A Khata: ಬೆಂಗಳೂರಿನಲ್ಲಿ ಎ - ಖಾತಾ ಆಸ್ತಿಗಳಿಗೂ ಶಾಕ್ ಕೊಟ್ಟ ಬಿಬಿಎಂಪಿ!
A Khata: ಬೆಂಗಳೂರಿನಲ್ಲಿ ಕೆಲವು ಎ- ಖಾತಾ ಇರುವ ಆಸ್ತಿಗಳಿಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ದೊಡ್ಡ ಶಾಕ್ ಕೊಟ್ಟಿದೆ. ಬೆಂಗಳೂರು ಸೇರಿದಂತೆ ಬೆಂಗಳೂರಿನ ಯಾವುದೇ ಭಾಗದಲ್ಲಿ ಎ - ಖಾತಾ ಆಸ್ತಿ ಇದ್ದರೆ ಅದನ್ನು ಸುರಕ್ಷಿತ ಹಾಗೂ ಯಾವುದೇ ಸಮಸ್ಯೆ ಇಲ್ಲದ ಆಸ್ತಿ ಎಂದೇ ಪರಿಗಣಿಸಲಾಗುತ್ತದೆ. ಆದರೆ, ಇದೀಗ ಬೆಂಗಳೂರಿನಲ್ಲಿ ಎ- ಖಾತಾ ಇರುವ ಬರೋಬ್ಬರಿ 54,000 ಸಾವಿರ ಆಸ್ತಿದಾರರಿಗೂ ಸಹ ಸಂಕಷ್ಟ ಎದುರಾಗಿದೆ. ಎ- ಖಾತಾ ಇದ್ದರೆ ಯಾವುದೇ ಸಮಸ್ಯೆ ಇಲ್ಲ ಎಂದುಕೊಂಡವರು ಸಹ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದೇನು ಎನ್ನುವ ವಿವರ ಇಲ್ಲಿದೆ ನೋಡೋಣ.
ಬೆಂಗಳೂರಿನಲ್ಲಿ ಅಂದಾಜು 25 ಲಕ್ಷಕ್ಕೂ ಹೆಚ್ಚು ಆಸ್ತಿಗಳಿವೆ. ಹೊಸದಾಗಿ ಪ್ರತಿ ವರ್ಷ ಬೆಂಗಳೂರಿನಲ್ಲಿ ಆಸ್ತಿಗಳ ಸೇರ್ಪಡೆಯಾಗುತ್ತಿವೆ. ಈ ಬಾರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ರಾಜ್ಯ ಸರ್ಕಾರವು ಆಸ್ತಿಗೆ ಸಂಬಂಧಿಸಿದಂತೆ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಯಾವುದೇ ಖಾತಾ ಹೊಂದಿದ್ದರೂ ಕಡ್ಡಾಯವಾಗಿ ಇ - ಖಾತಾ ಮಾಡಿಸಿಕೊಳ್ಳಬೇಕು ಎಂದು ಈಗಾಗಲೇ ಸೂಚನೆ ನೀಡಲಾಗಿದೆ. ಅದು ಅಲ್ಲದೆ ಯಾರೆಲ್ಲ ಅಕ್ರಮವಾಗಿ ಎ - ಖಾತಾ ಮಾಡಿಸಿಕೊಂಡಿದ್ದಾರೆ ಎಂದು ಪರಿಶೀಲನೆ ಮಾಡುತ್ತಿದ್ದು, ಇದು ಬೆಂಗಳೂರಿನ ಸಾವಿರಾರು ಜನ ಆಸ್ತಿದಾರರಿಗೆ ನಡುಕವನ್ನುಂಟು ಮಾಡಿದೆ.

ಬೆಂಗಳೂರಿನಲ್ಲಿ ನಿಯಮವನ್ನು ಉಲ್ಲಂಘನೆ ಮಾಡಿರುವ ಹಾಗೂ ಲೈಸೆನ್ಸ್‌ನಲ್ಲಿ ವ್ಯತ್ಯಾಸವಿರುವುದು ಸೇರಿದಂತೆ ವಿವಿಧ ಆಸ್ತಿಗಳಿಗೆ ಬಿ - ಖಾತಾ ನೀಡಲಾಗಿದೆ. ಆದರೆ ಎ- ಖಾತಾದಲ್ಲಿ ಈ ರೀತಿಯ ಗೊಂದಲಗಳು ಇರುವುದಿಲ್ಲ. ಎ - ಖಾತ ಎಂದರೆ ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲನೆ ಮಾಡಲಾಗಿರುವ ಆಸ್ತಿಗಳು ಎಂದೇ ಪರಿಗಣಿಸಲಾಗುತ್ತದೆ. ಆದರೆ ಎ ಖಾತಾ ಇರುವವರು ಸಹ ಇದೀಗ ತಲೆ ಬಿಸಿ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಅಕ್ರಮ ಎ ಖಾತಾ ಇರುವ ಅಂದಾಜು 54,000 ಸಾವಿರಕ್ಕೂ ಹೆಚ್ಚು ಆಸ್ತಿಗಳಿಗೆ ಬಿಸಿ ಮುಟ್ಟಿಸಲು ಪಾಲಿಕೆ ಮುಂದಾಗಿದೆ. ಅಕ್ರಮವಾಗಿ ಎ - ಖಾತಾ ಹೊಂದಿರುವವರ ಮೇಲೆ ಕ್ರಮಕ್ಕೆ ಪಾಲಿಕೆ ಮುಂದಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಈ ಸಂಬಂಧ ಸಹಾಯಕ ಕಂದಾಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ನಿರ್ದೇಶನ ನೀಡಿದ್ದಾರೆ.
ಅನುಮಾನ ಇರುವ ಎ - ಖಾತಾಗಳ ಪರಿಶೀಲನೆ: ಇನ್ನು ಬೆಂಗಳೂರಿನಲ್ಲಿ ಆಸ್ತಿ ಇದ್ದು ಅಕ್ರಮವಾಗಿ ಎ - ಖಾತಾ ಪಡೆದಿರುವ ಅಥವಾ ಲಂಚ ಇಲ್ಲವೇ ಪ್ರಭಾವ ಬಳಸಿ ಕೆಲವರು ಎ- ಖಾತಾ ಪಡೆದುಕೊಂಡಿರುವ ಬಗ್ಗೆ ಅನುಮಾನಗಳು ಎದುರಾಗಿದ್ದು, ಈ ರೀತಿಯ ಆಸ್ತಿದಾರರ ಪ್ರಕರಣಗಳನ್ನು ಸಹ ಇದೀಗ ಆಂತರಿಕ ತನಿಖೆ ನಡೆಸುವುದಕ್ಕೆ ಪಾಲಿಕೆ ಮುಂದಾಗಿದೆ.
ಇನ್ನು ಈ ರೀತಿಯ ಆಸ್ತಿ ಮಾಲೀಕರು ಇ - ಖಾತಾಗೆ ಅರ್ಜಿ ಸಲ್ಲಿಸುವಾಗ ಆಸ್ತಿ ಮಾಲೀಕರು ಅಗತ್ಯ ದಾಖಲೆಗಳನ್ನು ಕೊಡಬೇಕು. ಒಂದೊಮ್ಮೆ ಅಗತ್ಯ ದಾಖಲೆಗಳನ್ನು ಕೊಡದಿದ್ದರೆ, ಡಿಜಿಟಲ್ ಸ್ವರೂಪದಲ್ಲಿ ಬಿ - ಖಾತಾ ಸಿಗಲಿದೆ ಎಂದು ಹೇಳಲಾಗಿದೆ. ಕೆಲವೊಂದು ಆಸ್ತಿಗಳಿಗೆ ಶುಲ್ಕ ತೆಗೆದುಕೊಳ್ಳದೆ ಕಾನೂನುಬಾಹಿರವಾಗಿ ಎ - ಖಾತಾ ನೀಡಲಾಗಿದೆ ಎನ್ನುವ ವಿಷಯವೂ ಇದೀಗ ಬೆಳಕಿಗೆ ಬಂದಿದೆ.
ಅಧಿಕಾರಿಗಳು ಶಾಮೀಲು ಆರೋಪ: ಇನ್ನು ಅಕ್ರಮ ಎ - ಖಾತಾ ಹಂಚಿಕೆಯಲ್ಲಿ ಅಥವಾ ಅಕ್ರಮ ಎ - ಖಾತಾ ನೀಡುವುದರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಸಹ ಶಾಮೀಲಾಗಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಅಕ್ರಮ ಎ - ಖಾತಾದ ಬಗ್ಗೆಯೂ ಆಂತರಿಕ ತನಿಖೆ ಮಾಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ನಿರ್ದೇಶನ ನೀಡಿದ್ದಾರೆ ಎಂದು ಹೇಳಲಾಗಿದೆ.
ಎ - ಖಾತಾ ಸುರಕ್ಷಿತವಲ್ಲ: ಬೆಂಗಳೂರಿನಲ್ಲಿ ಎ - ಖಾತಾ ಇದ್ದರೆ ಆಸ್ತಿ ಸುರಕ್ಷಿತ ಎಂದೇ ಭಾವಿಸಲಾಗುತ್ತಿತ್ತು. ಆದರೆ, ಇದೀಗ ಎ - ಖಾತಾ ಆಸ್ತಿಗಳಿಗೂ ಪಾಲಿಕೆ ಶಾಕ್ ಕೊಟ್ಟಿದೆ. ಕೆಲವರು ಎ ಖಾತಾ ಆಸ್ತಿಯನ್ನು ಸಹ ಅಕ್ರಮವಾಗಿ ಪಡೆದುಕೊಂಡಿರುವುದು ಇದೀಗ ವರದಿಯಾಗಿದೆ. ಹೀಗಾಗಿ ಈ ಆಸ್ತಿಗಳ ಮೇಲೆ ಪಾಲಿಕೆ ಕಣ್ಣಿಟ್ಟಿದೆ.












Click it and Unblock the Notifications