Bengaluru Heat Wave: ಬೆಂಗಳೂರಲ್ಲಿ ಚಳಿ ಮಾಯ, ಮುಂದಿನ 5 ದಿನ ಒಣಹವೆಯ ಮುನ್ಸೂಚನೆ
ಬೆಂಗಳೂರು, ಜನವರಿ 29: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಚಳಿ ಆವರಿಸುತ್ತಿತ್ತು. ಆಗಾಗ ಮೈಕೊರೆವ ಚಳಿ ಸಹ ದಾಖಲಾಗಿತ್ತು. ಒಂದೊಮ್ಮೆ ನಗರದಲ್ಲಿ 13 ಡಿಗ್ರಿ ಸೆಲ್ಸಿಯಸ್‌ಗೂ ತಾಪಮಾನ ಇಳಿಕೆ ಆಗಿತ್ತು. ಇದೀಗ ಚಳಿಗಾಲ ಅಂತ್ಯ ಕಾಣುವ ಲಕ್ಷಣಗಳು ಗೋಚರಿಸಿವೆ. ಇನ್ನೇನು ಕೆಲವೇ ದಿನಗಳಲ್ಲಿ ಬಿರು ಬೇಸಿಗೆ, ಒಣ ಹವೆಯ ಆರ್ಭಟ ಶುರುವಾಗಲಿದೆ. ಬೆಂಗಳೂರಿಗೆ ಮುಂದಿನ ಐದು ದಿನಗಳ ಕಾಲ ಶುಷ್ಕ ವಾತಾವರಣದ (Heat Wave Alert) ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರಿನಾದ್ಯಂತ ಆಗಾಗ ಸುರಿಯುತ್ತಿದ್ದ ಮಳೆ, ಚಳಿ ಬಹುತೇಕ ಅಂತ್ಯಗೊಂಡಂತಾಗಿದೆ. ಆಗಾಗ ಕುಸಿತ ಕಾಣುತ್ತಿದ್ದ ಕನಿಷ್ಠ ತಾಪಮಾನದಲ್ಲಿ ಬದಲಾವಣೆ ಆಗಿದೆ. ಕನಿಷ್ಠ ತಾಪಮಾನವು ಸದ್ಯ 16 ಡಿಗ್ರಿ ಸೆಲ್ಸಿಯಸ್ ಇದೆ. ಇತ್ತ ಗರಿಷ್ಠ ತಾಪಮಾನವು ಏರಿಕೆ ಆಗುತ್ತಿದ್ದ 30 ಡಿಗ್ರಿ ಸೆಲ್ಸಿಯಸ್ ಇದೆ. ಇದು ಮುಂದಿನ ಕೇಲವೇ ದಿನಗಳಲ್ಲಿ 30 ಡಿಗ್ರಿ ಸೆಲ್ಸಿಯಸ್ ದಾಟಲಿದೆ. ಆಗ ನಗರಾದ್ಯಂತ ಒಣಹವೆಯ ವಾತಾವರಣ ಕಂಡು ಬರುತ್ತದೆ.

ಈವರೆಗೆ ನಗರದ ಜನರು ಚಳಿಗೆ ಬೆಚ್ಚನೆಯ ಧಿರಿಸು ಧರಿಸಿ ಓಡಾಡುತ್ತಿದ್ದವರು, ಇದೀಗ ತೆಳ್ಳನೆಯ ಬಟ್ಟೆ ತೊಟ್ಟು ಫ್ಯಾನ್ ಮುಂದೆ, ಎಸಿ ಕೆಳಗೆ ಕೂರುವ ದಿನಗಳು ದೂರವಿಲ್ಲ. ಈ ಬಾರಿಯು ಬೆಂಗಳೂರಿಗೆ ಇನ್ನಿಲ್ಲದಂತೆ ಮೈಸುಡುವ ಬಿಸಿಲ ಝಳ ದಾಖಲಾಗುವ ನಿರೀಕ್ಷೆ ಇದೆ.
ಫೆಬ್ರವರಿ 1ರಿಂದ ಒಣಹವೆ ನಿರೀಕ್ಷೆ
ಜನವರಿ 31 ರವರೆಗೆ ಕೊಂಚ ಸಾಮಾನ್ಯ ಚಳಿ, ಸಹಜ ವಾತಾವರಣ ಕಂಡು ಬರುತ್ತಿದೆ. ಫೆಬ್ರವರಿ 1ರಿಂದ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಒಣಹವೆ ಕಂಡು ಬರಲಿದೆ. ಉದ್ಯಾನ ನಗರಿ ಬೆಂಗಳೂರಿನಲ್ಲಿ ಈಗಾಗಲೇ ಮಧ್ಯಾಹ್ನ ಅಧಿಕ ಬಿಸಿಲಿನ ತಾಪ ಕಂಡು ಬರುತ್ತಿದೆ. ಫೆಬ್ರವರಿಯಲ್ಲಿ ಈ ಬಿಸಿಲಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಮರೆಯಾಗಲಿದೆ ಮಂಜು, ಬಿಸಿಲು ತಾಪ ಏರಿಕೆ
ಮುಂದಿನ ಮೂರು ದಿನ ಕೊಂಚ ಮಂಜಿನ ವಾತಾವರಣ ಇರಲಿದ್ದು, ನಂತರ ಮರೆಯಾಗಲಿದೆ. ಸಮುದ್ರ ಮಟ್ಟದಲ್ಲಿ ಉಂಟಾಗಿದ್ದ ವೈಪರಿತ್ಯಗಳು ಮರೆಯಾಗಿದೆ. ಇನ್ನೇನಿದ್ದರು ಸಂಪೂರ್ಣವಾಗಿ ಬೇಸಿಗೆ ಆರಂಭವಾಗಲಿದೆ. ಬೆಳಗ್ಗೆ 09 ಗಂಟೆಯಿಂದ ಸಂಜೆ 05 ಗಂಟೆಗೆ ಇನ್ನಿಲ್ಲದ ಬಿಸಿಲು ಜನರನ್ನು ಕಾಡುವ ಸಾಧ್ಯತೆ ಇದೆ. ಈ ಕಾರಣದಿಂದ ಮುಂದಿನ ಐದು ದಿನಗಳ ಕಾಲ ಬೆಂಗಳೂರಿಗೆ ಹವಾಮಾನ ಇಲಾಖೆ ಒಣ ಹವೆಯ ಎಚ್ಚರಿಕೆ ನೀಡಿದೆ.
ಮೊನ್ನೆಯಷ್ಟೇ ಜನವರಿ ಅಂತ್ಯ ಮತ್ತು ಫೆಬ್ರವರಿ ಮೊದಲ ವಾರ ಬೆಂಗಳೂರಿಗೆ ಸಾಧಾರಣ ಮಳೆಯ ಎಚ್ಚರಿಕೆ ನೀಡಲಾಗಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಮಳೆ ಮರೆಯಾಗಿದೆ. ಚಳಿ ಸಹ ಕಣ್ಮರೆಯಾಗಲಿದ್ದು, ತೀವ್ರ ಬಿಸಿಲು ಆವರಿಸಿಕೊಳ್ಳುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.












Click it and Unblock the Notifications