ ಕೆಲವೊಮ್ಮೆ ನೆಮ್ಮದಿ ಸಿಗುವುದಿಲ್ಲ. ಇದೀಗ ಸಿಲಿಕಾನ್ ಸಿಟಿಯಲ್ಲಿ ನೆಲೆಸಿರುವ ದಂಪತಿಯೊಬ್ಬರು, ತಾವು ತಿಂಗಳಿಗೆ 19,000 ರೂಪಾಯಿಗೆ 2 ಬಿಎಚ್‌ಕೆ (2BHK) ಮನೆ ಹುಡುಕುವ ಮುನ್ನ ಮಾಡಿದ ತಪ್ಪುಗಳೇನು ಮತ್ತು ಅದರಿಂದ ಕಲಿತ ಪಾಠಗಳೇನು ಎನ್ನುವ ಕುರಿತು ಎಚ್ಚರಿಕೆಯ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ರೋಶನಿ ಮತ್ತು ಅಭಿಷೇಕ್ ಎಂಬ ದಂಪತಿ ತಮ್ಮ ಜಂಟಿ ಇನ್‌ಸ್ಟಾಗ್ರಾಮ್ ಖಾತೆಯಾದ '@remotewalizindagi' ಯಲ್ಲಿ ಈ ಉಪಯುಕ್ತ ಮಾಹಿತಿ ಇರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿರುವ ಇವರು, ಪ್ರಸ್ತುತ ಈಗ ಇವರು ಮೂರನೇ ಮನೆಯಲ್ಲಿ ನೆಲೆಸಿದ್ದಾರೆ. ಕೈಗೆಟಕುವ ದರದಲ್ಲಿ, ಅಂದರೆ 19 ಸಾವಿರ ರೂ.ಗೆ ಉತ್ತಮ ಫ್ಲ್ಯಾಟ್ ಸಿಗುವ ಮುನ್ನ ತಾವು ಮನೆ ಹುಡುಕುವ ಭರದಲ್ಲಿ ಮಾಡಿದ ಎಡವಟ್ಟುಗಳನ್ನು ಈ ವಿಡಿಯೋದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ವೈರಲ್ ವಿಡಿಯೋದಲ್ಲಿ ಏನಿದೆ?
"ಬೆಂಗಳೂರಿನಲ್ಲಿ ನಮಗೆ 19 ಸಾವಿರಕ್ಕೆ 2BHK ಮನೆ ಸಿಕ್ಕಿದೆ. ಆದರೆ ಈ ಮನೆ ಸಿಗುವ ಮುನ್ನ ನಾವು ಮಾಡಿದ ತಪ್ಪುಗಳನ್ನು ಯಾರಿಗೂ ಹೇಳಿರಲಿಲ್ಲ. ಮೊದಲನೆಯದಾಗಿ, ನೀರಿನ ಸಮಸ್ಯೆ. ಮನೆ ಮಾಡುವ ಮುನ್ನ ಅಲ್ಲಿ ಕಾವೇರಿ ನೀರು ಬರುತ್ತದೆಯೋ ಅಥವಾ ಟ್ಯಾಂಕರ್ ನೀರೋ ಎಂದು ವಿಚಾರಿಸಿ. ಏಕೆಂದರೆ ಟ್ಯಾಂಕರ್ ಎಂದರೆ ಪ್ರತಿ ತಿಂಗಳು ಹೆಚ್ಚುವರಿ ಹಣ ಕಳೆದುಕೊಂಡಂತೆ. ಎರಡನೆಯದಾಗಿ, ಡೆಪಾಸಿಟ್ (ಮುಂಗಡ ಹಣ) ವಾಪಸ್ ಪಡೆಯುವ ಬಗ್ಗೆ ಒಪ್ಪಂದ ಮಾಡುವಾಗಲೇ ಸ್ಪಷ್ಟವಾಗಿ ಮಾತನಾಡಿ. ಇಲ್ಲದಿದ್ದರೆ ಮನೆ ಖಾಲಿ ಮಾಡುವಾಗ ಯಾವುದಾದರೊಂದು ನೆಪ ಹೇಳಿ ಹಣ ಕಡಿತಗೊಳಿಸುತ್ತಾರೆ," ಎಂದು ರೋಶನಿ ವಿಡಿಯೋದಲ್ಲಿ ಎಚ್ಚರಿಸಿದ್ದಾರೆ.
ಜೊತೆಗೆ, ಕಸ ವಿಲೇವಾರಿಯ ಸಮಯ, ಹಾಗೂ ಆ ಪ್ರದೇಶದಲ್ಲಿ ಉತ್ತಮ ಅಡುಗೆಯವರು ಅಥವಾ ಮನೆಗೆಲಸದವರು ಸಿಗುತ್ತಾರೆಯೇ ಎನ್ನುವುದನ್ನು ಮೊದಲೇ ವಿಚಾರಿಸಿಕೊಳ್ಳುವುದು ಒಳಿತು ಎಂದು ಅವರು ಸಲಹೆ ನೀಡಿದ್ದಾರೆ.
ಬಾಡಿಗೆದಾರರಿಗೆ ದಂಪತಿಯ ಟಿಪ್ಸ್
ತಮ್ಮ ಪೋಸ್ಟ್‌ನ ಕ್ಯಾಪ್ಶನ್‌ನಲ್ಲಿ ದಂಪತಿಗಳು ಮನೆ ಹುಡುಕುವವರಿಗೆ ಮತ್ತಷ್ಟು ಪ್ರಾಯೋಗಿಕ ಸಲಹೆಗಳನ್ನು ನೀಡಿದ್ದಾರೆ:
1. ಕೇವಲ ಫ್ಲ್ಯಾಟ್‌ನ ಸೌಂದರ್ಯಕ್ಕೆ ಮರುಳಾಗಬೇಡಿ. ಮನೆಯೊಳಗೆ ಉತ್ತಮ ಗಾಳಿ ಮತ್ತು ಬೆಳಕು ಬರುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
2. ಮಾಲೀಕರು ಕೇಳಿದ ಕೂಡಲೇ ಪ್ರಶ್ನೆ ಮಾಡದೆ ದೊಡ್ಡ ಮೊತ್ತದ ಡೆಪಾಸಿಟ್ ಹಣವನ್ನು ಕಟ್ಟಬೇಡಿ. ಒಪ್ಪಂದದ ನಿಯಮಗಳನ್ನು ಕೂಲಂಕಷವಾಗಿ ಓದಿ.
3. ನೀವು ವಾಸಿಸುವ ಪ್ರದೇಶದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ. ಅಲ್ಲಿನ ವಾಹನ ದಟ್ಟಣೆ, ಶಬ್ದ ಮಾಲಿನ್ಯ, ಸುರಕ್ಷತೆ ಮತ್ತು ನಿಮ್ಮ ಕಚೇರಿಗೆ ಇರುವ ದೂರವನ್ನು ಪರಿಗಣಿಸಿ.
4 .'ಬೇರೆಯವರು ಈ ಮನೆಗೆ ಅಡ್ವಾನ್ಸ್ ಕೊಡಲು ಕಾಯುತ್ತಿದ್ದಾರೆ' ಎಂಬ ಬ್ರೋಕರ್‌ಗಳ ಅಥವಾ ಮಾಲೀಕರ ಒತ್ತಡಕ್ಕೆ ಮಣಿದು ಆತುರದಿಂದ ಮನೆ ಫೈನಲ್ ಮಾಡಬೇಡಿ.
ನೆಟ್ಟಿಗರ ಪ್ರತಿಕ್ರಿಯೆ
ದಂಪತಿಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಬೆಂಗಳೂರಿನ ಬಾಡಿಗೆದಾರರು ಕಮೆಂಟ್ ವಿಭಾಗದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. "ಬೆಂಗಳೂರಿನಲ್ಲಿ ಬಾಡಿಗೆಗೆ ಇರುವ ಪ್ರತಿಯೊಬ್ಬರೂ ಈ ಪಾಠಗಳನ್ನು ಅನುಭವದಿಂದಲೇ ಕಲಿಯುತ್ತಾರೆ," ಎಂದು ಓರ್ವ ಬಳಕೆದಾರರು ಬರೆದಿದ್ದಾರೆ. ಮತ್ತೊಬ್ಬರು, "ನೀವು ಹೇಳಿದ ಟ್ಯಾಂಕರ್ ನೀರಿನ ವಿಷಯ ನೂರಕ್ಕೆ ನೂರು ಸತ್ಯ. ಪ್ರತಿ ತಿಂಗಳು ಆ ಬಿಲ್ ಸದ್ದಿಲ್ಲದೆ ನಮ್ಮ ಜೇಬಿಗೆ ಕತ್ತರಿ ಹಾಕುತ್ತದೆ," ಎಂದು ಪ್ರತಿಕ್ರಿಯಿಸಿದ್ದಾರೆ. ಹಗಲು ಮತ್ತು ರಾತ್ರಿ ವೇಳೆಯಲ್ಲಿ ಆಯಾ ಪ್ರದೇಶದ ವಾಹನ ದಟ್ಟಣೆಯನ್ನು ಒಮ್ಮೆ ಪರಿಶೀಲಿಸುವುದು ಉತ್ತಮ ಎಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ. ಒಟ್ಟಾರೆಯಾಗಿ "ಹೊಸದಾಗಿ ಬೆಂಗಳೂರಿಗೆ ಬರುವವರಿಗೆ ಇದೊಂದು ಅದ್ಭುತವಾದ ಸಲಹೆ," ಎಂದು ನೆಟ್ಟಿಗರು ವಿಡಿಯೋವನ್ನು ಕೊಂಡಾಡಿದ್ದಾರೆ.












Click it and Unblock the Notifications