ಕುಡಿದ ಮತ್ತಿನಲ್ಲಿ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟ ಟೆಕ್ಕಿ
ಬೆಂಗಳೂರು, ಮಾರ್ಚ್ 03: 28 ವರ್ಷ ವಯಸ್ಸಿನ ಪಾಟ್ನಾ ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಗೌತಮ್ ಕುಮಾರ್ ಅವರು ಅಪಾರ್ಟ್ಮೆಂಟ್ ಮೇಲಿಂದ ಕೆಳಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.
ಬೆಳ್ಳಂದೂರಿನ 'ಶೋಭಾ ಡೈಸಿ' ಅಪಾರ್ಟ್‌ಮೆಂಟ್ ನ 9ನೇ ಮಹಡಿಯಲ್ಲಿ ಗೆಳೆಯರ ಜತೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಗೌತಮ್ ಅವರು ಕುಡಿತದ ಮತ್ತಿನಲ್ಲಿ ಅಕಸ್ಮಾತ್ ಆಗಿ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ, ಗೌತಮ್ ಮೇಲಿಂದ ಕೆಳಕ್ಕೆ ಬಿದ್ದರೂ 10-15 ನಿಮಿಷಗಳ ಕಾಲ ಅವರ ಗೆಳೆಯರ ಬಳಗಕ್ಕೆ ಗೊತ್ತಾಗಲೇ ಇಲ್ಲ. ಎಲ್ಲರೂ ಕುಡಿತದ ನಶೆಯಲ್ಲಿದ್ದರು. ನಂತರ, ಗೌತಮ್ ಕಾಣುತ್ತಿಲ್ಲ ಎಂದು ಒಬ್ಬರು ಕರೆ ಮಾಡಿದ್ದಾರೆ. ನಂತರ ತೀವ್ರ ರಕ್ತಸ್ರಾವವಾಗಿ ಮೃತಪಟ್ಟ ಗೌತಮ್ ಶವ ಪತ್ತೆಯಾಗಿದೆ. ಗೆಳೆಯರು ಹುಡುಕಿಕೊಂಡು ಬರುವಷ್ಟರಲ್ಲಿ ಅಪಾರ್ಟ್ಮೆಂಟ್ ನ ಸೆಕ್ಯುರಿಟಿ ಗಾರ್ಡ್ ರೊಬ್ಬರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು.
ಐದು ವರ್ಷಗಳ ಹಿಂದೆ ಉದ್ಯೋಗಾರ್ಥಿಯಾಗಿ ಬೆಂಗಳೂರಿಗೆ ಬಂದಿದ್ದ ಗೌತಮ್ ಅವರು, ಬೆಳ್ಳಂದೂರು ಸಮೀಪದ ಕಾಡುಬೀಸನಹಳ್ಳಿಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಗೌತಮ್ ಅವರು ಪೋಷಕರು ಫೋನ್ ಕರೆ ಮಾಡಿದ್ದಾರೆ. ಆಗ ಗೆಳೆಯರ ಪಾರ್ಟಿನಿಂದ ಹೊರಕ್ಕೆ ಬಂದು ಮಹಡಿ ಅಂಚಿನಲ್ಲಿ ನಿಂತು ಕರೆಯನ್ನು ಸ್ವೀಕರಿಸಿ ಮಾತನಾಡಿದ್ದಾರೆ. ನಂತರ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ ಎಂದು ಬೆಳ್ಳಂದೂರು ಪೊಲೀಸರು ತಿಳಿಸಿದರು.












Click it and Unblock the Notifications