ಬಿಡಿಎ ಆಸ್ತಿ ತೆರಿಗೆ: ರಿಯಾಯಿತಿ ಘೋಷಣೆ, ಆದರೆ ಕೆಲಸ ಮಾಡದ ಪೋರ್ಟಲ್
ಬೆಂಗಳೂರು, ಏ. 8: ಬಿಡಿಎ ಆಸ್ತಿ ಮಾಲೀಕರು ತಮ್ಮ ಆಸ್ತಿ ತೆರಿಗೆ ಪಾವತಿಸಲು ಈ ತಿಂಗಳ ಆರಂಭದಿಂದಲೇ ಅವಕಾಶ ಕೊಡಲಾಗಿದೆ. ಏಪ್ರಿಲ್ 30ರೊಳಗೆ ತೆರಿಗೆ ಪಾವತಿಸಿದರೆ ಶೆ. 5ರಷ್ಟು ರಿಯಾಯಿತಿ ಕೊಡಲಾಗುತ್ತದೆ ಎಂದು ಬಿಡಿಎ ಹೇಳಿದೆ. ಆದರೆ, ತೆರಿಗೆ ಪಾವತಿಸಲು ಹೋದ ಆಸ್ತಿ ಮಾಲೀಕರಿಗೆ ನಿರಾಸೆ ಎದುರಾಗಿದೆ. ರಿಯಾಯಿತಿ ಇರಲಿ ಬಿಡಿಎ ಪ್ರಾಪರ್ಟಿ ಟ್ಯಾಕ್ಸ್ ವೆಬ್ ಸೈಟ್ ಕೆಲಸ ಮಾಡುತ್ತಿಲ್ಲ ಎಂದು ಹಲವು ಮಾಲೀಕರು ಅಲವತ್ತುಕೊಂಡಿದ್ದಾರೆ.
"ಐಟಿ, ಕಂದಾಯ ಮತ್ತಿತರ ಇಲಾಖೆಗಳಿಂದ ಬಿಡಿಎ ಅಧಿಕಾರಿಗಳು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಬೇಕು. ವೆಬ್ ಸೈಟ್ ಓಪನ್ ಮಾಡದೆಯೇ ರಿಯಾಯಿತಿ ಘೋಷಣೆ ಮಾಡುವುದೂ ಒಂದೇ ರಿಯಾಯಿತಿ ಕೊಡದೇ ಇರುವುದೂ ಒಂದೇ" ಎಂದು ಬಿಡಿಎ ಆಸ್ತಿ ಮಾಲೀಕರೊಬ್ಬರು ಹೇಳಿದರೆಂದು ಡೆಕನ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ.
ಬಿಡಿಎ ಆಸ್ತಿ ಮಾಲೀಕರು ಏಪ್ರಿಲ್ 30ರೊಳಗೆ ತೆರಿಗೆ ಪಾವತಿಸಿದರೆ ಶೇ. 5ರಷ್ಟು ರಿಬೇಟ್ ಸಿಗುತ್ತದೆ. ಆದರೆ, ದಂಡ ಇಲ್ಲದೇ ಆಸ್ತಿ ತೆರಿಗೆ ಪಾವತಿಗೆ ಜೂನ್ 30 ಕೊನೆಯ ದಿನವಾಗಿದೆ. ಅದಾದ ಬಳಿಕ ಪಾವತಿಸಿದರೆ ಶೇ. 10ರಷ್ಟು ವಾರ್ಷಿಕ ಬಡ್ಡಿಯನ್ನ ದಂಡವಾಗಿ ಸೇರಿಸಿ ಪಾವತಿಸಬೇಕಾಗುತ್ತದೆ.

ಇನ್ನು, ಬಿಡಿಎ ಪ್ರಾಪರ್ಟಿ ಟ್ಯಾಕ್ಸ್ ಪಾವತಿಯ ಪೋರ್ಟಲ್ ಸ್ಥಗಿತಗೊಂಡಿರುವ ಬಗ್ಗೆ ಮಾಧ್ಯಮದ ಜೊತೆ ಬಿಡಿಎ ಅಧಿಕಾರಿಯೊಬ್ಬರು ಮಾತನಾಡಿ, ಇನ್ನು ಮೂರ್ನಾಲ್ಕು ದಿನದಲ್ಲಿ ಪೋರ್ಟಲ್ ಸರಿಹೋಗುತ್ತದೆ ಎಂದು ಆಶ್ವಾಸನೆ ಕೊಟ್ಟಿದ್ದಾರೆ.
"ನಮ್ಮ ಆನ್‌ಲೈನ್ ವ್ಯವಸ್ಥೆಯಲ್ಲಿ ಕೇವಲ ಪ್ರಾಪರ್ಟಿ ಟ್ಯಾಕ್ಸ್ ಪೇಮೆಂಟನ್ನು ಮಾತ್ರ ಸ್ವೀಕರಿಸಲಾಗುತ್ತದೆ. ಆಸ್ತಿ ತೆರಿಗೆ ಮೌಲ್ಯವನ್ನು ಸ್ವಯಂ ಆಗಿ ಗಣಿಸುತ್ತಿಲ್ಲ. ಆಸ್ತಿ ತೆರಿಗೆ ಮೌಲ್ಯವನ್ನು ನಾವು ಮ್ಯಾನುಯಲ್ ಆಗಿ ಅಪ್‌ಲೋಡ್ ಮಾಡಬೇಕಿರುವುದರಿಂದ ಅದು ಹೆಚ್ಚು ಸಮಯ ಹಿಡಿಯುತ್ತದೆ ಹೀಗಾಗಿ ವಿಳಂಬವಾಗುತ್ತಿದೆ" ಎಂದು ಬಿಡಿಎ ಹಣಕಾಸು ವಿಭಾಗದ ಅಧಿಕಾರಿ ತಿಳಿಸಿದ್ದಾರೆ.
ರಿಬೇಟ್ ಕಾಲಾವಧಿ ವಿಸ್ತರಿಸುವಂತೆ ಮಾಲೀಕರ ಕೂಗು:
ಬಿಡಿಎ ಆಸ್ತಿ ತೆರಿಗೆ ಪಾವತಿಯ ಪೋರ್ಟಲ್ ಪ್ರತೀ ವರ್ಷವೂ ಆರಂಭಿಕ ಸಮಸ್ಯೆ ಎದುರಿಸುತ್ತದೆ. ಪೋರ್ಟಲ್ ಬಹಳ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಹಿಂದೆ ಕೆಲ ಬಾರಿ ಹಣಕಾಸು ವರ್ಷ ಆರಂಭಗೊಂಡು ಒಂದು ತಿಂಗಳ ಬಳಿಕ ಪೋರ್ಟಲ್ ಶುರುವಾಗಿದ್ದುಂಟು. ಪೋರ್ಟಲ್ ಬಹಳ ವಿಳಂಬವಾಗುತ್ತಿರುವುದರಿಂದ ದಂಡ ಇಲ್ಲದೇ ತೆರಿಗೆ ಪಾವತಿಸುವ ಅವಧಿಯನ್ನು ವಿಸ್ತರಿಸಬೇಕು ಎಂದು ತೆರಿಗೆದಾರರೊಬ್ಬರು ಹೇಳಿದ್ದಾರೆ.
ಬಿಬಿಎಂಪಿ ಆಸ್ತಿ ತೆರಿಗೆ:
ಇದೇ ವೇಳೆ, ಬಿಬಿಎಂಪಿ ಕೂಡ ತನ್ನ ಆಸ್ತಿ ಮಾಲೀಕರಿಗೆ ಈ ವರ್ಷದ ತೆರಿಗೆ ಪಾವತಿಸುವ ಅವಕಾಶ ನೀಡಿದೆ. ಹಲವು ವರ್ಷಗಳಿಂದಲೂ ಬಿಬಿಎಂಪಿಯ ಆನ್‌ಲೈನ್ ಪ್ರಾಪರ್ಟಿ ಟ್ಯಾಕ್ಸ್ ಪೇಮೆಂಟ್ ಪೋರ್ಟಲ್ ಸಮರ್ಪಕವಾಗಿ ಕೆಲಸ ಮಾಡಿದೆ. ಏಪ್ರಿಲ್ 30ರೊಳಗೆ ತೆರಿಗೆ ಪಾವತಿಸಿದರೆ ಶೇ 5 ರಿಬೇಟ್ ಕೊಡಲಾಗುತ್ತದೆ. ಬಿಬಿಎಂಪಿ ಮತ್ತು ಬಿಡಿಎ ಆಸ್ತಿಯ ತೆರಿಗೆ ಪ್ರಮಾಣವನ್ನು ಈ ವರ್ಷವೂ ಹೆಚ್ಚಳ ಮಾಡಲಾಗಿಲ್ಲ. ಹಿಂದಿನ ತೆರಿಗೆ ದರಗಳ ಅನ್ವಯದಲ್ಲೇ ಆನ್‌ಲೈನ್‌ನಲ್ಲಿ ಪಾವತಿಸಬಹುದು.
ಆನ್‌ಲೈನ್ ಪಾವತಿ ಸರಳ:
ಆನ್‌ಲೈನ್‌ನಲ್ಲಿ ಆಸ್ತಿ ತೆರಿಗೆ ಪಾವತಿ ಬಹಳ ಸರಳ. ಅಪ್ಲಿಕೇಶನ್ ನಂಬರ್ ಅಥವಾ ಪಿಐಡಿ ಸಂಖ್ಯೆ ನಮೂದಿಸಿದರೆ ಆಸ್ತಿ ವಿವರ ತೆರೆದುಕೊಳ್ಳುತ್ತದೆ. ಅದರಲ್ಲೇ ತೆರಿಗೆ ವಿವರವೆಲ್ಲವೂ ಗಣಿತವಾಗಿ ನಮೂದಾಗಿರುತ್ತದೆ. ಆ ಮೊತ್ತವನ್ನು ಪಾವತಿಸಲು ಯುಪಿಐ ಪೇಮೆಂಟ್, ನೆಟ್ ಬ್ಯಾಂಕಿಂಗ್ ಇತ್ಯಾದಿ ಅವಕಾಶವನ್ನು ಕೊಡಲಾಗಿದೆ.
ಒಂದು ವೇಳೆ, ಆಸ್ತಿಯಲ್ಲಿ ಬದಲಾವಣೆ ಆಗಿದ್ದರೆ, ಅಂದರೆ ಆಸ್ತಿಯಲ್ಲಿರುವ ಕಟ್ಟಡದ ವಿಸ್ತೀರ್ಣದಲ್ಲಿ ಬದಲಾವಣೆ ಆಗಿದ್ದರೆ ಆಗ ಮ್ಯಾನುಯಲ್ ಆಗಿ ಡೇಟಾ ಎಂಟ್ರಿ ಮಾಡಬೇಕು.
(ಒನ್ಇಂಡಿಯಾ ಸುದ್ದಿ)












Click it and Unblock the Notifications