BDA Site: 171 ಬಿಡಿಎ ಸೈಟುಗಳು ಹರಾಜಿನ ಮೂಲಕ ಮಾರಾಟ, ವಿವರ
ಬೆಂಗಳೂರು, ನವೆಂಬರ್ 03: ಉದ್ಯಾನ ನಗರಿ ಬೆಂಗಳೂರಿನಲ್ಲಿ ಸೈಟ್ ಕೊಳ್ಳುವ ಯೋಜನೆ ರೂಪಿಸುತ್ತಿರುವ ಜನರಿಗೆ ಸಿಹಿಸುದ್ದಿ ಇದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 171 ಸೈಟುಗಳನ್ನು ಹರಾಜಿನ ಮೂಲಕ ಮಾರಾಟ ಮಾಡಲಿದೆ. ಈ ಕುರಿತು ನವೆಂಬರ್ 4ರ ಸೋಮವಾರ ಅಧಿಸೂಚನೆ ಪ್ರಕಟವಾಗಲಿದ್ದು, ನವೆಂಬರ್ 25ರ ಬಳಿಕ ಹರಾಜು ಪ್ರಕ್ರಿಯೆ ನಡೆಯಲಿದೆ ಎಂಬ ಮಾಹಿತಿ ಸಿಕ್ಕಿದೆ.
ಬಿಡಿಎ ನಗರದ ವಿವಿಧ ಬಡಾವಣೆಗಳಲ್ಲಿರುವ 171 ಕಾರ್ನರ್ ಮತ್ತು ಇಂಟರ್ ಮಿಡಿಯೇಟ್ ಸೈಟುಗಳನ್ನು ಮಾರಾಟ ಮಾಡಲಿದೆ. ಹೆಬ್ಬಾಳ ಸಮೀಪದ ಭೂಪಸಂದ್ರ, ನಾಗರಭಾವಿ 2ನೇ ಹಂತ, ಬನಶಂಕರಿ 6ನೇ ಹಂತ ಮತ್ತು ಜೆ. ಪಿ. ನಗರ ವ್ಯಾಪ್ತಿಯಲ್ಲಿರುವ ಸೈಟುಗಳನ್ನು ಮಾರಾಟ ಮಾಡಲಾಗುತ್ತದೆ.

ಹರಾಜು ಬೆಲೆ ನಿಗದಿ: ಪ್ರತಿ ಮೂಲೆ/ ಮಧ್ಯಂತರ ನಿವೇಶನಕ್ಕೂ ಸಹ ಕನಿಷ್ಠ ಹರಾಜು ಬೆಲೆಯನ್ನು ಬಿಡಿಎ ನಿಗದಿ ಮಾಡಿದೆ. ಉದಾಹರಣೆಗೆ ಚಂದ್ರಲೇಔಟ್‌ನ ಸೈಟುಗಳಿಗೆ ಗರಿಷ್ಠ ಬೆಲೆ ಚದರ ಮೀಟರ್‌ಗೆ 1.35 ಲಕ್ಷ, ಕುಮಾರಸ್ವಾಮಿ ಲೇಔಟ್‌ನಲ್ಲಿ 2.13 ಲಕ್ಷ. ಅಲ್ಲದೆ ಹೆಚ್ಚುವರಿ ಸೈಟುಗಳನ್ನು ಅರ್ಕಾವತಿ ಲೇಔಟ್ ಮತ್ತು ಅಂಜನಾಪುರ ಟೌನ್‌ಶಿಪ್‌ನಲ್ಲಿಯೂ ಸಹ ಗುರುತಿಸಲಾಗಿದೆ.
ಸೈಟುಗಳ ಹರಾಜು ಸಂದರ್ಭದಲ್ಲಿ ಸೈಟುಗಳ ಬೆಲೆಗಳನ್ನು ಚದರ ಮೀಟರ್‌ಗೆ ಹೆಚ್ಚಳ ಮಾಡುತ್ತಾ ಹೋಗಲಾಗುತ್ತದೆ. ಬಿಡಿಎ ಈ ಸೈಟುಗಳನ್ನು ಎಲ್ಲಿ ಹೇಗಿವೆಯೋ ಹಾಗಿರುವ ಸ್ಥಿತಿಯಲ್ಲಿ (As Is Where Is) ಮಾದರಿಯಲ್ಲಿ ಮಾರಾಟವನ್ನು ಮಾಡುತ್ತಿದೆ.
ಸದ್ಯದ ಮಾಹಿತಿ ಪ್ರಕಾರ ಸೈಟುಗಳ ಜಿಯೋ ಲೋಕೇಷನ್ ಅನ್ನು ಬಿಡಿಎ ನವೆಂಬರ್ 4ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಿದೆ. ಆಸಕ್ತರು ಇ-ಹರಾಜಿನಲ್ಲಿ ಪಾಲ್ಗೊಳ್ಳಲು ಅರ್ಜಿ ಸಲ್ಲಿಕೆ ಮಾಡಲು ನವೆಂಬರ್ 22 ಕೊನೆಯ ದಿನವಾಗಿದೆ.
ನೇರ ಬಿಡ್ಡಿಂಗ್ ಅನ್ನು ನವೆಂಬರ್ 25, 27 ಮತ್ತು 28ರ ಸಂಜೆ 5 ಗಂಟೆಗೆ ನಡೆಸಲಾಗುತ್ತದೆ ಎಂಬ ಮಾಹಿತಿ ಇದೆ. ಬಿಡಿಎ ನವೆಂಬರ್ 4ರಂದು ವಿವರವಾದ ಅಧಿಸೂಚನೆ ಬಿಡುಗಡೆ ಮಾಡಿದ ಬಳಿಕ ಸೈಟುಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲಿದೆ.
2023ರ ಡಿಸೆಂಬರ್‌ನಲ್ಲಿಯೂ ಬಿಡಿಎ ವಾಸಯೋಗ್ಯ ಮೂಲೆ/ ಮಧ್ಯಂತರ ನಿವೇಶನಗಳನ್ನು ಹರಾಜಿನ ಮೂಲಕ ಹಂಚಿಕೆ ಮಾಡಿತ್ತು. ಮಧ್ಯಂತರ ಮತ್ತು ಇತರೆ ಹರಾಜು ಮಾಡಬಹುದಾದದ ನಿವೇಶನಗಳ ವಿಲೇವಾರಿ ನಿಯಮಾವಳಿ 1984ರ ಅನುಸಾರ ಹರಾಜು ನಡೆಸಿತ್ತು. ಇವುಗಳನ್ನು ಸಹ ಎಲ್ಲಿ ಹೇಗಿವೆಯೋ ಹಾಗಿರುವ ಸ್ಥಿತಿಯಲ್ಲಿ ಹರಾಜು ಮಾಡಲಾಗಿತ್ತು.
ಬಿಡಿಎ ಆಗಾಗ ನಗರದ ವಿವಿಧ ಪ್ರದೇಶಗಳಲ್ಲಿರುವ ವಾಸಯೋಗ್ಯ ಮೂಲೆ/ ಮಧ್ಯಂತರ ನಿವೇಶನಗಳನ್ನು ಹರಾಜಿನ ಮೂಲಕ ಹಂಚಿಕೆ ಮಾಡುತ್ತದೆ. ಈ ಮೂಲಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಆದಾಯ ಸಂಗ್ರಹಣೆ ಮಾಡುತ್ತದೆ. ವಿವರವಾದ ಇ-ಹರಾಜು ಪ್ರಕಟಣೆಯಲ್ಲಿ 171 ಸೈಟುಗಳ ವಿವರಗಳು ತಿಳಿಯಲಿವೆ.
ಇತ್ತೀಚಿನ ವರ್ಷಗಳಲ್ಲಿ ಬಿಡಿಎ ಇ-ಹರಾಜು ಮೂಲಕ ಮಾತ್ರ ಸೈಟುಗಳನ್ನು ಮಾರಾಟ ಮಾಡುತ್ತಿದೆ. ಮೊದಲು ಅಧಿಸೂಚನೆ ಪ್ರಕಟಿಸಲಾಗುತ್ತದೆ. ಆಸಕ್ತರು ಪ್ರಾರಂಭಿಕ ಠೇವಣಿಯನ್ನು ಪಾವತಿ ಮಾಡಿ ಹರಾಜಿನಲ್ಲಿ ಪಾಲ್ಗೊಳ್ಳಬಹುದು. ಹರಾಜಿನಲ್ಲಿ ಸೈಟುಗಳ ಬೆಲೆಗಳು ತೀರ್ಮಾನವಾಗುತ್ತದೆ. ಯಾವ ಬ್ಯಾಂಕ್ ಮೂಲಕ ಆರಂಭಿಕ ಠೇವಣಿ ಪಾವತಿಸಬೇಕು?, ಅದನ್ನು ಹೇಗೆ ಪಾವತಿಸಬೇಕು? ಎಂದು ಬಿಡಿಎ ಮಾಹಿತಿಯನ್ನು ನೀಡುತ್ತದೆ.












Click it and Unblock the Notifications