ಶೀಘ್ರವೇ ಬಿಬಿಎಂಪಿ ಖಾಲಿ ಹುದ್ದೆಗಳ ಭರ್ತಿ: ಕೆ.ಜೆ.ಜಾರ್ಜ್
ಬೆಂಗಳೂರು, ಫೆಬ್ರವರಿ 08: ಬಿಬಿಎಂಪಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅತಿ ಶೀಘ್ರದಲ್ಲೇ ನೇಮಕಾತಿ ಭಾಗ್ಯ ಪ್ರಾಪ್ತವಾಗಲಿದೆ. ಹೀಗೆಂದು ಬೆಂಗಳೂರು ನಗರ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಭರವಸೆ ನೀಡಿದ್ದಾರೆ.
ವಿಧಾನಪರಿಷತ್ ಕಲಾಪದ ಪ್ರಶ್ನೋತ್ತರ ಅವಧಿ ವೇಳೆ ರಾಮಚಂದ್ರೇಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು ಬಿಬಿಎಂಪಿಯಲ್ಲಿ ಒಟ್ಟು 17,391 ಹುದ್ದೆಗಳಿದ್ದು ಅವುಗಳಲ್ಲಿ 10320 ಹುದ್ದೆಗಳು ಖಾಲಿ ಇವೆ. ಇದರಲ್ಲಿ 5811 ಪೌರಕಾರ್ಮಿಕ ವೃಂದದ ನೌಕರರನ್ನು ನೇಮಕಾತಿ ಮಾಡಿಕೊಳ್ಳಲು ಹೊಸ ನಿಯಮಾವಳಿ ರೂಪಿಸಿ ಶೀಘ್ರವೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಅವರು ಉತ್ತರಿಸಿದರು.

ಬಿಬಿಎಂಪಿಗೆ ಮಂಜೂರಾಗಿರುವ ಹುದ್ದೆಗಳ ಪೈಕಿ 42 ಪ್ರತಿಶತ ಹುದ್ದೆಗಳಿಗೆ ಮಾತ್ರವೇ ನೇಮಕಾತಿ ಆಗಿದ್ದು ಉಳಿದ 58% ಹುದ್ದೆಗಳು ಖಾಲಿ ಇವೆ. ನೇಮಕಾತಿ ವಿಳಂಬ ಆಗುತ್ತಿರುವ ಪರಿಣಾಮ ನಗರದ ಸ್ವಚ್ಛತೆ, ಆರೋಗ್ಯ ಮತ್ತಿತರ ವಿಭಾಗಗಳ ಮೇಲೆ ಪರಿಣಾಮ ಬೀರುತ್ತಿವೆ ಎಂದ ಅವರು, ಸಿಬ್ಬಂದಿ ಕೊರತೆ ನೀಗಿಸುವುದುಕ್ಕಾಗಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡು ಹಾಗೂ ಸರ್ಕಾರದ ವಿವಿಧ ಇಲಾಖೆಗಳಿಂದ ತಂತ್ರಜ್ಞ ಸಿಬ್ಬಂದಿಯನ್ನು ಪಡೆದುಕೊಂಡು ಕೆಲಸ ಮಾಡಿಸಲಾಗುತ್ತಿದೆ ಎಂದರು.












Click it and Unblock the Notifications