ಬೆಂಗಳೂರಲ್ಲಿ ಕಸ ಪತ್ತೆಗೆ AI, ಈಗಾಗಲೇ ಪತ್ತೆಯಾದ ಸಮಸ್ಯೆ ನಿವಾರಣೆಗೆ ಡೆಡ್‌ಲೈನ್
ಬೆಂಗಳೂರು ಜಿಬಿಎ ವ್ಯಾಪ್ತಿಯಲ್ಲಿನ ದಕ್ಷಿಣ ನಗರ ಪಾಲಿಕೆ ಅಡಿಯಲ್ಲಿ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ತಂತ್ರಜ್ಞಾನ ಬಳಸಿಕೊಂಡು ನಾಗರಿಕ ಸಮಸ್ಯೆಗಳನ್ನು ಪತ್ತೆ ಮಾಡಲಾಗಿದೆ. ಬ್ಲಾಕ್ ಸ್ಪಾಟ್, ರಸ್ತೆ ಗುಂಡಿ, ಬೀದಿ ದೀಪ, ಅಕ್ರಮ ಜಾಹೀರಾತು ಫಲಕಗಳು ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ತ್ವರಿತವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪಿಸಿ ಪರಿಹರಿಸುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ AI ಅಳವಡಿಸಿಕೊಳ್ಳಲಾಗಿದೆ ಎಂದು ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ರವರು ತಿಳಿಸಿದರು.
ಈ ನೂತನ ವ್ಯವಸ್ಥೆಯ ಸಮರ್ಪಕ ನಿರ್ವಹಣೆಗಾಗಿ ಪ್ರಾಥಮಿಕವಾಗಿ ಪಾಲಿಕೆಯ ಮಾರ್ಷಲ್‌ಗಳು ಹಾಗೂ ಕಿರಿಯ ಆರೋಗ್ಯ ಪರಿವೀಕ್ಷಕರಿಗೆ ವಿಶೇಷ ಕಾರ್ಯಾಗಾರವನ್ನು ಗುರುವಾರ ಪಾಲಿಕೆಯ ಕಚೇರಿಯಲ್ಲಿ ಆಯೋಜಿಸಲಾಗಿತ್ತು.

ಖಾಸಗಿ ಸಂಸ್ಥೆಯ ಜೊತೆಗೆ 150 ಕಿಮೀ. ಪ್ರಾಯೋಗಿಕ ಸರ್ವೇ
ಚಿತ್ರಗುಪ್ತ್ ಅರ್ಬನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಹಯೋಗದಲ್ಲಿ ಕಳೆದ ತಿಂಗಳು ಈ ಪೈಲಟ್ ಯೋಜನೆಯ ಕಾರ್ಯಾಚರಣೆಯನ್ನು ಪಾಲಿಕೆ ವ್ಯಾಪ್ತಿಯ ಆರ್ಟೀರಿಯಲ್ ಹಾಗೂ ಸಬ್-ಆರ್ಟೀರಿಯಲ್ ರಸ್ತೆಗಳಲ್ಲಿ ನಡೆಸಲಾಗಿದೆ.
AI ಕ್ಯಾಮೆರಾ ಅಳವಡಿಸಿರುವ ವಾಹನದ ಮೂಲಕ 311 ಕಿಮೀ ರಸ್ತೆಗಳ ಪೈಕಿ 150 ಕಿ.ಮೀ ರಸ್ತೆಯಲ್ಲಿ ಸಮಗ್ರ ಸರ್ವೇ ನಡೆಸಲಾಗಿದೆ. ಈ ವಾಹನವು ರಸ್ತೆಯುದ್ದಕ್ಕೂ ಸಂಚರಿಸಿ ರಸ್ತೆ ಗುಂಡಿಗಳು (Pot holes), ಫುಟ್‌ಪಾತ್ ಒತ್ತುವರಿ, ಕಟ್ಟಡ ತ್ಯಾಜ್ಯ, ಅನಧಿಕೃತ ಆಪ್ಟಿಕಲ್ ಫೈಬರ್ ವೈರ್‌ಗಳು ಮತ್ತು ಕಸದ ಬ್ಲಾಕ್ ಸ್ಪಾಟ್‌ಗಳನ್ನು ಸ್ವಯಂಚಾಲಿತವಾಗಿ ಗುರುತಿಸಿ ಸಮಸ್ಯೆ ಟಿಕೆಟ್ ಸಂಖ್ಯೆಗಳನ್ನು ನೀಡಿದೆ.
ಅನ್ವೇಷಕ ಮೊಬೈಲ್ ಆ್ಯಪ್ ನಿಂದ ಸಮಸ್ಯೆಗಳ ನಿವಾರಣೆ
ಪತ್ತೆಯಾದ ಕಸದ ಸಮಸ್ಯೆಗಳನ್ನು ಪರಿಹರಿಸಲು "ಅನ್ವೇಷಕ" (Anveshak) ಮೊಬೈಲ್ ಅಪ್ಲಿಕೇಶನ್ ರೂಪಿಸಲಾಗಿದೆ. ಈ ಮೊಬೈಲ್ ಮೂಲಕ ತಂತ್ರಜ್ಞಾನ ದಾಖಲಿಸಿರುವ ವಾರ್ಡ್ ರಸ್ತೆಗಳಲ್ಲಿನ ಕಸದ ಸಮಸ್ಯೆಗಳು ಸಂಬಂಧಪಟ್ಟ ಕಿರಿಯ ಆರೋಗ್ಯ ಪರಿವೀಕ್ಷಕರು ಹಾಗೂ ಮಾರ್ಷಲ್‌ಗಳಿಗೆ ತಮ್ಮ ಗೋಚರವಾಗಲಿವೆ.
ಪಾಲಿಕೆಯ ಸಿಬ್ಬಂದಿಗಳು ಆ್ಯಪ್‌ನ ಡ್ಯಾಶ್‌ಬೋರ್ಡ್‌ನಲ್ಲಿ ತಮಗೆ ನಿಯೋಜಿಸಲಾದ ಸಮಸ್ಯೆಗಳ ವಿವರಗಳನ್ನು ಪರಿಶೀಲಿಸಿ ನೇರವಾಗಿ ಸ್ಥಳಕ್ಕೆ ತೆರಳಿ ಪರಿಹಾರ ಕ್ರಮ ಕೈಗೊಳ್ಳಬೇಕಾಗುತ್ತದೆ. ಸ್ಥಳದಲ್ಲಿ ಸಮಸ್ಯೆ ನಿವಾರಣೆಯಾದ ಬಳಿಕ, ಗುರುತಿಸಲಾದ ಸ್ಥಳದಿಂದ ಗರಿಷ್ಠ 50 ಮೀಟರ್ ವ್ಯಾಪ್ತಿಯೊಳಗೆ ನಿಂತು ಜಿಯೋ-ಟ್ಯಾಗ್ ಛಾಯಾಚಿತ್ರ ಅಪ್‌ಲೋಡ್ ಮಾಡಿದಾಗ ಮಾತ್ರ ಆ ಟಿಕೆಟ್ ಕ್ಲೋಸ್ ಆಗುತ್ತದೆ ಎಂದು ಆ್ಯಪ್ ಸಿದ್ಧಪಡಿಸಿರುವ ಚಿತ್ರಗುಪ್ತ್ ಅರ್ಬನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಅಧಿಕಾರಿಗಳು ವಿವರಿಸಿದರು.
ಕಸ ಸಮಸ್ಯೆ ನಿವಾರಣೆಗೆ 10 ದಿನಗಳ ಡೆಡ್‌ಲೈನ್
ಕಸದ ಪ್ರಾಯೋಗಿಕ ಸರ್ವೇ ವೇಳೆ ಒಟ್ಟು 2,000 ಟಿಕೆಟ್‌ಗಳನ್ನು AI ತಂತ್ರಜ್ಞಾನ ದಾಖಲಿಸಿದೆ. ಅದರಲ್ಲಿ ಸುಮಾರು 1,000 ಟಿಕೆಟ್‌ಗಳು ಕೇವಲ ತ್ಯಾಜ್ಯ ಮತ್ತು ಬ್ಲಾಕ್ ಸ್ಪಾಟ್‌ಗಳಿಗೆ ಸಂಬಂಧಿಸಿವೆ. ಪ್ರಸ್ತುತ ಗುರುತಿಸಲಾಗಿರುವ ಈ 1,000 ತ್ಯಾಜ್ಯ ಸಂಬಂಧಿತ ಟಿಕೆಟ್‌ಗಳನ್ನು ಮುಂದಿನ 10 ದಿನಗಳ ಒಳಗೆ ತುರ್ತಾಗಿ ಮುಕ್ತಾಯಗೊಳಿಸಲು ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಡಿಜಿಟಲ್ ದಾಖಲೆ, ಪಾರದರ್ಶಕತೆಗೆ ಒತ್ತು
ಪಾಲಿಕೆ ವತಿಯಿಂದ ಪ್ರತಿದಿನ ನೂರಾರು ಉತ್ತಮ ಕೆಲಸಗಳನ್ನು ನಿರ್ವಹಿಸುತ್ತಿದ್ದರೂ ಸೂಕ್ತ ದಾಖಲಾತಿಗಳಿಲ್ಲದೆ ಸಾರ್ವಜನಿಕ ಅರಿವಿಗೆ ಬರುತ್ತಿರುವುದಿಲ್ಲ. ಈ AI ತಂತ್ರಜ್ಞಾನ ಪಾಲಿಕೆ ಕೈಗೊಂಡ ಕ್ರಮಗಳನ್ನು ನಿಖರವಾಗಿ ದಾಖಲಿಸಲು ಹಾಗೂ ನಿರ್ವಹಿಸಿದ ನೈಜ ಕೆಲಸ ಸಾರ್ವಜನಿಕರಿಗೆ ಸಾಕ್ಷ್ಯ ಸಮೇತ ತೋರಿಸಲು ಸಹಕಾರಿಯಾಗುತ್ತದೆ. ಸಾರ್ವಜನಿಕರಿಂದ ದೂರುಗಳು ಬರುವ ಮುನ್ನವೇ ಸಮಸ್ಯೆ ಪತ್ತೆಗೆ ಎಐ ಸಹಕಾರಿಯಾಗಲಿದೆ.
ಪ್ರತಿ 30 ದಿನಗಳಿಗೊಮ್ಮೆ AI ಕ್ಯಾಮರಾ ಅಳವಡಿಸಿರುವ ವಾಹನದ ಮೂಲಕ ಈ ಹಿಂದೆ ದಾಖಲಿಸಿದ ಟಿಕೆಟ್ ಗಳ ಮರು ಪರಿಶೀಲನೆ ನಡೆಸಿ ನೂತನ ಸಮಸ್ಯೆಗಳ ಟಿಕೆಟ್ ಸೃಜಿಸುತ್ತದೆ. ಈ ಪ್ರಾಯೋಗಿಕ ಯೋಜನೆಯ ಯಶಸ್ಸು ಹಾಗೂ ಸಿಬ್ಬಂದಿಯ ಕಾರ್ಯಕ್ಷಮತೆಯ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಇಡೀ ಪಾಲಿಕೆಯ ಎಲ್ಲೆಡೆ ಇದನ್ನು ವಿಸ್ತರಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು.


Click it and Unblock the Notifications
