Bengaluru Daily Express: ಬೆಂಗಳೂರು - ಬೆಳಗಾವಿ ಡೈಲಿ ಎಕ್ಸ್‌ಪ್ರೆಸ್ ರೈಲು ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ
ಬೆಂಗಳೂರು: ಬೆಂಗಳೂರು ಹಾಗೂ ಬೆಳಗಾವಿಯ ನಡುವಿನ ಪ್ರಮುಖ ರೈಲು ಸಂಚಾರದಲ್ಲಿ ಮಹತ್ವದ ಬದಲಾವಣೆ ಆಗಿದೆ. ಬೆಂಗಳೂರು ಹಾಗೂ ಬೆಳಗಾವಿಯ ನಡುವೆ ವಿವಿಧ ರೈಲುಗಳಿಗೆ ಭಾರೀ ಬೇಡಿಕೆ ಇದೆ. ಈಚೆಗೆ ಬೆಂಗಳೂರು ಹಾಗೂ ಬೆಳಗಾವಿಯ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಪರಿಚಯಿಸಲಾಗಿತ್ತು. ಇದೀಗ ಮತ್ತೊಂದು ರೈಲು ಸಂಚಾರದಲ್ಲಿ ಕೆಲವೊಂದು ಪ್ರಮುಖ ಹಾಗೂ ನಿರ್ದಿಷ್ಟ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ.
ಬೆಳಗಾವಿಯ ಅತ್ಯಂತ ಜನಪ್ರಿಯ ಮತ್ತು ನಿರಂತರವಾಗಿ ಪ್ರಯಾಣಿಕರಿಂದ ತುಂಬಿರುವ ರೈಲು ಎಂದೇ ಖ್ಯಾತಿ ಗಳಿಸಿರುವ ರೈಲು ಸಂಖ್ಯೆ 20654 ಬೆಳಗಾವಿ-ಕೆಎಸ್ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ ಮತ್ತೊಮ್ಮೆ ಪ್ರಮುಖ ವೇಳಾಪಟ್ಟಿ ಪರಿಷ್ಕರಣೆ ಮಾಡಲಾಗಿದೆ. ಜನವರಿ 1, 2026 ರಿಂದ ಜಾರಿಗೆ ಬರುವಂತೆ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಈ ಎಕ್ಸ್‌ಪ್ರೆಸ್ ದೈನಂದಿನ ಪ್ರಯಾಣಿಕರು, ವ್ಯಾಪಾರಿಗಳು, ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಜೀವನಾಡಿಯಾಗಿದ್ದು, ವರ್ಷವಿಡೀ ಬಹುತೇಕ ಶೇ.100 ಜನದಟ್ಟಣೆಯೊಂದಿಗೆ ಸಂಚಾರವಿರುತ್ತದೆ.

ಇತ್ತೀಚಿನ ಬದಲಾವಣೆಯ ಪ್ರಕಾರ ಬೆಳಗಾವಿಯಿಂದ ಹೊರಡುವ ಸಮಯದಲ್ಲಿ ಸಂಪೂರ್ಣ ಬದಲಾವಣೆಯನ್ನು ಮಾಡಲಾಗಿದೆ. ಆದರೆ ಬೆಂಗಳೂರಿಗೆ ರೈಲು ಬಂದು ತಲುಪುವ ಸಮಯದಲ್ಲಿ ಯಾವುದೇ ಮಹತ್ವದ ಬದಲಾವಣೆಗಳು ಆಗಿಲ್ಲ. ಅಸ್ತಿತ್ವದಲ್ಲಿರುವ ವೇಳಾಪಟ್ಟಿಯ ಪ್ರಕಾರ, ರೈಲು ಬೆಳಗಾವಿಯಿಂದ ಪ್ರತಿದಿನ ರಾತ್ರಿ 9:15ಕ್ಕೆ ಹೊರಟು ಮರುದಿನ ಬೆಳಿಗ್ಗೆ 6:50ಕ್ಕೆ ಕೆಎಸ್‌ಆರ್ ಬೆಂಗಳೂರಿಗೆ ಬಂದು ತಲುಪಬೇಕಿತ್ತು. ಆದರೆ ಇದೀಗ ಕೆಲವು ಹೊಸ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ.
ಹೊಸ ವೇಳಾಪಟ್ಟಿ ನಾಳೆಯಿಂದ ಅಂದರೆ ಜನವರಿ 1, 2026 ರಿಂದ ಜಾರಿಗೆ ಬರುತ್ತದೆ.
ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ:
ಬೆಳಗಾವಿಯಿಂದ ನಿರ್ಗಮನ: ರಾತ್ರಿ 10:00 (ರಾತ್ರಿ 9:15 ರ ಬದಲಿಗೆ)
ಕೆಎಸ್ಆರ್ ಬೆಂಗಳೂರು ಆಗಮನ: ಬೆಳಿಗ್ಗೆ 7:30 (ಬದಲಾವಣೆಯಿಲ್ಲ)
ಪರಿಷ್ಕೃತ ಸಮಯಗಳು ಕಾರ್ಯಾಚರಣೆಯ ಎಲ್ಲಾ ದಿನಗಳಿಗೂ ಅನ್ವಯಿಸುತ್ತವೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ: ಇನ್ನು 20654 ಬೆಳಗಾವಿ - ಕೆಎಸ್ಆರ್ ಬೆಂಗಳೂರು (BGM-SBC) ಡೈಲಿ ಎಕ್ಸ್‌ಪ್ರೆಸ್ ರೈಲು ಬೆಳಗಾವಿ - ಕೆಎಸ್ಆರ್ ಬೆಂಗಳೂರು ನಡುವೆ ಸಂಚರಿಸುತ್ತದೆ. ಈ ರೈಲು ಧಾರವಾಡ, ಎಸ್‌ಎಸ್‌ಎಸ್ ಹುಬ್ಬಳ್ಳಿ, ದಾವಣಗೆರೆ, ಅರಸೀಕೆರೆ, ತುಮಕೂರು ಹಾಗೂ ಯಶವಂತಪುರ ಪ್ರಮುಖ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.
ಬೆಳಗಾವಿ - ಬೆಂಗಳೂರಿನ ನಡುವೆ ಇರುವ ಪ್ರಮುಖ ರೈಲುಗಳು
ಇನ್ನು ಬೆಳಗಾವಿ ಹಾಗೂ ಬೆಂಗಳೂರಿನ ನಡುವೆ ಹಲವು ಪ್ರಮುಖ ರೈಲುಗಳ ಸಂಚಾರ ಇದೆ. ಅದರಲ್ಲಿ ಪ್ರಮುಖವಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇರಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ (26751) ಬೆಳಗಾವಿಯಿಂದ ಬೆಳಿಗ್ಗೆ 5:20ಕ್ಕೆ ಹೊರಟು ಮಧ್ಯಾಹ್ನ 1:50ಕ್ಕೆ ಬೆಂಗಳೂರು ತಲುಪುತ್ತದೆ. ಈ ರೈಲು ವಾರಕ್ಕೆ 6 ದಿನ ಇರಲಿದೆ. ವಿಶ್ವಮಾನವ ಎಕ್ಸ್‌ಪ್ರೆಸ್ (17325) ಬೆಳಿಗ್ಗೆ 6:15ಕ್ಕೆ, ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ (16590) ಸಂಜೆ 6:30ಕ್ಕೆ ಹಾಗೂ ಬಿಜಿಎಂ ಎಸ್‌ಬಿಸಿ ಎಕ್ಸ್‌ಪ್ರೆಸ್ (20654) ರಾತ್ರಿ 9:15ಕ್ಕೆ ಹೊರಡುವ ಪ್ರಮುಖ ರೈಲುಗಳಾಗಿವೆ.












Click it and Unblock the Notifications