Bengaluru PGs: ಬಿಬಿಎಂಪಿ ವ್ಯಾಪ್ತಿಯ 'ಪಿಜಿ' ಗಳಿಗೆ ಮಾರ್ಗಸೂಚಿ ಜಾರಿ
ಬೆಂಗಳೂರು, ಆಗಸ್ಟ್ 09: ಬೆಂಗಳೂರು ವ್ಯಾಪ್ತಿಯಲ್ಲಿ 'ಪೇಯಿಂಗ್ ಗೆಸ್ಟ್' (PGs) ಗಳಲ್ಲಿ ಇತ್ತೀಚೆಗೆ ಒಂದಷ್ಟು ನಡೆಯಬಾರದ ಅಪರಾಧ ಚಟುವಟಿಕೆಗಳು ನಡೆದಿವೆ. ಹೀಗಾಗಿ ಅಲರ್ಟ್ ಆಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ತನ್ನ ವ್ಯಾಪ್ತಿಯ ಪಿಜಿಗಳಿಗೆ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಇದನ್ನು ಪಾಲಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಪಾಲಿಸದಿದ್ದರೆ ಸೂಕ್ತ ಕ್ರಮ ಎದುರಿಸಬೇಕಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದ್ದಾರೆ.
ಬಿಬಿಎಂಪಿ 2020ರ ಕಾಯ್ದೆಯಡಿ, ಪಾಲಿಕೆ ವ್ಯಾಪ್ತಿಯಲ್ಲಿ ಹೊಸದಾಗಿ ಪ್ರಾರಂಭಿಸಲು ಉದ್ದೇಶಿಸಿರುವ "ಪೇಯಿಂಗ್ ಗೆಸ್ಟ್' (PGs)ಗಳಿಗೆ 'ಪರವಾನಿಗೆ ಮಂಜೂರಾತಿ'/'ನವೀಕರಣ' ಹಾಗೂ ಈಗಾಗಲೇ ಪರವಾನಿಗೆ ಪಡೆದು ಅಸ್ತಿತ್ವದಲ್ಲಿರುವ ಪೇಯಿಂಗ್ ಗೆಸ್ಟ್‌ಗಳಿಗೆ ಸಂಬಂಧಿಸಿದಂತೆ ಈ ಕೆಳಕಂಡ ಮಾರ್ಗಸೂಚಿ ಹೊರಡಿಸಿದೆ.

'ಪಿಜಿ'ಗಳು ಪಾಲಿಸಬೇಕಾದ ಮಾರ್ಗಸೂಚಿ ಅಂಶಗಳ ಪಟ್ಟಿ
* ಪೇಯಿಂಗ್ ಗೆಸ್ಟ್‌ಗಳಲ್ಲಿನ ಎಲ್ಲಾ ಪ್ರವೇಶ/ನಿರ್ಗಮನ ದ್ವಾರ, ಮತ್ತು ಆವರಣದ ಸುತ್ತಮುತ್ತಲಿನ ಘಟನಾವಳಿಗಳನ್ನು ಚಿತ್ರೀಕರಿಸಲು ಸಿ.ಸಿ. ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಿರತಕ್ಕದ್ದು. ಪ್ರತಿಯೊಂದು ಸಿ.ಸಿ ಟಿ.ವಿ. ಕ್ಯಾಮರಾದ ವೀಡಿಯೋ ಮತ್ತು ಫೋಟೇಜ್‌ಗಳನ್ನು 90 ದಿನಗಳವರೆಗೆ ಹಾರ್ಡ್ ವೇರ್ & ಸಾಫ್ಟ್‌ವೇರ್ ಬ್ಯಾಕಪ್ ಸ್ಟೋರೆಜ್‌ನ್ನು ಸಂರಕ್ಷಿಸತಕ್ಕದ್ದು.
* ಪೇಯಿಂಗ್ ಗೆಸ್ಟ್‌ಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ (First Aid Kits) ಗಳನ್ನು ಆಳವಡಿಸಿರುವುದು ಕಡ್ಡಾಯ.
* ಪೇಯಿಂಗ್ ಗೆಸ್ಟ್‌ನ ಮಾಲೀಕರು ಘನತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಿಸಿ, ವಿಲೇವಾರಿಗೊಳಸಲು ಕ್ರಮವಹಿಸಿರಬೇಕು.
* ವಸತಿ ಸಂಬಂಧಿತ ಕಟ್ಟಡ ನಿಯಮಗಳ ಪ್ರಕಾರ, ಪೇಯಿಂಗ್ ಗೆಸ್ಟ್ಗಳಲ್ಲಿ ಪ್ರತಿಯೊಬ್ಬ ನಿವಾಸಿಗೆ ವಾಸಕ್ಕೆ ತಲಾ 70 ಚದರ ಅಡಿಗಳ ಕನಿಷ್ಠ ಜಾಗವಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಕಟ್ಟಡದಲ್ಲಿ ಒದಗಿಸಲಾದ/ಲಭ್ಯವಿರುವ ಸೌಕರ್ಯಕ್ಕನುಗುಣವಾಗಿ ನಿರ್ದಿಷ್ಟ ಸಂಖ್ಯೆಯ ನಿವಾಸಿಗಳ ವಾಸಕ್ಕೆ ಮಾತ್ರ ಪರವಾನಗಿಯನ್ನು ನೀಡಬೇಕು.

* ಪೇಯಿಂಗ್ ಗೆಸ್ಟ್‌ಗಳಲ್ಲಿ ವಾಸಿಸುವ ನಿವಾಸಿಗಳಿಗೆ ಸ್ವಚ್ಛ ಹಾಗೂ ನೈರ್ಮಲ್ಯತೆ ಹೊಂದಿರುವ ಸ್ನಾನಗೃಹಗಳು ಮತ್ತು ಶೌಚಾಲಯಗಳ ಸೇವೆಯನ್ನು ಒದಗಿಸಿರಬೇಕು.
* ಪೇಯಿಂಗ್ ಗೆಸ್ಟ್‌ಗಳಲ್ಲಿ ಕಡ್ಡಾಯವಾಗಿ ಶುದ್ಧ ಕುಡಿಯುವ ನೀರಿನ ಸೌಲಭ್ಯವಿರತಕ್ಕದ್ದು. ಪ್ರತಿಯೊಬ್ಬ నిವಾಸಿಗೆ 135 LPCD ನೀರಿನ ಲಭ್ಯತೆ ಇರುವುದನ್ನು ಮಾಲೀಕರು/ಉದ್ದಿಮೆದಾರರು ಖಚಿತಪಡಿಸಿಕೊಳ್ಳತಕ್ಕದ್ದು.
* ಪೇಯಿಂಗ್ ಗೆಸ್ಟ್ ಗಳಲ್ಲಿ ಉದ್ದಿಮೆದಾರರು ತಮ್ಮದೇ ಆದ ಅಡುಗೆಮನೆ ಹೊಂದಿದ್ದಲ್ಲಿ, ಪಾಲಿಕೆಯಿಂದ ಉದ್ದಿಮೆ ಪರವಾನಗಿ ನೀಡಿದ 03 ತಿಂಗಳ ಅವಧಿಯೊಳಗೆ ಕಡ್ಡಾಯವಾಗಿ FSSAI ಇಲಾಖೆಯಿಂದ ಲೈಸನ್ಸ್‌ನ್ನು ಪಡೆದುಕೊಳ್ಳತಕ್ಕದ್ದು.
* ಉದ್ದಿಮೆದಾರರು/ಮಾಲೀಕರು ಪೇಯಿಂಗ್ ಗೆಸ್ಟ್‌ಗಳಲ್ಲಿ ವಾಸಿಸುವ ನಿವಾಸಿಗಳ ಸುರಕ್ಷತಾ ದೃಷ್ಟಿಯಿಂದ ಕನಿಷ್ಟ ಪಕ್ಷ 01 ಸಿಬ್ಬಂದಿಯನ್ನಾದರೂ ಕಡ್ಡಾಯವಾಗಿ 24*7 ಸೇವೆಯಡಿಯಲ್ಲಿ ನಿಯೋಜಿಸಿರಬೇಕು.
* ಪೇಯಿಂಗ್ ಗೆಸ್ಟ್ ಉದ್ದಿಮೆಗಳಿಗೆ ಪಾಲಿಕೆಯಿಂದ ವಾಣಿಜ್ಯ ಪರವಾನಿಗೆ ಪತ್ರ ವಿತರಿಸುವ ಮುನ್ನ ಉದ್ದೇಶಿತ ಕಟ್ಟಡದಲ್ಲಿ ಮಾಲೀಕರು ಅಗ್ನಿ ಸುರಕ್ಷತಾ ಕ್ರಮಗಳನ್ನು ಆಳವಡಿಸಿರುವ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ಅಧಿಕೃತ ಪ್ರಮಾಣ ಪತ್ರವನ್ನು ಪಡೆದುಕೊಂಡಿರುವುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.
* ತುರ್ತು ಸೇವೆಗಳಿಗೆ ಸಂಬಂಧಿಸಿದಂತೆ, ಪೇಯಿಂಗ್ ಗೆಸ್ಟ್ ಕಟ್ಟಡದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಾಯವಾಣಿ ಸಂಖ್ಯೆ-1533 ಮತ್ತು ಪೋಲೀಸ್ ಇಲಾಖೆಯ ಸಹಾಯವಾಣಿ ಸಂಖ್ಯೆ:101 ಅನ್ನು ಪ್ರದರ್ಶಿಸುವ ಫಲಕವನ್ನು ಅಳವಡಿಸಿರುವುದನ್ನು ಖಚಿತಪಡಿಸಿಕೊಳ್ಳಟ್ಟಿದ್ದು.
ಈ ಕುರಿತು ವಲಯ ಆರೊಗ್ಯಾಧಿಕಾರಿಯವರು, ಆರೋಗ್ಯ ವೈದ್ಯಾಧಿಕಾರಿಗಳು ಮತ್ತು ಹಿರಿಯ ಆರೋಗ್ಯ ಪರಿವೀಕ್ಷಕರು ತಮ್ಮ-ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಮೇಲ್ಕಂಡ ಮಾರ್ಗಸೂಚಿಗಳ ಪಾಲನೆಯಾಗುತ್ತಿರುವ ಕುರಿತು ಪ್ರತೀ ಆರು ತಿಂಗಳಿಗೊಮ್ಮೆ ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು ಎಂದು ಮುಖ್ಯ ಆಯುಕ್ತರು ಸೂಚಿಸಿದರು.
ಒಂದು ವೇಳೆ ಪಿಜಿ ಮಾಲೀಕರು ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡುವವರು (ಉದ್ದಿಮೆದಾರರ) ವಿರುದ್ಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ-2020ರ ಕಾಯ್ದೆ ಸೆಕ್ಷನ್ 307 & 308ರಂತೆ ಅಗತ್ಯ ಕ್ರಮ ಜರುಗಿಸಬೇಕು ಎಂದು ತಿಳಿಸಿದರು.












Click it and Unblock the Notifications