Watch Video: ಬೆಂಗಳೂರು ಪೊಲೀಸರ ಕಾರ್ಯಕ್ಕೆ ಸಲಾಂ: ಎದೆನೋವಿನಿಂದ ರಸ್ತೆಯಲ್ಲೇ ಕುಸಿದ ವ್ಯಕ್ತಿಗೆ CPR ಮಾಡಿ ರಕ್ಷಣೆ
ಬೆಂಗಳೂರು: ಎದೆ ನೋವು, ಹೃದಯಾಘಾತ ಯಾವ ಸಮಯಕ್ಕೆ ಬರುತ್ತದೆ ಎಂದು ಹೇಳಲು ಆಗುವುದಿಲ್ಲ. ನೋವು ಕಾಣಿಸಿಕೊಂಡ ಸಮಯದಲ್ಲಿ ಯಾರಾದರೂ ತತ್‌ಕ್ಷಣಕ್ಕೆ ಸಹಾಯಕ್ಕೆ ಬಂದರೆ ಅಮೂಲ್ಯ ಜೀವ ಉಳಿಸಬಹುದು. ಇದಕ್ಕೆ ಸಾಕ್ಷಿ ಎಂಬಂತಹ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ರಸ್ತೆಯಲ್ಲೇ ಎದೆ ಹಿಡಿದುಕೊಂಡು ನೋವು ಪಡುತ್ತಿದ್ದ ಬೈಕ್ ಸವಾರರನನ್ನು ಹೊಯ್ಸಳ ಗಸ್ತು ವಾಹನದ ಪೊಲೀಸ್ ಸಿಬ್ಬಂದಿ ಬದುಕಿಸಿದ ಘಟನೆ ನಡೆದಿದೆ. ಖಾಕಿ ಮಾನವೀಯ ಕಾರ್ಯದ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪೊಲೀಸರಿಗೆ ಸಲಾ ಹೊಡೆದಿದ್ದಾರೆ.
'ಬೆಂಗಳೂರು ಪೊಲೀಸರು ಮನುಷ್ಯನ ಪ್ರಾಣ ಉಳಿಸಿದ್ದಾರೆ' ಎಂಬ ಶಿರ್ಷಿಕೆಯಡಿ ಈ ವಿಡಿಯೋ ಹರಿದಾಡುತ್ತಿದೆ. ಮಾಗಡಿ ರಸ್ತೆಯಲ್ಲಿ ನಡೆದ ಘಟನೆ ಇದಾಗಿದೆ. ಹಗಲು ಹೊತ್ತಿನಲ್ಲಿ ಎಂದಿನಂತೆ ವಾಹನ ಸಂಚರಿಸುತ್ತಿದ್ದವು. ಈ ವೇಳೆ ಮಾಗಡಿ ರಸ್ತೆಯಲ್ಲಿ ಸಾಗುತ್ತಿದ್ದ ಸ್ಕೂಟರ್ ಸವಾರರೊಬ್ಬರು ವಾಹನ ನಿಲ್ಲಿಸಿ ಎದೆಗೆ ಕೈ ಇಟ್ಟುಕೊಂಡು ನೋವು ಅನುಭವಿಸುತ್ತಿರುವುದು ಅಲ್ಲಿಯೇ ಹತ್ತಿರದಲ್ಲಿದ್ದ ಬಿಲ್ಡಿಂಗ್ ಒಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಿಪಿಆರ್ ಮಾಡಿ ಜೀವ ರಕ್ಷಣೆ
ಇದಾಗುತ್ತಿದ್ದಂತೆ ಕೆಲವೇ ಕ್ಷಣಗಳಲ್ಲಿ ಅದೇ ರಸ್ತೆಯಲ್ಲಿ ಬಂದ ಹೊಯ್ಸಳ ಗಸ್ತು ವಾಹನ 88ರಲ್ಲಿದ್ದ ಪೊಲೀಸ್ ಸಹಾಯಕ ಸಬ್‌ಇನ್ಸ್‌ಪೆಕ್ಟರ್ ಸಚ್ಚಿದಾನಂದ ಮೂರ್ತಿ ಮತ್ತು ಕಾನ್‌ಸ್ಟೆಬಲ್ ಬಸವರಾಜು ಅವರು ವಾಹನ ನಿಲ್ಲಿಸಿ ಆ ಸವಾರನ ಸಹಾಯಕ್ಕೆ ಧಾವಿಸಿದ್ದಾರೆ. ಕೂಡಲೇ ವ್ಯಕ್ತಿಗೆ ಖಾಕಿ ಸಿಬ್ಬಂದಿ ಸಿಪಿಆರ್ ಮಾಡಿದ್ದಾರೆ.
ತಡ ಮಾಡದೇ ಎದೆನೋವಿನಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಮಾತ್ರವಲ್ಲದೇ ಅವರ ಕುಟುಂಬದವರ ಮಾಹಿತಿ ಪಡೆದು ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸದ್ಯ ಆ ವ್ಯಕ್ತಿ ಈಗ ಆರೋಗ್ಯವಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರಿಗೆ ನೆಟ್ಟಿಗರಿಂದ ಧನ್ಯವಾದ
ಪೊಲೀಸ್ ತ್ವರಿತವಾಗಿ ಕೈಗೊಂಡ ನಿರ್ಧಾರ, ಸಮಯ ಪ್ರಜ್ಞೆಯಿಂದ ಒಂದು ಜೀವ ಉಳಿದಿದೆ. ಇದಕ್ಕಾಗಿ ಪೊಲೀಸರಿಗೆ ನೆಟ್ಟಿಗರು ಧನ್ಯವಾದ ತಿಳಿಸಿದ್ದಾರೆ. 'ಕಾನೂನು ಸುವ್ಯವಸ್ಥೆ ಕಾಯುವ ಪೊಲೀಸರ ಈ ಕಾರ್ಯಕ್ಕೆ ಇಲಾಖೆ ಮೇಲೆ ಮತ್ತಷ್ಟು ಗೌರವ ಹೆಚ್ಚಾಗಿದೆ' ಎಂದಿದ್ದಾರೆ. ಮತ್ತೊಬ್ಬರು 'ಸರಿಯಾದ ಸಮಯಕ್ಕೆ ಪೊಲೀಸರು ಸ್ಥಳಕ್ಕೆ ಬಂದಿದ್ದರಿಂದ ಘಟನೆಯು ಸುಖಾಂತ್ಯ ಕಂಡಿದೆ' ಎಂದು ಕಾಮೆಂಟ್ ಮಾಡಿದ್ದಾರೆ.
'ಜೀವ ಉಳಿಸಿದ ಇಬ್ಬರು ಪೊಲೀಸರಿಗೆ ಸೆಲ್ಯೂಟ್ ತಿಳಿಸಿದ್ದಾರೆ. ವೆಲ್‌ಡನ್ ಬೆಂಗಳೂರು ನಗರ ಪೊಲೀಸರದ್ದು ಗ್ರೇಟ್ ಜಾಬ್' ಎಂದು ಹಲವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.


Click it and Unblock the Notifications
