Property Tax: 500-600 ವಾಣಿಜ್ಯ ಆಸ್ತಿ ಸೀಲ್ ಮಾಡಿದ ಬಿಬಿಎಂಪಿ
ಬೆಂಗಳೂರು, ಡಿಸೆಂಬರ್ 17: ರಾಜಧಾನಿಯಲ್ಲಿ ಆಸ್ತಿ ತೆರಿಗೆ ಪಾವತಿಸದವರ ವಿರುದ್ಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಮರ ಸಾರಿದೆ. ಎಂಟು ವಲಯಗಳ ವ್ಯಾಪ್ತಿಯಲ್ಲಿ ಡಿಸೆಂಬರ್ 12 ರಿಂದ ಆಸ್ತಿ ಮತ್ತು ವಾಣಿಜ್ಯ ಆಸ್ತಿಗಳನ್ನು ಸೀಲ್ ಮಾಡಲು ಆರಂಭಿಸಿದೆ.
ಈ ಕುರಿತು ಬಿಬಿಎಂಪಿ ಕಳೆದ ನವೆಂಬರ್ ತಿಂಗಳಿನಿಂದಲೇ ಎಲ್ಲ ವಲಯ ವ್ಯಾಪ್ತಿಯ ಆಸ್ತಿ ತೆರಿಗೆ ಬಾಕಿದಾರರಿಗೆ (ಡಿಫಾಲ್ಟರ್ಸ್‌ಗೆ) ನೋಟಿಸ್ ಜಾರಿ ಮಾಡಿತ್ತು. ಆದರೆ ಇದಕ್ಕೆ ಜಗ್ಗದ ಹಿನ್ನೆಲೆಯಲ್ಲಿ ಆಸ್ತಿಗಳಿಗೆ ಸೀಲ್ ಹಾಕಲು ಮುಂದಾಗಿದೆ. ಡಿಸೆಂಬರ್ 16 ಶನಿವಾರದ ಹೊತ್ತಿಗೆ ಸುಮಾರು 500-600 ವಾಣಿಜ್ಯ ಆಸ್ತಿಗಳನ್ನು ಪಾಲಿಕೆ ಅಧಿಕಾರಿಗಳು ಬಂದ್ ಮಾಡಿದ್ದಾರೆ ಎಂದು ಪಾಲಿಕೆ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಹೇಳಿದರು.

ಒಟ್ಟು ಸುಮಾರು ವರ್ಷಗಟ್ಟಲೆ ತೆರಿಗೆ ಪಾವತಿಸದ ಅಥವಾ ಕಡಿಮೆ ತೆರಿಗೆ ಪಾವತಿ ಮಾಡಿದ ಬಾಕಿದಾರರ (ಸುಸ್ತಿದಾರ) ವಿರುದ್ಧ ಪಾಲಿಕೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಬಿಬಿಎಂಪಿಗೆ ಸುಮಾರು 300 ಕೋಟಿ ರೂಪಾಯಿ ತೆರಿಗೆ ಬರಬೇಕಿದ್ದು, ಈ ಸಂಬಂಧ ಸುಮಾರು 8,000-10,000 ಬಾಕಿದಾರರಿಗೆ ನಾವು ನೋಟೀಸ್ ನೀಡಿದ್ದೇವೆ. ನೋಟಿಸ್‌ಗೆ ಪ್ರತಿಕ್ರಿಯಿಸಿ ತೆರಿಗೆ ಪಾವತಿಸದವರ ಆಸ್ತಿ ಸೀಲ್ ಮಾಡಲಾಗಿದೆ ಎಂದರು.
ಬಿಬಿಎಂಪಿಯಿಂದ ಕಟ್ಟುನಿಟ್ಟಿನ ಕ್ರಮ ಜಾರಿಗೆ
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಖಡಕ್ ಎಚ್ಚರಿಕೆ ನಂತರ ಬಾಕಿ ಇರುವ ಆಸ್ತಿ ತೆರಿಗೆಗಳನ್ನು ವಸೂಲಿಗೆ ಪಾಲಿಕೆ ಬಿಗಿ ಕ್ರಮಗಳನ್ನು ಜಾರಿಗೊಳಿಸಿದೆ. ಕೇವಲ ವಾಣಿಜ್ಯ ಆಸ್ತಿಗಳ ವಿರುದ್ಧ ಮಾತ್ರವಲ್ಲದೇ ವಸತಿ ಕಟ್ಟಡಗಳ ಮೇಲೆ ಕ್ರಮ ಜರುಗಿಸಲಾಗುತ್ತಿದೆ. ಇವುಗಳ ವಿರುದ್ದ ಏನೇನು ಕ್ರಮ ಜರುಗಿಸಬಹುದೆಂದು ನಿರ್ಧರಿಸಲಾಗುತ್ತಿದೆ.
ಸದ್ಯ ಬೆಂಗಳೂರಿನಲ್ಲಿ ಒಟ್ಟು ಆರು ಲಕ್ಷ ಮಂದಿ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡಿದ್ದಾರೆ. ಈ ಬಹಳಷ್ಟು ಡಿಫಾಲ್ಟರ್‌ಗಳು ಸಣ್ಣ ಮೊತ್ತವನ್ನು ಹೊಂದಿದ್ದಾರೆ ಎಂದು ಪಾಲಿಕೆ ತಿಳಿಸಿದೆ. ಕೆಲವರ ಆಸ್ತಿ ಮಾಲೀಕರು ತಮ್ಮ ಆಸ್ತಿಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸುತ್ತಿದ್ದರೂ ವಸತಿ ವರ್ಗದ ಅಡಿಯಲ್ಲಿ ಬರುತ್ತವೆ ಎಂದು ತಪ್ಪು ಮಾಹಿತಿ ನೀಡುವ ಮೂಲಕ ಕಡಿಮೆ ತೆರಿಗೆ ಪಾವತಿಸುತ್ತಿದ್ದಾರೆ ಎಂಬ ಅಂಶವು ಬೆಳಕಿಗೆ ಬಂದಿದೆ.

ಸುಸ್ತಿದಾರರ ಆಸ್ತಿ ಸೀಲ್ ಮಾಡುವ ಜೊತೆಗೆ ಕಾರುಗಳನ್ನು ವಶಪಡಿಸಿಕೊಳ್ಳುವುದು ಇಲ್ಲವೇ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಲಿಕೆ ಅಧಿಕಾರ ಮೇಲೆ ಹೆಚ್ಚಾಯ್ತು ಒತ್ತಡ
ಬೆಂಗಳೂರಿನ ಪ್ರಮುಖ ನಾಗರಿಕ ಸಂಸ್ಥೆಯಾದ ಬಿಬಿಎಂಪಿ ತನ್ನದೇ ವಿಶೇಷ ಕಾರ್ಯಾಚರಣೆ ಹೊಂದಿದೆ. ಇದರ ಭಾಗವಾಗಿ ಅಧಿಕಾರಿಗಳು, ಸಿಬ್ಬಂದಿ ಅಧಿಕ ಕೆಲಸ ಒತ್ತಡ ಅನುಭವಿಸುತ್ತಿದ್ದಾರೆ. ಈ ಹಿಂದೆ ಯಲಹಂಕ ವಲಯದಲ್ಲಿ ಇಬ್ಬರು ಕಂದಾಯ ಅಧಿಕಾರಿಗಳು ಹೃದಯಾಘಾತಕ್ಕೆ ಒಳಗಾಗಿದ್ದರು. ಕನಿಷ್ಠ ಒಬ್ಬರು ಒತ್ತಡದಿಂದ ಆಸ್ಪತ್ರೆಯಲ್ಲಿದ್ದಾರೆ ಎಂದು ನೌಕರರ ಪ್ರತಿನಿಧಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಮೂಲಕ ಬಿಬಿಎಂಪಿಯು ತನ್ನ ಕಾರ್ಯ ಯೋಜನೆಗಳ ಜೊತೆಗೆ ಬಿಬಿಎಂಪಿ ಅಧಿಕಾರಿಗಳ ಆರೋಗ್ಯದತ್ತ ಕಾಳಜಿ ವಸಹಿಸಬೇಕಿದೆ. ಇನ್ನೂ ಪ್ರತಿ ವಾರ್ಡ್‌ನಲ್ಲಿ 4-5 ಸದಸ್ಯರ ತಂಡವಿದ್ದು, ಪ್ರತಿ ತಂಡವು ದಿನಕ್ಕೆ ಮೂರು ಆಸ್ತಿಗಳನ್ನು ಮಾತ್ರ ಸೀಲ್ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರು ಶೀಘ್ರವೇ ಬಾಕಿ ಪಾವತಿಸಿದರೆ ಸೀಲ್ ಕ್ರಮದಿಂದ ತಪ್ಪಿಸಿಕೊಳ್ಳಬಹುದು.












Click it and Unblock the Notifications