ಬಿಬಿಎಂಪಿ ಚುನಾವಣೆ 2015, ಸ್ಟಾರ್ ಪ್ರಚಾರಕರ ಪಟ್ಟಿ
ಬೆಂಗಳೂರು, ಆಗಸ್ಟ್ 14 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪ್ರಚಾರ ನಡೆಸುವ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಮೂರೂ ಪಕ್ಷಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿವೆ. ಶುಕ್ರವಾರದಿಂದ ಅಧಿಕೃತವಾಗಿ ಸ್ಟಾರ್ ಪ್ರಚಾರಕರು ಪ್ರಚಾರ ಕಣಕ್ಕೆ ಇಳಿಯಲಿದ್ದಾರೆ.
ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ರಾಜ್ಯ ಚುನಾವಣಾ ಆಯೋಗವು 128 ಮಂದಿ ತಾರಾ ಪ್ರಚಾರಕರಿಗೆ ಅನುಮತಿ ನೀಡಿದೆ. ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ 40, ಬಿಎಸ್‌ಪಿಯಲ್ಲಿ 25 ಹಾಗೂ ಜೆಡಿಎಸ್‌ನಲ್ಲಿ 23 ತಾರಾ ಪ್ರಚಾರಕರಿದ್ದಾರೆ. [ಬಿಬಿಎಂಪಿ ಚುನಾವಣೆ ಕಣದಲ್ಲಿರುವ ಸ್ಟಾರ್ ಅಭ್ಯರ್ಥಿಗಳು]
ಹೊಂಗಸಂದ್ರ ವಾರ್ಡ್ ಬಿಜೆಪಿ ಅಭ್ಯರ್ಥಿ ಭಾರತಿ ರಾಮಚಂದ್ರ ಅವರು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಚುನಾವಣೆಯಲ್ಲಿ ಬಿಜೆಪಿ ಖಾತೆ ತೆರೆದಿದೆ. ಆದ್ದರಿಂದ ಇನ್ನುಳಿದ 197 ವಾರ್ಡ್‌ಗಳ ಸದಸ್ಯರ ಆಯ್ಕೆಗೆ ಆ.22ರ ಶನಿವಾರ ಮತದಾನ ನಡೆಯಲಿದೆ. 197 ವಾರ್ಡ್‌ಗಳಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು 188 ವಾರ್ಡ್‌ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸ್ಟಾರ್ ಪ್ರಚಾರಕರ ಪಟ್ಟಿ ಇಲ್ಲಿದೆ ನೋಡಿ....

ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕರು
ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಹಿರಿಯ ನಾಯಕ ಎಸ್.ಎಂ.ಕೃಷ್ಣ, ಧರಂಸಿಂಗ್, ಎಂ.ವೀರಪ್ಪ ಮೊಯ್ಲಿ, ಆಸ್ಕರ್ ಫರ್ನಾಂಡಿಸ್, ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಮುಂತಾದವರು ಪ್ರಚಾರ ನಡೆಸಲಿದ್ದಾರೆ.

ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ
ಬಿಜೆಪಿ ಅಭ್ಯರ್ಥಿಗಳ ಪರವಾಗಿ ಕೆಂದ್ರ ಸಚಿವರಾದ ವೆಂಕಯ್ಯ ನಾಯ್ಡು, ಡಿ.ವಿ.ಸದಾನಂದ ಗೌಡ, ಅನಂತ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಮುಂತಾದ ನಾಯಕರು ಪ್ರಚಾರ ನಡೆಸಲಿದ್ದಾರೆ.

ಜೆಡಿಎಸ್ ಸ್ಟಾರ್ ಪ್ರಚಾರಕರು
ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಎಚ್.ಡಿ.ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮುಂತಾದ ನಾಯಕರು ಪ್ರಚಾರ ನಡೆಸಲಿದ್ದಾರೆ.

ಬಿಬಿಎಂಪಿ ಚುನಾವಣೆ ಎಂದು?
ಆಗಸ್ಟ್ 22ರ ಶನಿವಾರ ಮತದಾನ ನಡೆಯಲಿದ್ದು, ಆ.25ರ ಮಂಗಳವಾರ ಫಲಿಶಾಂತ ಪ್ರಕಟಗೊಳ್ಳಲಿದೆ. ಅವಿಭಜಿತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 197 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದೆ.

ಬಿಜೆಪಿ ಒಂದು ಸ್ಥಾನ ಗೆದ್ದಾಗಿದೆ
ಮತದಾನಕ್ಕೆ ಮೊದಲೇ ಬಿಜೆಪಿ ಒಂದು ಕ್ಷೇತ್ರದಲ್ಲಿ ಅವಿರೋಧವಾಗಿ ಆಯ್ಕೆಯಾಗಿದೆ. ಹೊಂಗಸಂದ್ರ ವಾರ್ಡ್‌ನಲ್ಲಿ ಭಾರತಿ ರಾಮಚಂದ್ರ ಅವರು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಚುನಾವಣೆಯಲ್ಲಿ ಬಿಜೆಪಿ ಖಾತೆ ತೆರೆದಿದೆ.












Click it and Unblock the Notifications