BDA: ಬಿಡಿಎ 80 ವಿಲ್ಲಾಗಳ ಹರಾಜು, ಪ್ರದೇಶ, ದರದ ಮಾಹಿತಿ
ಬೆಂಗಳೂರು, ಜನವರಿ 18: ಉದ್ಯಾನ ನಗರಿ ಬೆಂಗಳೂರಿನಲ್ಲಿ ಆಸ್ತಿ ಕೊಳ್ಳಲು ಯೋಜನೆ ರೂಪಿಸುತ್ತಿರುವ ಜನರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸಿಹಿಸುದ್ದಿಯನ್ನು ನೀಡಿದೆ. 80 ವಿಲ್ಲಾಗಳನ್ನು ಹರಾಜು ಮೂಲಕ ಮಾರಾಟ ಮಾಡಲು ಬಿಡಿಎ ನಿರ್ಧರಿಸಿದೆ. 3 ಬಿಹೆಚ್‌ಕೆ ಮತ್ತು 4 ಬಿಹೆಚ್‌ಕೆ ವಿಲ್ಲಾಗಳನ್ನು ಮಾತ್ರ ಸದ್ಯ ಮಾರಾಟ ಮಾಡಲಾಗುತ್ತದೆ.
ಬಿಡಿಎ ಹುಣ್ಣಿಗೆರೆ ವಸತಿ ಯೋಜನೆಯಡಿ ನಿರ್ಮಾಣ ಮಾಡಿರುವ 80 ವಿಲ್ಲಾಗಳನ್ನು ಹರಾಜು ಮೂಲಕ ಮಾರಾಟ ಮಾಡಲಿದೆ. ಈ ಕುರಿತು ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟವಾಗುವ ನಿರೀಕ್ಷೆ ಇದೆ. ಬಿಡಿಎ ಮನೆ/ ಫ್ಲಾಟ್‌ಗಳ ಮಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ಬರುತ್ತಿರುವ ಕಾರಣ ವಿಲ್ಲಾಗಳನ್ನು ಸಹ ಮಾರಾಟ ಮಾಡಲು ಬಿಡಿಎ ತೀರ್ಮಾನಿಸಿದೆ.

ಹುಣ್ಣಿಗೆರೆ ವಸತಿ ಯೋಜನೆಯಡಿ ಬಿಡಿಎ 1, 2, 3 ಮತ್ತು 4 ಬಿಹೆಚ್‌ಕೆ ಮಾದರಿಯಲ್ಲಿ ಪ್ರತ್ಯೇಕ ಮನೆಗಳನ್ನು ನಿರ್ಮಾಣ ಮಾಡಿದೆ. ಸದ್ಯ 3 ಬಿಹೆಚ್‌ಕೆ (150), 4 ಬಿಹೆಚ್‌ಕೆ (172) ವಿಲ್ಲಾಗಳ ಪೈಕಿ 80 ವಿಲ್ಲಾಗಳನ್ನು ಹರಾಜು ಮೂಲಕ ಮಾರಾಟ ಮಾಡಲಾಗುತ್ತದೆ. ವಿಲ್ಲಾಗಳ ಇ-ಹರಾಜ ಕುರಿತು ಶೀಘ್ರವೇ ಅಧಿಸೂಚನೆ ಪ್ರಕಟವಾಗುವ ನಿರೀಕ್ಷೆ ಇದೆ.
ವಿಲ್ಲಾಗಳ ದರದ ವಿವರ: ಬಿಡಿಎ ಅಧಿಕಾರಿಗಳ ಮಾಹಿತಿಯಂತೆ ಹರಾಜು ಪ್ರಕ್ರಿಯೆ ಆರಂಭವಾಗಿದೆ. ಹುಣ್ಣಿಗೆರೆ ಯೋಜನೆಗೆ ಸ್ವಾಧೀನಾನುಭವ ಪ್ರಮಾಣ ಪತ್ರ ದೊರೆತಿದೆ. ಶೀಘ್ರದಲ್ಲೇ ಇ-ಹರಾಜು ಮೂಲಕ 80 ವಿಲ್ಲಾಗಳನ್ನು ಮಾರಾಟ ಮಾಡಲಾಗುತ್ತದೆ. ಇವುಗಳಲ್ಲಿ 50 ವಿಲ್ಲಾಗಳು 4 ಬಿಹೆಚ್‌ಕೆ ಆಗಿವೆ.
ಸದ್ಯದ ಮಾಹಿತಿ ಪ್ರಕಾರ 3 ಬಿಹೆಚ್‌ಕೆ ವಿಲ್ಲಾಗಳಿಗೆ ಬಿಡಿಎ ಮೂಲ ದರ 76.50 ಲಕ್ಷ ರೂ.ಗಳನ್ನು ನಿಗದಿಪಡಿಸಿದೆ. 4 ಬಿಹೆಚ್‌ಕೆ ವಿಲ್ಲಾಗಳಿಗೆ 1.35 ಕೋಟಿ ರೂ. ನಿಗದಿಪಡಿಸಿದೆ. ಹರಾಜಿನಲ್ಲಿ ಪಾಲ್ಗೊಳ್ಳುವ ಜನರು ಇದಕ್ಕೂ ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡಲು ಅವಕಾಶವಿದೆ.
ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿ ಈ ವಸತಿ ಯೋಜನೆಯನ್ನು ಬಿಡಿಎ ನಿರ್ಮಾಣ ಮಾಡಿದೆ. ಈ ವಿಲ್ಲಾಗಳು ಉತ್ತಮ ರಸ್ತೆ ಸೌಕರ್ಯ, ಪ್ರತಿ ಮನೆಗೂ ಪ್ರತ್ಯೇಕ ಪಾರ್ಕಿಂಗ್, ಇವಿ ವಾಹನ ಚಾರ್ಜಿಂಗ್ ವ್ಯವಸ್ಥೆ, ಈಜುಕೊಳ, ಮನರಂಜನಾ ಕೇಂದ್ರ, ಬ್ಯಾಡ್ಮಿಂಟನ್ ಕೋರ್ಟ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒಳಗೊಂಡಿವೆ.
ಬಿಡಿಎ ಜನವರಿ 18ರ ಶನಿವಾರ ಕಣಿಮಿಣಿಕೆ ಪ್ರದೇಶದಲ್ಲಿ ನಿರ್ಮಾಣ ಮಾಡಿರುವ ಮನೆ/ ಫ್ಲಾಟ್‌ಗಳನ್ನು ಮಾರಾಟ ಮಾಡಲು ಫ್ಲಾಟ್ ಮೇಳ ಆಯೋಜಿಸಿದೆ. 2 ಬಿಹೆಚ್‌ಕೆ ಮತ್ತು 3 ಬಿಹೆಚ್‌ಕೆ ಫ್ಲಾಟ್‌ಗಳು ಲಭ್ಯವಿದೆ. 1 ಬಿಹೆಚ್‌ಕೆ ಫ್ಲಾಟ್‌ಗಳು 14.50 ಲಕ್ಷ ರೂ. ದರದಲ್ಲಿ ಲಭ್ಯವಿದೆ ಎಂದು ಹೇಳಿದೆ. ಕಣಿಮಿಣಿಕೆ ವಸತಿ ಸಮುಚ್ಛಯದ ಬಳಿ ಈ ಮೇಳ ನಡೆಯುತ್ತಿದೆ.
ಕಳೆದ ತಿಂಗಳು ಸಹ ಬಿಡಿಎ ಕಣಿಮಿಣಿಕೆಯಲ್ಲಿ ಫ್ಲಾಟ್ ಮೇಳವನ್ನು ಆಯೋಜನೆ ಮಾಡಿತ್ತು. ಜನರಿಂದ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮೇಳದಲ್ಲಿ 2 ಬಿಹೆಚ್‌ಕೆ, 3 ಬಿಹೆಚ್‌ಕೆಯ 180 ಫ್ಲಾಟ್‌ಗಳು ಮಾರಾಟವಾಗಿತ್ತು. ಈ ವಸತಿ ಯೋಜನೆಯಡಿ ಇನ್ನೂ 1,369 ಫ್ಲಾಟ್ ಮಾರಾಟಕ್ಕೆ ಲಭ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications