ಸೆ 11ರ ಬೆಂಗಳೂರು ಬಂದ್; ಶಾಲಾ-ಕಾಲೇಜಿಗೆ ರಜೆ ಇಲ್ಲ
ಬೆಂಗಳೂರು, ಸೆಪ್ಟೆಂಬರ್ 10; ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಸೆಪ್ಟೆಂಬರ್ 11ರ ಸೋಮವಾರ ಬೆಂಗಳೂರು ಬಂದ್‌ಗೆ ಕರೆ ನೀಡಿದೆ. ಖಾಸಗಿ ವಾಹನಗಳ ಸಂಚಾರ ಭಾನುವಾರ ರಾತ್ರಿಯಿಂದಲೇ ಬಂದ್ ಆಗುವ ನಿರೀಕ್ಷೆ ಇದೆ. ಆಟೋ, ಟ್ಯಾಕ್ಸಿಗಳು ಇಲ್ಲದೆ ಉದ್ಯಾನ ನಗರಿಯ ಜನರು ಸಂಚಾರ ನಡೆಸಬೇಕಿದೆ.
ಸೋಮವಾರ ಬೆಂಗಳೂರು ಬಂದ್‌ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಸರ್ಕಾರಿ ಶಾಲಾ, ಕಾಲೇಜುಗಳಿಗೆ ರಜೆ ಇಲ್ಲ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಜಿಲ್ಲಾಧಿಕಾರಿಗಳಿಗೆ ಪರಿಸ್ಥಿತಿ ನೋಡಿಕೊಂಡು ರಜೆ ನೀಡುವ ಅಧಿಕಾರವನ್ನು ನೀಡಲಾಗಿದೆ.

ಬೆಂಗಳೂರು ನಗರದ ಖಾಸಗಿ ಶಾಲೆಗಳು ಬಂದ್ ಕರೆಗೆ ನೈತಿಕ ಬೆಂಬಲ ನೀಡಿವೆ. ಕೆಲವು ಶಾಲೆಗಳು ರಜೆ ಘೋಷಣೆ ಮಾಡಿದ್ದು, ಪೋಷಕರಿಗೆ ಎಸ್‌ಎಂಎಸ್, ವಾಟ್ಸಪ್ ಮೂಲಕ ಮಾಹಿತಿ ನೀಡಿವೆ. ರಜೆ ಕೊಡುವ ಕುರಿತು ಆಯಾ ಶಾಲಾ ಆಡಳಿತ ಮಂಡಳಿಗಳು ತೀರ್ಮಾನ ಕೈಗೊಳ್ಳಬೇಕು ಎಂದು ಸ್ಪಷ್ಟಪಡಿಸಲಾಗಿದೆ.
500 ಹೆಚ್ಚುವರಿ ಬಸ್; ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟದ ಬಂದ್ ಕರೆಗೆ ಆಟೋ, ಟ್ಯಾಕ್ಸಿ, ಖಾಸಗಿ ಶಾಲೆಗಳ ಬಸ್ ಚಾಲಕರ ಸಂಘ, ವಿಮಾನ ನಿಲ್ದಾಣದ ಟ್ಯಾಕ್ಸಿ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ನೀಡಿವೆ. ಆದ್ದರಿಂದ ನಗರದಲ್ಲಿ ಸೋಮವಾರ ಖಾಸಗಿ ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗುವ ನಿರೀಕ್ಷೆ ಇದೆ.
ಬೆಂಗಳೂರು ನಗರದಲ್ಲಿ ಬಿಎಂಟಿಸಿ, ನಮ್ಮ ಮೆಟ್ರೋ ಸಂಪರ್ಕವೂ ಇದೆ. ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟದ ಬಂದ್ ಕರೆ ಹಿನ್ನಲೆಯಲ್ಲಿ ಬಿಎಂಟಿಸಿ 500 ಹೆಚ್ಚುವರಿ ಬಸ್ ಓಡಿಸಲು ತೀರ್ಮಾನಿಸಿದೆ. ಆದ್ದರಿಂದ ನಗರದಲ್ಲಿ ಸಂಚಾರಕ್ಕೆ ಯಾವುದೇ ಸಮಸ್ಯೆ ಎದುರಾಗುವುದು ಅನುಮಾನವಾಗಿದೆ.
ಸೋಮವಾರ ಮುಂಜಾನೆ 5 ರಿಂದ ರಾತ್ರಿ 10 ಗಂಟೆಯ ತನಕ ಹೆಚ್ಚವರಿ ಬಸ್‌ಗಳು ನಗರದ ವಿವಿಧ ಮಾರ್ಗದಲ್ಲಿ ಸಂಚಾರ ನಡೆಸಲಿವೆ. ಪ್ರಯಾಣಿಕರ ದಟ್ಟಣೆ ನೋಡಿಕೊಂಡು ಹೆಚ್ಚುವರಿ ಬಸ್ ಓಡಿಸಲು ಅನುಕೂಲವಾಗುವಂತೆ ಪ್ರಮುಖ ಜಂಕ್ಷನ್‌ನಲ್ಲಿ 'ಸಾರಥಿ' ಪಡೆ ಗಸ್ತು ತಿರುಗಲಿದೆ. ಅಧಿಕಾರಿಗಳು ಬಸ್ ಓಡಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ.
ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟದ ಬಂದ್‌ಗೆ 32 ಸಂಘಟನೆಗಳು ಬೆಂಬಲ ನೀಡಿವೆ. ಆದರೆ ಆಟೋ ಚಾಲಕರಲ್ಲಿ ಹಲವಾರು ಸಂಘಟನೆಗಳಿವೆ. ಇವುಗಳಲ್ಲಿ ಬಂದ್‌ಗೆ ಯಾರು ಬೆಂಬಲ ನೀಡಿದ್ದಾರೆ?, ನೈತಿಕ ಬೆಂಬಲ ಮಾತ್ರ ಯಾರು? ಎಂಬುದು ಇನ್ನೂ ಖಚಿತವಾಗಿಲ್ಲ. ಐಟಿ ಕಂಪನಿಗಳ ಉದ್ಯೋಗಿಗಳನ್ನು ಕರೆದೊಯ್ಯುವ ಬಸ್‌ಗಳು ಸಹ ಬಂದ್‌ಗೆ ಬೆಂಬಲ ನೀಡಿವೆ. ಆದರೆ ಮನೆಯಿಂದಲೇ ಕೆಲಸದ ಅವಕಾಶ ಇರುವ ಕಾರಣ ಹೆಚ್ಚು ಸಮಸ್ಯೆ ಆಗುವುದಿಲ್ಲ ಎಂದು ನಿರೀಕ್ಷೆ ಮಾಡಲಾಗಿದೆ.
ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಕರ್ನಾಟಕ ಸರ್ಕಾರದ 'ಶಕ್ತಿ ಯೋಜನೆ' ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಯೋಜನೆ ಜಾರಿಗೆ ಬಂದ ಬಳಿಕ ಖಾಸಗಿ ವಾಹನದ ಮಾಲೀಕರು, ಬಸ್, ಆಟೋ, ಟ್ಯಾಕ್ಸಿಗಳ ಚಾಲಕರಿಗೆ ನಷ್ಟವಾಗುತ್ತಿದೆ ಎಂಬುದು ಆರೋಪ. ಈ ಕುರಿತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಜೊತೆಗೆ ಒಕ್ಕೂಟ ಸಭೆ ನಡೆಸಿತ್ತು. ಆದರೆ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಆದ್ದರಿಂದ ಬಂದ್ ಕರೆ ನೀಡಲಾಗಿದೆ.
ಭಾನುವಾರ ಮಧ್ಯರಾತ್ರಿ 12 ರಿಂದ ಸೋಮವಾರ ರಾತ್ರಿ 12ರ ತನಕ ಖಾಸಗಿ ವಾಹನಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡುತ್ತೇವೆ ಎಂದು ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಹೇಳಿದೆ. ಸರ್ಕಾರ ಬೈಕ್ ಟ್ಯಾಕ್ಸಿಗಳಿಗೆ ಕಡಿವಾಣ ಹಾಕಬೇಕು ಎಂದು ಸಹ ಆಟೋ ಚಾಲಕರು ಒತ್ತಾಯಿಸುತ್ತಿದ್ದಾರೆ.
ಬೇಡಿಕೆಗಳು; ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಸರ್ಕಾರದ ಮುಂದೆ ಇಟ್ಟಿರುವ ಬೇಡಿಕೆಗಳು
* ಚಾಲಕರಿಗೆ ಮಾಸಿಕ 10 ಸಾವಿರ ರೂ. ಪರಿಹಾರ ಧನ ನೀಡಬೇಕು
* Rapido ಬೈಕ್ ಟ್ಯಾಕ್ಸಿ ಸೇವೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು
* ಅಸಂಘಟಿತ ವಾಣಿಜ್ಯ ಚಾಲಕರ ಮತ್ತು ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು
* ವೈಟ್ ಬೋರ್ಡ್ ವಾಹನಗಳಲ್ಲಿ ಬಾಡಿಗೆ ಓಡಿಸುವುದು ಸ್ಥಗಿತಗೊಳಿಸಬೇಕು
* ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕು
* ಓಲಾ, ಊಬರ್ ಸೇರಿದಂತೆ ಅಪ್ಲಿಕೇಶನ್ ಆಧಾರಿತ ಸೇವೆಗಳನ್ನು ಬಂದ್ ಮಾಡಬೇಕು
* ಖಾಸಗಿ ವಾಹನಗಳನ್ನು ಸರ್ಕಾರ ಕಿ. ಮೀ. ಆಧಾರದಲ್ಲಿ ಬಾಡಿಗೆ ಪಡೆಯಬೇಕು
* ನಿಯಮ ಬಾಹಿರವಾಗಿ ಖಾಸಗಿ ವಾಹನ ವಶಕ್ಕೆ ಪಡೆಯುವ ಫೈನಾನ್ಸ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.












Click it and Unblock the Notifications