ಬಿಬಿಎಂಪಿ ಅಗ್ನಿ ಅವಘಡ: ಅಧಿಕಾರಿಯ ಆರೋಗ್ಯ ಸ್ಥಿತಿ ಚಿಂತಾಜನಕ, ಉತ್ತಮ ಚಿಕಿತ್ಸೆ: ಡಿಕೆಶಿ
ಬೆಂಗಳೂರು, ಆಗಸ್ಟ್ 28: ಬಿಬಿಎಂಪಿಯ ಪ್ರಯೋಗಾಲಯದಲ್ಲಿ ಎರಡು ವಾರದ ಹಿಂದೆ ಅಗ್ನಿ ಅನಾಹುತ ಸಂಭವಿಸಿತ್ತು. ಈ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬಿಬಿಎಂಪಿ ಮುಖ್ಯ ಎಂಜಿನಿಯರ್ ಶಿವಕುಮಾರ್ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸೋಮವಾರ ಅವರು ಶೇಷಾದ್ರಿಪುರದ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ ಮುಖ್ಯ ಎಂಜಿನಿಯರ್ ಅವರ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದರು.

ನಾನು ಈ ಹಿಂದೆ ಮುಖ್ಯ ಎಂಜಿನಿಯರ್ ಶಿವಕುಮಾರ್ ಅವರ ಆರೋಗ್ಯ ವಿಚಾರಿಸಲು ಭೇಟಿ ಮಾಡಿದಾಗ ಅವರ ಆರೋಗ್ಯ ಸುಧಾರಿಸುತ್ತಿರುವಂತೆ ಕಂಡಿತ್ತು. ಅವರಿಗೆ ಉತ್ತಮ ಚಿಕಿತ್ಸೆ ಕೊಡಿಸಬೇಕು ಎಂಬ ಕಾರಣಕ್ಕೆ ಈ ಪ್ರತಿಷ್ಠಿತ ಆಸ್ಪತ್ರೆಗೆ ದಾಖಲಿಸಲಾಯಿತು.
ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ
ನಾನು ಕೂಡ 2-3 ಬಾರಿ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೆ. ಇಲ್ಲಿನ ವೈದ್ಯರು ಎಲ್ಲಾ ರೀತಿಯ ಚಿಕಿತ್ಸೆ ನೀಡಿ ಅವರ ಆರೋಗ್ಯ ಸುಧಾರಿಸಲು ಪ್ರಯತ್ನಿಸುತ್ತಿದ್ದಾರೆ. ಮತ್ತೊರ್ವ ಸಿಬ್ಬಂದಿ ಜ್ಯೋತಿ ಅವರಲ್ಲಿ ಚೇತರಿಕೆ ಕಾಣುತ್ತಿದ್ದು, ಸುಟ್ಟ ಗಾಯಗಳಿವೆ, ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿಸಿದರು.
ಅಗ್ನಿ ಅನಾಹುತದ ಬಗ್ಗೆ ತನಿಖೆ ಎಲ್ಲಿಯವರೆಗೆ ಬಂದಿದೆ ಎಂದು ಕೇಳಿದ ಪ್ರಶ್ನೆಗೆ, 'ನಾನು ಈ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ತನಿಖೆ ವರದಿಗಳು ಬರಲಿ. ಪೊಲೀಸ್, ಬಿಬಿಎಂಪಿ ಅಧಿಕಾರಿಗಳು ತನಿಖೆ ಮಾಡುತ್ತಿದ್ದು, ಅದು ಪೂರ್ಣಗೊಳ್ಳಲಿ, ಆಮೇಲೆ ಮಾತನಾಡುತ್ತೇನೆ ಎಂದು ತಿಳಿಸಿದರು.

ಆಸ್ಪತ್ರೆಗೆ ಸಿಎಂ, ಡಿಸಿಎಂ ಭೇಟಿ ನೀಡಿದ್ದರು
ಘಟನೆ ಕುರಿತು ಮಾಹಿತಿ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಇನ್ನಿತರ ಸಚಿವರು, ನಾಯಕರು ಘಟನೆ ನಡೆದ ಬಳಿಕ ಗಾಯಾಳುಗಳು ಇದ್ದ ಆಸ್ಪತ್ರೆಗೆ ದೌಡಾಯಿಸಿ ಆರೋಗ್ಯ ವಿಚಾರಿಸಿದ್ದಲ್ಲದೇ ಪ್ರಕರಣ ತನಿಖೆಗೆ ಸರ್ಕಾರ ಕ್ರಮ ಕೈಗೊಂಡಿತ್ತು.
ಬೆಂಕಿಯಲ್ಲಿ ಸುಟ್ಟು ನೋವು ಅನುಭವಿಸುತ್ತಿರುವವರಿಗೆ ಅತ್ಯುತ್ತಮ ಚಿಕಿತ್ಸೆ ನೀಡುವುದು ನಮ್ಮ ಮೊದಲ ಆದ್ಯತೆ ಆಗಿರಲಿದೆ. ವಿವಿಧ ಆಯಾಮಗಳಲ್ಲಿ ಪ್ರಕರಣಕ್ಕೆ ಕಾರಣವೇನು ಎಂದು ತನಿಖೆ ನಡೆಸಲಾಗುವುದು ಎಂದು ಡಿಕೆ ಶಿವಕುಮಾರ್ ಹೇಳಿದ್ದರು. ಇದಕ್ಕು ಮೊದಲು ಸಿದ್ದರಾಮಯ್ಯ ಅವರು ಪ್ರತ್ಯೇಕ ತನಿಖೆಗೆ ಸೂಚನೆ ನೀಡಿದ್ದರು.
ಅಗ್ನಿ ಅನಾಹುತದಲ್ಲಿ ತೀವ್ರ ಗಾಯಗೊಂಡ ಶಿವಕುಮಾರ್ ಅವರು ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಜ್ಞ ವೈದ್ಯರಿಂದ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಅಧಿಕೃತವಾಗಿ ಮಾಹಿತಿ ನೀಡುವವರೆಗೆ ಮತ್ತು ಮೆಡಿಕಲ್ ಬುಲೆಟಿನ್ ನೀಡುವ ವರೆಗೆ ಪ್ರಕರಣ ವದಂತಿಗಳನ್ನು ಪ್ರಸಾರ ಮಾಡದಂತೆ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮನವಿ ಮಾಡಿದರು.












Click it and Unblock the Notifications