ಬೆಂಗಳೂರು ಆಡಳಿತ: BBMP ಟು GBA ಏನೆಲ್ಲಾ ಐತಿಹಾಸಿಕ ಬದಲಾವಣೆಗಳಾಗಿವೆ ? Year Ender 2025
Year Ender 2025: ಬೆಂಗಳೂರಿನಲ್ಲಿ 2025ನೇ ಸಾಲಿನಲ್ಲಿ ಆಡಳಿತಾತ್ಮಕವಾಗಿ ಹಲವು ಪ್ರಮುಖ ಬದಲಾವಣೆಗಳು ಆಗಿವೆ. ಅದರಲ್ಲೂ ಮುಖ್ಯವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಬದಲಾಗಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಿದೆ. ಬೆಂಗಳೂರಿನ ಆಡಳಿತದ ಇತಿಹಾಸದಲ್ಲಿ ಆಗಿರುವ ಬಹು ಮುಖ್ಯ ಬದಲಾವಣೆಗಳಲ್ಲಿ ಇದೂ ಒಂದಾಗಿದೆ. ಬೆಂಗಳೂರಿಗೆ ಈ ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಂಬ ಏಕೈಕ ಪಾಲಿಕೆ ಇತ್ತು. ಈ ವರ್ಷ ಬೆಂಗಳೂರು ಸುಗಮ ಆಡಳಿತ ಕಾರಣಕ್ಕಾಗಿ ಐದು ನಗರ ಪಾಲಿಕೆಗಳನ್ನು ರಚಿಸಲಾಗಿದೆ.
ಬೆಂಗಳೂರಿನಲ್ಲಿ 2025 ರಲ್ಲಿ ನಡೆದ ಪ್ರಮುಖ ಆಡಳಿತಾತ್ಮಕ ಬದಲಾವಣೆಗಳ ಪರಿಣಾಮವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇತಿಹಾಸದ ಪುಟ ಸೇರಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಡಿಯಲ್ಲಿ ಹೊಸ ಮೂರು ಹಂತದ ಆಡಳಿತ ರಚನೆ ಆಗಿದೆ. ಈ ಬದಲಾವಣೆಯನ್ನು ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2024 ಮೂಲಕ ಜಾರಿಗೆ ತರಲಾಗಿದೆ. ಇದು ಮೇ 15, 2025 ರಂದು ಜಾರಿಗೆ ಬಂದಿದ್ದು, ಹೊಸ ವ್ಯವಸ್ಥೆಯು ಸೆಪ್ಟೆಂಬರ್ 2, 2025 ರಿಂದ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ.

ಪ್ರಮುಖ ಆಡಳಿತಾತ್ಮಕ ಬದಲಾವಣೆಗಳು
ಬಿಬಿಎಂಪಿ ವಿಸರ್ಜನೆ: ರಾಜ್ಯ ಕಾಂಗ್ರೆಸ್ ಸರ್ಕಾರವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎನ್ನುವ ಪರಿಕಲ್ಪನೆಯನ್ನು ಕೈಬಿಟ್ಟಿದ್ದು. ಹೊಸ ಪ್ರಾಧಿಕಾರವನ್ನು ರಚನೆ ಮಾಡಿದೆ.
ಮೂರು ಹಂತದ ಆಡಳಿತ: ಇನ್ನು ಬೆಂಗಳೂರು ಆಡಳಿತದಲ್ಲಿ ಮೂರು ಹಂತದ ಆಡಳಿತವನ್ನು ರಚಿಸಲಾಗಿದೆ. ವಿವಿಧ ಇಲಾಖೆಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಗೆ ತರಲಾಗಿದೆ. ಸ್ಥಳೀಯ ಮಟ್ಟದಲ್ಲಿ ವಿವಿಧ ನಿಗಮಗಳು ಮತ್ತು ವಾರ್ಡ್ ಸಮಿತಿಗಳನ್ನು ಒಳಗೊಂಡ ಹೊಸ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಈ ಹಿಂದೆಯೂ ವಾರ್ಡ್ ಸಮಿತಿ ಅಸ್ತಿತ್ವದಲ್ಲಿತ್ತಾದರೂ, ಈಗ ಹೊಸ ಬದಲಾವಣೆ ಮಾಡಲಾಗಿದೆ.
ಐದು ಪಾಲಿಕೆಗಳ ರಚನೆ: ಇನ್ನು ಬೆಂಗಳೂರಿನ ಸುಗಮ ಮತ್ತು ಆಡಳಿತ ವಿಕೇಂದ್ರೀಕರಣ ಉದ್ದೇಶದಿಂದ ಐದು ನಗರ ಪಾಲಿಕೆಗಳನ್ನು ರಚನೆ ಮಾಡಲಾಗಿದೆ. ಕೇಂದ್ರ, ಉತ್ತರ, ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ಎನ್ನುವ ಪಾಲಿಕೆಗಳನ್ನು ರಚನೆ ಮಾಡಲಾಗಿದೆ. ಪ್ರತಿ ಪಾಲಿಕೆಯೂ ತನ್ನದೇ ಆದ ಮಂಡಳಿ, ಚುನಾಯಿತ ಮೇಯರ್ (30 ತಿಂಗಳ ಅವಧಿಯೊಂದಿಗೆ) ಮತ್ತು ಪ್ರತ್ಯೇಕ ಆಯುಕ್ತರನ್ನು ಹೊಂದಿದೆ. ಐದು ಪಾಲಿಕೆಗಳಿಗೆ ಒಬ್ಬರು ಮುಖ್ಯ ಆಯುಕ್ತರು ಇದ್ದು, ಒಟ್ಟಾರೆ ಆಡಳಿತವನ್ನು ಅಥವಾ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧ್ಯಕ್ಷರಾಗಿ ಮುಖ್ಯಮಂತ್ರಿ ಅಧಿಕಾರವನ್ನು ಹೊಂದಿದ್ದಾರೆ.
ವಿವಿಧ ನಿಗಮಗಳು ಒಂದೇ ವೇದಿಕೆಯಡಿ: ಇನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ವಿವಿಧ ನಿಗಮಗಳನ್ನು ತರಲಾಗಿದೆ. ಈ ಹಿಂದೆ ಬಿಬಿಎಂಪಿ ಆಡಳಿತಾವಧಿಯಲ್ಲಿ ಬೆಸ್ಕಾಂ, ಬಿಡ್ಲ್ಯೂಎಸ್‌ಎಸ್‌ಬಿ, ಬಿಎಂಆರ್‌ಸಿಎಲ್ ಸೇರಿದಂತೆ ವಿವಿಧ ಇಲಾಖೆಗಳು ಪ್ರತ್ಯೇಕವಾಗಿದ್ದವು. ಇದರಿಂದ ಬಿಬಿಎಂಪಿ ಹಾಗೂ ವಿವಿಧ ಇಲಾಖೆಗಳ ನಡುವೆ ಪದೇ ಪದೇ ಸಮನ್ವಯ ಕೊರತೆ ಎದುರಾಗುತ್ತಿತ್ತು. ಇದೀಗ ಎಲ್ಲಾ ಇಲಾಖೆಗಳನ್ನು ಒಂದೇ ಸೂರಿನಡಿ ತರಲಾಗಿದೆ.
ವಾರ್ಡ್‌ಗಳ ಸಂಖ್ಯೆ ಹೆಚ್ಚಳ: ಇನ್ನು ಬೆಂಗಳೂರು ಆಡಳಿತದಲ್ಲಿ ಆಗಿರುವ ಮತ್ತೊಂದು ಹಾಗೂ ಪ್ರಮುಖ ಬದಲಾವಣೆ ಎಂದರೆ ಬೆಂಗಳೂರಿನ ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಿಸಿರುವುದು. ಬೆಂಗಳೂರಿನಲ್ಲಿ ಈ ಹಿಂದೆ ಬಿಬಿಎಂಪಿ ಆಡಳಿತದಲ್ಲಿ ಒಟ್ಟು 198 ವಾರ್ಡ್‌ಗಳು ಇದ್ದವು. ಇದೀಗ ಬೆಂಗಳೂರಿನ ಐದು ಹೊಸ ಪಾಲಿಕೆಗಳ ವ್ಯಾಪ್ತಿಯಲ್ಲಿ 369 ವಾರ್ಡ್‌ಗಳನ್ನು ರಚನೆ ಮಾಡಲಾಗಿದೆ.












Click it and Unblock the Notifications