BDA Villa E-Auction: ಬಿಡಿಎ 25 ವಿಲ್ಲಾಗಳ ಇ-ಹರಾಜು, ದರದ ಮಾಹಿತಿ
ಬೆಂಗಳೂರು, ನವೆಂಬರ್ 20: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮೂಲೆ ನಿವೇಶನಗಳು, ಮಧ್ಯಂತರ ನಿವೇಶನಗಳನ್ನು ಹರಾಜು ಹಾಕುತ್ತದೆ. ಅಲ್ಲದೇ ನಿರ್ಮಾಣ ಮಾಡಿರುವ ಫ್ಲಾಟ್‌ಗಳನ್ನು ಹರಾಜು ಮೂಲಕ ಜನರಿಗೆ ಹಂಚಿಕೆ ಮಾಡುತ್ತದೆ. ಈಗ 25 ವಿಲ್ಲಾಗಳನ್ನು ಇ-ಹರಾಜು ಮೂಲಕ ಹಂಚಿಕೆ ಮಾಡಲಿದೆ. ಡಿಸೆಂಬರ್‌ನಲ್ಲಿ ಈ ಹರಾಜು ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು.
ಬಿಡಿಎ ಡಿಸೆಂಬರ್ 16ರಂದು ತುಮಕೂರು ರಸ್ತೆಯ ಹುಣ್ಣಿಗೆರೆಯಲ್ಲಿರುವ 25 ವಿಲ್ಲಾಗಳನ್ನು ಇ-ಹರಾಜು ಮೂಲಕ ಹಂಚಿಕೆ ಮಾಡಲಿದೆ. ಈ ವಿಲ್ಲಾಗಳನ್ನು ಬಿಡಿಎ 1,269 ಚದರ ಮೀಟರ್ ನಿಂದ 1,804 ಚದರ ಮೀಟರ್‌ನಲ್ಲಿ ನಿರ್ಮಾಣ ಮಾಡಲಾಗಿದೆ.

ಬಿಡಿಎ ಹೊಸದಾಗಿ ನಿರ್ಮಾಣ ಮಾಡಿರುವ ಈ ವಿಲ್ಲಾ ಎಸ್ಟೇಟ್‌ಗೆ ಕನ್ನಡ ನಟ ದಿ. ಪುನೀತ್ ರಾಜ್‌ಕುಮಾರ್ ರಾಜ್ ಕುಮಾರ್ ಹೆಸರು ಇಡಲಾಗಿದೆ. ನವೆಂಬರ್ 29ರಂದು ಇ-ಹರಾಜು ಪ್ರಕ್ರಿಯೆಗೆ ನೋಂದಣಿ ಆರಂಭವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಲ್ಲಾಗಳ ದರಗಳ ಮಾಹಿತಿ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಮಾಹಿತಿ ಪ್ರಕಾರ ಈ 25 ವಿಲ್ಲಾಗಳ ಪ್ರಾಥಮಿಕ ಬೆಲೆಗಳು 76.50 ಲಕ್ಷದಿಂದ 1.11 ಕೋಟಿ ರೂ. ತನಕ ಇರಲಿದೆ. ನವೆಂಬರ್ 29 ರಿಂದ ಡಿಸೆಂಬರ್ 13ರ ತನಕ ಇ-ಹರಾಜಿನಲ್ಲಿ ಪಾಲ್ಗೊಳ್ಳಲು ನೋಂದಣಿ ಮಾಡಿಕೊಳ್ಳಬಹುದು. 4 ಲಕ್ಷ ರೂ. ಮರು ಪಾವತಿ ಮಾಡುವ ಶುಲ್ಕವನ್ನು ಪಾವತಿ ಮಾಡಿ ನೋಂದಣಿ ಮಾಡಿಕೊಳ್ಳಬೇಕಿದೆ.
ಡಿಸೆಂಬರ್ 16ರಂದು ಬೆಳಗ್ಗೆ 11 ಗಂಟೆಗೆ ವಿಲ್ಲಾಗಳ ಇ-ಹರಾಜು ಪ್ರಕ್ರಿಯೆ ಆರಂಭವಾಗಲಿದ್ದು, ಡಿಸೆಂಬರ್ 17ರ ಸಂಜೆ 5 ಗಂಟೆಯ ತನಕ ನಡೆಯಲಿದೆ. ಹರಾಜಿನಲ್ಲಿ ಪಾಲ್ಗೊಳ್ಳವವರು ಬಿಡಿಎ ವೆಬ್‌ಸೈಟ್‌ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವಿಲ್ಲಾಗಳ ಹರಾಜು ಕುರಿತು ಸಾರ್ವಜನಿಕ ಪ್ರಕಟಣೆ ಹೊರಡಿಸುವಾಗ ವಿಲ್ಲಾಗಳ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲಿದೆ. ಸೈಟು, ಫ್ಲಾಟ್‌ಗಳ ಮಾದರಿಯಲ್ಲಿಯೇ ವಿಲ್ಲಾಗಳನ್ನು ಈ ಹರಾಜು ಮೂಲಕ ಹಂಚಿಕೆ ಮಾಡಲಾಗುತ್ತದೆ.
ತುಮಕೂರು ರಸ್ತೆ-ಮಾಗಡಿ ರಸ್ತೆ ನಡುವೆ ಹುಣ್ಣಿಗೆರೆ ಇದೆ. ಇಲ್ಲಿರುವ ವಿಲ್ಲಾಗಳಿಗೆ ಜನರಿಂದ ಭಾರೀ ಬೇಡಿಕೆ ಬಂದಿದೆ. ಆದ್ದರಿಂದ ಅವುಗಳನ್ನು ಇ-ಹರಾಜು ಮೂಲಕ ಹಂಚಿಕೆ ಮಾಡಿ ಆದಾಯ ಸಂಗ್ರಹ ಮಾಡಲು ಬಿಡಿಎ ಮುಂದಾಗಿದೆ. ಮೊದಲು ಬಂದವರಿಗೆ ಆದ್ಯತೆ ಎಂಬ ನಿಯಮ ಕೈ ಬಿಟ್ಟು ಇ-ಹಾರಾಜು ಮೂಲಕ ಹಂಚಿಕೆ ಮಾಡಲಿದೆ.
ಯೋಜನೆಯ ಕುರಿತು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು 170 4 ಬಿಹೆಚ್‌ಕೆ, 152 3 ಬಿಹೆಚ್‌ಕೆ ಮತ್ತು 320 1 ಬಿಹೆಚ್‌ಕೆ ವಿಲ್ಲಾಗಳು ಇಲ್ಲಿವೆ. ಇವುಗಳಲ್ಲಿ ಸದ್ಯ 25 ವಿಲ್ಲಾಗಳನ್ನು ಮಾತ್ರ ಹರಾಜು ಹಾಕಲಾಗುತ್ತದೆ. ವಿಲ್ಲಾಗಳ ಹರಾಜಿನಿಂದ ನಮಗೆ ಉತ್ತಮ ಆದಾಯಗಳಿಸಲು ಸಹಾಯಕವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2023ರ ಸೆಪ್ಟೆಂಬರ್‌ನಲ್ಲಿ ನಡೆದ ಬಿಡಿಎ ಸಭೆಯಲ್ಲಿಯೇ ಹುಣ್ಣಿಗೆರೆಯಲ್ಲಿನ ವಿಲ್ಲಾಗಳ ಹಂಚಿಕೆಗೆ ಜನರಿಂದ ಬೇಡಿಕೆ ಇರುವ ಕುರಿತು ಚರ್ಚಿಸಲಾಗಿತ್ತು. ಕಾಮಗಾರಿ ಪೂರ್ಣಗೊಳ್ಳುತ್ತಾ ಬಂದಾಗಲೇ ಜನರು ವಿಲ್ಲಾ ನೋಡಲು ಆಗಮಿಸುತ್ತಿದ್ದರು.
ಈ ಪ್ರದೇಶದಲ್ಲಿ ಬಿಡಿಎ 31 ಎಕರೆ ಪ್ರದೇಶದಲ್ಲಿ 271.46 ಕೋಟಿ ರೂ.ಗಳ ವೆಚ್ಚದಲ್ಲಿ 243 ವಿಲ್ಲಾಗಳನ್ನು ನಿರ್ಮಾಣ ಮಾಡಿದೆ. ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಕೆಲವು ವಿಲ್ಲಾಗಳನ್ನು ಈಗ ಹರಾಜು ಹಾಕಲಾಗುತ್ತಿದೆ.












Click it and Unblock the Notifications