BDA Flat : ಬಿಡಿಎ ಫ್ಲಾಟ್ ಕೊಳ್ಳುವವರೇ ಗಮನಿಸಿ, ಹೊಸ ನಿಯಮ ಜಾರಿಗೆ
ಬೆಂಗಳೂರು, ಡಿಸೆಂಬರ್ 16: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಫ್ಲಾಟ್ ಕೊಳ್ಳುವವರಿಗೆ ಹೊಸ ನಿಯಮ ಜಾರಿಗೊಳಿಸಿದೆ. ನಗರದ ವಿವಿಧ ಬಡಾವಣೆಗಳಲ್ಲಿ ವಸತಿ ಯೋಜನೆಗಳಡಿ ಬಿಡಿಎ ಫ್ಲಾಟ್‌ಗಳನ್ನು ನಿರ್ಮಾಣ ಮಾಡಿದ್ದು, ಇವುಗಳನ್ನು ಹಂಚಿಕೆ ಮಾಡಲು ಅರ್ಜಿಗಳನ್ನು ಆಹ್ವಾನಿಸುತ್ತದೆ. ಈಗ ಬಿಡಿಎ ಫ್ಲಾಟ್ ಕೊಳ್ಳಲು ಬಯಸುವವರು ಹೊಸ ನಿಯಮಗಳ ಅನ್ವಯ ನಿರ್ವಹಣಾ ಶುಲ್ಕವನ್ನು ಮುಂಗಡವಾಗಿ ಪಾವತಿಸಬೇಕಿದೆ. ಇದರಿಂದಾಗಿ ಫ್ಲಾಟ್ ಕೊಳ್ಳುವ ದರ ಇನ್ನಷ್ಟು ಹೆಚ್ಚಾಗಲಿದೆ.
ಬಿಡಿಎ ಫ್ಲಾಟ್ ಖರೀದಿ ಮಾಡುವವರು ಒಂದು ವರ್ಷದ ನಿರ್ವಹಣಾ ಶುಲ್ಕವನ್ನು ಮುಂಗಡವಾಗಿ ಪಾವತಿ ಮಾಡಬೇಕು ಎಂದು ಹೊಸ ನಿಯಮ ಜಾರಿಗೊಳಿಸಿದೆ. ಬಿಡಿಎ ನಿರ್ಮಾಣ ಮಾಡಿದ ಫ್ಲಾಟ್ ಖರೀದಿ ಮಾಡುವ ಜನರು ತಿಂಗಳುಗಳ ಕಾಲ ಅಲ್ಲಿಗೆ ಸ್ಥಳಾಂತರವಾಗುವುದಿಲ್ಲ. ಅದು ಹಾಗೆಯೇ ಖಾಲಿ ಉಳಿದಿರುತ್ತದೆ.

ಅಲ್ಲದೇ ಕೆಲವು ಮಾಲೀಕರು ಬಿಡಿಎ ನಿರ್ವಹಣಾ ಶುಲ್ಕವನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡುವುದಿಲ್ಲ. ಆದ್ದರಿಂದ ಬಿಡಿಎ ಹೊಸ ನಿಯಮ ಜಾರಿಗೆ ತಂದಿದ್ದು, ಫ್ಲಾಟ್ ಖರೀದಿ ಮಾಡುವಾಗಲೇ ಜನರು ಒಂದು ವರ್ಷದ ನಿರ್ವಹಣಾ ಶುಲ್ಕವನ್ನು ಮುಂಚಿತವಾಗಿ ಪಾವತಿ ಮಾಡಬೇಕಿದೆ.
ಅಪಾರ್ಟ್‌ಮೆಂಟ್ ಮಾಲೀಕರಿಗೆ ಸೂಚನೆ: ಅಲ್ಲದೇ ಬಿಡಿಎ ನಗರದ ಎಲ್ಲಾ ಅಪಾರ್ಟ್‌ಮೆಂಟ್‌ಗಳು ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘವನ್ನು ಕಡ್ಡಾಯವಾಗಿ ರಚನೆ ಮಾಡಬೇಕು ಎಂದು ಸೂಚನೆ ನೀಡಿದೆ. ನಿಗದಿತ ಸಮಯದೊಳಗೆ ಸಂಘವನ್ನು ರಚನೆ ಮಾಡದಿದ್ದರೆ ಬಿಡಿಎ ನೇರವಾಗಿ ಅಪಾರ್ಟ್‌ಮೆಂಟ್ ನಿವಾಸಿಗಳಿಂದ ನಿರ್ವಹಣಾ ಶುಲ್ಕವನ್ನು ಸಂಗ್ರಹ ಮಾಡಲಾಗುತ್ತದೆ ಎಂದು ಹೇಳಿದೆ.
ಈ ನಿಯಮ ಈಗಾಗಲೇ ಡಿಸೆಂಬರ್‌ನಿಂದಲೇ ಜಾರಿಗೆ ಬಂದಿದೆ. ಹೊಸದಾಗಿ ಫ್ಲಾಟ್ ಕೊಳ್ಳುವವರಿಗೆ ಹೊಸ ನಿಯಮ ಕಡ್ಡಾಯವಾಗಿ ಅನ್ವಯವಾಗಲಿದೆ ಎಂದು ಬಿಡಿಎ ಹೇಳಿದೆ. ಒಂದು ವೇಳೆ ಮುಂಗಡವಾಗಿ ನಿರ್ವಹಣಾ ಶುಲ್ಕ ಪಾವತಿ ಮಾಡಲು ವಿಫಲವಾದರೆ ಫ್ಲಾಟ್ ನೋಂದಣಿ ಸಹ ತಡವಾಗಲಿದೆ.
ಇದರಿಂದಾಗಿ ಬಿಡಿಎ ನಿರ್ಮಾಣ ಮಾಡಿರುವ ಸುಮಾರು 2000 ಫ್ಲಾಟ್‌ಗಳ ಹಂಚಿಕೆ ಇನ್ನೂ ತಡವಾಗಲಿದೆ ಎಂದು ಅಂದಾಜಿಸಲಾಗಿದೆ. ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘ ರಚನೆಯಾಗುವ ತನಕ ನಿರ್ವಹಣೆ ಮಾಡಲು ಅನುಕೂಲವಾಗುವಂತೆ ನಿರ್ವಹಣಾ ಶುಲ್ಕವನ್ನು ಮುಂಚಿತವಾಗಿ ಸಂಗ್ರಹ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಲವು ಮಾಲೀಕರನ್ನು ಫ್ಲಾಟ್ ಖರೀದಿ ಬಳಿಕ ಸಂಪರ್ಕ ಮಾಡುವುದು ಸಮಸ್ಯೆಯಾಗಿದೆ. ಫ್ಲಾಟ್ ಸಹ ಹಾಗೆಯೇ ಉಳಿಯುತ್ತದೆ. ಆದ್ದರಿಂದ ಮುಂಚಿತವಾಗಿಯೇ ಶುಲ್ಕ ಸಂಗ್ರಹ ಮಾಡಲು ತೀರ್ಮಾನಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಡಿಎ ಹೊಸ ತೀರ್ಮಾನದ ಕುರಿತು ಪರ-ವಿರೋಧ ಚರ್ಚೆಗಳು ಸಹ ನಡೆಯುತ್ತಿವೆ.
ಖಾಲಿ ಇರುವ ಫ್ಲಾಟ್‌ಗಳನ್ನು ಮಾರಾಟ ಮಾಡಲು ಬಿಡಿಎ ಹೊಸ ಯೋಜನೆ ರೂಪಿಸಿದೆ. ಇದಕ್ಕಾಗಿ ಖಾಸಗಿ ಏಜೆನ್ಸಿಗಳನ್ನು ನೇಮಕ ಮಾಡಲಿದ್ದು, ಅವುಗಳು ಮಾರಾಟದ ಹೊಣೆ ನೋಡಿಕೊಳ್ಳಲಿವೆ. ಇದಕ್ಕಾಗಿ ಅವುಗಳಿಗೆ ಶೇ 3ರಷ್ಟು ಸೇವಾ ಶುಲ್ಕವನ್ನು ನೀಡಲಾಗುತ್ತದೆ.
ಕೆಲವು ವಸತಿ ಸಮುಚ್ಛಯಗಳಲ್ಲಿ ಶೇ 20 ರಿಂದ 30ರಷ್ಟು ಫ್ಲಾಟ್‌ಗಳು ಮಾತ್ರ ಮಾರಾಟವಾಗಿದೆ. ಆದರೆ ಅವುಗಳನ್ನು ಸಹ ಖಾಲಿ ಬಿಡಲಾಗಿದೆ. ಮಾಲೀಕರು ನಿರ್ವಹಣಾ ಶುಲ್ಕ ಕಟ್ಟದ ಕಾರಣ ಅದರ ನಿರ್ವಹಣೆ ಮಾಡುವುದು ಸವಾಲಿನ ಕೆಲಸವಾಗಿದೆ ಎಂದು ಬಿಡಿಎ ಹೇಳಿದೆ. ಇದರಿಂದಾಗಿ ಮುಂಚಿತವಾಗಿಯೇ ಶುಲ್ಕ ಕಟ್ಟುವಂತೆ ನಿಯಮ ರೂಪಿಸಲಾಗಿದೆ.
ಅಪಾರ್ಟ್‌ಮೆಂಟ್‌ಗಳಲ್ಲಿ ನಿರ್ವಹಣಾ ಶುಲ್ಕವನ್ನು ಸಂಗ್ರಹಣೆ ಮಾಡಿ ಪಾರ್ಕ್, ಲಿಫ್ಟ್, ಸ್ವಿಮ್ಮಿಂಗ್ ಫೂಲ್, ಒಳಚರಂಡಿ ವ್ಯವಸ್ಥೆ, ಕಸ ಸಂಗ್ರಹಣೆ ಮುಂತಾದ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತದೆ. ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘ ರಚನೆಯಾಗುವ ತನಕ ಈ ಕಾರ್ಯಗಳ ನಿರ್ವಹಣೆಯನ್ನು ಬಿಡಿಎ ನೋಡಿಕೊಳ್ಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications